

ಬಾಲ್ಯದಲ್ಲಿ ಬಜಾಜ್ ಜಾಹೀರಾತು ನೋಡಿ ಅದರಲ್ಲಿ ಹೇಳುವಂತೆ ಹಮಾರಾ ಬಜಾಜ್ ಎಂದು ಕುಣಿಯುತ್ತ ಹೋಗುತ್ತಿದ್ದ ಮಕ್ಕಳ ಸಂಖ್ಯೆ ಅಸಂಖ್ಯ. ಬಜಾಜ್ ಸ್ಕೊಟರ್ ಭಾರತದಲ್ಲಿ ಸೃಷ್ಟಿಸಿದ್ದ ಸಂಚಲನ ಆ ಮಟ್ಟದ್ದು ಎಂದು ಹೇಳಲು ಈ ಮಾತನ್ನು ಹೇಳಬೇಕಾಯ್ತು. ಕಳೆದ ಹತ್ತು ದಿನಗಳಿಂದ ಆಫ್ರಿಕಾ ಖಂಡದಲ್ಲಿರುವ ಈಜಿಪ್ಟ್ ದೇಶದ ಪ್ರವಾಸದಲ್ಲಿ ದಕ್ಕಿದ ಅನುಭವಗಳು ನೂರಾರು. ಅವುಗಳಲ್ಲಿ ಒಂದನ್ನು ಇಂದು ನಿಮಗೆ ಹೇಳುವೆ. ಅದು ಭಾರತೀಯ ಬಜಾಜ್ ಸಂಸ್ಥೆಗೆ ಸೇರಿದ್ದು. ಈಜಿಪ್ಟ್ ದೇಶದ ಉದ್ದಗಲಕ್ಕೂ ಸರಿಸುಮಾರು ಎರಡೂವರೆ ಸಾವಿರ ಕಿಲೋಮೀಟರ್ ಪ್ರಯಾಣ ಮಾಡಿದೆವು. ಅಲ್ಲೆಲ್ಲ ಕಂಡಿದ್ದು ನಮ್ಮ ಬಜಾಜ್ ಬೈಕುಗಳು . ಹೌದು ಬಜಾಜ್ ಆಫ್ರಿಕಾ ದೇಶಗಳಲ್ಲಿ ದ್ವಿಚಕ್ರವಾಹನ ಮರ್ರು ತ್ರಿ ಚಕ್ರ ವಾಹನಗಳ ಅನುಭಿಷಕ್ತ ಸಾಮ್ರಾಟನಾಗಿ ಮೆರೆಯುತ್ತಿದೆ.
ಈಜಿಪ್ಟಿನ ರಾಜಧಾನಿ ಕೈರೋ ನಗರದಲ್ಲಿ ನಡೆಯುವಾಗ ಕಂಡದ್ದು ಬಜಾಜ್ ಸಂಸ್ಥೆಯ ಪಲ್ಸರ್ ಮತ್ತು ಬಾಕ್ಸರ್ ಬೈಕುಗಳು. ಇಲ್ಲಿನ ರಸ್ತೆಯಲ್ಲಿ ಅತ್ಯಂತ ಸಾಮಾನ್ಯವಾಗಿ ಇವು ಕಾಣಸಿಗುತ್ತಿದ್ದವು. ಇದರ ಜೊತೆಗೆ ತ್ರಿಚಕ್ರ ವಾಹನಗಳನ್ನು ಇಲ್ಲಿ ಸರಕು ಸಾಗಣೆಗೆ ಬಳಸುತ್ತಾರೆ , ಈ ವಲಯದಲ್ಲೂ ಬಜಾಜ್ ಸದ್ದು ಮಾಡುತ್ತಿದೆ. ಹಮಾರಾ ಬಜಾಜ್ ಎಂದು ಹೇಳುವ ಸರದಿ ಈಗ ಆಫ್ರಿಕಾ ಮಕ್ಕಳಿಗೆ ಸೇರಿದೆ ಎಂದರೆ ಅದು ಉತ್ಪ್ರೇಕ್ಷೆ ಅಲ್ಲವೇ ಅಲ್ಲ .
