ಮುಂದಿನ ರಾಜಕೀಯ ಸ್ಫೋಟಗಳಿಗೆ ಇವೆಲ್ಲಾ ಬತ್ತಿಗಳು ಅಷ್ಟೇ... (ನೇರನೋಟ)

ಶಿವಕುಮಾರ್ ಆರ್‌ಎಸ್‌ಎಸ್‌ ಪ್ರಾರ್ಥನಾ ಗೀತೆಯನ್ನು ಅಸೆಂಬ್ಲಿಯಲ್ಲಿ ಹಾಡಿದಾಗ ಇದರಿಂದ ತಮಗೆ ಎದುರಾಗಬಹುದಾದ ಸಂಕಷ್ಟವನ್ನು ಊಹಿಸಿರಲೇ ಇಲ್ಲ. ಅವರ ಉದ್ದೇಶ ಆರ್‌ಎಸ್‌ಎಸ್‌ ಪ್ರಾರ್ಥನಾ ಗೀತೆ ಹಾಡುವುದಾಗಿರಲಿಲ್ಲ.
DCM DK Shivakumar and CM Siddaramaiah casual Images
ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಸಾಂದರ್ಭಿಕ ಚಿತ್ರonline desk
Updated on

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆಯಲ್ಲಿ ನಮಸ್ತೆ ಸದಾ ವತ್ಸಲೆ ಮಾತೃಭೂಮಿ... ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾರ್ಥನಾ ಗೀತೆ ಹಾಡಿರುವುದೇ ಇರಬಹುದು, ಮತಗಳ್ಳತನದ ಬಗ್ಗೆ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಅವರ ಹೇಳಿಕೆ ಇರಬಹುದು ಈ ಎಲ್ಲ ವಿವಾದಗಳು ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ಮುಂದಿನ ರಾಜಕೀಯ ಸ್ಫೋಟಗಳಿಗೆ ಬತ್ತಿಗಳಾಗುವ ಸಾಧ್ಯತೆಗಳೇ ಹೆಚ್ಚು.

ಕರ್ನಾಟಕದ ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ. ಬಣಗಳ ನಡುವೆ ಹಗ್ಗಜಗ್ಗಾಟ ನಡದೇ ಇದೆ. ಅವಕಾಶ ಸಿಕ್ಕಾಗಲೆಲ್ಲಾ ಬಣ ರಾಜಕಾರಣದ್ದೇ ಮೇಲಾಟ. ಬಣಗಳ ನಡುವೆ ಸ್ಕೋರ್‌ ಮಾಡುವ ತವಕ. ಪರಸ್ಪರ ಬಣಗಳ ವಿರುದ್ಧ ಹೈಕಮಾಂಡ್‌ಗೆ ಸಾಲುಸಾಲು ದೂರುಗಳು. ಅದು ಮಂತ್ರಿ ಸ್ಥಾನದಿಂದ ರಾಜಣ್ಣ ವಜಾ ಇರಬಹುದು, ಡಿ.ಕೆ.ಶಿವಕುಮಾರ್ ಆರ್‌ಎಸ್‌ಎಸ್‌ ಪ್ರಾರ್ಥನಾ ಗೀತೆ ಹಾಡಿದ್ದಕ್ಕೆ ಬಹಿರಂಗ ಕ್ಷಮೆ ಕೇಳಿದ್ದೇ ಆಗಿರಬಹುದು. ಇನ್ನು ಮುಂದೆ ಅವಕಾಶ ಸಿಕ್ಕಾಗಲೆಲ್ಲಾ ಎದುರಾಳಿಗಳನ್ನು ಬಗ್ಗುಬಡಿಯಲೇ ಉಭಯ ಬಣಗಳು ಕಾದು ಕುಳಿತಿರುವಂತಹ ಪರಿಸ್ಥಿತಿ ಅದು.

