New Year: ತುಳಿದೋಡುವ ಕಾಲಕ್ಕೆ ಮಾಯಿಸುವ ಶಕ್ತಿ ಎಷ್ಟಿದೆ? (ತೆರೆದ ಕಿಟಕಿ)

ಹೊಸತು ಎಂಬ ಅಲ್ಪವಿರಾಮದ ಕ್ಷಣದಲ್ಲಿ ನಿಂತಾಗ, ಎಲ್ಲರಲ್ಲೂ ಸಂಭ್ರಮವೇ ಇರಬೇಕು ಎಂದೇನಿಲ್ಲ. ಯಶದ ಸಾತತ್ಯ ಇದ್ದವರಿಗೆ ಹೊಸವರ್ಷದಲ್ಲಿ ಮತ್ತಷ್ಟು ಮಿನುಗುವ ಹಪಾಹಪಿ. ಆದರೆ, ಬದುಕೆಂಬುದು ಇನ್ಸ್ತಾಗ್ರಾಂ ಫೊಟೊ ಮತ್ತು ರೀಲ್ಸ್ ಗಳಲ್ಲಿ ಕಾಣುವಂತೆ ಎಲ್ಲ ಕಾಲಕ್ಕೂ ಖುಷಿ ಖುಷಿ ಏನಲ್ಲ.
dolphins live in ganga river- wild animals in chernobyl
ಗಂಗಾ ನದಿ ಪಾತ್ರದಲ್ಲಿ ಡಾಲ್ಫಿನ್-ಚರ್ನೋಬಿಲ್ ನಲ್ಲಿ ವನ್ಯಜೀವಿಗಳುonline desk
Updated on

ಗ್ರೆಗೊರಿಯನ್ ಕ್ಯಾಲೆಂಡರಿನ ಹೊಸವರ್ಷಕ್ಕೆ ಅಷ್ಟೆಲ್ಲ ಪ್ರಾಮುಖ್ಯ ಕೊಡಬೇಕಾ ಇಲ್ಲವೇ ಪಂಚಾಂಗದ ಹೊಸ ಸಂವತ್ಸರಕ್ಕೋ ಎಂಬುದು ಲಾಗಾಯ್ತಿನಿಂದಲೂ ಇರುವ ಚರ್ಚೆ. ವ್ಯಾವಹಾರಿಕವಾಗಿ ಸಾರ್ವತ್ರಿಕ ಬಳಕೆಯಲ್ಲಿರುವ ಗ್ರೆಗೊರಿಯನ್ ಕ್ಯಾಲೆಂಡರಿನ ಹೊಸವರ್ಷವನ್ನು ಒಂದು ಮಾನಸಿಕ ಲೆಕ್ಕದ ಮೈಲುಗಲ್ಲಾಗಿ, ಮೆಂಟಲ್ ಮಾರ್ಕರ್ ಆಗಿ ಇಟ್ಟುಕೊಳ್ಳುವುದಕ್ಕೆ ಆಕ್ಷೇಪಣೆ ಏನೂ ಬೇಕಿಲ್ಲ.

ಇವಿಷ್ಟೇ ಹಿನ್ನೆಲೆಯಲ್ಲಿ ಗ್ರಹಿಸಿಕೊಂಡಾಗ ಯಾವುದೇ ಲೆಕ್ಕಕ್ಕೆ ಒಂದು ಹೊಸ ಎಂಬ ಗುರುತನ್ನು ಕೊಟ್ಟಾಗ ಅದು ಅಲ್ಲಿಯವರೆಗಿನ ಪ್ರಯಾಣದ ಸುಸ್ತನ್ನು ಮಾನಸಿಕವಾಗಿ ಕೊಡವಿಕೊಂಡು, ಮುಂದಿನ ಪ್ರಯಾಣದ ಬಗ್ಗೆ ಕನಸನ್ನೋ, ಯೋಜನೆಗಳನ್ನೋ, ನಿರೀಕ್ಷೆ-ನಿರ್ಣಯಗಳನ್ನೋ ಇರಿಸಿಕೊಳ್ಳುವುದಕ್ಕೊಂದು ನೆಪ ಅಷ್ಟೆ.

