ಬಯಲಿಗೆ ಬಂದ ಅಲ್-ಫಲಾಹ್ ವಿಶ್ವವಿದ್ಯಾಲಯದ ಕರಾಳ ಸತ್ಯಗಳು

ಮೂಲತಃ ಅಲ್‌ ಫಲಾ 1997ರಲ್ಲಿ ಕೇವಲ ಒಂದು ಇಂಜಿನಿಯರಿಂಗ್‌ ಕಾಲೇಜಿನ ರೂಪದಲ್ಲಿ, ಸಣ್ಣ ಪ್ರಮಾಣದಲ್ಲಿ ಆರಂಭಗೊಂಡಿತ್ತು. ವರ್ಷಗಳು ಕಳೆದಂತೆ ಅಲ್‌ ಫಲಾ ಸಂಸ್ಥೆ ನಿರಂತರವಾಗಿ ಬೆಳವಣಿಗೆ ಹೊಂದುತ್ತಾ, 2014ರಲ್ಲಿ ಸಂಪೂರ್ಣ ವಿಶ್ವವಿದ್ಯಾಲಯವಾಗಿ ಬೆಳೆದು ನಿಂತಿತು.
File photo
ಬಯಲಿಗೆ ಬಂದ ಅಲ್‌ - ಫಲಾ ವಿಶ್ವವಿದ್ಯಾಲಯದ ಕರಾಳ ಸತ್ಯಗಳುonline desk
Updated on

ಇತ್ತೀಚೆಗೆ ಫರೀದಾಬಾದಿನಿಂದ ಹೊರಬಿದ್ದ ಆಘಾತಕಾರಿ ಕಥೆಯೊಂದು ಎಲ್ಲರನ್ನೂ ದಂಗುಗೊಳಿಸಿದೆ. ಶಿಕ್ಷಣ ಮತ್ತು ದೇಶದ ಪ್ರಗತಿಗೆ ನೆರವಾಗಬೇಕಿದ್ದ ಫರೀದಾಬಾದಿನ ಅಲ್ -‌ ಫಲಾ ವಿಶ್ವವಿದ್ಯಾಲಯ ಒಂದಷ್ಟು ಕರಾಳ ವಿಚಾರಗಳನ್ನು ಬಚ್ಚಿಟ್ಟಿರುವಂತೆ ತೋರುತ್ತಿದೆ. ಅಲ್‌ - ಫಲಾ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನ ಉಪನ್ಯಾಸಕನಾದ ಡಾ. ಉಮರ್‌ ಉನ್‌ ನಬಿ ಎಂಬಾತ ನವೆಂಬರ್‌ 10ರಂದು ದೆಹಲಿಯ ಕೆಂಪು ಕೋಟೆಯ ಬಳಿಗೆ ತನ್ನ ಕಾರನ್ನು ಚಲಾಯಿಸಿ, ಅಲ್ಲಿ ಸ್ವತಃ ತನ್ನನ್ನು ಸ್ಫೋಟಿಸಿಕೊಂಡ. ಈ ಆತ್ಮಹತ್ಯಾ ದಾಳಿ ದೇಶವನ್ನೇ ನಲುಗಿಸಿದ್ದು, ಕ್ಯಾನ್‌ ತೆರೆದಾಗ ಹುಳಗಳು ಹೊರಬರುವ ರೀತಿಯಲ್ಲಿ ಶಿಕ್ಷಣ ಸಂಸ್ಥೆಗಳಿಂದ ಯಾರೂ ಊಹಿಸಲೇ ಸಾಧ್ಯವಿಲ್ಲದಂತೆ ಭಯೋತ್ಪಾದಕರು ಹೊರ ಬಿದ್ದಿದ್ದಾರೆ.

