ಡಿ-ಕೋಡ್: ಸಿದ್ದರಾಮಯ್ಯ/ಡಿ.ಕೆ ಶಿವಕುಮಾರ್‌ ನೇತೃತ್ವ; 2028ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಯಾರು ಹಿತವರು?

ಎಸ್‌ಸಿಎಸ್‌ಟಿ ಸಮುದಾಯವು ಈಗ ಸಂಪೂರ್ಣವಾಗಿ ಸಿದ್ದರಾಮಯ್ಯ ಅವರ ಪರವಾಗಿರುವಂತೆ ಕಾಣುತ್ತಿಲ್ಲ. ಒಳಮೀಸಲಾತಿ, ಎಸ್‌ಸಿಎಸ್‌ಪಿಟಿಎಸ್‌ಪಿ ಮುಂತಾದ ಕಾರಣಗಳಿಂದಾಗಿ ಈ ಸಮುದಾಯಗಳ ಅನೇಕರು ಬಿಜೆಪಿಯತ್ತಲೂ ಮುಖ ಮಾಡಿದ್ದಾರೆ.
Dk Shivakumar-BJP- Siddaramaiah
ಡಿಕೆ ಶಿವಕುಮಾರ್- ಬಿಜೆಪಿ- ಸಿದ್ದರಾಮಯ್ಯonline desk
Updated on

2028ರ ಮೇ ವೇಳೆಗೆ ಮುಂದಿನ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಸರಿಸುಮಾರು ಎರಡು ವರ್ಷ ಎಂಟು ತಿಂಗಳ ಸಮಯವಿದೆ. ಸರ್ಕಾರ ರಚನೆಯಾಗುವುದಕ್ಕೂ ಮುನ್ನ 2023ರ ವಿಧಾನಸಭೆ ಚುನಾವಣೆಯಲ್ಲಿ ನಡೆದ ತಂತ್ರಗಳಲ್ಲಿ ಮುಂಚೂಣಿಯಲ್ಲಿದ್ದವರು ಈಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಆದರೆ ಚುನಾವಣೆಗೂ ಒಂದು ವರ್ಷ ಮೊದಲೇ ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಆಚರಿಸುವ ಮೂಲಕ ಮುಂದಿನ ಮುಖ್ಯಮಂತ್ರಿ ತಾವೇ ಆಗಬೇಕೆಂದು ಸಿದ್ದರಾಮಯ್ಯ ಅವರ ಗುಂಪು ಸಾಕಷ್ಟು ಪ್ರಯತ್ನ ಪಟ್ಟಿತ್ತು. ಆಗಿನ ಬಿಜೆಪಿ ಸರ್ಕಾರದ ಹುಳುಕುಗಳನ್ನು, ಕೆಟ್ಟ ಆಡಳಿತವನ್ನು ಪರಿಣಾಮಕಾರಿಯಾಗಿ, ತುಸು ಉತ್ತ್ರೇಕ್ಷಿತವಾಗಿಯೂ ಜನರ ಮುಂದಿಟ್ಟು ತಮ್ಮ ಪರ ಜನರ ಒಲವು ಪಡೆಯಲು ಡಿ.ಕೆ. ಶಿವಕುಮಾರ್‌ ಮಾಡಿದ ತಂತ್ರಗಳು ಪರಿಣಾಮಕಾರಿಯಾಗಿ ಪರಿಣಮಿಸಿದವು. ಆದರೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡುವಾಗ ಸಂಖ್ಯೆ ಗಣನೆಗೆ ಬಂದಿತು. ಈಗಿನ ದುರ್ಬಲ ಕಾಂಗ್ರೆಸ್‌ ಹೈಕಮಾಂಡ್‌ ಎದುರು ಡಿ.ಕೆ. ಶಿವಕುಮಾರ್‌ ಅವರ ಪಕ್ಷನಿಷ್ಠೆ ಹಾಗೂ ಚುನಾವಣೆಯಲ್ಲಿ ಯಶಸ್ವಿ ತಂತ್ರಗಾರಿಕೆಗಿಂತಲೂ ಸಿದ್ದರಾಮಯ್ಯ ಅವರ ಮಾಸ್‌ ಬೇಸ್‌ ಗೆದ್ದಿತು, ಎರಡನೇ ಬಾರಿಗೆ ಸಿಎಂ ಆದರು.