ಹೀಗೊಂದು ಹೊಸತು ಎಂಬ ಅಲ್ಪವಿರಾಮದ ಕ್ಷಣದಲ್ಲಿ ನಿಂತಾಗ, ಎಲ್ಲರಲ್ಲೂ ಸಂಭ್ರಮವೇ ಇರಬೇಕು ಎಂದೇನಿಲ್ಲ. ಯಶದ ಸಾತತ್ಯ ಇದ್ದವರಿಗೆ ಹೊಸವರ್ಷದಲ್ಲಿ ಮತ್ತಷ್ಟು ಮಿನುಗುವ ಹಪಾಹಪಿ. ಆದರೆ, ಬದುಕೆಂಬುದು ಇನ್ಸ್ತಾಗ್ರಾಂ ಫೊಟೊ ಮತ್ತು ರೀಲ್ಸ್ ಗಳಲ್ಲಿ ಕಾಣುವಂತೆ ಎಲ್ಲ ಕಾಲಕ್ಕೂ ಖುಷಿ ಖುಷಿ ಏನಲ್ಲ. ಹೊಸವರ್ಷದ ಹೊಸ್ತಿಲಲ್ಲಿ ನಿಂತ ನಮ್ಮಲ್ಲಿ ಹಲವರಿಗೆ ಆಯಾಸದ ಪ್ರಮಾಣವೇ ಹೆಚ್ಚಿದ್ದಿರಬಹುದು. ಬದಲಾಗುತ್ತಿರುವ ಗೋಡೆಯ ಮೇಲಿನ ಕ್ಯಾಲೆಂಡರ್ ನಮ್ಮ ಧನಹೀನತೆಗೋ, ವ್ಯಾಧಿಗೋ, ಅವಕಾಶರಹಿತತೆಗೋ ಒಂದಿಷ್ಟೂ ಬದಲಾವಣೆ ತರಲಾರದೆಂಬ ನಿರಾಶೆಯ ಸ್ಥಿತಿಯೂ ಇದ್ದಿರಬಹುದು. ಪ್ರಯತ್ನಿಸಿದರೆ ಬದುಕಲ್ಲಿ ಏನೂ ಆಗಿಬಿಡಬಹುದು ಎಂದು ನಂಬಿಸುವ ವ್ಯಕ್ತಿತ್ವ ವಿಕಸನದ ಪುಸ್ತಕಗಳು ಎಷ್ಟೇ ಬಿಕರಿಯಾದರೂ ಹೆಚ್ಚಿನ ವೇಳೆ ಅದು ಬರೆದವನ ಸ್ಥಿತಿಯನ್ನಷ್ಟೇ ಸುಧಾರಿಸುತ್ತದೆ.

ಹೀಗಾಗಿ ಪ್ರಯತ್ನ-ಸಿದ್ಧತೆಗಳ ಜತೆ ಕೆಲವೊಮ್ಮೆ ಕೇವಲ ಕಾಯುವಿಕೆಯೂ ಮುಖ್ಯವಾಗುತ್ತದೆ. “ಸಹಿದಲ್ಲದೇ ಮುಗಿಯದಾವ ದಶೆ ಬಂದೊಡೆಂ, ಸಹನೆ ವಜ್ರದ ಕವಚ - ಮಂಕುತಿಮ್ಮ” ಎಂಬ ಡಿವಿಜಿ ಮಾತಿನಂತೆ. ಆದರೆ, ಈ ಸಹನೆಯ ಕಾಲದಲ್ಲೂ ಇರಬೇಕಾದದ್ದು ಕೊನೆಗೊಮ್ಮೆ ಎಲ್ಲ ಗಾಯವೂ ಮಾಗುತ್ತದೆ, ಮಾಯವಾಗುತ್ತದೆ ಎಂಬ ವಿಶ್ವಾಸ. ಹಾಗೆ ಕಾಲ ಎಲ್ಲವನ್ನೂ ಗುಣಪಡಿಸುತ್ತದೆ ಎಂದು ವಿಶ್ವಾಸ ಕಟ್ಟಿಕೊಡುವ ಕೆಲವು ವಿದ್ಯಮಾನಗಳನ್ನು ಇಲ್ಲಿ ಪೋಣಿಸಿಡೋಣ.