ಈಜಿಪ್ಟ್ ದೇಶದಲ್ಲಿ ಬಜಾಜ್ ಬೈಕುಗಳು ಪ್ರಥಮ ಸ್ಥಾನದಲ್ಲಿ ಇಲ್ಲ. ಅಲ್ಲಿರುವುದು ಚೀನಾ ಬೈಕುಗಳು. ಆಫ್ರಿಕಾ ದೇಶದಲ್ಲಿ ವೈಯಕ್ತಿಕ ಮತ್ತು ಟ್ಯಾಕ್ಸಿ ರೂಪದಲ್ಲಿ ಈ ಬೈಕುಗಳನ್ನು ಬಳಸಲಾಗುತ್ತದೆ. ಇದನ್ನು ಅಲ್ಲಿನ ಭಾಷೆಯಲ್ಲಿ ಬೋಡ ಬೋಡ ಎಂದು ಕರೆಯಲಾಗುತ್ತದೆ. ಹೀಗಾಗಿ ಚೈನೀಸ್ ಬೈಕುಗಳನ್ನು ಬೋಡ ಬೋಡ ಎಂದು ಕರೆಯಲಾಗುತ್ತಿತ್ತು. ಇದು ಹೇಗೆ ಎಂದರೆ ಫೋಟೋಕಾಪಿ ಎನ್ನುವುದಕ್ಕೆ ಬದಲಾಗಿ ಜೆರಾಕ್ಸ್ ಮಾಡಿಕೊಡಿ ಎಂದು ಹೇಳುವಷ್ಟರ ಮಟ್ಟಿಗೆ ಜನ ಮಾನಸದಲ್ಲಿ ಬದಲಾವಣೆ ಆದಂತೆ ! ಆದರೆ ಚೀನಾದ ಈ ಮಾರುಕಟ್ಟೆ ಪಾರುಪತ್ಯವನ್ನು ಹಮಾರಾ ಬಜಾಜ್ ಸದ್ದಿಲ್ಲದೇ ಮುರಿಯುತ್ತಿದೆ. ಈಜಿಪ್ಟ್ ದೇಶದಲ್ಲಿ ಅದು ಪ್ರಥಮವಲ್ಲದೆ ಇರಬಹುದು ಆದರೆ ಒಟ್ಟಾರೆ ಆಫ್ರಿಕಾ ಖಂಡವನ್ನು ತೆಗೆದುಕೊಂಡರೆ ಬಜಾಜ್ ಚೀನಾ ಮಾರುಕಟ್ಟೆ ಪಾರಮ್ಯವನ್ನು ಬಹಳಷ್ಟು ಮಟ್ಟಿಗೆ ತನ್ನದಾಗಿಸಿಕೊಂಡಿದೆ. ಇದಕ್ಕೆ ಕಾರಣಗಳು ಹಲವು . ಅವುಗಳಲ್ಲಿ ಪ್ರಮುಖವಾದವುಗಳನ್ನು ನೋಡೋಣ .
ಎಲ್ಲಕ್ಕೂ ಮೊದಲಿಗೆ ಚೀನಾ ಮಾರುಕಟ್ಟೆಯ ಮೇಲೆ ಹಿಡಿತವನ್ನು ಹೊಂದಲು ಕಾರಣ ಅದರ ಬೆಲೆ. ಹೌದು ಚೀನಾ ಬೈಕುಗಳು ಭಾರತದ ಬಜಾಜ್ ಬೈಕುಗಳಿಗಿಂತ ಬಹಳಷ್ಟು ಅಗ್ಗವಾಗಿ ಸಿಗುತ್ತದೆ. ಹೀಗಾಗಿ ಅತಿ ಸಾಮಾನ್ಯ ಆಫ್ರಿಕನ್ ಸಹಜವಾಗೇ ಅದರತ್ತ ಒಲವನ್ನು ತೋರಿಸುತ್ತಿದ್ದ. ಆದರೆ ಚೀನಾದ ಬೈಕುಗಳ ಕಳಪೆ ಗುಣಮಟ್ಟ , ಅವುಗಳನ್ನು ನಿಭಾಯಿಸುವಲ್ಲಿ ಆಗುವ ಖರ್ಚುಗಳನ್ನು ಕಂಡು ನಿಧಾನವಾಗಿ ಬಜಾಜ್ ಬೈಕುಗಳನ್ನು ತನ್ನದಾಗಿಸಿಕೊಳ್ಳುತ್ತಿದ್ದಾನೆ.