ಇನ್ನೇನು 2025ರ ಡಿಸೆಂಬರ್‌ ವೇಳೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ದೇವರಾಜ ಅರಸು ಅವರ ದಾಖಲೆಯನ್ನು ಮುರಿಯಲಿದ್ದಾರೆ. ದೇವರಾಜ ಅರಸು ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿ ಒಟ್ಟು 7 ವರ್ಷ 7 ತಿಂಗಳು ಅಧಿಕಾರ ಚಲಾಯಿಸಿದ್ದರು. ಇದೀಗ ಸಿದ್ದರಾಮಯ್ಯ ಅವರು ಡಿಸೆಂಬರ್‌ 2025ರ ವೇಳೆಗೆ ಆ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಕರ್ನಾಟಕದಲ್ಲಿ ಅತಿ ಹೆಚ್ಚು ಅವಧಿಗೆ ಸಿಎಂ ಆದ ದಾಖಲೆ ಬರೆಯಲಿದ್ದಾರೆ. ಬಹುಶಃ ಈ ಸಮಯಕ್ಕೆ ಕಾಂಗ್ರೆಸ್‌ ನಾಯಕತ್ವದಲ್ಲಿ ಬದಲಾವಣೆ ಆಗಬಹುದು ಎಂಬ ಮಾತುಗಳು ಡಿ.ಕೆ. ಶಿವಕುಮಾರ್‌ ಅವರ ಪರವಾಗಿರುವವರ ಪಾಳೆಯದಲ್ಲಿದೆ. ಆದರೆ ಸಿದ್ದರಾಮಯ್ಯ ಅವರ ಪಾಳೆಯ ಇದನ್ನು ಅಲ್ಲಗಳೆಯುತ್ತದೆ. ಪೂರ್ಣ ಅವಧಿಯನ್ನು ಸಿದ್ದರಾಮಯ್ಯ ಅವರೇ ಪೂರ್ಣಗೊಳಿಸಲಿದ್ದಾರೆ ಎನ್ನುತ್ತಾರೆ. ಇದೆಲ್ಲದರ ನಡುವೆ ಪ್ರತಿಪಕ್ಷ ಬಿಜೆಪಿಯು ಮುಂದೆ ಅಧಿಕಾರ ಹಿಡಿಯಲು ‘ಕಾದು ಕೂತಿದೆ’. ಕರ್ನಾಟಕ ರಾಜಕಾರಣದಲ್ಲಿ ಪ್ರತಿ ವಿಧಾನಸಭೆ ಚುನಾವಣೆಗೂ ಸರ್ಕಾರವನ್ನು ಬದಲಾಯಿಸುವ ಸಂಪ್ರದಾಯದ ಆಧಾರದಲ್ಲಿ ತನಗೆ ಅಧಿಕಾರ ಸಿಗಬಹುದು ಎನ್ನುವುದು ಕೆಲವರ ಲೆಕ್ಕಾಚಾರ. ಆದರೆ ಕರ್ನಾಟಕ ಬಿಜೆಪಿಯ ಈಗಿನ ವರ್ಚಸ್ಸನ್ನು ಲೆಕ್ಕ ಮಾಡಿದರೆ ಅಂತನ ಆರ್ಗ್ಯಾನಿಕ್‌ ಬದಲಾವಣೆ ಆಗುವುದು ಅನುಮಾನ.

ಹಾಗಾಗಿ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಸರ್ಕಾರದ ನೇತೃತ್ವವನ್ನು ಯಾರು ವಹಿಸಿಕೊಂಡಿರುತ್ತಾರೆ ಎನ್ನುವುದರ ಆಧಾರದಲ್ಲಿ ಬಿಜೆಪಿಯ ತಂತ್ರಗಾರಿಕೆ ಹೆಣೆಯಲ್ಪಡುತ್ತದೆ. ಈ ನಿಟ್ಟಿನಲ್ಲಿ ಸದ್ಯಕ್ಕೆ ಬಿಜೆಪಿಯೆದುರು ಎರಡು ಆಯ್ಕೆಗಳಿವೆ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಚುನಾವಣೆ ನಡೆದರೆ ಅದಕ್ಕೆ ತಂತ್ರ ಹೆಣೆಯುವುದು, ಜನವರಿ ವೇಳೆಗೆ ಡಿ.ಕೆ. ಶಿವಕುಮಾರ್‌ ಸಿಎಂ ಆಗಿ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋದರೆ ಅದಕ್ಕೆ ತಂತ್ರ ಹೊಸೆಯುವುದು. ಇವೆರಡರಲ್ಲಿ ಬಿಜೆಪಿ ದೃಷ್ಟಿಕೋನದಿಂದ ಯಾವುದು ಹೆಚ್ಚು ಅನುಕೂಲ ಹಾಗೂ ಯಾವುದು ಕಡಿಮೆ ಅನುಕೂಲ ನೋಡುವುದು ಈ ಲೇಖನದ ಉದ್ದೇಶ.

Dk Shivakumar-BJP- Siddaramaiah
ಡಿ-ಕೋಡ್: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತಕ್ಕೆ ಅಧಿಕಾರಿಗಳೂ ಹೊಣೆ; ಏಕೆಂದರೆ...

