ವಿಮಾನ ಮತ್ತು ಕಾರ್: ಪುಟಿನ್‌ರ ಚಲಿಸುವ ಕೋಟೆಗಳು (ಜಾಗತಿಕ ಜಗಲಿ)

ಪುಟಿನ್ ವಿಮಾನವಾದ ಇಲ್ಯುಶಿನ್ II-96-300 ಒಂದು ಬೃಹತ್ತಾದ ನಾಲ್ಕು ಇಂಜಿನ್‌ಗಳ ವಿಮಾನವಾಗಿದ್ದು, ಮಹತ್ತರ ಇತಿಹಾಸವನ್ನೇ ಹೊಂದಿದೆ.
ವಿಮಾನ ಮತ್ತು ಕಾರ್: ಪುಟಿನ್‌ರ ಚಲಿಸುವ ಕೋಟೆಗಳು (ಜಾಗತಿಕ ಜಗಲಿ)
Updated on

ಜಗತ್ತಿನ ಅತ್ಯಂತ ಹೆಚ್ಚಿನ ಭದ್ರತೆ ಹೊಂದಿರುವ ನಾಯಕರಲ್ಲೊಬ್ಬರು ಪ್ರಯಾಣಿಸುವಾಗ, ಅವರು ಕೇವಲ ಒಂದು ಸೂಟ್‌ಕೇಸ್ ತುಂಬಿಸಿಕೊಂಡು ಪ್ರಯಾಣ ಬೆಳೆಸುವುದಿಲ್ಲ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಎಲ್ಲಿಗೆ ತೆರಳಿದರೂ ಅವರೊಡನೆ ಎರಡು ಅಸಾಧಾರಣ ಯಂತ್ರಗಳೂ ಸಾಗುತ್ತವೆ. ಶಕ್ತಿ ಮತ್ತು ಭದ್ರತೆ ಎರಡನ್ನೂ ಪ್ರತಿನಿಧಿಸುವ ಅವು ಯಾವುವೆಂದರೆ, 'ಹಾರಾಡುವ ಕ್ರೆಮ್ಲಿನ್' ಎಂಬ ಅಡ್ಡಹೆಸರು ಹೊಂದಿರುವ ಪುಟಿನ್ ವಿಮಾನ ಮತ್ತು ಅವರ ಶಸ್ತ್ರಸಜ್ಜಿತ ಆರಸ್ ಸೆನಾಟ್ ಲಿಮೋಸಿನ್ ಕಾರ್. ಇವೆರಡು ಸಾಧಾರಣ ವಾಹನಗಳಲ್ಲ. ಬದಲಿಗೆ, ಒಳಗಿರುವವರನ್ನು ಊಹಿಸಬಹುದಾದ ಯಾವುದೇ ಅಪಾಯದಿಂದಲೂ ಸುರಕ್ಷಿತವಾಗಿಡಬಲ್ಲ ಚಲಿಸುವ ಕೋಟೆಗಳಾಗಿವೆ.