ಎರಡನೆಯದಾಗಿ ಚೀನಾ ಬೈಕುಗಳು ಒಂದಷ್ಟು ವರ್ಷದ ನಂತರ ಕೆಟ್ಟು ನಿಂತು ಬಿಡುತ್ತಿವೆ. ಹೀಗಾಗಿ ಡ್ಯೂರೆಬೆಲಿಟಿ ದೊಡ್ಡ ಸಮಸ್ಯೆಯಾಗಿ ಕಾಣುತ್ತಿದೆ. ಬಜಾಜ್ ಬೈಕುಗಳು ಹದಿನೈದು , ಇಪತ್ತು ವರ್ಷಗಳ ನಂತರವೂ ಸೇವೆಯನ್ನು ನೀಡುತ್ತವೆ ಎನ್ನುವ ಮನೋಭಾವ ಜನರಲ್ಲಿ ಮನೆ ಮಾಡಿದೆ, ಹೀಗಾಗಿ ಮಾರುಕಟ್ಟೆ ಶಿಫ್ಟ್ ಸಾಧ್ಯವಾಗಿದೆ.
ಮೂರನೆಯದಾಗಿ ಮಾರಾಟದ ನಂತರದ ಸೇವೆ ಅಂದರೆ ಆಫ್ಟರ್ ಸೇಲ್ಸ್ ಸರ್ವಿಸ್ ಬಹಳ ಮುಖ್ಯ. ಚೈನೀಸರು ಇಲ್ಲಿ ಎಡವಿದ್ದಾರೆ. ಅವರು ನೇರವಾಗಿ ಮಾರಾಟ ಮಾಡಿ ಕೈ ತೊಳೆದುಕೊಳ್ಳುತ್ತಾರೆ. ನಂತರ ಅಲ್ಲಿನ ಮಾರಾಟ ಸಂಸ್ಥೆಗಳು ಮಾಡಿಕೊಳ್ಳುವ ತಪ್ಪುಗಳು ಈಗ ಅವರ ಪದಾರ್ಥದ ಮೇಲೆ ಪರಿಣಾಮ ಬೀರಿದೆ. ಬಜಾಜ್ ಸಂಸ್ಥೆ ಅಲ್ಲಿನ ಸ್ಥಳೀಯ ಸಂಸ್ಥೆಗಳ ಜೊತೆಗೆ ಒಪ್ಪಂದ ಮಾಡಿಕೊಂಡು ಅವರ ಜೊತೆಯಲ್ಲಿ ತನ್ನ ಪದಾರ್ಥವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಅಂದರೆ ಪದಾರ್ಥದ ಸೋಲು ಮತ್ತು ಗೆಲುವಿಗೆ ಅಲ್ಲಿನ ಸ್ಥಳೀಯ ಸಂಸ್ಥೆಯನ್ನು ಕೂಡ ಪಾಲುದಾರರನ್ನಾಗಿಸಿದೆ. ಇದು ಗೇಮ್ ಚೇಂಜರ್ ಆಗಿ ಬದಲಾಗಿದೆ.
ನಾಲ್ಕನೆಯದಾಗಿ ಬಜಾಜ್ ಆಫ್ರಿಕಾ ದೇಶಗಳಲ್ಲಿ ಆಯಾ ದೇಶದ ಪರಿಸ್ಥಿತಿಗೆ ಅನುಗುಣವಾಗಿ ಸ್ಥಳೀಯವಾಗಿ ಜೋಡಣೆ ಮತ್ತು ವಿತರಣೆಯನ್ನು ಸ್ಥಳೀಯವಾಗಿ ಮಾಡುತ್ತಿದೆ. ಈ ಮೂಲಕ ಸ್ಥಳೀಯವಾಗಿ ಉದ್ಯೋಗವನ್ನು ಕೂಡ ಅದು ಸೃಷ್ಟಿ ಮಾಡುತ್ತಿದೆ. ಇದು ಸ್ಥಳೀಯರಲ್ಲಿ ಬಜಾಜ್ ಬಗ್ಗೆ ಇನ್ನಷ್ಟು ಮೃದು ಭಾವನೆ ಬರಲು ಕಾರಣವಾಗಿದೆ. ಈ ಸೆಂಟಿಮೆಂಟ್ ಮಾರಾಟದಲ್ಲೂ ಕಾಣಸಿಗುತ್ತಿದೆ.
