ಚರ್ಮದ ಮೇಲಿನ ಕುರುಗಳು (ಕುಶಲವೇ ಕ್ಷೇಮವೇ)

ಕುರುಗಳು ಕುತ್ತಿಗೆ, ಮುಖ, ಕೈ, ಕಾಲು, ಪೃಷ್ಠ, ತೋಳಿನ ಸಂದುಗಳು ಮತ್ತು ತೊಡೆಗಳಂತಹ ಘರ್ಷಣೆ ಉಂಟಾಗುವ ದೇಹದ ಭಾಗಗಳಲ್ಲಿ ಕಂಡುಬರುತ್ತವೆ.
Boils
ಚರ್ಮದ ಮೇಲಿನ ಕುರುonline desk
Updated on

ಈಗಷ್ಟೇ ಬೇಸಗೆ ಕಾಲ ಆರಂಭವಾಗಿದೆ. ಬಿಸಿಲು ದಿನೇ ದಿನೇ ಹೆಚ್ಚಿದಂತೆ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಸಮಯದಲ್ಲಿ ಚರ್ಮದ ಸಮಸ್ಯೆಗಳೂಈ ಸಾಮಾನ್ಯ. ಆದ್ದರಿಂದ ಎಲ್ಲರೂ ಇದರ ಬಗ್ಗೆ ಎಚ್ಚರದಿಂದಿರಬೇಕು.

ಕೆಲವೊಮ್ಮೆ ಮೈ ಚರ್ಮ ಇದ್ದಕ್ಕಿದ್ದಂತೆ ಊದಿಕೊಂಡು ಗುಳ್ಳೆಯಾಗಿ ನೋವು ಮತ್ತು ಉರಿಯುವ ಅನುಭವವಾಗುತ್ತದೆ. ಈ ಗುಳ್ಳೆ ಮುಟ್ಟಿದಾಗ ಮೆತ್ತಗಿದ್ದು ಕೀವಿನಿಂದ ತುಂಬಿರುವ ಉಬ್ಬಿರುವ ಭಾಗವಾಗಿರುತ್ತದೆ. ಇದನ್ನು ಕುರು ಎನ್ನುತ್ತಾರೆ. ಕುರು ರೋಮ ಕೋಶದ ಬ್ಯಾಕ್ಟೀರಿಯಾದ ಸೋಂಕಿನಿಂದ ಉಂಟಾಗುತ್ತದೆ. ಕುರುಗಳು ಕುತ್ತಿಗೆ, ಮುಖ, ಕೈ, ಕಾಲು, ಪೃಷ್ಠ, ತೋಳಿನ ಸಂದುಗಳು ಮತ್ತು ತೊಡೆಗಳಂತಹ ಘರ್ಷಣೆ ಉಂಟಾಗುವ ದೇಹದ ಭಾಗಗಳಲ್ಲಿ ಕಂಡುಬರುತ್ತವೆ.

ದೇಹದ ನೈರ್ಮಲ್ಯವನ್ನು ಸರಿಯಾಗಿ ಕಾಪಾಡಿಕೊಳ್ಳದೇ ಇರುವವರಲ್ಲಿ, ದುರ್ಬಲ ರೋಗನಿರೋಧಕ ಶಕ್ತಿ ಕಡಿಮೆ ಇರುವ ಜನರು, ಡಯಾಬಿಟೀಸ್ ಮತ್ತಿತರ ಸಮಸ್ಯೆ ಇರುವವರು, ಹಾರ್ಮೋನುಗಳ ಬದಲಾವಣೆಗಳಿಂದಾಗಿ ಹದಿಹರೆಯದವರು ಮತ್ತು ಯುವಜನರು, ಅತಿಯಾಗಿ ಬೆವರುವವರು ಅಥವಾ ಬಿಗಿಯಾದ ಬಟ್ಟೆಗಳನ್ನು ಧರಿಸುವ ಜನರು ಮತ್ತು ಹೆಚ್ಚಾಗಿ ಬೊಜ್ಜಿರುವ ಜನರಲ್ಲಿ ಕುರುಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಮಕ್ಕಳು, ವಯಸ್ಕ ಪುರುಷರು, ಮಹಿಳೆಯರು ಮತ್ತು ವೃದ್ಧರೆನ್ನದೇ ಯಾರನ್ನು ಬೇಕಾದರೂ ಈ ಸಮಸ್ಯೆ ಕಾಡಬಹುದು.