ಸಿದ್ದರಾಮಯ್ಯ ನೇತೃತ್ವ

ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ವಿಧಾನಸಭೆ ಚುನಾವಣೆಯನ್ನು ಎದುರಿಸಿದರೆ ಬಿಜೆಪಿಯು ತಂತ್ರಗಾರಿಕೆಯಲ್ಲಿ ಹೊಸತನ್ನು ಮಾಡುವ ಅಗತ್ಯವಿಲ್ಲ. ಸಿದ್ದರಾಮಯ್ಯ ಅವರು ಹೆಚ್ಚಾಗಿ ಜಾತಿಗಳ ಪ್ರಾಬಲ್ಯ, ಆರ್‌ಎಸ್‌ಎಸ್‌ ವಿರೋಧಿ ಸಿದ್ಧಾಂತದ ಮಾತುಗಳು, ಎಸ್‌ಸಿಎಸ್‌ಟಿ ಸಮುದಾಯಗಳ ಚಾಂಪಿಯನ್‌ ಎನ್ನುವ ನರೇಟಿವ್‌, ಮುಸ್ಲಿಮರಿಗೆ ರಕ್ಷಣೆ ಸಿಗಬೇಕೆಂದರೆ ತಮ್ಮನ್ನು ಬೆಂಬಲಿಸಬೇಕು ಎಂಬ ಸಂದೇಶಗಳ ಆಧಾರದಲ್ಲಿ ಚುನಾವಣೆ ನಡೆಸುತ್ತಾರೆ. ಬಿಜೆಪಿ ದೃಷ್ಟಿಕೋನದಲ್ಲಿ ಸಿದ್ದರಾಮಯ್ಯ ಅವರ ತಂತ್ರಗಳೆಲ್ಲವೂ ಈಗಾಗಲೆ ಬಳಕೆ ಆಗಿರುವಂಥವು.

  1. ಜಾತಿ ರಾಜಕಾರಣ: ಕೆಲವು ಜಾತಿಗಳನ್ನು ಇನ್ನು ಕೆಲವು ಜಾತಿಗಳು ತುಳಿಯುತ್ತಿವೆ, ಅದನ್ನು ಸರಿಪಡಿಸಲು ಜಾತಿಗಳ ಆಧಾರದಲ್ಲಿ ಸರ್ಕಾರದ ಯೋಜನೆಗಳನ್ನು ರೂಪಿಸಬೇಕು ಎನ್ನುವ ಸಿದ್ದರಾಮಯ್ಯ ಅವರ ಸೂತ್ರವು ಈಗಾಗಲೆ ಬಳಕೆಯಾಗಿದೆ. ಬಿಜೆಪಿಯು 2018ರ ಚುನಾವಣೆಯಲ್ಲೇ ಈ ಅಸ್ತ್ರವನ್ನು ಸಮರ್ಥವಾಗಿ ಎದುರಿಸಿದೆ. ಜಾತಿಗಳನ್ನು ಒಡೆಯುವ ಮೂಲಕ ಸಮಾಜವನ್ನು ಸಿದ್ದರಾಮಯ್ಯ ಒಡೆಯುತ್ತಾರೆ ಎಂದು ಬಿಜೆಪಿ ನರೇಟಿವ್‌ ಸೃಷ್ಟಿಸುವಲ್ಲಿ ಸಫಲವಾಗುತ್ತದೆ.

  2. ವೀರಶೈವ ಲಿಂಗಾಯತ: ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ವಿಚಾರದಲ್ಲಿ ಕೈಹಾಕಿದ್ದು 2018ರ ಚುನಾವಣೆಯಲ್ಲಿ ತಿರುಗು ಬಾಣವಾಯಿತು. ಹಾಗಾಗಿಯೇ ಈಗಲೂ ವೀರಶೈವ ಲಿಂಗಾಯತ ಸಮುದಾಯವು ಕಾಂಗ್ರೆಸ್‌ ಪಕ್ಷವನ್ನು ಅನುಮಾನದ ಕಣ್ಣಿನಿಂದಲೇ ನೋಡುತ್ತಿದೆ. ಮತ್ತೆ ಯಾವಾಗಬೇಕಾದರೂ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಸಿದ್ದರಾಮಯ್ಯ ಮಾತನಾಡಿ ಸಮುದಾಯವನ್ನು ಗೊಂದಲಕ್ಕೆ ಈಡುಮಾಡಬಹುದು ಎಂಬ ಕಾರಣಕ್ಕೆ ಈಗಲೂ ಈ ಸಮುದಾಯದ ಮತಗಳು ಬಿಜೆಪಿ ಜತೆಯಲ್ಲೇ ಇರುವಂತೆ ಕಾಣುತ್ತಿದೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ವಿಚಾರದಲ್ಲೂ ಸಿದ್ದರಾಮಯ್ಯ ಅವರ ವಿರುದ್ಧ ಕೋಪ ಇದೆ.

  3. ಅಲ್ಪಸಂಖ್ಯಾತ ತುಷ್ಟೀಕರಣ: ಸಿದ್ದರಾಮಯ್ಯ ಅವರು ಕಳೆದ ಸರ್ಕಾರದ ಅವಧಿಯಲ್ಲಿ ನಡೆಸಿದ ಟಿಪ್ಪು ಜಯಂತಿಯೇ ಸರ್ಕಾರದ ವರ್ಚಸ್ಸನ್ನು ಸಾಕಷ್ಟು ಕುಂದಿಸಿತ್ತು. ಮುಸ್ಲಿಂ ತುಷ್ಟೀಕರಣ ವಿಚಾರವನ್ನು ಮುಂದುಮಾಡಿ ಮತದಾರರನ್ನು ಧೃವೀಕರಿಸುವಲ್ಲಿ ಬಿಜೆಪಿಯು ಪ್ರಾವೀಣ್ಯತೆಯನ್ನು ಪಡೆದಿದೆ. ಈ ಸರ್ಕಾರದ ಅವಧಿಯಲ್ಲೂ ಮುಸ್ಲಿಂ ಪರ ಎನ್ನುವ ಅನೇಕ ನಿರ್ಧಾರಗಳನ್ನು ಸರ್ಕಾರ ಕೈಗೊಂಡಿದ್ದು, ಅದೆಲ್ಲದರ ಆರೋಪ ಈಗಾಗಲೆ ಸಿದ್ದರಾಮಯ್ಯ ಅವರ ಮೇಲೆ ಇದೆ. ಚುನಾವಣೆ ವೇಳೆಯಲ್ಲಿ ಇದಕ್ಕೊಂದು ಧ್ವನಿ ನೀಡಿದರೆ ಸಾಕು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ಬಿಜೆಪಿ ಗೆಲುವಿನೆಡೆಗಿನ ಹೆಜ್ಜೆ ಸುಲಭವಾಗುತ್ತದೆ.