ಐದನೆಯದಾಗಿ ಆಫ್ರಿಕಾದ ರಸ್ತೆಗಳಿಗೆ ಮತ್ತು ಅಲ್ಲಿನ ಜನರ ಸ್ವಭಾವಕ್ಕೆ ತಕ್ಕಂತೆ ಬಜಾಜ್ ಬೈಕುಗಳನ್ನು ತಯಾರಿಸಲಾಗಿದೆ. ಅಲ್ಲಿನ ರಸ್ತೆಗಳಲ್ಲಿ ಈ ಬೈಕುಗಳು ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡಿವೆ. ಈಜಿಪ್ಟ್ ದೇಶವಷ್ಟೇ ಅಲ್ಲದೆ ತಾಂಜೇನಿಯಾ , ನೈಜೀರಿಯಾ , ಸೌತ್ ಆಫ್ರಿಕಾ , ಕಾಂಗೊ ಹೀಗೆ ಬಹಳಷ್ಟು ದೇಶಗಳಲ್ಲಿ ಆಯಾ ದೇಶದ ಪರಿಸರಕ್ಕೆ ಅನುಗುಣವಾಗಿ , ಜಿಯಾಗ್ರಫಿಕಲ್ ಕಂಡೀಶನ್ ಗೆ ಅನುಗುಣವಾಗಿ ಬೈಕುಗಳನ್ನು ತಯಾರಿಸಲಾಗಿದೆ. ಎಲ್ಲೆಡೆ ಒಂದೇ ರೀತಿಯ ಬೈಕುಗಳನ್ನು ಬಿಡುಗಡೆ ಮಾಡದೆ ಅಲ್ಲಿನ ಪರಿಸರಕ್ಕೆ ತಕ್ಕಂತೆ ಒಂದಷ್ಟು ಬದಲಾವಣೆ ಮಾಡಿ ಬಿಟ್ಟಿರುವುದು ಮಾರುಕಟ್ಟೆ ಗಳಿಸಿಕೊಳ್ಳಲು ಸಹಾಯ ಮಾಡಿದೆ.
ಆಫ್ರಿಕಾ ದೇಶಗಳಲ್ಲಿ ಇವುಗಳನ್ನು ಆಟೋ ದಂತೆ ಕೂಡ ಬಳಸುತ್ತಾರೆ. ಬೈಕ್ ಟ್ಯಾಕ್ಸಿಯಾಗಿ ಬಳಕೆಯಾಗುತ್ತವೆ. ಇದರ ಜೊತೆಗೆ ಇದನ್ನು ವಸ್ತುಗಳ ಸಾಗಾಣಿಕೆಗೆ ಬೇಕಾಗುವಂತೆ ಅಂದರೆ ನಮ್ಮಲ್ಲಿ ಮಿನಿ ವ್ಯಾನ್ ಗಳಿರುವಂತೆ ಕೂಡ ಮಾಡಿ ಬಳಸಲಾಗುತ್ತಿದೆ. ಗಟ್ಟಿಮುಟ್ಟಾದ ಈ ಬೈಕುಗಳು ಇಲ್ಲಿನ ಜನರ ಮನಸ್ಸಿನಲ್ಲಿ ಪೈಸಾ ವಸೂಲ್ ಎನ್ನಿಸಿಕೊಂಡಿವೆ. ಹೀಗಾಗಿ ಬಜಾಜ್ ಬೈಕುಗಳು ಇಲ್ಲಿ ಗೆದ್ದಿವೆ. ಸ್ಥಳೀಯ ಸಂಸ್ಥೆಗಳೊಂದಿಗೆ ಸಿನರ್ಜಿ ಪಾಲುದಾರಿಕೆ ಮಾಡಿಕೊಂಡಿರುವುದು ದೀರ್ಘಕಾಲದ ಮಾರುಕಟ್ಟೆ ಗೆಲುವಿಗೆ ಬಹುದೊಡ್ಡ ಕೊಡುಗೆಯನ್ನು ನೀಡುತ್ತಿದೆ.
