

ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ, ಇದ್ದಕ್ಕಿದ್ದಂತೆ ತೀವ್ರ ಕಾರ್ಯಾಚರಣಾ ಬಿಕ್ಕಟ್ಟಿಗೆ ಸಿಲುಕಿದೆ. ಹಾಗೆಂದು ಈ ಸಮಸ್ಯೆ ಏಕಾಏಕಿ ಆರಂಭಗೊಂಡಿಲ್ಲ. ಇಂಡಿಗೋ ಸಂಸ್ಥೆ ಹೊಸದಾದ, ಕಟ್ಟುನಿಟ್ಟಾದ ಪೈಲಟ್ ಕಾರ್ಯಾವಧಿ ಸಂಬಂಧಿತ ನಿಯಮವಾದ 'ವಿಮಾನ ಕರ್ತವ್ಯ ಸಮಯದ ಮಿತಿಗಳಿಗೆ' (ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಶನ್ಸ್ - ಎಫ್‌ಡಿಟಿಎಲ್) ಸೂಕ್ತವಾಗಿ ಸಿದ್ಧತೆ ನಡೆಸಲು ಸಾಧ್ಯವಾಗದ್ದರಿಂದ ಸಮಸ್ಯೆ ಬಿಗಡಾಯಿಸಿತು. ದೆಹಲಿ ಉಚ್ಚ ನ್ಯಾಯಾಲಯ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯಕ್ಕೆ ಸೂಚನೆ ನೀಡಿದ್ದರಿಂದ, ನವೆಂಬರ್ 1, 2025ರಿಂದ ಈ ನಿಯಮಗಳು ಜಾರಿಗೆ ಬಂದವು. ಪೈಲಟ್‌ಗಳನ್ನು ಅತಿಯಾದ ಕೆಲಸ ಮತ್ತು ಸುಸ್ತಿನಿಂದ ರಕ್ಷಿಸಿ, ಭಾರತದ ಸುರಕ್ಷತಾ ಗುಣಮಟ್ಟವನ್ನು ಜಾಗತಿಕ ಗುಣಮಟ್ಟಕ್ಕೆ ಸರಿದೂಗಿಸಲು ಈ ನಿಯಮಗಳನ್ನು ರೂಪಿಸಲಾಗಿತ್ತು. ಆದರೆ, ಇಂಡಿಗೋ ತನ್ನ ವಿಮಾನಗಳು ಮತ್ತು ಸಿಬ್ಬಂದಿಗಳನ್ನು ಅತ್ಯಂತ ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವ ರೀತಿಯಲ್ಲಿ ವೇಳಾಪಟ್ಟಿಯನ್ನು ರೂಪಿಸಿತ್ತು. ಈಗ ಡಿಜಿಸಿಎ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದಾಗ, ಇಂಡಿಗೋದ ಸಂಪೂರ್ಣ ವ್ಯವಸ್ಥೆಯೇ ಕುಸಿದು ಬಿತ್ತು.
ನೂತನ ಎಫ್‌ಡಿಟಿಎಲ್ ನಿಯಮಗಳು ಮೂರು ಪ್ರಮುಖ ಬದಲಾವಣೆಗಳನ್ನು ತಂದವು. ಮೊದಲನೆಯದಾಗಿ, ಪೈಲಟ್‌ಗಳಿಗೆ ಹಿಂದೆ ವಾರದ ವಿಶ್ರಾಂತಿಯ ಅವಧಿ 36 ಗಂಟೆಗಳಿದ್ದರೆ, ಅದನ್ನು ನೂತನ ನಿಯಮಗಳಡಿ 48 ಗಂಟೆಗಳಿಗೆ ವಿಸ್ತರಿಸಲಾಯಿತು. ಎರಡನೆಯದಾಗಿ, ಮೊದಲು ಪೈಲಟ್‌ಗಳು ವಾರಕ್ಕೆ ಆರು ರಾತ್ರಿಯ ಸಮಯದ ಲ್ಯಾಂಡಿಂಗ್ ನಡೆಸಬಹುದಾಗಿದ್ದರೆ, ಈಗ ಅದನ್ನು ಎರಡು ಲ್ಯಾಂಡಿಂಗ್‌ಗೆ ಇಳಿಸಲಾಯಿತು. ಮೂರನೆಯದಾಗಿ, ರಾತ್ರಿ ಪಾಳಿಯ ಅವಧಿಯನ್ನು