ಇನ್ನೂ ಆಘಾತ ಉಂಟುಮಾಡುವ ವಿಚಾರ ಏನೆಂದರೆ, ಪ್ರಸ್ತುತ ಪ್ರಕರಣದಲ್ಲಿ ಡಾ. ನಬಿ ಒಬ್ಬನೇ ಕಾರ್ಯಾಚರಿಸುತ್ತಿರಲಿಲ್ಲ. ಕೆಂಪು ಕೋಟೆ ಬಳಿಯ ಸ್ಫೋಟಕ್ಕೆ ಕೇವಲ ಕೆಲ ಗಂಟೆಗಳ ಮುನ್ನ ಪೊಲೀಸರು ಎಂಟು ಶಂಕಿತರನ್ನು ಬಂಧಿಸಿದ್ದು, ಅವರ ಬಳಿ ಬಹುತೇಕ 3,000 ಕೆಜಿಗಳಷ್ಟು ಸ್ಫೋಟಕ ನಿರ್ಮಾಣಕ್ಕೆ ಬಳಸುವ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರೆಲ್ಲರೂ ಅತ್ಯುನ್ನತ ಶಿಕ್ಷಣ ಹೊಂದಿದ್ದ ವೃತ್ತಿಪರರಾಗಿದ್ದು, ಭಯೋತ್ಪಾದಕರೆಂದರೆ ಸಾಮಾನ್ಯವಾಗಿ ನಾವು ಅಂದುಕೊಳ್ಳುವ ಅಶಿಕ್ಷಿತ ಜನರಾಗಿರಲಿಲ್ಲ. ಬಂಧಿತರಾದ ಶಂಕಿತರ ಗುಂಪು ಜೈಷ್‌ ಎ ಮೊಹಮ್ಮದ್ ನಂತಹ ಅಪಾಯಕಾರಿ ಸಂಘಟನೆಗಳೊಡನೆ ಸಂಪರ್ಕ ಹೊಂದಿತ್ತು ಎಂದು ತನಿಖಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದು, ಕಾಶ್ಮೀರ, ಹರಿಯಾಣ ಮತ್ತು ಉತ್ತರ ಪ್ರದೇಶಗಳಾದ್ಯಂತ ಕಾರ್ಯಾಚರಿಸುತ್ತಿದ್ದರು ಎನ್ನಲಾಗಿದೆ. ಅಲ್‌ ಫಲಾ ವಿಶ್ವವಿದ್ಯಾಲಯದ 10ಕ್ಕೂ ಹೆಚ್ಚು ಸಿಬ್ಬಂದಿಗಳು ಈಗ ತಲೆ ತಪ್ಪಿಸಿಕೊಂಡಿದ್ದು, ರಾಷ್ಟ್ರೀಯ ತನಿಖಾ ದಳ ಈ ಭಯೋತ್ಪಾದನಾ ಕೇಂದ್ರಕ್ಕೆ ಪಾಕಿಸ್ತಾನದ ಜೊತೆಗೆ ಇರಬಹುದಾದ ಸಂಬಂಧದ ಕುರಿತು ತೀವ್ರ ತನಿಖೆ ನಡೆಸುತ್ತಿದೆ.