ಏಷ್ಯಾ ದಲ್ಲಿ ಕೂಡ ಬಜಾಜ್ ಥೈಲ್ಯಾಂಡ್ , ಫಿಲಿಪೈನ್ಸ್ ಇತರ ದೇಶಗಳಲ್ಲಿ ತನ್ನ ವಿಜಯ ಪತಾಕೆಯನ್ನು ಹಾರಿಸುತ್ತಿದೆ. ಥೈಲ್ಯಾಂಡ್ ದೇಶದಲ್ಲಿ ಉತ್ಪಾದನಾ ಘಟಕವನ್ನು ಕೂಡ ತೆರೆದಿದೆ. ನೇಪಾಳ , ಭೂತಾನ್ , ಬಾಂಗ್ಲಾದೇಶ , ಮಾಲ್ಡಿವ್ ಮತ್ತು ಶ್ರೀಲಂಕಾ ದೇಶಗಳಲ್ಲಿ ಕೂಡ ತನ್ನ ಸೇವೆಯನ್ನು ನೀಡುತ್ತಿದೆ.
ಬಜಾಜ್ ಓಟ ಇಲ್ಲಿಗೆ ನಿಲ್ಲುವುದಿಲ್ಲ , ಲ್ಯಾಟಿನ್ ಅಮೇರಿಕಾ ದೇಶಗಳಾದ ಬ್ರೆಝಿಲ್ , ಕೊಲಂಬಿಯಾ , ಪೆರು ದೇಶಗಳಲ್ಲಿ ಕೂಡ ಸಾಕಷ್ಟು ಮಾರುಕಟ್ಟೆಯನ್ನು ಪಡೆದುಕೊಂಡಿದೆ. ಬ್ರೆಜಿಲ್ ದೇಶದಲ್ಲಿ ತನ್ನ ಉತ್ಪಾದನಾ ಘಟಕವನ್ನು ತೆರೆದಿದೆ. ಅಲ್ಲಿಂದ ಸುಲಭವಾಗಿ ಇತರ ದೇಶಗಳಿಗೆ ತನ್ನ ಬೈಕುಗಳನ್ನು ಅದು ಸರಬರಾಜು ಮಾಡುತ್ತದೆ .
ಭಾರತದಲ್ಲಿ ಬಜಾಜ್ ಎರಡನೇ ಅತಿ ದೊಡ್ಡ ಉತ್ಪಾದಕ ಸಂಸ್ಥೆಯಾಗಿದೆ. ಹೀರೋ ಸಂಸ್ಥೆ ಪ್ರಥಮ ಸ್ಥಾನದಲ್ಲಿದೆ. ಬಜಾಜ್ ಮಾರುಕಟ್ಟೆಯಲ್ಲಿ ಬದಲಾಗುತ್ತಿರುವ ಜನರ ಸ್ವಭಾವವನ್ನು ಗಮನಿಸಕೊಂಡು ಅದಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡ ಕಾರಣ ಅದು ಇಂದಿಗೂ ಮಾರುಕಟ್ಟೆಯಲ್ಲಿ ಉಳಿದು ಕೊಂಡಿದೆ. ೮೦/೯೦ ದಶಕದಲ್ಲಿ ಬಜಾಜ್ ಎಂದರೆ ಸ್ಕೊಟರ್ ಎನ್ನುವಷ್ಟರ ಮಟ್ಟಿಗೆ ಅದು ಜನ ಮಾನಸದಲ್ಲಿ ನೆಲೆ ನಿಂತಿತ್ತು . ಹಮಾರಾ ಬಜಾಜ್ ಎನ್ನುವ ಭಾವನಾತ್ಮಕ ಬೆಸುಗೆಯನ್ನು ಅದು ಹೊಸೆದಿತ್ತು. ಆದರೆ ಆ ಭಾವನೆ ಸದಾ ಉಳಿಯುವುದಿಲ್ಲ. ಸಮಾಜ ಬದಲಾಗುತ್ತದೆ. ಬದಲಾದ ಸಮಾಜಕ್ಕೆ ತಕ್ಕಂತೆ ಬಜಾಜ್ ಕೂಡ ವೇಗವಾಗಿ ತನ್ನ ಗೇಮ್ ಪ್ಲಾನ್ ಬದಲಾವಣೆ ಮಾಡಿಕೊಂಡು ಬೈಕುಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿತು. ಅದು ಮನೆಯನ್ನು ಗೆದ್ದದ್ದು ಮಾತ್ರವಲ್ಲದೆ ಜಗತ್ತನ್ನು ಕೂಡ ಗೆಲ್ಲುತ್ತಿದೆ.