ವಿಸ್ತರಿಸಲಾಯಿತು. ಇದರಿಂದ ಬೆಳಗಿನ ಜಾವದ ಮತ್ತು ತಡರಾತ್ರಿಯ ವಿಮಾನಗಳಿಗೆ ತೊಂದರೆ ಉಂಟಾಯಿತು. ಸಾಮಾನ್ಯವಾಗಿ ಈ ವೇಳೆಯಲ್ಲೇ ಇಂಡಿಗೋ ತನ್ನ ವಿಮಾನಗಳನ್ನು ಅತಿಹೆಚ್ಚು ಕಾರ್ಯಾಚರಿಸುತ್ತದೆ. ಈ ನಿರ್ಬಂಧಗಳು ಅಪಾರ ಪ್ರಮಾಣದ ಪೈಲಟ್‌ಗಳ, ಅದರಲ್ಲೂ ಕ್ಯಾಪ್ಟನ್‌ಗಳ ಕೊರತೆಯನ್ನು ತೆರೆದಿಟ್ಟಿದ್ದು, ಇಂಡಿಗೋದ ಸಂಪೂರ್ಣ ಜಾಲವನ್ನೇ ಅವ್ಯವಸ್ಥೆಗೆ ತಳ್ಳಿತು.
ವಾಸ್ತವವಾಗಿ ಇಂಡಿಗೋಗೆ ಈ ಸಮಸ್ಯೆ ಎದುರಾಗಲಿದೆ ಎನ್ನುವುದು ಮೊದಲೇ ತಿಳಿಯಬೇಕಿತ್ತು. ವಿಮಾನಯಾನ ಸಂಸ್ಥೆಗಳಿಗೆ ಹೊಸ ನಿಯಮಗಳ ಕುರಿತು 2024ರಲ್ಲೇ ಮಾಹಿತಿ ನೀಡಲಾಗಿತ್ತು. ಹೊಸ ನಿಯಮಗಳನ್ನು ಎರಡು ಹಂತಗಳಲ್ಲಿ ಜಾರಿಗೆ ತರಲಾಗಿದ್ದು, ಮೊದಲ ಹಂತವನ್ನು ಜುಲೈ 2024ರಲ್ಲಿ, ಮತ್ತು ಎರಡನೇ ಹಂತವನ್ನು ನವೆಂಬರ್ 1, 2025ರಂದು ಜಾರಿಗೊಳಿಸಲಾಯಿತು. ಇಂಡಿಗೋಗೆ ಹೊಸ ನಿಯಮಗಳಿಗೆ ಸಿದ್ಧವಾಗಲು, ಹೊಸ ಪೈಲಟ್‌ಗಳ ನೇಮಕಾತಿ ನಡೆಸಲು, ಮತ್ತು ಕಾರ್ಯ ಯೋಜನೆಯನ್ನು ಮರು ವಿನ್ಯಾಸಗೊಳಿಸಲು ಬಹುತೇಕ ಎರಡು ವರ್ಷಗಳ ಸಮಯವಿತ್ತು. ಆದರೆ, ಇಂಡಿಗೋ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಪೈಲಟ್ ಸಂಘಗಳು ಇಂಡಿಗೋ ಒಂದು ಅಸಹಜವಾದ 'ಕನಿಷ್ಠ ಮಾನವ ಸಂಪನ್ಮೂಲ' ಕಾರ್ಯಾಚರಣಾ ಮಾದರಿಯನ್ನು ಅನುಸರಿಸುತ್ತಿತ್ತು ಎಂದು ಆರೋಪಿಸಿದ್ದು, ತನ್ನ ವೆಚ್ಚ ಕಡಿಮೆಗೊಳಿಸುವ ಸಲುವಾಗಿ ಅತ್ಯಂತ ಕಡಿಮೆ ಹೆಚ್ಚುವರಿ ಸಿಬ್ಬಂದಿಗಳನ್ನು ಹೊಂದಿತ್ತು ಎಂದಿವೆ. ಕಠಿಣ ನಿಯಮಗಳು ಬರುತ್ತಿವೆ ಎನ್ನುವುದು ಅರಿವಿದ್ದರೂ, ಇಂಡಿಗೋ ನೇಮಕಾತಿಗಳನ್ನು ಸ್ಥಗಿತಗೊಳಿಸಿ, ತರಬೇತಿಯನ್ನೂ ವಿಸ್ತರಿಸುವ ಗೋಜಿಗೆ ಹೋಗಲಿಲ್ಲ. ಎಲ್ಲಕ್ಕಿಂತ ಕೆಟ್ಟ ಕ್ರಮವೆಂದರೆ, ಇಂಡಿಗೋಗೆ ಈಗಾಗಲೇ ತನ್ನ ಬಳಿ ಅತ್ಯಂತ ಕನಿಷ್ಠ ಪ್ರಮಾಣದ ಪೈಲಟ್ ಲಭ್ಯತೆ ಇರುವುದು ತಿಳಿದಿದ್ದರೂ, ತನ್ನ ಚಳಿಗಾಲದ ವೇಳಾಪಟ್ಟಿಯಲ್ಲಿ 6% ಹೆಚ್ಚುವರಿ ವಿಮಾನ ಹಾರಾಟವನ್ನು ಸೇರ್ಪಡೆಗೊಳಿಸಿತು.