ಮೊದಲಿಗೆ ನಾವು ವಿಮಾನದಿಂದ ಆರಂಭಿಸೋಣ. ಪುಟಿನ್ ವಿಮಾನವಾದ ಇಲ್ಯುಶಿನ್ II-96-300 ಒಂದು ಬೃಹತ್ತಾದ ನಾಲ್ಕು ಇಂಜಿನ್‌ಗಳ ವಿಮಾನವಾಗಿದ್ದು, ಮಹತ್ತರ ಇತಿಹಾಸವನ್ನೇ ಹೊಂದಿದೆ. ಸೋವಿಯತ್ ಒಕ್ಕೂಟದ ಕಾಲಘಟ್ಟದಲ್ಲಿ, 1980ರ ದಶಕದಲ್ಲಿ ನಿರ್ಮಾಣಗೊಂಡ ಈ ವಿಮಾನವನ್ನು ಮೊದಲಿಗೆ ಒಂದು ವಾಣಿಜ್ಯಿಕ ಸಂಚಾರಿ ವಿಮಾನವಾಗಿ ವಿನ್ಯಾಸಗೊಳಿಸಲಾಗಿತ್ತು. ಇಲ್ಯುಶಿನ್ ಡಿಸೈನ್ ಬ್ಯೂರೋ ಹಳೆಯ ಮಾದರಿಗಳ ಬದಲಿಗೆ ಕಾರ್ಯಾಚರಿಸಲು ಇದನ್ನು ನಿರ್ಮಿಸಿತ್ತು. ಈ ವಿಮಾನ ಸೆಪ್ಟೆಂಬರ್ 28, 1988ರಂದು ತನ್ನ ಮೊದಲ ಹಾರಾಟ ನಡೆಸಿತು. 1992ರಲ್ಲಿ ರಷ್ಯನ್ ಸರ್ಟಿಫಿಕೇಶನ್ ಪಡೆದ ಬಳಿಕ, ಜುಲೈ 1993ರಲ್ಲಿ ಇದು ಸೇವೆಗೆ ಪ್ರವೇಶಿಸಿತು. ಇದು ಹಾರಾಡಲು ನಾಲ್ಕು ಶಕ್ತಿಶಾಲಿ ಏವಿಯಾದ್ವಿಗಾಟೆಲ್ ಪಿಎಸ್-90ಎ ಟರ್ಬೋಫ್ಯಾನ್ ಇಂಜಿನ್‌ಗಳು ಶಕ್ತಿ ನೀಡುತ್ತವೆ. ಪ್ರತಿಯೊಂದು ಇಂಜಿನ್ ಸಹ 35,000 ಪೌಂಡ್‌ಗಳಷ್ಟು ಥ್ರಸ್ಟ್ ನೀಡುತ್ತವೆ. ಇದು ಪ್ರತಿ ಇಂಜಿನ್ನಿಗೆ 15,876 ಕೆಜಿಯಷ್ಟು ಶಕ್ತಿಗೆ ಸಮನಾಗಿರುತ್ತದೆ.

ವಿಮಾನ ಮತ್ತು ಕಾರ್: ಪುಟಿನ್‌ರ ಚಲಿಸುವ ಕೋಟೆಗಳು (ಜಾಗತಿಕ ಜಗಲಿ)
ಆಧುನಿಕ ಯುದ್ಧ ವಿಮಾನಗಳೇಕೆ ಒಂದೇ ಆಸನ ಹೊಂದಿರುತ್ತವೆ? (ಜಾಗತಿಕ ಜಗಲಿ)