ಶಿವಕುಮಾರ್ ಆರ್‌ಎಸ್‌ಎಸ್‌ ಪ್ರಾರ್ಥನಾ ಗೀತೆಯನ್ನು ಅಸೆಂಬ್ಲಿಯಲ್ಲಿ ಹಾಡಿದಾಗ ಇದರಿಂದ ತಮಗೆ ಎದುರಾಗಬಹುದಾದ ಸಂಕಷ್ಟವನ್ನು ಊಹಿಸಿರಲೇ ಇಲ್ಲ. ಅವರ ಉದ್ದೇಶ ಆರ್‌ಎಸ್‌ಎಸ್‌ ಪ್ರಾರ್ಥನಾ ಗೀತೆ ಹಾಡುವುದಾಗಿರಲಿಲ್ಲ. ಎದುರಾಳಿಗಳ ಆಚಾರ-ವಿಚಾರಗಳು ನಮಗೂ ಗೊತ್ತಿದೆ ಎಂದು ಪ್ರಾಸಂಗಿಕವಾಗಿ ಗೀತೆ ಹೇಳಿದ ಸಂದರ್ಭ ಅದು. ಅವರ ಉದ್ದೇಶ ಪ್ರತಿಪಕ್ಷ ಬಿಜೆಪಿ ಸದಸ್ಯರಿಗೆ ಟಾಂಗ್‌ ಕೊಡುವುದೇ ಆಗಿತ್ತು. ಅಲ್ಲಿ ಆರ್‌ಎಸ್‌ಎಸ್‌ ಹೊಗಳಬೇಕು ಅಂತಲ್ಲ. ನಾಯಕನಾದವನಿಗೆ ಎದುರಾಳಿಗಳ ಪಾಸಿಟಿವ್‌, ನೆಗೆಟಿವ್‌ ಎರಡೂ ಗೊತ್ತಿರಬೇಕು ಎಂಬುದೇ ಆಗಿತ್ತು. ಆರ್‌ಎಸ್‌ಎಸ್‌ ಬಗ್ಗೆ ತಿಳಿದುಕೊಂಡಿದ್ದೇನೆ ಎಂದು ಹೇಳುವುದೇ ಆಗಿತ್ತು. ಆದರೆ, ಇದು ತಮಗೇ ತಿರುಗುಬಾಣವಾಗುತ್ತದೆ ಎಂದು ಭಾವಿಸಿರಲಿಲ್ಲ. ಕೊನಗೆ ವಿವಾದವಾದಾಗ ಕ್ಷಮೆ ಕೇಳಬೇಕಾಯಿತು. ನಾನು ತಪ್ಪು ಮಾಡಿಲ್ಲ, ಪಕ್ಷದ ಕಾರ್ಯಕರ್ತರು, ಐಎನ್ ಡಿ ಐಎ ಕೂಟದ ನಾಯಕರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಅಂದರು.

ಪಕ್ಷದಲ್ಲಿ ವಿವಾದ ಸ್ಫೋಟವಾಗುವ ಮುನ್ನವೇ ಶಿವಕುಮಾರ್ ಬಹಿರಂಗವಾಗಿ ಕ್ಷಮೆಯಾಚಿಸಿ ವಿವಾದ ಬೆಳೆಯಲು ಬ್ರೇಕ್‌ ಹಾಕಿದರು. ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಶಿವಕುಮಾರ್‌ ಆರ್‌ಎಸ್‌ಎಸ್‌ ಪ್ರಾರ್ಥನಾ ಗೀತೆ ಹೇಳಬಾರದಿತ್ತು. ಹೇಳಿದ್ದಾರೆ. ಈಗ ಅವರು ಕ್ಷಮೆ ಕೇಳಿರುವುದರಿಂದ ವಿವಾದ ಅಲ್ಲಿಗೆ ಮುಗಿಯಿತು ಎಂದು ಪಕ್ಷದ ನಾಯಕರಿಗೆ ಸಂದೇಶ ರವಾನಿಸಿದ್ದಾರೆ. ಶಿವಕುಮಾರ್ ಕ್ಷಮೆಯಾಚಿಸುವಾಗ ಅವರ ಮಾತುಗಳಲ್ಲಿ ಸ್ವಪಕ್ಷೀಯರ ನಡೆಯ ಬಗ್ಗೆ ನೋವು ಎದ್ದು ಕಂಡಿತ್ತು. ತಾವು ಪಕ್ಷಕ್ಕೆ ನಿಷ್ಠೆಯಿಂದ ಸತತವಾಗಿ ದುಡಿಯುತ್ತಿದ್ದರೂ ತಮ್ಮ ಹೇಳಿಕೆಯನ್ನು ವಿನಾಕಾರಣ ವಿವಾದವಾಗಿಸಲಾಗಿದೆ ಎಂಬ ವಿಷಾದವಿತ್ತು.