ಬಿಕ್ಕಟ್ಟು ಆರಂಭಗೊಳ್ಳುವ ಮುನ್ನ, ಇಂಡಿಗೋ ಬಳಿ ಅಂದಾಜು 4,134 ಪೈಲಟ್‌ಗಳಿದ್ದು, ಅವರಲ್ಲಿ 2,186 ಕ್ಯಾಪ್ಟನ್‌ಗಳು ಮತ್ತು 1,948 ಫಸ್ಟ್ ಆಫೀಸರ್‌ಗಳಿದ್ದರು. ಅವರು ಒಟ್ಟು 434 ವಿಮಾನಗಳ ಬಳಗವನ್ನು ನಿರ್ವಹಿಸುತ್ತಿದ್ದರು. ಅಂದಾಜು 50 ವಿಮಾನಗಳು ಪ್ರಾಟ್ & ವಿಟ್ನೀ ಇಂಜಿನ್ ದೋಷದ ಕಾರಣದಿಂದ ಈಗಾಗಲೇ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದವು. ಇಂಡಿಗೋ ತಾನೇ ಡಿಜಿಸಿಎಗೆ ಸಲ್ಲಿಸಿದ್ದ ಅಂಕಿ ಅಂಶಗಳ ಪ್ರಕಾರ, ನೂತನ ಎಫ್‌ಡಿಟಿಎಲ್ ನಿಯಮಗಳ ಅಡಿಯಲ್ಲಿ ಇಂಡಿಗೋಗೆ 2,422 ಕ್ಯಾಪ್ಟನ್‌ಗಳ ಅಗತ್ಯವಿದ್ದು, ಅದು 2,357 ಕ್ಯಾಪ್ಟನ್‌ಗಳನ್ನು ಹೊಂದಿತ್ತು. ಇದು ಕೇವಲ 65 ಕ್ಯಾಪ್ಟನ್‌ಗಳ ಸಣ್ಣ ಕೊರತೆಯಾಗಿದ್ದರೂ, ಅಲ್ಲಿಂದಲ್ಲಿಗೆ ಸರಿ ಹೊಂದಿಸಿಕೊಂಡು ಸಾಗುತ್ತಿದ್ದ ಇಂಡಿಗೋದ ವ್ಯವಸ್ಥೆಯನ್ನು ಹಾಳುಗೆಡವಲು ಈ ಕೊರತೆಯೂ ಸಾಕಾಗುತ್ತಿತ್ತು. ಇಂಡಿಗೋ ಸಾಮಾನ್ಯವಾಗಿ 4% ಹೆಚ್ಚುವರಿ ಪೈಲಟ್‌ಗಳನ್ನು ಹೊಂದಿರುತ್ತದಾದರೂ, ಹೊಸ ನಿಯಮಗಳ ಅಡಿಯಲ್ಲಿ ಈ ಹೆಚ್ಚುವರಿ ಸಂಖ್ಯೆಯೇ ಸಂಪೂರ್ಣವಾಗಿ ಇಲ್ಲವಾಯಿತು. ಎಲ್ಲ ಹಂತಗಳಲ್ಲಿನ ಒಟ್ಟು ಸಿಬ್ಬಂದಿಗಳ ಕೊರತೆ ಸಂಖ್ಯೆಯಲ್ಲಿ ಹಲವು ನೂರನ್ನು ತಲುಪಿ, ಅಷ್ಟು ಶೀಘ್ರವಾಗಿ ಸಂಪೂರ್ಣ ಇಂಡಿಗೋದ ಜಾಲ ಕುಸಿತ ಕಾಣುವಂತಾಯಿತು.