ತೊಳೆಯಲಾಗದೆಂದುಕೊಂಡಿದ್ದ ಕೊಳೆ ಕರಗಿದಾಗ…

ಗಂಗಾ-ಬ್ರಹ್ಮಪುತ್ರ-ಮೇಘನ ಮತ್ತು ಕರ್ಣಪುಲ್ಲಿ-ಸಿಂಘು ಈ ಒಟ್ಟಾರೆ ನದಿ ವ್ಯವಸ್ಥೆ ಡಾಲ್ಫಿನ್ ಮೀನುಗಳಿಗೆ ಆವಾಸಸ್ಥಾನ. ಭಾರತ ಮತ್ತು ಬಾಂಗ್ಲಾದೇಶಗಳಲ್ಲಿ ಹರಡಿಕೊಂಡಿರುವ ಈ ನದಿ ವ್ಯವಸ್ಥೆಯಲ್ಲಿ ಕಾಣಸಿಗುವ ಡಾಲ್ಫಿನ್ ಗಳ ಜಾತಿ ವಿಶಿಷ್ಟದ್ದು. ಆದರೆ 1970ರ ಹೊತ್ತಿಗೆ ಈ ಗಂಗಾ ಡಾಲ್ಫಿನ್ನುಗಳನ್ನು ಅಳಿವಿನಂಚಿನಲ್ಲಿರುವ ಸಂಕುಲವೆಂಬುದಾಗಿ ಜಾಗತಿಕ ಮಟ್ಟದಲ್ಲಿ ನಿರ್ಧರಿಸಿಬಿಡಲಾಯಿತು. ವಿಶೇಷವಾಗಿ ಗಂಗಾ ನದಿಯ ಪಾತ್ರವು ಅಷ್ಟರಮಟ್ಟಿಗೆ ಮಲಿನವಾಗಿರುವುದರಿಂದ ಅಂಥ ವಾತಾವರಣದಲ್ಲಿ ಡಾಲ್ಫಿನ್ ಗಳ ವಂಶಾಭಿವೃದ್ಧಿಯೇ ಸಾಧ್ಯವಿಲ್ಲ ಎಂಬುದು ಅಲ್ಲಿರುವ ತರ್ಕವಾಗಿತ್ತು. 

ಪವಿತ್ರ ಗಂಗೆ ಎಂಬುದು ಕೇವಲ ಪುರಾಣ ಕತೆಗಳಲ್ಲಿ ಮಾತ್ರ. ಹಾಗೊಂದು ಸ್ಥಿತಿ ಕೇವಲ ಆರೆಂಟು ವರ್ಷಗಳ ಹಿಂದಿತ್ತು. ಇನ್ನು ಆ ನದಿಯನ್ನು ಸ್ವಚ್ಛಗೊಳಿಸುವುದಂತೂ ಸಾಧ್ಯವಿಲ್ಲದ ಮಾತು ಎಂಬ ಗ್ರಹಿಕೆ ಬಲವಾಗಿಬಿಟ್ಟಿತ್ತು. ಅಷ್ಟೆಲ್ಲ ಶ್ರದ್ಧೆ-ಆಸ್ತಿಗಳಿಗೆ ಆವಾಸವಾಗಿದ್ದ ನದಿಯೊಂದು ವಿಷಯುಕ್ತ ಗಲೀಜಾಗಿತ್ತು. ಗಂಗೆಯನ್ನು ಸ್ವಚ್ಛವಾಗಿಸುವುದಕ್ಕೆ ಯೋಜನೆಗಳೇ ಇರಲಿಲ್ಲ ಎಂದೇನಲ್ಲ. ಆದರೆ ಅವೆಲ್ಲ ಕಾಗದದ ಮೇಲಷ್ಟೇ ಮಿನುಗುವ ನಕ್ಷೆಗಳಾಗಿದ್ದವು. 