ಮೂಲತಃ ಅಲ್‌ ಫಲಾ 1997ರಲ್ಲಿ ಕೇವಲ ಒಂದು ಇಂಜಿನಿಯರಿಂಗ್‌ ಕಾಲೇಜಿನ ರೂಪದಲ್ಲಿ, ಸಣ್ಣ ಪ್ರಮಾಣದಲ್ಲಿ ಆರಂಭಗೊಂಡಿತ್ತು. ವರ್ಷಗಳು ಕಳೆದಂತೆ ಅಲ್‌ ಫಲಾ ಸಂಸ್ಥೆ ನಿರಂತರವಾಗಿ ಬೆಳವಣಿಗೆ ಹೊಂದುತ್ತಾ, 2014ರಲ್ಲಿ ಸಂಪೂರ್ಣ ವಿಶ್ವವಿದ್ಯಾಲಯವಾಗಿ ಬೆಳೆದು ನಿಂತಿತು. 2019ರಲ್ಲಿ ಅಲ್‌ ಫಲಾ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾರಂಭಿಸಿತು. ಆ ಬಳಿಕ ಅಲಿಘರ್‌ ಮುಸ್ಲಿಂ ವಿಶ್ವವಿದ್ಯಾಲಯ ಅಥವಾ ಜಾಮಿಯಾ ಮಿಲಿಯಾ ಇಸ್ಲಾಮಿಯಾದಂತಹ ಪ್ರಸಿದ್ಧ ಸಂಸ್ಥೆಗಳಲ್ಲಿ ಅವಕಾಶ ಸಿಗದ, ಹರಿಯಾಣ ಮತ್ತು ಸುತ್ತಲಿನ ರಾಜ್ಯಗಳ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ನಡುವೆ ಪ್ರಸಿದ್ಧವಾಗತೊಡಗಿತು. ಈ ವಿಶ್ವವಿದ್ಯಾಲಯ ಇಂಜಿನಿಯರಿಂಗ್‌ ಕಾಲೇಜುಗಳು, ತರಬೇತಿ ಕೇಂದ್ರಗಳು ಮತ್ತು 650 ಹಾಸಿಗೆಗಳ ಆಸ್ಪತ್ರೆಯನ್ನೂ ಹೊಂದಿ ಬೃಹತ್‌ ಸಂಸ್ಥೆಯಾಗಿ ಬೆಳೆಯಿತು. ಈ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂತಹ ಉತ್ತಮ ಕಾರ್ಯಗಳ ಪರಿಣಾಮವಾಗಿ, ಅಲ್‌ ಫಲಾ ಜನರ ನಂಬಿಕೆ, ವಿಶ್ವಾಸ ಗಳಿಸಿಕೊಂಡಿತು.

ಈ ಗೌರವಾನ್ವಿತ ಸಂಸ್ಥೆಯ ಹಿಂದೆ ಯಾರಿದ್ದರು ಎಂದು ಶೋಧಿಸಿದಾಗ, ಜವಾದ್‌ ಅಹ್ಮದ್‌ ಸಿದ್ದಿಕಿ ಎಂಬಾತ ಸಂಸ್ಥೆಯ ಸ್ಥಾಪಕ ಮತ್ತು ಅಧ್ಯಕ್ಷ ಎಂದು ತಿಳಿದುಬಂದಿದೆ. ಈತ ಅಲ್‌ ಫಲಾ ಚಾರಿಟೇಬಲ್‌ ಟ್ರಸ್ಟ್‌ ಎಂಬ ಟ್ರಸ್ಟ್‌ ಮೂಲಕ ಎಲ್ಲವನ್ನೂ ನಿಯಂತ್ರಿಸುತ್ತಿದ್ದ. ಆಶ್ಚರ್ಯಕರ ವಿಚಾರ ಏನೆಂದರೆ, ಈ ಸಿದ್ದಿಕಿ ಅಂತರ್ಜಾಲದಲ್ಲಿ ಎಲ್ಲೂ ಕಾಣಿಸಿಕೊಂಡಿಲ್ಲ. ಇಷ್ಟೊಂದು ದೊಡ್ಡ ಶಿಕ್ಷಣ ಸಂಸ್ಥೆಯನ್ನು ನಡೆಸುವ ವ್ಯಕ್ತಿಯಿಂದ ಇಂತಹ ನಡೆ ಯಾಕೋ ಅಸಹಜವೆನಿಸುತ್ತದೆ. ಇನ್ನು ಆತನ ಲಿಂಕ್ಡ್‌ ಇನ್‌ ಖಾತೆಯಲ್ಲೂ ಯಾವುದೇ ಮಾಹಿತಿಗಳು ಲಭ್ಯವಿಲ್ಲ. ಇನ್ನೂ ಅಚ್ಚರಿಯ ಅಂಶವೆಂದರೆ ಸಿದ್ದಿಕಿಯ ಕುಟುಂಬದ ಇತಿಹಾಸ. ಮೂಲತಃ ಮಧ್ಯ ಪ್ರದೇಶದವನಾದ ಸಿದ್ದಿಕಿಯ ತಂದೆ 1990ರ ದಶಕದ ಕೊನೆಯ ವೇಳೆ ಒಂದು ಬೃಹತ್‌ ಹಣಕಾಸು ಮೋಸದಲ್ಲಿ ಸಿಕ್ಕಿ ಬಿದ್ದಿದ್ದ. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಿಕಿ 25 ವರ್ಷಗಳ ಹಿಂದೆ ಹೈದರಾಬಾದಿನಲ್ಲಿ ಬಂಧನಕ್ಕೊಳಗಾಗಿದ್ದ. ಈಗ ತನಿಖಾಧಿಕಾರಿಗಳು ನಿಜಕ್ಕೂ ಅಲ್‌ ಫಲಾದಲ್ಲಿ ನಡೆಯುತ್ತಿರುವುದು ಏನು ಎಂದು ತಿಳಿದುಕೊಳ್ಳಲು ಈ ಹಳೆಯ ವಿಚಾರಗಳನ್ನು ಮತ್ತೆ ತನಿಖೆಗೆ ಎಳೆಯುತ್ತಿದ್ದಾರೆ.