  4. ಎಸ್‌ಸಿ ಒಳಮೀಸಲಾತಿ: ತಾವು ಎಸ್‌ಸಿಎಸ್‌ಟಿ ಚಾಂಪಿಯನ್‌ ಎಂದುಕೊಂಡರೂ ಒಳಮೀಸಲಾತಿ ವಿಚಾರದಲ್ಲಿ ಸಿದ್ದರಾಮಯ್ಯ ಅವರ ನಿಲುವು ಗೊಂದಲಕಾರಿಯಾಗಿದೆ. ಅನೇಕ ವರ್ಷಗಳಿಂದ ಮೀಸಲಾತಿ ಲಭಿಸದೆ ವಂಚಿತವಾಗಿರುವ ಸಮುದಾಯಗಳಿಗೆ ಒಳಮೀಸಲಾತಿ ನ್ಯಾಯ ಕಲ್ಪಿಸುತ್ತದೆ. ಆದರೆ ನಾಗಮೋಹನ ದಾಸ್‌ ಸಮಿತಿ ವರದಿಯನ್ನು ಬದಲಿಸಿದ ರೀತಿ, ಮೀಸಲಾತಿ ಹೆಚ್ಚಳವನ್ನು ಆನ್ವಯಿಸಲು ಮಾಡಿದ ವಿಳಂಬದಿಂದಾಗಿ ಎಸ್‌ಸಿ ಸಮುದಾಯವು ಈ ಹಿಂದಿನಷ್ಟು ಸದೃಢವಾಗಿ ಸಿದ್ದರಾಮಯ್ಯ ಅವರ ಪರವಾಗಿ ನಿಂತಿದೆ ಎನ್ನುವಂತಿಲ್ಲ.

  5. ಎಸ್‌ಸಿಎಸ್‌ಪಿಟಿಎಸ್‌ಪಿ: ಎಸ್‌ಸಿಎಸ್‌ಟಿ ಸಮುದಾಯಗಳಿಗೇ ನೇರವಾಗಿ ಬಳಕೆ ಆಗಬೇಕು ಎಂಬ ನಿಬಂಧನೆ ಇದ್ದರೂ ಆ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಸಿದ್ದರಾಮಯ್ಯ ಅವರು ಬಳಸುತ್ತಿದ್ದಾರೆ. ಕಾಯ್ದೆಯಲ್ಲಿನ 7ಡಿ ಕಲಂ ಅನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಕುರಿತು ಎಸ್‌ಸಿಎಸ್‌ಟಿ ಸಮುದಾಯದ ಮುಖಂಡರಲ್ಲಿ, ಹಿಂದಿನ ಸರ್ಕಾರದಲ್ಲಿದ್ದಷ್ಟು ಏಕಾಭಿಪ್ರಾಯ ಇಲ್ಲ.

  6. 2018ರ ಸ್ವರೂಪ: ಹಾಗೆ ನೋಡಿದರೆ ಗ್ಯಾರಂಟಿ ಯೋಜನೆಗಳನ್ನು ಹೊರತುಪಡಿಸಿದರೆ 2028ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಸರ್ಕಾರವನ್ನು ಎದುರಿಸಲು ಬಿಜೆಪಿಗೆ ಹೊಸ ಕಾರ್ಯಯೋಜನೆಯ ಅಗತ್ಯವೇ ಇಲ್ಲ. 2018ರ ಚುನಾವಣೆಯಲ್ಲಿ ನಡೆಸಿದ ಅನೇಕ ಕಾರ್ಯತಂತ್ರಗಳು 2028ರ ಚುನಾವಣೆಯಲ್ಲೂ ಬಿಜೆಪಿಯ ಕೈಹಿಡಿಯಲಿವೆ. ಉದಾಹರಣೆಗೆ: ಎಸ್‌ಸಿಎಸ್‌ಟಿ ಸಮುದಾಯಗಳಿಗೆ ಮೋಸ, ಅಲ್ಪಸಂಖ್ಯಾತ ತುಷ್ಟೀಕರಣ, ಆರ್‌ಎಸ್‌ಎಸ್‌ ಕಾರ್ಯಕರ್ತರ ಮೇಲಿನ ಹಲ್ಲೆ, ಧರ್ಮಸ್ಥಳ ಪ್ರಕರಣ... ಇತ್ಯಾದಿ.