ಕೇವಲ ನವೆಂಬರ್ ತಿಂಗಳ ಮೊದಲ ವಾರದಲ್ಲೇ ಇಂಡಿಗೋ 1,000ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿತ್ತು. ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸಮಯಕ್ಕೆ ಸರಿಯಾಗಿ ಕಾರ್ಯಾಚರಿಸುವ ಇಂಡಿಗೋದ ಕಾರ್ಯಾಚರಣೆ 8.5%ಗೆ ಕುಸಿತ ಕಂಡಿತು. ಪ್ರಯಾಣಿಕರು ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಬಾಕಿಯಾದರು. ಅವರು ಇಂಡಿಗೋ ನಮಗೆ ಈ ಸಮಸ್ಯೆಯ ಕುರಿತು ಯಾವುದೇ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದ್ದರು. ಬಳಿಕ ಈ ಸಮಸ್ಯೆಯ ಕುರಿತು ಮಾಹಿತಿ ನೀಡಿದ ಡಿಜಿಸಿಎ, ಎದುರಾದ ತೊಂದರೆಗಳಿಗೆ ಇಂಡಿಗೋದ ತಪ್ಪಾದ ಲೆಕ್ಕಾಚಾರಗಳು ಮತ್ತು ಯೋಜನಾ ವೈಫಲ್ಯಗಳು ಕಾರಣವಾಗಿದ್ದವು ಎಂದು ಸ್ಪಷ್ಟಪಡಿಸಿತು. ಮತ್ತು ಇದಕ್ಕೆ ಯಾವುದೇ ಬಾಹ್ಯ ಅಂಶಗಳು ಕಾರಣವಲ್ಲ ಎಂದು ಡಿಜಿಸಿಎ ಹೇಳಿತ್ತು. ಹಣಕಾಸು ವಿಶ್ಲೇಷಕರ ಪ್ರಕಾರ, ಈ ಸಮಸ್ಯೆಯಿಂದ ಇಂಡಿಗೋಗೆ ಉಂಟಾದ ನಷ್ಟ ಅದರ ತ್ರೈಮಾಸಿಕ ಆದಾಯದ 1%ಕ್ಕಿಂತಲೂ ಕಡಿಮೆ. ಆದರೆ, ನೂರಾರು ಹೊಸ ಪೈಲಟ್‌ಗಳನ್ನು ಸೇರ್ಪಡೆಗೊಳಿಸಿ, ಅವರಿಗೆ ತರಬೇತಿ ನೀಡುವ ದೀರ್ಘಾವಧಿ ವೆಚ್ಚ ಸಾಕಷ್ಟು ಹೆಚ್ಚಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಕಳೆದ ಹಲವಾರು ವರ್ಷಗಳ ಸಮರ್ಥ ಕಾರ್ಯಾಚರಣೆಯಿಂದ ತನ್ನ ನಂಬಿಕಾರ್ಹತೆಗೆ ಹೆಸರಾಗಿದ್ದ ಇಂಡಿಗೋಗೆ ಅದರ ಗೌರವಕ್ಕೆ ದೊಡ್ಡ ಪೆಟ್ಟೇ ಬಿದ್ದಿದೆ.