File photo
ಜಗತ್ತಿನ ಗಮನ ಸೆಳೆಯಲಿದೆ ಪುಟಿನ್ ದೆಹಲಿ ಭೇಟಿ (ಜಾಗತಿಕ ಜಗಲಿ)

ಆರ್ಥಿಕ ಅಪರಾಧಗಳ ತನಿಖೆ ನಡೆಸುವ ಜಾರಿ ನಿರ್ದೇಶನಾಲಯ (ಇಡಿ) ಅಲ್‌ ಫಲಾದಲ್ಲಿ ಭಾರೀ ವಂಚನೆ ನಡೆದಿರುವುದನ್ನು ಪತ್ತೆಹಚ್ಚಿದೆ. ಈ ವಿಶ್ವವಿದ್ಯಾಲಯ ತನಗೆ ನ್ಯಾಕ್‌ನಿಂದ (NAAC) ಎ ಗ್ರೇಡ್‌ ಲಭಿಸಿದೆ ಎಂದು ಹೇಳಿಕೊಂಡಿದ್ದು, ಇದು ಕಾಲೇಜುಗಳಿಗೆ ಕೊಡುವ ಗುಣಮಟ್ಟದ ಸರ್ಟಿಫಿಕೇಟ್‌ನಂತಿದೆ. ಆದರೆ ಸ್ವತಃ ನ್ಯಾಕ್‌ ಇದು ಸುಳ್ಳು ಎಂದಿದೆ. ಹತ್ತಕ್ಕೂ ಹೆಚ್ಚು ವರ್ಷಗಳ ಕಾಲದಿಂದ ಕಾರ್ಯಾಚರಿಸುತ್ತಿದ್ದರೂ ಅಲ್‌ ಫಲಾ ವಿಶ್ವವಿದ್ಯಾಲಯ ಸರಿಯಾದ ಮಾನ್ಯತೆ ಗಳಿಸಿಲ್ಲ. ಇನ್ನು ವಿಶ್ವವಿದ್ಯಾಲಯ ತಾನು ಸರ್ಕಾರಿ ಅನುದಾನಕ್ಕೆ ಅರ್ಹತೆ ಹೊಂದಿರುವುದಾಗಿಯೂ ಸುಳ್ಳು ಹೇಳಿದ್ದು, ಅದು ಎಂದಿಗೂ ಈ ಅರ್ಹತೆ ಗಳಿಸಿರಲಿಲ್ಲ.