ಡಿ.ಕೆ. ಶಿವಕುಮಾರ್‌ ನೇತೃತ್ವ

ಕಾಂಗ್ರೆಸ್‌ ಹೈಕಮಾಂಡ್‌ ಗಟ್ಟಿ ನಿರ್ಧಾರ ಮಾಡಿ ಡಿ.ಕೆ. ಶಿವಕುಮಾರ್‌ ಅವರನ್ನು 2026ರ ಜನವರಿಯಲ್ಲಿ ಸಿಎಂ ಮಾಡಿದರೆ ಅವರ ಕೈಯಲ್ಲಿ ಸುಮಾರು 2 ವರ್ಷವಿರುತ್ತದೆ. ಈ ಅವಧಿಯ ನಂತರ ಚುನಾವಣೆಯನ್ನು ಎದುರಿಸಲು ಬಿಜೆಪಿ ಯಾವ ಸ್ಥಿತಿಯಲ್ಲಿರುತ್ತದೆ ನೋಡೋಣ.

  1. ಕಾರ್ಯತಂತ್ರ: ಈಗಾಗಲೆ ಹೇಳಿದಂತೆ ಡಿ.ಕೆ. ಶಿವಕುಮಾರ್‌ ಅವರು ಚುನಾವಣಾ ತಂತ್ರಗಾರಿಕೆಯನ್ನು ನಡೆಸಬಲ್ಲರು. ಕೇವಲ ಸೈದ್ಧಾಂತಿಕ, ಸಾಂಪ್ರದಾಯಿಕ ಕಾರ್ಯತಂತ್ರವಲ್ಲದೆ ವೃತ್ತಿಪರರನ್ನು ನೇಮಿಸಿಕೊಂಡು ಅದರ ಆಧಾರದಲ್ಲಿ ಸೆಣೆಸಬಲ್ಲರು. ಇದು 2023ರ ಚುನಾವಣೆಯಲ್ಲೇ ಸಾಬೀತಾಗಿದೆ. ಡಿ.ಕೆ. ಶಿವಕುಮಾರ್‌ ಅವರ ರಣತಂತ್ರವು ಬಹುತೇಕ ಬಿಜೆಪಿಯ ಚುನಾವಣಾ ರಣತಂತ್ರವನ್ನು ಮ್ಯಾಚ್‌ ಮಾಡುತ್ತದೆ.

  2. ಯುವ ಮುಖ: ಸಿದ್ದರಾಮಯ್ಯ ಅವರಿಗೆ ಈಗ 78 ವರ್ಷ, ಡಿ.ಕೆ. ಶಿವಕುಮಾರ್‌ ಅವರಿಗೆ 63 ವರ್ಷ. 15  ವರ್ಷ ವ್ಯತ್ಯಾಸವಿದೆ. ಡಿ.ಕೆ. ಶಿವಕುಮಾರ್‌ ಅವರು ಕಾಂಗ್ರೆಸ್‌ನಲ್ಲಿ ಈಗಲೂ ಯುವಮುಖ ಎನ್ನುವಂತೆಯೇ ಇದ್ದಾರೆ. ಅವರು ‘ಬೆಳೆಸುತ್ತಿರುವ’ ಅನೇಕ ನಾಯಕರ ವಯಸ್ಸು 40-50ರ ಆಸುಪಾಸಿನಲ್ಲಿದೆ. ಒಂದು ಯುವ ತಂಡವು ಶಿವಕುಮಾರ್‌ ಅವರ ಬೆನ್ನಿಗಿದೆ. ‘ಬಂಡೆ’ ಎನ್ನುವ ಪಂಚ್‌ ಲೈನ್‌ ಇದನ್ನು ಪುಷ್ಟೀಕರಿಸುತ್ತದೆ. ಹಾಗಾಗಿ ಯುವಕರ ನಡುವೆ ಡಿ.ಕೆ. ಶಿವಕುಮಾರ್‌ ಹೆಚ್ಚು ಆಕರ್ಷಕ ಆಗಬಲ್ಲರು.