ಇಂಡಿಗೋ ಭಾರತದ ಆಂತರಿಕ ವಿಮಾನಯಾನ ಮಾರುಕಟ್ಟೆಯಲ್ಲಿ 64% ಪಾಲು ಹೊಂದಿದ್ದು, ಇದರ ಕುಸಿತ ಇಡೀ ಉದ್ಯಮದ ಮೇಲೆ ಪರಿಣಾಮ ಬೀರಿತ್ತು. ಇತರ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ, ಎಐ ಎಕ್ಸ್‌ಪ್ರೆಸ್, ಸ್ಪೈಸ್‌ಜೆಟ್, ಆಕಾಸಗಳಿಗೆ ಇದ್ದಕ್ಕಿದ್ದಂತೆ ಹೆಚ್ಚಿದ ಪ್ರಯಾಣಿಕರ ಪ್ರಮಾಣವನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ವಿಮಾನಯಾನ ದರಗಳು ಅಪಾರ ಹೆಚ್ಚಳ ಕಂಡವು. ಡಿಸೆಂಬರ್ 7, 2025ರಂದು ದೆಹಲಿಯಿಂದ ಮುಂಬೈಗೆ ಇಂಡಿಗೋಯೇತರ ವಿಮಾನಗಳಲ್ಲಿ ಪ್ರಯಾಣ ದರ 21,000 ರೂಗಳಿಂದ 39,000 ರೂ ಆಗಿದ್ದವು. ಇನ್ನು ದೆಹಲಿ – ಚೆನ್ನೈಗೆ ಪ್ರಯಾಣ ದರ ಅಂದಾಜು 21,000ರೂ, ಉದಯಪುರ – ದೆಹಲಿ ದರ 15,000 ರೂಗಳಿಂದ 26,000 ರೂಪಾಯಿ, ಬೆಂಗಳೂರು – ಕೋಲ್ಕತ್ತಾ 20,000 ರೂಪಾಯಿ, ಮತ್ತು ಉದಯಪುರ – ಮುಂಬೈ ದರ 35,000 ರೂಪಾಯಿ ತನಕ ಹೆಚ್ಚಳ ಕಂಡಿದ್ದವು. ಬಹಳಷ್ಟು ಪ್ರಯಾಣಿಕರು ಈ ದರದಲ್ಲಿ ತಾವು ವಿದೇಶ ಪ್ರಯಾಣವನ್ನೇ ನಡೆಸಬಹುದಿತ್ತು ಎಂದಿದ್ದು, ಬೇಡಿಕೆ ಮತ್ತು ಪೂರೈಕೆ ಲೆಕ್ಕಾಚಾರದಲ್ಲಿ ಇಷ್ಟು ಹಣ ಪಾವತಿಸದೆ ಅವರಿಗೆ ಬೇರೆ ವಿಧಿಯೂ ಇರಲಿಲ್ಲ.
ಡಿಜಿಸಿಎ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಒದಗಿಸುವ ನಿಟ್ಟಿನಲ್ಲಿ, ವಿಮಾನಯಾನ ಸಂಸ್ಥೆಗಳಿಗೆ ಪೈಲಟ್‌ಗಳ ರಜೆಯನ್ನೂ ವಿಶ್ರಾಂತಿಯ ಅವಧಿ ಎಂದು ಪರಿಗಣಿಸಲು ತಾತ್ಕಾಲಿಕ ಅವಕಾಶ ಕಲ್ಪಿಸಿತು. ಈ ನಿಯಮವನ್ನು ಸ್ವತಃ ಡಿಜಿಸಿಎ ಇತ್ತೀಚೆಗೆ ತೆಗೆದುಹಾಕಿತ್ತು. ಇಂಡಿಗೋ ಫೆಬ್ರವರಿ 10, 2026ರ ತನಕ ರಾತ್ರಿ ಕಾರ್ಯಾಚರಣೆಯ ಮೇಲಿನ ಒಂದಷ್ಟು ನಿಯಮಗಳಲ್ಲಿ ವಿನಾಯಿತಿ ಕೇಳಿದ್ದು, ಆ ವೇಳೆಗೆ ತನ್ನ ಕಾರ್ಯಾಚರಣೆಗಳು ಪೂರ್ಣವಾಗಿ ಸ್ಥಿರಗೊಳ್ಳಲಿವೆ ಎಂದು ಭರವಸೆ ನೀಡಿದೆ. ಇಂಡಿಗೋ ಈಗಾಗಲೇ ಉಂಟಾಗಿರುವ ಸಮಸ್ಯೆಗೆ ಕ್ಷಮೆ ಯಾಚಿಸಿದ್ದು, ಹಣ ಮರುಪಾವತಿಸಿ, ಹೊಟೆಲ್ ವಾಸ್ತವ್ಯ, ಆಹಾರ, ತಿಂಡಿ ತಿನಿಸು ಮತ್ತು ವಯಸ್ಕರಿಗೆ ಲಾಂಜ್ ಒದಗಿಸುವುದಾಗಿ ಹೇಳಿದೆ. ಆದರೆ, ಇಂಡಿಗೋದಿಂದ ಯಾವುದೇ ಮುನ್ಸೂಚನೆಯೂ ಲಭಿಸದೆ, ಎಲ್ಲೆಲ್ಲೋ ಬಾಕಿಯಾದ ಪ್ರಯಾಣಿಕರಿಗೆ ಈ ಕ್ಷಮಾಪಣೆ ಬಹಳ ತಡವಾಗಿ ಬಂದಿದೆ.