ಇಡಿ ಅಧಿಕಾರಿಗಳು ಸಂಸ್ಥೆಯ ಆವರಣದಲ್ಲಿ ದಾಳಿ ನಡೆಸಿದಾಗ ಅವರಿಗೆ ಆಘಾತಕಾರಿ ವಾಸ್ತವ ಎದುರಾಗಿತ್ತು. ವಿವಿಧ ಅಲ್‌ ಫಲಾ ಸಂಸ್ಥೆಗಳಿಂದ ಸಂಗ್ರಹವಾಗುತ್ತಿದ್ದ ಎಲ್ಲ ಹಣವೂ ಕೇವಲ ಒಂದೇ ಒಂದು ಪಾನ್‌ ಸಂಖ್ಯೆಯನ್ನು ಬಳಸಿಕೊಂಡು ಬ್ಯಾಂಕ್‌ ಖಾತೆಗಳಿಗೆ ಜಮೆಯಾಗುತ್ತಿತ್ತು. ಇದು ಹಣಕಾಸಿನ ಮೇಲೆ ಇದ್ದ ಬಿಗಿಯಾದ ನಿಯಂತ್ರಣಕ್ಕೆ ಸಾಕ್ಷಿಯಾಗಿತ್ತು. ಕಳೆದ ಏಳು ವರ್ಷಗಳ ಅವಧಿಯಲ್ಲಿ ವಿಶ್ವವಿದ್ಯಾಲಯ 415 ಕೋಟಿ ರೂಪಾಯಿ ಸಂಗ್ರಹಿಸಿದ್ದು, ಇದು ಭಾರೀ ಮೊತ್ತವೇ ಆಗಿದೆ. ಆದಾಯ ತೆರಿಗೆ ದಾಖಲೆಗಳ ಪ್ರಕಾರ, ಆರಂಭದಲ್ಲಿ ಈ ಹಣವನ್ನು ದೇಣಿಗೆಗಳು ಎಂದು ತೋರಿಸಲಾಗಿದ್ದು, ವರ್ಷಕ್ಕೆ 30 ಕೋಟಿ ರೂಪಾಯಿ ಎನ್ನಲಾಗಿತ್ತು. ಬಳಿಕ ಇದನ್ನು ಶೈಕ್ಷಣಿಕ ಶುಲ್ಕಗಳು ಎಂದು ಬದಲಾಯಿಸಲಾಯಿತು. ಅಲ್‌ ಫಲಾದ ವಾರ್ಷಿಕ ಆದಾಯ ವಾರ್ಷಿಕ 24 ಕೋಟಿ ರೂಪಾಯಿಗಳಿಂದ ಕೆಲವೇ ವರ್ಷಗಳಲ್ಲಿ 80 ಕೋಟಿ ರೂಪಾಯಿಗೆ ಜಿಗಿಯಿತು.

ಆದರೆ ಇಷ್ಟೆಲ್ಲ ಹಣ ಹೋಗುತ್ತಿದ್ದುದಾದರೂ ಎಲ್ಲಿಗೆ? ತನಿಖಾಧಿಕಾರಿಗಳು ಈ ಹಣವನ್ನು ಶೆಲ್‌ ಕಂಪನಿಗಳು ಮತ್ತು ನಕಲಿ ಉದ್ಯಮಗಳ ಮೂಲಕ ವರ್ಗಾಯಿಸಲಾಗುತ್ತಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ವಿಶ್ವವಿದ್ಯಾಲಯದ ಆಸ್ಪತ್ರೆ ಹೆಚ್ಚಿನ ಹಣ ಪಡೆಯುವ ಸಲುವಾಗಿ ನಕಲಿ ರೋಗಿಗಳ ದಾಖಲೆ ಸೃಷ್ಟಿಸುತ್ತಿತ್ತು ಎಂದೂ ಆರೋಪಗಳು ಎದುರಾಗಿವೆ. ಇದನ್ನೇ ಮನಿ ಲಾಂಡರಿಂಗ್‌, ಅಂದರೆ ಅಕ್ರಮ ಹಣವನ್ನು ಸಕ್ರಮವಾಗಿಸುವುದು ಎನ್ನಲಾಗುತ್ತದೆ.