  3. ಮೃದು ಹಿಂದುತ್ವ: ಸದಾ ಆರ್‌ಎಸ್‌ಎಸ್‌ ವಿರುದ್ಧ ಕಿಡಿಕಾರುವುದು ಕಾಂಗ್ರೆಸಿಗರ ಲಕ್ಷಣ ಎನ್ನುವಂತೆ ಈಗಿನ ಕಾಂಗ್ರೆಸ್‌ ಹೈಕಮಾಂಡ್‌ ಭಾವಿಸಿದೆ. ಅದಕ್ಕೆ ಅನುಗುಣವಾಗಿ ಸಿದ್ದರಾಮಯ್ಯ ಅವರ ಬಣವು ಆರ್‌ಎಸ್‌ಎಸ್‌ ವಿರೋಧವನ್ನು ಒಂದು ಅಜೆಂಡಾವನ್ನಾಗಿಸಿಕೊಂಡಿದೆ. ಆರ್‌ಎಸ್‌ಎಸ್‌ ಅನ್ನು ವಿರೋಧಿಸುತ್ತಲೆ, ಹಿಂದೂ ವಿರೋಧಿ ಎಂಬ ಹಣೆಪಟ್ಟಿಯನ್ನೂ ಕಟ್ಟಿಕೊಳ್ಳುತ್ತಿದ್ದಾರೆ. ಆದರೆ ಡಿ.ಕೆ. ಶಿವಕುಮಾರ್‌ ಮೃದು ಹಿಂದುತ್ವವನ್ನು ಅನೇಕ ಬಾರಿ ಪ್ರದರ್ಶಿಸಿದ್ದಾರೆ. ಕುಂಭ ಮೇಳಕ್ಕೆ ತೆರಳಿದ್ದು, ಭಾರತ ಹಿಂದೂ ರಾಷ್ಟ್ರ ಎಂದು ಹೇಳಿದ್ದು, ಆಗಾಗ್ಗೆ ಹಿಂದೂ ಧರ್ಮದ ಬಗ್ಗೆ ಧನಾತ್ಮಕವಾಗಿ ಮಾತನಾಡುವುದು ಇದ್ದೇ ಇದೆ. ಇತ್ತೀಚೆಗಂತೂ ಆರ್‌ಎಸ್‌ಎಸ್‌ ಪ್ರಾರ್ಥನೆಯ ಸಾಲನ್ನೇ ಸದನದಲ್ಲಿ ಹೇಳಿದ್ದಾರೆ. ಆರ್‌ಎಸ್‌ಎಸ್‌ ಸಂಘಟನೆಯನ್ನಾಗಲಿ, ಬಿಜೆಪಿಯನ್ನಾಗಲಿ ವಸ್ತುನಿಷ್ಟವಾಗಿ ವಿರೋಧಿಸಬೇಕೆ ವಿನಃ ಶತ್ರುಗಳ ರೀತಿ ಕಾಣಬಾರದು ಎನ್ನುವ ಅವರ ಧೋರಣೆಯು ಬಿಜೆಪಿ, ಆರ್‌ಎಸ್‌ಎಸ್‌ ವಲಯದಲ್ಲೂ ಅವರಿಗೊಂದಿಷ್ಟು ಫ್ಯಾನ್‌ಗಳನ್ನು ಸೃಷ್ಟಿಸಿದೆ. ಹಾಗೆಂದಮಾತ್ರಕ್ಕೆ ಆರ್‌ಎಸ್‌ಎಸ್‌, ಬಿಜೆಪಿ ಬೆಂಬಲಿಗರು ಡಿ.ಕೆ. ಶಿವಕುಮಾರ್‌ ಅವರಿಗೆ ಮತ ನೀಡುವುದಿಲ್ಲ. ಆದರೆ ಯಾವುದೇ ಸೈದ್ಧಾಂತಿಕ ಹಿನ್ನೆಲೆ ಇಲ್ಲದ ಅತಿ ದೊಡ್ಡ ಸಂಖ್ಯೆಯ ‘ನ್ಯೂಟ್ರಲ್‌’ ಹಿಂದೂ ಮತದಾರರು ಸಿದ್ದರಾಮಯ್ಯ ಅವರನ್ನು ವಿರೋಧಿಸಿದರೂ ಡಿ.ಕೆ. ಶಿವಕುಮಾರ್‌ ಅವರನ್ನು ಬೆಂಬಲಿಸಬಲ್ಲರು. ಅದರಲ್ಲೂ ಕರ್ನಾಟಕದಲ್ಲಿರುವ ಬಿಜೆಪಿಯ ಸ್ಥಿತಿಯನ್ನು ಕಂಡು ಡಿ.ಕೆ. ಶಿವಕುಮಾರ್‌ ನೇತೃತ್ವದ ನಿರ್ಧಾರಕ ನಾಯಕತ್ವದಿಂದಲೇ ಹಿಂದೂಗಳ ರಕ್ಷಣೆ ಎಂದು ಅವರು ಭಾವಿಸಲೂಬಹುದು. ಇದು ಬಿಜೆಪಿಯೆಡೆಗಿನ ಹಿಂದೂ ಮತಗಳಲ್ಲಿ ವಿಭಜನೆ ಮಾಡಬಲ್ಲದು.