ಕೊನೆಮಾತು: ಬಜಾಜ್ ಇನ್ನೊಂದು ನೋಕಿಯಾ ಆಗಬಹುದಿತ್ತು. ಆದರೆ ಬಜಾಜ್ ಬದಲಾವಣೆಗೆ ತನ್ನನ್ನು ತಾನು ತೆರೆದುಕೊಂಡಿತು. ಬದಲಾವಣೆಯನ್ನು ಒಪ್ಪಿಕೊಂಡು ಅದಕ್ಕೆ ಬೇಕಾದ ಬದಲಾವಣೆಯನ್ನು ಮಾಡಿಕೊಂಡಿತು. ಜೊತೆಗೆ ವಿಪುಲವಾಗಿರುವ ಜಾಗತಿಕ ಅವಕಾಶಗಳನ್ನು ಕೂಡ ಚನ್ನಾಗಿ ಬಳಸಿಕೊಂಡಿತು. ಇದರ ಪರಿಣಾಮವಾಗಿ ಬಜಾಜ್ ಇಂದು ಭಾರತ ಮಾತ್ರವಲ್ಲದೆ , ಲ್ಯಾಟಿನ್ ಅಮೆರಿಕನ್ ದೇಶಗಳಲ್ಲಿ , ಆಫ್ರಿಕಾ ದೇಶಗಳಲ್ಲಿ ಜೊತೆಗೆ ಏಷ್ಯಾದ ಇತರ ಪ್ರಮುಖ ದೇಶಗಳಲ್ಲಿ ಕೂಡ ತನ್ನ ಪದಾರ್ಥವನ್ನು ಮಾರಾಟ ಮಾಡುತ್ತಿದೆ. ಬಜಾಜ್ ಕೇವಲ ಭಾರತಕ್ಕೆ ಸೀಮಿತವಾಗದೆ ಜಾಗತಿಕ ಉತ್ಪಾದಕ ಸಂಸ್ಥೆಯಾಗಿ ಬೆಳೆದು ನಿಂತಿದೆ.
ಆಫ್ರಿಕಾ ದೇಶಗಳಲ್ಲಿ ಆಟೋಮೊಬೈಲ್ ಅಲ್ಲದೆ ಗ್ರೀನ್ ಎನರ್ಜಿ ವಲಯದಲ್ಲಿ , ಈ ಕಾಮರ್ಸ್ , ಫ಼ಿನ್ ಟೆಕ್ ಮತ್ತು ಕೃಷಿ ವಲಯದಲ್ಲಿ ಸಾಕಷ್ಟು ಅವಕಾಶಗಳಿವೆ. ಬಜಾಜ್ ಹೆಜ್ಜೆ ಇಟ್ಟಂತೆ ಭಾರತೀಯ ಸಂಸ್ಥೆಗಳು ಆಫ್ರಿಕಾದಲ್ಲಿ ನೆಲೆಯೂರಲು ಬಹಳ ಅವಕಾಶಗಳಿವೆ.ಭಾರತದೊಂದಿಗೆ ಆಫ್ರಿಕನ್ ಒಕ್ಕೊಟದ ಸಂಬಂಧ ಹಿಂದೆದಿಗಿಂತಲೂ ಅತ್ಯಂತ ಪ್ರಬಲವಾಗಿದೆ. ಇದು ಭಾರತೀಯ ಸಂಸ್ಥೆಗಳಿಗೆ ವರದಾನವಾಗಲಿದೆ.
Advertisement