ಇನ್ನು ಅಲ್‌ ಫಲಾದಲ್ಲಿ ವೈದ್ಯಕೀಯ ಶಿಕ್ಷಣದ ಶುಲ್ಕವೂ ಅತ್ಯಂತ ಹೆಚ್ಚಾಗಿದೆ. ಐದು ವರ್ಷಗಳ ಎಂಬಿಬಿಎಸ್‌ ಕೋರ್ಸ್‌ಗೆ ಒಟ್ಟಾರೆಯಾಗಿ ಅಂದಾಜು 90 ಲಕ್ಷ ಶುಲ್ಕವಿದೆ. ಭಾರತೀಯ ವಿದ್ಯಾರ್ಥಿಗಳಿಗೆ ಮೊದಲ ವರ್ಷದ ಶುಲ್ಕವೇ 16 ಲಕ್ಷದಷ್ಟಿದೆ. ಇನ್ನು ಅನಿವಾಸಿ ಭಾರತೀಯ ವಿದ್ಯಾರ್ಥಿಗಳಿಗೆ ಮೊದಲ ವರ್ಷದ ಶುಲ್ಕ ಬಹುತೇಕ 30 ಲಕ್ಷಗಳಷ್ಟಿದೆ. ತಮ್ಮ ಮಕ್ಕಳು ವೈದ್ಯರಾಗಬೇಕೆಂದು ಕನಸು ಕಂಡ ಪೋಷಕರು ಅಲ್‌ ಫಲಾ ಮೇಲೆ ಸಂಪೂರ್ಣ ವಿಶ್ವಾಸವಿರಿಸಿ, ಸಂಸ್ಥೆ ಕೇಳಿದ ಬೃಹತ್‌ ಶುಲ್ಕವನ್ನೂ ಪಾವತಿಸಿದ್ದಾರೆ.

ಕೆಂಪು ಕೋಟೆಯ ಸ್ಫೋಟದ ಘಟನೆಯ ಬಳಿಕ, ಭಾರತೀಯ ವಿಶ್ವವಿದ್ಯಾಲಯಗಳ ಸಂಘ ತಕ್ಷಣವೇ ಅಲ್‌ ಫಲಾದ ಸದಸ್ಯತ್ವವನ್ನು ರದ್ದುಗೊಳಿಸಿದೆ. ಅಂದರೆ, ಈ ವಿಶ್ವವಿದ್ಯಾಲಯ ಈಗ ವಿಶ್ವವಿದ್ಯಾಲಯವಾಗಲು ಬೇಕಾದ ಅರ್ಹತೆಗಳನ್ನು ಹೊಂದಿಲ್ಲ ಎಂದಾಗುತ್ತದೆ. ಇದು ಪದವಿಯ ಮಾನ್ಯತೆಯಿಂದ ಶೈಕ್ಷಣಿಕ ಸಹಯೋಗದ ತನಕ ಎಲ್ಲದರ ಮೇಲೂ ಪ್ರಭಾವ ಬೀರುತ್ತದೆ. ಸಿದ್ದಿಕಿ ಈಗ ನ್ಯಾಯಾಂಗ ಬಂಧನದಲ್ಲಿದ್ದು, ಮನಿ ಲಾಂಡರಿಂಗ್‌ ನಿಯಮಗಳಡಿ ಬಂಧನಕ್ಕೊಳಗಾಗಿದ್ದಾನೆ.

File photo
ಆಧುನಿಕ ಯುದ್ಧ ವಿಮಾನಗಳೇಕೆ ಒಂದೇ ಆಸನ ಹೊಂದಿರುತ್ತವೆ? (ಜಾಗತಿಕ ಜಗಲಿ)

ನಿಜಕ್ಕೂ ವೇದನಾದಾಯಕ ಅಂಶವೆಂದರೆ, ಅಲ್‌ ಫಲಾ ಮೇಲೆ ನಂಬಿಕೆ ಇಟ್ಟು, ತಾವು ಕಷ್ಟಪಟ್ಟು ದುಡಿದ ಲಕ್ಷಾಂತರ ರೂಪಾಯಿ ಹಣ ಮತ್ತು ತಮ್ಮ ಕನಸುಗಳನ್ನು ಸಂಸ್ಥೆಯ ಕೈಯಲ್ಲಿಟ್ಟ ಸಾವಿರಾರು ಯುವ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಸ್ಥರ ಸದ್ಯದ ಪರಿಸ್ಥಿತಿ. ಬಹಳಷ್ಟು ವಿದ್ಯಾರ್ಥಿಗಳು ಸಾಮಾನ್ಯ ಹಿನ್ನೆಲೆಯಿಂದ ಬಂದವರಾಗಿದ್ದು, ಶಿಕ್ಷಣ ತಮ್ಮ ಜೀವನವನ್ನು ಉತ್ತಮಪಡಿಸಲಿದೆ ಎಂದು ನಂಬಿಕೆ ಇರಿಸಿದ್ದರು. ಆದರೆ, ಅವರೆಲ್ಲ ಈಗ ನಮ್ಮ ಪದವಿಗಾದರೂ ಮಾನ್ಯತೆ ಸಿಗುತ್ತದೋ ಎಂದು ಚಿಂತೆಗೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವರು ವಿದ್ಯಾಭ್ಯಾಸ ಮಾಡುತ್ತಿದ್ದ ಶಿಕ್ಷಣ ಸಂಸ್ಥೆ ಈಗ ಭಯೋತ್ಪಾದನೆ ಮತ್ತು ವಂಚನೆಯ ಆರೋಪದಡಿ ವಿಚಾರಣೆಗೆ ಒಳಗಾಗಿದೆ.