  4. ಸಂಘಟನಾ ಶಕ್ತಿ: ಡಿ.ಕೆ. ಶಿವಕುಮಾರ್‌ ಅವರ ಜತೆಗೆ ಹೆಚ್ಚು ಶಾಸಕರು ಇಲ್ಲದೇ ಇದ್ದರೂ ಹೆಚ್ಚು ಕಾರ್ಯಕರ್ತರಿದ್ದಾರೆ. ಸಂಘಟನಾತ್ಮಕವಾಗಿ ಬಿಜೆಪಿಯ ರೀತಿಯಲ್ಲೇ ಕಾಂಗ್ರೆಸ್‌ ಪಕ್ಷವನ್ನು ನಿಭಾಯಿಸುತ್ತಿರುವುದು ಡಿ.ಕೆ. ಶಿವಕುಮಾರ್‌ ಅವರ ಹೆಗ್ಗಳಿಕೆ. ಮಾಸ್‌ ಪಕ್ಷವಾದ ಕಾಂಗ್ರೆಸ್‌ನಲ್ಲಿ ಬಿಜೆಪಿ ರೀತಿಯ ಕೇಡರ್‌ ವ್ಯವಸ್ಥೆ ರೂಪಿಸುವುದು ಬಹು ಕಷ್ಟದ ಕೆಲಸ. ಈ ಕಾರ್ಯವನ್ನು ಒಂದು ಮಟ್ಟಿಗಾದರೂ ಕಾಂಗ್ರೆಸ್‌ನಲ್ಲಿ ಸಾಧಿಸಿದ್ದರೆ ಅದಕ್ಕೆ ಶಿವಕುಮಾರ್‌ ಅವರ ನೇತೃತ್ವವೇ ಕಾರಣ. ಹಾಗಾಗಿ ಚುನಾವಣೆ ವೇಳೆ ಸಂಘಟನಾತ್ಮಕವಾಗಿ ಬಿಜೆಪಿಯನ್ನು ಎದುರಿಸಬಲ್ಲ ಶಕ್ತಿ ಡಿ.ಕೆ. ಶಿವಕುಮಾರ್‌ ನಾಯಕತ್ವಕ್ಕೆ ಇದೆ.

  5. ಹೊಸ ಮುಖ: ಈಗಾಗಲೆ ಹೇಳಿದಂತೆ, ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ 2028ರ ಚುನಾವಣೆ ನಡೆದರೆ 2018ರ ಟೆಂಪ್ಲೇಟ್‌ ಅನ್ನೇ ಸ್ವಲ್ಪ ಬದಲಾಯಿಸಿ ಬಿಜೆಪಿ ಚುನಾವಣೆ ಎದುರಿಸಬಹುದು. ಆದರೆ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಚುನಾವಣೆ ನಡೆದರೆ ಬಿಜೆಪಿ ಹೊಸ ಹತ್ಯಾರಗಳನ್ನು ಸಿದ್ದಪಡಿಸಿಕೊಳ್ಳಬೇಕಾಗುತ್ತದೆ. ಏಕಕಾಲದಲ್ಲಿ ಸಂಘಟನಾ ಶಕ್ತಿ, ಹಣಬಲ, ಯುವ ಬೆಂಬಲವನ್ನು ಹೊಂದಿರುವ ಡಿ.ಕೆ. ಶಿವಕುಮಾರ್‌ ಸಂಪೂರ್ಣ ನೇತೃತ್ವದಲ್ಲಿ ಇಲ್ಲಿವರೆಗೆ ಚುನಾವಣೆ ನಡೆದಿಲ್ಲ. ಹಾಗಾಗಿ ಅವರು ಯಾವ ತಂತ್ರ ಹೂಡಬಲ್ಲರು ಎನ್ನುವುದು ಬಿಜೆಪಿಯನ್ನು ತುದಿಗಾಲಲ್ಲಿ ನಿಲ್ಲಿಸಬಲ್ಲದು.

  6. ಭ್ರಷ್ಟಾಚಾರ ಆರೋಪ: ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಅಧಿಕಾರ ದುರುಪಯೋಗ, ವಾಲ್ಮೀಕಿ ಹಗರಣಗಳಂತಹ ಆರೋಪಗಳಿವೆ. ಆದರೆ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧ ಇರುವ ಭ್ರಷ್ಟಾಚಾರ ಆರೋಪಗಳು ವೈಯಕ್ತಿಕ ಆಸ್ತಿ ಗಳಿಕೆ ಕುರಿತಾದವು. ಅವುಗಳೂ ಇನ್ನೂ ಸಾಬೀತಾಗಿಲ್ಲ. ಹಾಗಾಗಿ ಬಿಜೆಪಿಯು ಡಿ.ಕೆ. ಶಿವಕುಮಾರ್‌ ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಲು ತಿಣುಕಾಡಬೇಕಾಗುತ್ತದೆ.

ಯಾರು ಹಿತವರು?