2015ರಲ್ಲಿ ಘೋಷಣೆಯಾಯ್ತು ನಮಾಮಿ ಗಂಗೆ ಯೋಜನೆ. ಇದರಲ್ಲಿ ಬಹಳ ಮುಖ್ಯವಾಗಿ ಬೇಕಿದ್ದದ್ದು ಖಡಕ್ ಅನುಷ್ಠಾನ. ಆ ಕೆಲಸವನ್ನು ಉತ್ತರ ಪ್ರದೇಶದ ಸರ್ಕಾರ ಮಾಡಿತು. ಗಂಗಾ ಪ್ರವಾಹದ ಉದ್ದಕ್ಕೂ ಇದ್ದ ಕೈಗಾರಿಕೆಗಳ ಪಾಲಿಗೆ ನದಿಯೆಂಬುದು ತಮ್ಮ ವಿಸರ್ಜನೆಗಳನ್ನು ಹೊರಬಿಡುವ ಮಾರ್ಗವಾಗಿಬಿಟ್ಟಿತ್ತು. ಅದು ಚರ್ಮೋದ್ಯಮವಿದ್ದಿರಬಹುದು, ಮಾಂಸ ಸಂಸ್ಕರಣೆ, ಇನ್ಯಾವುದೋ ಕಬ್ಬಿಣದ ವಸ್ತುಗಳ ತಯಾರಿಕೆ ಇಂಥ ಹತ್ತೆಂಟು ಘಟಕಗಳೆಲ್ಲ ತಮ್ಮ ತ್ಯಾಜ್ಯವನ್ನು ಗಂಗೆಗೆ ಬಿಟ್ಟು ಸಂಸ್ಕರಣೆಯ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದದ್ದು ಅಲ್ಲಿನ ಮುಖ್ಯ ಸಮಸ್ಯೆಯಾಗಿತ್ತು. ಉಳಿದಂತೆ ಸಾರ್ವಜನಿಕರು ಪ್ರಜ್ಞೆ ಮರೆತು ಮಾಡುವ ಮಾಲಿನ್ಯವೂ ಬೇರೆಲ್ಲ ಕಡೆಗಳಂತೆ ಗಂಗೆಯ ವಿಷಯದಲ್ಲೂ ಇತ್ತು. ಆದರೆ ಇವನ್ನೆಲ್ಲ ಆ ಮಹಾನದಿ ಅರಗಿಸಿಕೊಂಡುಬಿಡುತ್ತಿತ್ತೇನೋ. ಆದರೆ ಕೈಗಾರಿಕೆಗಳ ತ್ಯಾಜ್ಯದ ವಿಷವನ್ನಲ್ಲ.

ಇಂಥ ಮಾಲಿನ್ಯಕಾರಕ ಬಿಂದುಗಳನ್ನೇ ಮುಖ್ಯವಾಗಿ ಗುರುತಿಸಿದ ಉತ್ತರ ಪ್ರದೇಶದ ಯೋಗಿ ಸರ್ಕಾರ ಸುಮಾರು 23 ಬೇರೆ ಬೇರೆ ಯೋಜನೆಗಳನ್ನು ಅನುಷ್ಠಾನಗೊಳಿಸಿತು. ಅವೆಲ್ಲ ಗಂಗಾ ನದಿಗೆ ಸೇರುತ್ತಿದ್ದ ಕೈಗಾರಿಕೆಗಳ ತ್ಯಾಜ್ಯ ನೀರನ್ನು ತಡೆಯುವ ಹಾಗೂ ಕೆಲವೆಡೆಗಳಲ್ಲಿ ಅವನ್ನು ವೈಜ್ಞಾನಿಕವಾಗಿ ಸಂಸ್ಕರಿಸುವ ಕಾರ್ಯಕ್ರಮಗಳಾಗಿದ್ದವು. ಸ್ವಲ್ಪವೇ ಸಹಯೋಗ ಕೊಟ್ಟರೂ ನಿಸರ್ಗಕ್ಕೆ ಹೇಗೆ ಚಿಗಿತುಕೊಳ್ಳುವ ಸಾಮರ್ಥ್ಯ ಇದೆ ನೋಡಿ. ಬಹಳ ವಿರಳವಾಗಿ ಕಾಣಿಸಿಕೊಳ್ಳುತ್ತಿದ್ದ ಡಾಲ್ಫಿನ್ ಗಳು 2022ರ ವೇಳೆಗೆ ಉತ್ತರ ಪ್ರದೇಶದ ಗಂಗಾ ಪ್ರವಾಹದ ಹಲವು ಜಾಗಗಳಲ್ಲಿ ಭಾರಿ ಸಂಖ್ಯೆಯಲ್ಲಿ ಕಾಣಿಸಿಕೊಂಡು ನಲಿದಾಡತೊಡಗಿದವು! ಇವತ್ತಿಗೆ ಬ್ರಿಜ್ಘಾಟ್, ಕಾನ್ಪುರ, ನರೊರ, ಮಿರ್ಜಾಪುರ, ವಾರಾಣಸಿಗಳೆಲ್ಲ ಡಾಲ್ಫಿನ್ ಮೀನುಗಳ ಸಂತಾನೋತ್ಪತ್ತಿಯ ಪ್ರಮುಖ ಕೇಂದ್ರಗಳಾಗಿವೆ. ಎಂಟು ವರ್ಷದ ಹಿಂದೆ ಕಾಶೀಯಾತ್ರಿಕರಿಗೆ ಅದೆಂಥದೇ ಪವಿತ್ರ ಭಾವನೆ ಇದ್ದರೂ ಗಂಗೆಯ ನೀರನ್ನು ಆ ಸ್ಥಳದಲ್ಲಿ ತೀರ್ಥ ಎಂದು ಪರಿಗಣಿಸಿ ಬಾಯಿಗೆ ಹಾಕಿಕೊಳ್ಳುವುದಕ್ಕೆ ಹಿಂಜರಿಕೆಯಾಗುವ ಸ್ಥಿತಿ ಇತ್ತು. ಈಗದು ನಿಜ ತೀರ್ಥವಾಗಿದೆ. 