ಅಲ್‌ ಫಲಾ ಸಂಸ್ಥೆಯ ಪ್ರಕರಣ ಈಗ ಅದು ಹೇಗೆ ಇಂತಹ ಅಕ್ರಮ ಚಟುವಟಿಕೆಗಳು ಇಷ್ಟೊಂದು ವರ್ಷ ಯಾರ ಗಮನಕ್ಕೂ ಬರದಂತೆ ನಡೆಯಲು ಸಾಧ್ಯವಾಯಿತು ಎಂಬ ಅನುಮಾನಗಳನ್ನು ಮೂಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸರಿಯಾದ ಪರಿಶೀಲನೆಗಳು ನಡೆಯುತ್ತಿರಲಿಲ್ಲವೇ? ಶೈಕ್ಷಣಿಕ ವಾತಾವರಣದಲ್ಲಿ, ಶಿಕ್ಷಣ ಸಂಸ್ಥೆಯಲ್ಲಿದ್ದ ವೃತ್ತಿಪರರು ಅದು ಹೇಗೆ ಮೂಲಭೂತವಾದಿಗಳಾಗಿ, ಭಯೋತ್ಪಾದಕರಾಗಿ ಬದಲಾಗಲು ಸಾಧ್ಯ? ಇಷ್ಟೊಂದು ಭಾರೀ ಪ್ರಮಾಣದ ಹಣಕಾಸು ವಂಚನೆಗಳು ಇಷ್ಟು ವರ್ಷ ಹೇಗೆ ವಿಚಾರಣೆಗೆ ಒಳಗಾಗದೆ ಇರಲು ಸಾಧ್ಯವಾಯಿತು? ಇವೆಲ್ಲವೂ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರಗಳು.

ಈಗಿನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಳು ಮುಂದುವರಿದಿದ್ದು, ಮುಂದಿನ ತಿಂಗಳುಗಳಲ್ಲಿ ಅಲ್‌ ಫಲಾ ವಿಶ್ವವಿದ್ಯಾಲಯದೊಳಗೆ ಯಾವ ಮಟ್ಟಿನ ಅಕ್ರಮಗಳು ನಡೆದಿವೆ ಎನ್ನುವುದು ತಿಳಿದು ಬರಲಿದೆ. ಸದ್ಯದ ಮಟ್ಟಿಗೆ, ಮೇಲ್ನೋಟಕ್ಕೆ ಗೌರವಾರ್ಹವಾಗಿರುವಂತೆ ಕಾಣುವ ಎಲ್ಲವೂ ಒಳಗಿಂದಲೂ ಅಷ್ಟೇ ಸರಿಯಾಗಿರಬೇಕೆಂದಿಲ್ಲ ಎನ್ನುವುದನ್ನು ಈ ಘಟನೆ ನೆನಪಿಸುತ್ತಿದೆ. ಅಷ್ಟಕ್ಕೂ ಬೆಳ್ಳಗಿರುವುದೆಲ್ಲ ಹಾಲಲ್ಲ ಎಂಬ ನಾಣ್ಣುಡಿ ಸುಮ್ಮನೆ ಬಂದಿಲ್ಲವಲ್ಲ?

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com