ಇಲ್ಲಿವರೆಗಿನ ವಾದಗಳ ಆಧಾರದಲ್ಲಿ ಹೇಳುವುದಾದರೆ, ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಮುಂದಿನ ವಿಧಾನಸಭೆ ಚುನಾವಣೆ ಎದುರಿಸುವುದು ಬಿಜೆಪಿ ಗೆಲುವಿಗೆ ಸುಲಭದ ಹಾದಿ. ಎಸ್‌ಸಿಎಸ್‌ಟಿ ಸಮುದಾಯವು ಈಗ ಸಂಪೂರ್ಣವಾಗಿ ಸಿದ್ದರಾಮಯ್ಯ ಅವರ ಪರವಾಗಿರುವಂತೆ ಕಾಣುತ್ತಿಲ್ಲ. ಒಳಮೀಸಲಾತಿ, ಎಸ್‌ಸಿಎಸ್‌ಪಿಟಿಎಸ್‌ಪಿ ಮುಂತಾದ ಕಾರಣಗಳಿಂದಾಗಿ ಈ ಸಮುದಾಯಗಳ ಅನೇಕರು ಬಿಜೆಪಿಯತ್ತಲೂ ಮುಖ ಮಾಡಿದ್ದಾರೆ. ಹಾಗಾಗಿ ಇದು ಬಿಜೆಪಿಗೆ ಹೆಚ್ಚುವರಿ ಲಾಭವನ್ನು ನೀಡಲಿದೆ. ಈಗಾಗಲೆ ಸಿದ್ದರಾಮಯ್ಯ ಅವರ ಚುನಾವಣಾ ತಂತ್ರವು ಎಲ್ಲರಿಗೂ ತಿಳಿದಿರುವಂಥದ್ದೇ ಆಗಿದ್ದು, ಅದಕ್ಕೆ ಬಿಜೆಪಿಯ ಸದೃಢ ತಂತ್ರಗಾರರ ತಂಡ ರಣತಂತ್ರವನ್ನು ರೂಪಿಸಬಲ್ಲದು. ಆದರೆ ಹೊಸ ಮುಖ, ಸಂಘಟನಾ ಶಕ್ತಿ, ಹಣಬಲ, ಕಡಿಮೆ ನಕಾರಾತ್ಮಕ ಅಂಶಗಳನ್ನು ಹೊಂದಿರುವ, ಎಲ್ಲಕ್ಕಿಂತ ಮುಖ್ಯವಾಗಿ ವೃತ್ತಿಪರವಾಗಿ ಚುನಾವಣೆಯನ್ನು ಎದುರಿಸುವ ಡಿ.ಕೆ. ಶಿವಕುಮಾರ್‌ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಚುನಾವಣೆಯನ್ನು ಎದುರಿಸುವುದು ಬಿಜೆಪಿಗೆ ಹೆಚ್ಚು ಸವಾಲನ್ನು ಮುಂದಿಡುತ್ತದೆ. ಕರ್ನಾಟಕ ಬಿಜೆಪಿಯ ಈಗಿನ ದಯನೀಯ ಸ್ಥಿತಿಯು ಡಿ.ಕೆ. ಶಿವಕುಮಾರ್‌ ನಾಯಕತ್ವಕ್ಕೆ ಸುಲಭದ ತುತ್ತಾಗುವ ಸಾಧ್ಯತೆಯೂ ಇದೆ. ಹಾಗಾಗಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ 2025ರ ಡಿಸೆಂಬರ್‌ ನಂತರವೂ ಮುಂದುವರಿಯುವುದು, ಅವರ ನೇತೃತ್ವದಲ್ಲೇ 2028ರ ಚುನಾವಣೆಯನ್ನು ಎದುರಿಸುವುದು ಬಿಜೆಪಿ ದೃಷ್ಟಿಕೋನದಲ್ಲಿ ಅನುಕೂಲಕರ ಮಾರ್ಗ.

ಎಚ್ಚರಿಕೆ: ಡಿ.ಕೆ. ಶಿವಕುಮಾರ್‌ ಎಷ್ಟೆಲ್ಲ ಧನಾತ್ಮಕತೆಗಳನ್ನು ಹೊಂದಿದ್ದರೂ ವಿವಿಧ ಜಾತಿಗಳ ನಡುವೆ ಅವರಿಗೆ ಸುಲಭದ ಎಂಟ್ರಿ ಇಲ್ಲ ಎನ್ನುವುದು ಸತ್ಯ. ಅದನ್ನು ಸಿದ್ದರಾಮಯ್ಯ ಅವರೇ ದೊರಕಿಸಿಕೊಡಬೇಕು. ಹಾಗಾಗಿ, ಸಿಎಂ ಗಾದಿಯನ್ನು ಹೈಕಮಾಂಡ್‌ ಮೂಲಕ ಕಿತ್ತುಕೊಳ್ಳುವ ಬದಲಾಗಿ ಸಿದ್ದರಾಮಯ್ಯ ಅವರ ಮನವೊಲಿಸಿ ಅವರಿಂದಲೇ ಪಡೆದುಕೊಳ್ಳುವುದು ಡಿ.ಕೆ. ಶಿವಕುಮಾರ್‌ ಅವರ ದೃಷ್ಟಿಯಲ್ಲಿ ಒಳ್ಳೆಯದು. ಸಿದ್ದರಾಮಯ್ಯ ಅವರ ಬಲದೊಂದಿಗೇ ಡಿ.ಕೆ. ಶಿವಕುಮಾರ್‌ ಸಮರ್ಥವಾಗಿ ಚುನಾವಣೆ ಎದುರಿಸಬಲ್ಲರು.

- ರಮೇಶ್ ದೊಡ್ಡಪುರ

journoramesha@gmail.com

ವಿ.ಸೂ: ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರ ವೈಯಯಕ್ತಿಕವಾದವು. ಅವರು ಕಾರ್ಯನಿರ್ವಹಿಸುವ ಸಂಸ್ಥೆಗಾಗಲಿ, ಇದೀಗ ಲೇಖನ ಪ್ರಕಟಿಸಿರುವ ಸಂಸ್ಥೆಗಾಗಲಿ ಅದು ಸಂಬಂಧಿಸಿರುವುದಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com