ಅಣು ವಿಕಿರಣಗಳು ಅರಣ್ಯಕ್ಕೆ ದಾರಿ ಬಿಟ್ಟಾಗ…

ಉಕ್ರೇನ್-ರಷ್ಯ, ಇಸ್ರೇಲ್-ಇರಾನ್ ಎಂದೆಲ್ಲ ಯುದ್ಧ ಕವಿದುಕೊಂಡೇ ಇರುವ ವರ್ತಮಾನದ ನಡುವೆ ಇರುವಾಗ ಆ ಭಯ ಹುಟ್ಟಿಸುವ ಪದಪುಂಜಗಳು ಆಗಾಗ ಮುಖ ತೋರಿಸುತ್ತಿರುತ್ತವೆ. “necular war” ಎಂಬ ಆ ಬೆದರಿಕೆ ಆಗೀಗ ಅನುರಣಿಸುತ್ತಲೇ ಇರುತ್ತದೆ. ಅಂಥ ಅಣ್ವಸ್ತ್ರ ವಿಸ್ಫೋಟ ಯಾವ ದೇಶಕ್ಕೂ ಯಾವ ಕಾಲಕ್ಕೂ ಬೇಡ ಎಂಬುದಕ್ಕೆ ಹಿರೊಶಿಮಾ-ನಾಗಾಸಾಕಿ ಪ್ರದೇಶಗಳು ಬಾಂಬ್ ಬಿದ್ದ ನಂತರದ ದಶಕಗಳಲ್ಲೂ ಅನುಭವಿಸಿದ ಯಾತನೆಯ ಕತೆಗಳು ಜೀವಂತ ಇವೆ. ಅದರಿಂದ ಪಾಠ ಕಲಿಯುತ್ತಲೇ, ನಿಸರ್ಗಕ್ಕೆ ಅಂಥ ಆಘಾತವನ್ನು ಸಹ ಮಾಯಿಸುವ ಶಕ್ತಿ ಇದೆ ಎಂಬ ಅಚ್ಚರಿಗೆ ಸಹ ನಾವು ಮುಖಾಮುಖಿ ಆಗಬೇಕು. ಇದರರ್ಥ, ಅಣ್ವಸ್ತ್ರ ಸ್ಫೋಟಿಸಿದರೆ ಪರವಾಗಿಲ್ಲ ಅಂತೇನೂ ಅಲ್ಲ, ಆದರೆ ಹಲವು ಪೀಳಿಗೆಗಳನ್ನು ಪ್ರಭಾವಿಸುವ ಅಂಥ ವಿಕಿರಣಗಳನ್ನೂ ಜೀರ್ಣಿಸಿಕೊಳ್ಳುವ ಶಕ್ತಿ ನಿಸರ್ಗಕ್ಕಿದೆಯೆಲ್ಲ ಎಂಬ ಅದ್ಭುತಕ್ಕೆ ಕಣ್ಣು ನೆಡುವುದಕ್ಕೆ, ಈಗ ಉಕ್ರೇನಿನಲ್ಲಿರುವ ಹಾಗೂ ಈ ಹಿಂದೆ ಸೊವಿಯತ್ ಒಕ್ಕೂಟದ ಭಾಗವಾಗಿದ್ದ ಚೆರ್ನೊಬಿಲ್ ಪ್ರದೇಶವನ್ನು ಗಮನಿಸಬೇಕು. 

dolphins live in ganga river- wild animals in chernobyl
ಬಾಂಗ್ಲಾದಲ್ಲಿ ಮತ್ತೆ ನರಮೇಧ: ಬುದ್ಧಿ ಕಲಿಸಲು ಭಾರತದ ಬಳಿ ಇರುವ ಬ್ರಹ್ಮಾಸ್ತ್ರ ಯಾವುದು? (ತೆರೆದ ಕಿಟಕಿ)