ಆದರೆ, ಪುಟಿನ್ ಬಳಸುವ ವಿಮಾನ ಸಾಮಾನ್ಯ ವಿಮಾನವಲ್ಲ. ಅಧಿಕೃತವಾಗಿ II-96-300ಪಿಯು ಎಂದು ಕರೆಯಲಾಗುವ ಅಧ್ಯಕ್ಷೀಯ ವಿಮಾನದಲ್ಲಿ 'ಪಿಯು' ಎಂದರೆ 'ಪಂಕ್ಟ್ ಉಪ್ರಾವ್‌ಲೆನ್ಯ' ಅಥವಾ 'ಕಮಾಂಡ್ ಪೋಸ್ಟ್' ಎಂಬ ಅರ್ಥವಿದೆ. ಇದನ್ನು 2000ನೇ ದಶಕದ ಆರಂಭದಲ್ಲಿ, ವಿಐಪಿ ಪ್ರಯಾಣಕ್ಕಾಗಿಯೇ ಪರಿಚಯಿಸಲಾಗಿತ್ತು. ಸಾಮಾನ್ಯ ಪ್ರಯಾಣಿಕ ವಿಮಾನಗಳೊಳಗೆ ಇರುವ ಇಕ್ಕಟ್ಟಾದ ಆಸನಗಳು, ಸಣ್ಣದಾದ ಬಾತ್‌ರೂಮ್‌ಗಳನ್ನು ಮರೆತುಬಿಡಿ. ಪುಟಿನ್ ವಿಮಾನ ಆಕಾಶದಲ್ಲಿ ಹಾರುವ ಅರಮನೆಯಂತಿದ್ದು, ಪ್ರಮುಖ ಸಭೆಗಳು ನಡೆಯುವ ಸಮ್ಮೇಳನ ಕೊಠಡಿಗಳು, ಕೆಲಸಕ್ಕಾಗಿ ಕಚೇರಿಗಳು, ವಿಶ್ರಾಂತಿಗಾಗಿ ಆರಾಮದಾಯಕ ಕೊಠಡಿಗಳು, ಬಂಗಾರದ ಪದರಗಳು, ಅದ್ಭುತವಾದ ಮರದ ಕೆತ್ತನೆಗಳಂತಹ ಐಷಾರಾಮಿ ವ್ಯವಸ್ಥೆಗಳನ್ನು ಹೊಂದಿದ್ದು, ಫೈವ್ ಸ್ಟಾರ್ ಹೊಟೆಲ್‌ಗಳೂ ನಾಚುವಂತಹ ವ್ಯವಸ್ಥೆಗಳಿವೆ. ಇವೆಲ್ಲ ಐಷಾರಾಮದ ಹೊರತಾಗಿಯೂ, ಈ ವಿಮಾನ ಎರಡು ಆಸನ ವರ್ಗಗಳಲ್ಲಿ 262 ಪ್ರಯಾಣಿಕರನ್ನು ಒಯ್ಯಬಲ್ಲದು.

ಭದ್ರತಾ ವೈಶಿಷ್ಟ್ಯಗಳು ವಿಮಾನವನ್ನು ಇನ್ನಷ್ಟು ಆಸಕ್ತಿದಾಯಕವಾಗಿಸುತ್ತವೆ. ವಿಮಾನ ಸುರಕ್ಷಿತ ಸಂವಹನ ವ್ಯವಸ್ಥೆಗಳನ್ನು ಹೊಂದಿದ್ದು, ಇದನ್ನು ಭೇದಿಸಲು ಸುಲಭವಿಲ್ಲ. ಇನ್ನು ದಾಳಿಗಳಿಂದ ರಕ್ಷಣೆ ಒದಗಿಸಲು ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳೂ ವಿಮಾನದಲ್ಲಿವೆ. ಇದರೊಡನೆ ಒಂದು ಪರಮಾಣು ಕಮಾಂಡ್ ಗುಂಡಿಯೂ ವಿಮಾನದಲ್ಲಿದೆ. ಹಾಗೆಂದರೆ ಏನು? ಇದೊಂದು ವಿಶೇಷವಾದ, ಸುರಕ್ಷಿತ ನಿಯಂತ್ರಣ ವ್ಯವಸ್ಥೆಯಾಗಿದ್ದು, ಅಧ್ಯಕ್ಷರಿಗೆ ತುರ್ತು ಪರಿಸ್ಥಿತಿಯಲ್ಲಿ ಭೂಮಿಯಿಂದ ಸಾವಿರಾರು ಅಡಿಗಳ ಎತ್ತರದಲ್ಲಿ ಹಾರಾಟ ನಡೆಸುವಾಗಲೂ ಪರಮಾಣು ಪ್ರತಿಕ್ರಿಯೆ ನೀಡಲು ಅವಕಾಶ ಕಲ್ಪಿಸುತ್ತದೆ. ಈ ವಿಮಾನ ಆರು ಮಲ್ಟಿ ಫಂಕ್ಷನ್ ಎಲ್‌ಸಿಡಿ ಡಿಸ್‌ಪ್ಲೇಗಳು, ಆಧುನಿಕ ಗಾಜಿನ ಕಾಕ್‌ಪಿಟ್, ಸುಗಮವಾಗಿ ಹಾರಾಡಲು ನೆರವಾಗುವ ಫ್ಲೈ ಬೈ ವೈರ್ ನಿಯಂತ್ರಣಗಳು ಮತ್ತು ಇಂಧನ ದಕ್ಷತೆ ಹೆಚ್ಚಿಸಲು ರೆಕ್ಕೆಗಳ ಬಳಿ ವಿಂಗ್‌ಲೆಟ್‌ಗಳು ಸೇರಿದಂತೆ ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿದೆ.