DCM DK Shivakumar and CM Siddaramaiah casual Images
ಚುನಾವಣಾ ಆಯೋಗ ಮುಕ್ತ ಮನಸ್ಸಿನಿಂದ ಇರಲಿ... (ನೇರ ನೋಟ)

ಅದಕ್ಕೆ ಅವರು, “ಮಹಾರಾಷ್ಟ್ರದ ವಿಲಾಸ್ ರಾವ್ ದೇಶಮುಖ್ ಅವರ ಸರಕಾರದ ರಕ್ಷಣೆ ವೇಳೆ ನಾನು ಏನು ಮಾಡಿದೆ, ಅದರಿಂದ ನನ್ನ ವಿರುದ್ಧ ಎಷ್ಟು ಕೇಸ್ ದಾಖಲಾಯಿತು ಎಂದು ಎಲ್ಲರಿಗೂ ತಿಳಿದಿದೆ. ನಂತರ ಗುಜರಾತಿನ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆ ವೇಳೆ ಪಕ್ಷದ ಅಭ್ಯರ್ಥಿ ಅಹ್ಮದ್ ಪಟೇಲರು ಗೆಲ್ಲಲು ಅನುವಾಗುವಂತೆ ಶಾಸಕರನ್ನು ರಕ್ಷಣೆ ಮಾಡಿದೆ. ಇದಕ್ಕಾಗಿ ನನ್ನ ಮೇಲೆ, ನನ್ನ ಕುಟುಂಬ ಹಾಗೂ ಸ್ನೇಹಿತರು ಸೇರಿ 77 ಜನರ ಮೇಲೆ ಐಟಿ, ಸಿಬಿಐ ಹಾಗೂ ಇಡಿ ದಾಳಿ ನಡೆದವು. ಒಟ್ಟು 400 ಪ್ರಕರಣಗಳು ದಾಖಲಾದವು. ಇದರ ಬಗ್ಗೆ ಎಲ್ಲರಿಗೂ ಗೊತ್ತಿದೆ” ಎಂದಿದ್ದು ತಮ್ಮ ಪಕ್ಷ ನಿಷ್ಠೆಯನ್ನು ಪ್ರದರ್ಶಿಸಿ ತಮಗೆ ಈಗ ಕ್ಷಮೆ ಕೇಳುವ ಸ್ಥಿತಿ ಬಂತಲ್ಲ ಎಂಬ ನೋವೇ ಆಗಿತ್ತು. ಕಾಂಗ್ರೆಸ್‌ನಲ್ಲಿ ಶಿವಕುಮಾರ್ ಅವರನ್ನು ಕಾರ್ನರ್‌ ಮಾಡಲಾಗುತ್ತಿದೆಯೇ? ಎಂಬ ಸಂದೇಹ ಮೂಡಿತು.