1986ರಲ್ಲಿ ಅಲ್ಲಿನ ಅಣು ಸ್ಥಾವರವೊಂದು ಅಗ್ನಿ ಅವಘಡಕ್ಕೆ ಸಿಕ್ಕು ಸ್ಫೋಟವಾಯಿತು. ವಿಕಿರಣಗಳು ವಾತಾವರಣವನ್ನು ಆಕ್ರಮಿಸಿದವು. ಆ ಸಣ್ಣ ಪಟ್ಟಣದಲ್ಲಿ ಕೆಲವು ಸಾವಿರಗಳ ಸಂಖ್ಯೆಯಲ್ಲಿ ಜನರಿದ್ದರಾದರೂ, ಹೊರಸೂಸಿದ್ದ ವಿಷಕಾರಿ ವಿಕಿರಣಕ್ಕೆ ಗಡಿ ಇಲ್ಲವಾದ್ದರಿಂದ ಸುಮಾರು 30 ಕಿಲೊಮೀಟರ್ ವ್ಯಾಪ್ತಿಯ ಪ್ರದೇಶವನ್ನು ಖಾಲಿಯಾಗಿಸಲಾಯಿತು. ಹೀಗಾಗಿ ಸುಮಾರು 1 ಲಕ್ಷದಷ್ಟು ಜನಸಂಖ್ಯೆ ತಮ್ಮ ಮನೆಗಳನ್ನು ತೊರೆಯಬೇಕಾಯಿತು. ಚೆರ್ನೊಬಿಲ್ ಇನ್ನೇನಿದ್ದರೂ ಪ್ರೇತಕಳೆಯ, ಜನವಸತಿಗೆ ಯೋಗ್ಯವಿರದ ಪಟ್ಟಣ ಎಂದೇ ಜಗತ್ತು ನಿರ್ಣಯಕ್ಕೆ ಬಂದಿತು. 

ಆದರೆ, ನಿಸರ್ಗ ಮಣಿಯಲಿಲ್ಲ. ಇವತ್ತಿಗೆ chernobyl ಎಂಬುದು ಕಾಡು ಮತ್ತು ವನ್ಯಜೀವಿಗಳ ಸಮೃದ್ಧಿಯಿಂದ ತುಳುಕಾಡುತ್ತಿದೆ. ಮನುಷ್ಯ ತನ್ನ ವಂಶವಾಹಿಯ ಮೇಲೆ ಆಗಬಹುದಾದ ದೀರ್ಘ ಪರಿಣಾಮಗಳನ್ನು ಗಣಿಸಿಕೊಂಡು ಮತ್ತೆ ಅಲ್ಲಿಗೆ ಹೋಗುವ ಇಚ್ಛೆ ಮಾಡಿಲ್ಲ. ಅದು ಎಷ್ಟರಮಟ್ಟಿಗೆ ಚೆರ್ನೊಬಿಲ್ ನ ಇತರ ಜೀವಜಂತುಗಳಿಗೆ ವರದಾನವಾಗಿದೆ ಎಂದರೆ, ಈಗ ಆ ಪ್ರದೇಶಕ್ಕ ಹೊಂದಿಕೊಂಡಿರುವ ಬೆಲಾರೂಸ್ ದೇಶದ ಕೃಷಿಕರು ಈ ಚೆರ್ನೊಬಿಲ್ ಅರಣ್ಯಮಯವಾಗಿರುವುದರಿಂದ ತಮ್ಮ ಜಮೀನಿಗೆ ವನ್ಯಜೀವಿಗಳ ದಾಳಿಯ ಆತಂಕ ಹೆಚ್ಚಾಗುತ್ತಿದೆ ಎಂದು ದೂರುವಷ್ಟರಮಟ್ಟಿಗೆ!