ಇನ್ನು ಪುಟಿನ್ ತನ್ನ ವಿಮಾನದಿಂದ ಕೆಳಗಿಳಿದ ಬಳಿಕ, ಇನ್ನೊಂದು ಅಸಾಧಾರಣ ಯಂತ್ರವನ್ನು ಏರುತ್ತಾರೆ. ಅದೇ ಆರಸ್ ಸೆನಾಟ್ ಲಿಮೋಸಿನ್. ಇದನ್ನು ಸಾಮಾನ್ಯವಾಗಿ ರೋಲ್ಸ್ ರಾಯ್ಸ್ ಕಾರಿಗೆ ಹೋಲಿಸಲಾಗಿದ್ದು, 'ಚಕ್ರಗಳ ಮೇಲಿರುವ ಕೋಟೆ' ಎಂದೂ ಬಣ್ಣಿಸಲಾಗುತ್ತದೆ. ಈ ಕಾರ್ ಪುಟಿನ್ ಅವರ ಎಲ್ಲ ರಾಜತಾಂತ್ರಿಕ ಭೇಟಿಗಳಲ್ಲೂ ಜೊತೆಗಿರುತ್ತದೆ. ಪುಟಿನ್ ನವದೆಹಲಿ ಭೇಟಿಯ ಸಂದರ್ಭದಲ್ಲಿ, ಭಾರತ ಪುಟಿನ್ ಮತ್ತು ಅವರ ನೆಚ್ಚಿನ ಕಾರನ್ನು ಸ್ವಾಗತಿಸಿದೆ.

ವಿಮಾನ ಮತ್ತು ಕಾರ್: ಪುಟಿನ್‌ರ ಚಲಿಸುವ ಕೋಟೆಗಳು (ಜಾಗತಿಕ ಜಗಲಿ)
ಜಗತ್ತಿನ ಗಮನ ಸೆಳೆಯಲಿದೆ ಪುಟಿನ್ ದೆಹಲಿ ಭೇಟಿ (ಜಾಗತಿಕ ಜಗಲಿ)

ಆರಸ್ (Aurus) ಬ್ರ್ಯಾಂಡ್ ಐಷಾರಾಮಿ ಕಾರ್ ಉದ್ಯಮಕ್ಕೆ ಹೊಸದಾಗಿದೆ. ಇದರ ಹೆಸರನ್ನೂ ಬುದ್ಧಿವಂತಿಕೆಯಿಂದ ಆರಿಸಲಾಗಿದ್ದು, 'Au' ಆರಮ್, ಅಂದರೆ ಲ್ಯಾಟಿನ್ ಭಾಷೆಯಲ್ಲಿ ಬಂಗಾರ ಎಂದರ್ಥ. ಇನ್ನುಳಿದ 'Rus' ರಷ್ಯಾವನ್ನು ಪ್ರತಿನಿಧಿಸುತ್ತದೆ. ಮಾಸ್ಕೋ ಮೂಲದ ಆರಸ್ ಮೋಟಾರ್ಸ್ 2018ರಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿ, ಲಿಮೋಸಿನ್ ಉತ್ಪಾದನೆಯಲ್ಲಿ ತೊಡಗಿತು. ಈ ಸಂಸ್ಥೆ 2021ರಲ್ಲಿ ಶ್ರೀಮಂತ ನಾಗರಿಕರಿಗೆ ಕಾರ್ ಮಾರಾಟ ಆರಂಭಿಸಿತು. ಆದರೆ ಕಾರುಗಳ ಉತ್ಪಾದನೆ ಇಂದಿಗೂ ವರ್ಷಕ್ಕೆ ಕೇವಲ 120ಕ್ಕೆ ಸೀಮಿತವಾಗಿದೆ.