ಶಿವಕುಮಾರ್‌ ಅವರ ವಿಚಾರದಲ್ಲಿ ಒಂದಂತೂ ಸ್ಪಷ್ಟ. ಅವರಿಗೆ ಎದುರಾಳಿ ಪಕ್ಷಗಳಿಗಿಂತ ಸ್ವಪಕ್ಷೀಯರಲ್ಲೇ ವಿರೋಧಿಗಳು ಹೆಚ್ಚು. ಅದರಲ್ಲೂ ಕೆಪಿಸಿಸಿ ಅಧ್ಯಕ್ಷರಾಗಿ ಅವರು ಹಾಗೂ ಸಿದ್ದರಾಮಯ್ಯ ಅವರು ಜೂತೆಗೂಡಿ 2023ರ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದ ನಂತರ ಪಕ್ಷದಲ್ಲಿರುವ ಶಿವಕುಮಾರ್ ವಿರೋಧಿಗಳು ಒಗ್ಗೂಡಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಶಿವಕುಮಾರ್ ಹತ್ತಿರವಾದಷ್ಟು ಅವರ ಸುತ್ತಾ ವಿವಾದಗಳು ಹೆಚ್ಚಾಗುತ್ತಿವೆ.

ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು, ಶಿವಕುಮಾರ್ ಅಸೆಂಬ್ಲಿಯಲ್ಲಿ ಆರ್‌ಎಸ್‌ಎಸ್‌ ಪ್ರಾರ್ಥನಾ ಗೀತೆ ಹಾಡಬಹುದು, ಅಮಿತ್‌ ಶಾ ಜೊತೆ ಖಾಸಗಿ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಳ್ಳಬಹುದು, ಅಂಬಾನಿ ಮಗನ ಮದುವೆಗೆ ಹೋಗಬಹುದು. ಅವರು ಏನು ಬೇಕಾದರೂ ಮಾಡಬಹುದು, ನಾವು ಏನೂ ಮಾತನಾಡುವಂತಿಲ್ಲ ಎಂದು ವಾಗ್ದಾಳಿ ನಡೆಸಿದರು. ಸಚಿವ ಸತೀಶ್‌ ಜಾರಕಿಹೊಳಿ, ಶಾಸಕ ಬಿ.ಕೆ.ಹರಿಪ್ರಸಾದ್‌ ಅವರು ಶಿವಕುಮಾರ್ ಆರ್‌ಎಸ್‌ಎಸ್‌ ಪ್ರಾರ್ಥನಾ ಗೀತೆ ಹಾಡಿದ್ದನ್ನು ವಿರೋಧಿಸಿದರು. ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿ ಆರ್‌ಎಸ್‌ಎಸ್‌ ಗೀತೆ ಹಾಡಿದರೆ ತಮ್ಮ ಅಭ್ಯಂತರ ಇರಲಿಲ್ಲ. ಆದರೆ, ಅವರು ಕೆಪಿಸಿಸಿ ಅಧ್ಯಕ್ಷರೂ ಆಗಿದ್ದಾರೆ ಎಂದವರು ಹರಿಪ್ರಸಾದ್‌.

ಶಿವಕುಮಾರ್ ಅವರಿಗೆ ಮೈಕ್‌ ನೋಡಿದ ಕೂಡಲೇ ಮಾತಾಡುವ ಚಟವಿದೆ. ಎಲ್ಲದ್ದಕ್ಕೂ ಪ್ರತಿಕ್ರಿಯಿಸುವ ಸ್ವಭಾವವಿದೆ. ಇದರಿಂದಲೇ ಅವರು ಅನೇಕ ಬಾರಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ ಬೂಕರ್‌ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್‌ ಅವರನ್ನು ಆಯ್ಕೆ ಮಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ಇದು ವಿವಾದವಾದಾಗ ಸಿದ್ದರಾಮಯ್ಯ ಮೌನಕ್ಕೆ ಶರಣಾದರು. ಇದನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಶಿವಕುಮಾರ್ ಅವರು ಚಾಮುಂಡಿಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದು ಹೇಳಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡರು. ಶಿವಕುಮಾರ್ ಅವರು ಈ ವಿಚಾರದಲ್ಲಿ ತಮ್ಮ ರಾಜಕೀಯ ಗುರು, ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರಿಂದ ಕಲಿಯುವುದು ಬಹಳ ಇದೆ. ಕೃಷ್ಣ ಅವರು ತಾವು ಹೇಳಬೇಕಾದಾಗ ಮಾತ್ರ ಮಾಧ್ಯಮದ ಮುಂದೆ ಬರುತ್ತಿದ್ದರು. ಇಲ್ಲದಿದ್ದರೆ ಅವರು ಮೀಡಿಯಾದಿಂದ ದೂರವೇ ಇರುತ್ತಿದ್ದರು.