ತೋಳ, ಕಾಡೆಮ್ಮೆ, ಕಾಡು ಕುದುರೆ, ಜಿಂಕೆಗಳು, ಕಾಡು ಬೆಕ್ಕು, ಹಲವು ವಿಧದ ಪಕ್ಷಿಗಳು ಸೇರಿದಂತೆ ಚೆರ್ನೊಬಿಲ್ ನಲ್ಲಿ ಈಗ ಮಾಯಾಲೋಕವೇ ಸೃಷ್ಟಿಯಾಗಿದೆ. ಅಂತಾರಾಷ್ಟ್ರೀಯ ವೇದಿಕೆಗಳಿಂದ ಹಲವು ಅಧ್ಯಯನಕಾರರು ಅಲ್ಲಿನ ಪ್ರದೇಶವನ್ನು ಅಭ್ಯಸಿಸಿದ್ದಾರೆ. ಆ ಅಧ್ಯಯನಗಳು ಸಾರುವ ಪ್ರಕಾರ ಅಲ್ಲಿನ ಸಸ್ಯ ಸಂಕುಲವು ಮೊದಲಿಗೆ ವಿಕಿರಣದ ಪ್ರಭಾವವನ್ನು ಕುಗ್ಗಿಸುವುದಕ್ಕೆ ತನ್ನ ಕೊಡುಗೆ ನೀಡಿದೆ. ಬೇರೆಡೆಗಳಲ್ಲಿನ ಪ್ರಾಕೃತಿಕ ಆವಾಸಗಳಲ್ಲಿರುವ ಪ್ರಾಣಿಗಳಿಗಿಂತ ಇಲ್ಲಿನ ಜೀವಜಂತುಗಳ, ಅಷ್ಟೇ ಏಕೆ, ಮರಗಳ ಆಯಸ್ಸು ಸಹ ಕಡಿಮೆ ಎಂದೂ ಹೇಳಲಾಗುತ್ತಿದೆಯಾದರೂ ಅಲ್ಲಿ ನಳನಳಿಸುತ್ತಿರುವ ಬದುಕಿನಲ್ಲಂತೂ ಯಾವ ಆಯಾಸಗಳೂ ಕಾಣಿಸುತ್ತಿಲ್ಲ. ಇನ್ನು ಕೆಲವು ದಶಕಗಳಲ್ಲಿ ವಿಕಿರಣ ಪ್ರಭಾವವೂ ತನ್ನ ಸೋಲನ್ನು ಸಂಪೂರ್ಣ ಒಪ್ಪಿಕೊಳ್ಳಬಹುದೇನೋ. 

ಮೆತ್ತಗೆ ಮುಚ್ಚಿಕೊಂಡಿತು ಆ ಛಿದ್ರ!

 80-90ರ ದಶಕಗಳಲ್ಲಿ ಶಾಲಾಪಠ್ಯ ಓದಿಕೊಂಡುಬಂದವರಿಗೆಲ್ಲ ಪರಿಸರಕ್ಕೆ ಒದಗಿರುವ ವಿಪತ್ತುಗಳನ್ನು ಪಟ್ಟಿ ಮಾಡುವಾಗಲೆಲ್ಲ, ಭೂ ವಾತಾವರಣಕ್ಕೆ ಛತ್ರದಂತಿರುವ ಒಜೋನ್ ಪದರದಲ್ಲಿ ರಂಧ್ರವಾಗುತ್ತಿದೆ ಎಂಬೊಂದು ಅಂಶವನ್ನು ಮುಖ್ಯವಾಗಿ ಓದಿಸಲಾಗುತ್ತಿತ್ತು. ಹಾಗಂತ ಅದೇನೂ ‘ಪ್ರಳಯ ಬಂತು, ಪ್ರಳಯ’ದ ಥರ ಕೂಗುಮಾರಿ ಆಗಿರಲಿಲ್ಲ. ವೈಜ್ಞಾನಿಕ ಸಂಶೋಧನೆಗಳೇ ಈ ಬಗ್ಗೆ ಆತಂಕ ಹೊರಹಾಕಿದ್ದವು. ಮಾನವ ಉಂಟುಮಾಡುತ್ತಿರುವ ಮಾಲಿನ್ಯದ ಕಾರಣದಿಂದ ಒಜೋನ್ ಪದರ ಘಾಸಿಗೊಂಡಿದೆ ಹಾಗೂ ಇದು ಹೀಗೆಯೇ ಮುಂದುವರಿದರೆ ಭೂಮಿಯನ್ನು ಅಪಾಯಕಾರಿ ನೇರಳಾತೀತ ವಿಕಿರಣಗಳು ಪ್ರವೇಶಿಸಿ ಥರಹೇವಾರಿ ಕ್ಯಾನ್ಸರ್ ರೋಗಗಳಿಗೆ ಕಾರಣವಾಗಬಹುದು ಎಂಬ ಬಗ್ಗೆ ಸಾಕಷ್ಟು ಅಧ್ಯಯನ ವರದಿಗಳು ಇದ್ದವು. 