ಪುಟಿನ್‌ರ ವೈಯಕ್ತಿಕ ಆರಸ್ ಸೆನಾಟ್ ಬಹುತೇಕ 50 ಮಿಲಿಯನ್ ರೂಬಲ್, ಅಂದರೆ 6,17,500 ಡಾಲರ್ ಅಥವಾ 5.5 ಕೋಟಿ ರೂಪಾಯಿ ಬೆಲೆ ಹೊಂದಿದೆ. ಇದು 4.4 ಲೀಟರ್ ವಿ8 ಇಂಜಿನ್ ಹೊಂದಿದ್ದು, ಇದು 598 ಹಾರ್ಸ್‌ಪವರ್ ಮತ್ತು 880 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸುತ್ತದೆ. ಇನ್ನೂ ಹೆಚ್ಚಿನ ಶಕ್ತಿ ಬಯಸುವವರಿಗೆ ಬರೋಬ್ಬರಿ 850 ಹಾರ್ಸ್ ಪವರ್ ಶಕ್ತಿ ಉತ್ಪಾದಿಸುವ ವಿ12 ಆವೃತ್ತಿಯೂ ಲಭ್ಯವಿದೆ.

ಕಾರಿನ ಒಳಭಾಗವಂತೂ ಚರ್ಮದ ಆಸನಗಳು, ಬಣ್ಣ ಬದಲಾಯಿಸುವ ದೀಪಗಳು, ಐಷಾರಾಮಿ ಮರದ ಕೆಲಸಗಳನ್ನು ಹೊಂದಿ, ವಿಮಾನದ ಮಾದರಿಯ ಐಷಾರಾಮವನ್ನು ಒಳಗೊಂಡಿದೆ. ಆದರೆ, ಈ ವಾಹನದ ವಿನ್ಯಾಸದಲ್ಲಿ ಭದ್ರತೆಯ ದೃಷ್ಟಿಯಿಂದ ಐಷಾರಾಮ ಹಿಂದೆ ಸರಿಯಬೇಕಾಗಿದೆ. ಆರಸ್ ಸೆನಾಟ್ ಅಂತರ್ಗತ ಬೆಂಕಿ ಆರಿಸುವ ವ್ಯವಸ್ಥೆಯನ್ನು ಹೊಂದಿದ್ದು, ಸ್ವಯಂಚಾಲಿತವಾಗಿ ಬೆಂಕಿ ಆರಿಸುವ ವ್ಯವಸ್ಥೆ ಹೊಂದಿದೆ. ರಾಸಾಯನಿಕ ದಾಳಿಗಳಿಂದ ರಕ್ಷಿಸಲು ಆಧುನಿಕ ಗಾಳಿಯ ಫಿಲ್ಟರ್ ವ್ಯವಸ್ಥೆ ಹೊಂದಿದೆ. ಇನ್ನು ತುರ್ತು ಪರಿಸ್ಥಿತಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆಯನ್ನೂ ಒಳಗೊಂಡಿದೆ.