ನಾಗರಿಕ ವಿಮಾನಯಾನ ಸಚಿವರೂ ಸಭೆಗಳನ್ನು ಆಯೋಜಿಸಿ, ಈ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಿ, ವ್ಯವಸ್ಥೆಯನ್ನು ಸಹಜ ಸ್ಥಿತಿಗೆ ತರುವಂತೆ ವಿಮಾನಯಾನ ಸಂಸ್ಥೆಗಳು ಮತ್ತು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಆದರೆ, ಈ ಕುರಿತು ಯಾವುದೇ ಮಹತ್ವದ ರಾಜಕೀಯ ಪ್ರತಿಕ್ರಿಯೆಗಳಾಗಲಿ, ಚರ್ಚೆಗಳಾಗಲಿ, ವಿಶೇಷ ಸಂಸದೀಯ ಗಮನವಾಗಲಿ ನಡೆದಿಲ್ಲ. ವಿಮಾನ ನಿಲ್ದಾಣಗಳು ಇಂದಿಗೂ ತುಂಬಿ ತುಳುಕಿವೆ, ಗೊಂದಲಗಳು ಹಾಗೇ ಮುಂದುವರಿದಿವೆ, ಮತ್ತು ಸಾವಿರಾರು ಜನರು ತಮ್ಮ ಮುಂದಿನ ಪ್ರಯಾಣದ ಕುರಿತು ಅನಿಶ್ಚಿತ ಸ್ಥಿತಿಯಲ್ಲಿದ್ದಾರೆ.
ಈ ಬಿಕ್ಕಟ್ಟು ಒಂದು ಸರಳವಾದ ಪಾಠವನ್ನು ಬೋಧಿಸಿದೆ. ಅದೇನೆಂದರೆ: ವಿಮಾನಯಾನ ಸಂಸ್ಥೆ ಎಷ್ಟೇ ಗಟ್ಟಿಯಾಗಿದ್ದರೂ, ಅದು ಸುರಕ್ಷತಾ ನಿಯಮಗಳನ್ನು ಮತ್ತು ದೀರ್ಘಾವಧಿಯ ಕಾರ್ಯ ಯೋಜನೆಯನ್ನು ಕಡೆಗಣಿಸಿದರೆ, ಅದು ವೈಫಲ್ಯ ಎದುರಿಸಬೇಕಾಗುತ್ತದೆ. ಇಂಡಿಗೋಗೆ ಈ ಬಿಕ್ಕಟ್ಟಿನ ಕುರಿತು ಮುನ್ಸೂಚನೆಯೂ ಇತ್ತು, ಸಿದ್ಧವಾಗಲು ಸಮಯವೂ ಇತ್ತು. ಆದರೆ, ಅದು ಸಿದ್ಧವಾಗದೆ ಹಾಗೇ ಕೈಕಟ್ಟಿ ಕುಳಿತಿತ್ತು. ಇಂಡಿಗೋದ ನಿರ್ಲಕ್ಷ್ಯದ ಪರಿಣಾಮವಾಗಿ ಈಗ ಭಾರತದಾದ್ಯಂತ ಪ್ರಯಾಣಿಕರು ಬೆಲೆ ತೆರುವಂತಾಗಿದೆ. ಈ ತಿಂಗಳು ಯಾರಾದರೂ ವಿಮಾನ ಪ್ರಯಾಣ ಕೈಗೊಳ್ಳುವುದಿದ್ದರೆ, ಮನೆಗಳಿಂದ ತೆರಳುವ ಮುನ್ನವೇ ವಿಮಾನದ ಸ್ಥಿತಿಯನ್ನು ಪರಿಶೀಲಿಸಬೇಕು. ಏಕೆಂದರೆ, ಈ ಬಿಕ್ಕಟ್ಟಿನ ಪರಿಣಾಮಗಳು ಈಗಷ್ಟೇ ತೆರೆಯಲ್ಪಡುತ್ತಿವೆ!
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com
Advertisement