ಸುಮಾರು 198 ದೇಶಗಳು ಈ ನಿಟ್ಟಿನಲ್ಲಿ ಒಂದೇ ವೇದಿಕೆಗೆ ಬಂದು ಮಾಂಟ್ರಿಯಲ್ ನಲ್ಲಿ ಒಪ್ಪಂದವೊಂದನ್ನು ಮಾಡಿಕೊಂಡವು. ಆ ಪ್ರಕಾರ ಹೀಗೆ ಒಜೋನ್ ಅನ್ನು ಛಿದ್ರವಾಗಿಸುತ್ತಿರುವ ಮಾಲಿನ್ಯಕಾರಕ ಪದಾರ್ಥಗಳನ್ನು ಬಳಕೆಯಾಗದಂತೆ ತಡೆಯುವ ನಿರ್ಣಯವಾಯಿತು. ಆಗ ರೆಫ್ರಿಜರೇಟರುಗಳಲ್ಲಿ ಬಳಸುತ್ತಿದ್ದ ಕ್ಲೋರೋಫ್ಲೋರೊಫಾರ್ಮಂ ಎಂಬ ರಾಸಾಯನಿಕವು ಇದರಲ್ಲಿ ಮುಖ್ಯ ದೋಷಿ ಎಂಬುದನ್ನು ಗುರುತಿಸಿ, ಹಂತಹಂತಗಳಲ್ಲಿ ಅದರ ಉತ್ಪಾದನೆಯನ್ನು ನಿಲ್ಲಿಸಲಾಯಿತು. ಸಿ ಎಫ್ ಸಿ ಗೆ ಪರ್ಯಾಯಗಳನ್ನು ಕಂಡುಕೊಂಡು ಅವನ್ನೇ ರೆಫ್ರಿಜರೇಟರ್ ಸೇರಿದಂತೆ ಇತ್ಯಾದಿ ಪರಿಕರಗಳಲ್ಲಿ ಬಳಸಲಾಯಿತು. ಮೂರು ದಶಕ ಕಳೆಯುವಷ್ಟರಲ್ಲಿ ಒಜೋನ್ ಪದರ ಉತ್ತಮವಾಗಿ ಹೀಲ್ ಆಗಿತ್ತು. ಮಾಗುತ್ತಲೇ ಇರುವ ಒಜೋನ್ 2040ರ ವೇಳೆಗೆ ಸಂಪೂರ್ಣ ಸುಸ್ಥಿತಿಗೆ ಬರುವುದಾಗಿ ವಿಜ್ಞಾನಿಗಳು ಹೇಳಿದ್ದಾರಾದರೂ, ಒಜೋನ್ ಪದರದ ಛಿದ್ರತೆ ಒಡ್ಡಿದ್ದ ಅಪಾಯದಿಂದ ಭೂಮಿ ಅದಾಗಲೇ ಪಾರಾಗಿದೆ. 

dolphins live in ganga river- wild animals in chernobyl
2025ರ ಹೊಸ್ತಿಲಲ್ಲಿ ಭಾರತದ 'ನೆರೆಮನೆ' ಗತಿ ಹೇಗೆಲ್ಲ ಕೆಟ್ಟುನಿಂತಿದೆ ನೋಡಿ… (ತೆರೆದ ಕಿಟಕಿ)

ಬದಲಾವಣೆಯ ಉತ್ಕಟ ಬಯಕೆ, ಆ ನಿಟ್ಟಿನಲ್ಲಿ ಪ್ರಯತ್ನಗಳ ಜತೆಗೆ ವಿಶ್ವಾಸಮಯ ಸಹನೆಯೊಂದಿದ್ದರೆ ಕಾಲವೆಂಬುದು ಎಂಥೆಂಥ ಪರಿಸ್ಥಿತಿಗಳನ್ನೇ ಮಾಗಿಸಿಬಿಡುತ್ತದೆ, ಮಾಯಿಸುತ್ತದೆ. ಈ ಉಮೇದು ಇಟ್ಟುಕೊಂಡು ಆಂಗ್ಲ ಕ್ಯಾಲೆಂಡರಿನ ಹೊಸವರ್ಷವನ್ನು ಸ್ವಾಗತಿಸೋಣ.

- ಚೈತನ್ಯ ಹೆಗಡೆ

cchegde@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com