DCM DK Shivakumar and CM Siddaramaiah casual Images
ಮತಗಳ್ಳತನದ ಆರೋಪದ ಸುತ್ತಾ ಜಟಾಪಟಿ (ನೇರ ನೋಟ)

ಶಿವಕುಮಾರ್‌ ಅವರ ಕಾಂಗ್ರೆಸ್‌ ಪಕ್ಷದ ನಿಷ್ಠೆ ಅಚಲವಾದುದು. ಗಾಂಧಿ ಕುಟುಂಬದ ಬಗ್ಗೆ ಅವರದು ಭಕ್ತಿಭಾವ. ಆದರೆ, ಸಿದ್ದಾಂತದ ಪ್ರಶ್ನೆ ಬಂದಾಗ ಅವರು ಅಷ್ಟು ಗಟ್ಟಿಯಲ್ಲ. ತಮ್ಮ ಧಾರ್ಮಿಕ ನಂಬಿಕೆಯನ್ನು ಯಾವತ್ತೂ ಬಿಟ್ಟುಕೊಟ್ಟಿಲ್ಲ. ವೈಯಕ್ತಿಕ ನಂಬಿಕೆ ಪ್ರಶ್ನೆ ಬಂದಾಗ ಹೈಕಮಾಂಡ್‌ ನಿಲುವನ್ನೂ ಬದಿಗೆ ಸರಿಸಿದ್ದಾರೆ. ಪ್ರಯಾಗರಾಜ್‌ ಸಂಗಮದಲ್ಲಿ ಸ್ನಾನ ಮಾಡಿದ ಮಾತ್ರಕ್ಕೆ ಬಡತನ ನಿವಾರಣೆಯಾಗುವುದಿಲ್ಲ ಎಂದು ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಅನಂತರ ಶಿವಕುಮಾರ್ ಕುಟುಂಬ ಸಮೇತ ಪ್ರಯಾಗರಾಜ್‌ಗೆ ತೆರಳಿ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿ ಬಂದರು. ಅಂಬಾನಿ ಮಗನ ಮದುವೆಯಲ್ಲಿ ಪಾಲ್ಗೊಳ್ಳಲು ಸೋನಿಯಾ ಗಾಂಧಿ ಕುಟುಂಬ ನಿರಾಕರಿಸಿತು. ಶಿವಕುಮಾರ್ ಪಾಲ್ಗೊಂಡರು. ಸದ್ಗುರು ಅವರು ತಮಿಳುನಾಡಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಜೊತೆ ವೇದಿಕೆಯಲ್ಲಿ ಪಕ್ಕದಲ್ಲೇ ಕುಳಿತುಕೊಂಡಿದ್ದರು.

ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರ ಬದಲಾವಣೆ ವಿಚಾರ ಇನ್ನೂ ಚಾಲ್ತಿಯಲ್ಲಿದೆ. ದಲಿತ ಸಿಎಂ ಕೂಗು ಆಗಾಗ್ಗೆ ಕೇಳಿ ಬರುತ್ತಿದೆ. ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದ ಹತ್ತಿರ ಬಂದು ನಿಂತಿದ್ದಾರೆ. ಇಂತಹ ವೇಳೆಯಲ್ಲಿ ಕಾಂಗ್ರೆಸ್ ನಲ್ಲಿ ಬಣ ರಾಜಕಾರಣ ಮುನ್ನೆಲೆಗೆ ಬಂದಿದೆ. ಪರಸ್ಪರ ಹಣಿಯಲು ಉಭಯತ್ರರೂ ಕಾದು ಕುಳಿತಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ಶಕ್ತಿ ಪ್ರದರ್ಶಿಸುತ್ತಿದ್ದಾರೆ.

ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com