ಇನ್ನು ಇದರ ರಕ್ಷಣಾ ವ್ಯವಸ್ಥೆಯೂ ಅಸಾಧಾರಣವಾಗಿದೆ. ಬಹುತೇಕ 7 ಮೀಟರ್ ಉದ್ದ ಮತ್ತು ಹಲವು ಟನ್ ತೂಕ ಹೊಂದಿರುವ ಲಿಮೋಸಿನ್, 20 ಇಂಚುಗಳ ಬುಲೆಟ್ ಪ್ರೂಫ್ ಚಕ್ರಗಳನ್ನು ಒಳಗೊಂಡಿದೆ. ಇದು ವಿಆರ್10 ಬ್ಯಾಲಿಸ್ಟಿಕ್ ಗುಣಮಟ್ಟ ಹೊಂದಿದೆ. ಅಂದರೆ, ಇದು ಅತ್ಯಂತ ತೀಕ್ಷ್ಣ ರೈಫಲ್ ಬುಲೆಟ್ ದಾಳಿ ಮತ್ತು ಲೋಹವನ್ನು ಛೇದಿಸುವ ದಾಳಿಗಳನ್ನೂ ಎದುರಿಸಬಲ್ಲದು. ಇದು ನಾಗರಿಕ ವಾಹನಗಳಲ್ಲಿ ಲಭಿಸುವ ಅತ್ಯಧಿಕ ರಕ್ಷಣೆಯನ್ನು ಹೊಂದಿದೆ. ಇದರ ಕಿಟಕಿಗಳು 6 ಸೆಂಟಿಮೀಟರ್ ದಪ್ಪನೆಯ ಗಾಜನ್ನು ಹೊಂದಿದ್ದು, ತುರ್ತು ನಿರ್ಗಮನ ವ್ಯವಸ್ಥೆ, ಮಿನಿ ಕಮಾಂಡ್ ಕೇಂದ್ರ, ಮತ್ತು ಗ್ರೆನೇಡ್‌ಗಳು ಮತ್ತು ರಾಸಾಯನಿಕ ಆಯುಧಗಳ ವಿರುದ್ಧ ರಕ್ಷಣಾ ಪದರಗಳನ್ನು ಒಳಗೊಂಡಿದೆ.

ರಷ್ಯಾ ಈ ವಾಹನಕ್ಕೆ ಅತ್ಯಧಿಕ ಮೌಲ್ಯ ನೀಡಿದ್ದು, 2024ರಲ್ಲಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರಿಗೆ ಒಂದು ಕಾರನ್ನು ಉಡುಗೊರೆಯಾಗಿ ನೀಡಿತ್ತು. ನಾಗರಿಕರು ಅಂದಾಜು 18 ಮಿಲಿಯನ್ ಮಿಲಿಯನ್ ರೂಬಲ್‌ಗೆ (2.5 ಕೋಟಿ ರೂಪಾಯಿ) ಸೆನಾಟ್ ಅನ್ನು ಖರೀದಿಸಬಹುದಾದರೂ, ಅವರಿಗೆ ಇಷ್ಟು ಭದ್ರತೆ ಹೊಂದಿರುವ ಆವೃತ್ತಿ ಲಭಿಸುವುದಿಲ್ಲ.

ಪುಟಿನ್ ಅವರ ವಿಮಾನ ಮತ್ತು ಲಿಮೋಸಿನ್‌ಗಳು ಜೊತೆಯಾಗಿ, ಕೇವಲ ಸಂಚಾರಕ್ಕಿಂತಲೂ ಹೆಚ್ಚಿನ ಸಾಮರ್ಥ್ಯವನ್ನು ಪ್ರದರ್ಶಿಸಿವೆ. ಇವು ಶಕ್ತಿ, ತಂತ್ರಜ್ಞಾನಗಳ ಸಂಕೇತವಾಗಿದ್ದು, ನಮ್ಮ ಆಧುನಿಕ, ಸಂಕೀರ್ಣ ಯುಗದಲ್ಲಿ ಜಾಗತಿಕ ನಾಯಕರನ್ನು ರಕ್ಷಿಸಲು ಅತ್ಯಧಿಕ ಕ್ರಮಗಳನ್ನು ಒಳಗೊಂಡಿವೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com