ಚರ್ಮದ ಮೇಲಿನ ಕುರುಗಳು ಉಂಟಾಗಲು ಕಾರಣಗಳು

  • ಕುರುಗಳು ಉಂಟಾಗಲು ಮೂಲ ಕಾರಣ ನೈರ್ಮಲ್ಯದ ಕೊರತೆ. ಚರ್ಮವನ್ನು ಸ್ವಚ್ಛವಾಗಿ ಇಟ್ಟುಕೊಳ್ಳದಿದ್ದಾಗ ಬ್ಯಾಕ್ಟೀರಿಯಾಗಳಂತಹ ಸೂಕ್ಷ್ಮಾಣುಜೀವಿಗಳ ಸೋಂಕು ಉಂಟಾಗುವುದು ಸಹಜ. ಒಮ್ಮೆ ಈ ಸೂಕ್ಷ್ಮಾಣುಜೀವಿಗಳು ದೇಹ ಸೇರಿತೆಂದರೆ ಒಂದಲ್ಲ ಒಂದು ತೊಂದರೆ ಇದ್ದದ್ದೇ.

  • ಕೆಲವೊಮ್ಮೆ ದೇಹದಲ್ಲಿ ರೋಗನಿರೋಧಕ ಶಕ್ತಿ ದುರ್ಬಲವಾದರೆ ಸೂಕ್ಷ್ಮಾಣುಜೀವಿಗಳ ಸೋಂಕು ತಗುಲಿ ಕುರುಗಳು ಬರಬಹುದು. ಜೊತೆಗೆ ಬೆವರು ಕೂದಲಿನ ಕಿರುಚೀಲಗಳನ್ನು ಮುಚ್ಚಿ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗುವ ವಾತಾವರಣವನ್ನು ಸೃಷ್ಟಿಸುತ್ತದೆ.

  • ಸದಾ ಕಾಲ ಮೈಗಪ್ಪುವ ಬಿಗಿಯಾದ ಬಟ್ಟೆ ಮತ್ತು ನಿರಂತರ ಘರ್ಷಣೆ ಚರ್ಮವನ್ನು ಕೆರಳಿಸಿ ಕುರುವಿಗೆ ಕಾರಣವಾಗಬಹುದು.

  • ಮೊಡವೆ ಅಥವಾ ಎಕ್ಜಿಮಾದಂತಹ ತೊಂದರೆಗಳು ಮೊದಲಿನಿಂದಲೇ ಇದ್ದಲ್ಲಿ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತವೆ.

  • ಕೆಲವೊಮ್ಮೆ ಅಗತ್ಯ ಪೌಷ್ಟಿಕಾಂಶದ ಕೊರತೆಗಳು ಅದರಲ್ಲಿಯೂ ಮುಖ್ಯವಾಗಿ ಜೀವಸತ್ವಗಳು ಮತ್ತು ಖನಿಜಗಳ ಕೊರತೆಯು ಚರ್ಮವನ್ನು ದುರ್ಬಲಗೊಳಿಸುತ್ತದೆ. ಆಗ ಇಂತಹ ಸಮಸ್ಯೆಗಳು ಸಂಭವಿಸಬಹುದು.

ಪರಿಹಾರೋಪಾಯಗಳು

  • ಹೆಚ್ಚಿನ ಕುರುಗಳು ಯಾವುದೇ ಚಿಕಿತ್ಸೆ ಇಲ್ಲದೇ ಕೆಲವು ದಿನಗಳಲ್ಲಿ ತಾವಾಗಿಯೇ ಗುಣವಾಗುತ್ತವೆ. ಕುರುಗಳ ಕಿರಿಕಿರಿಯನ್ನು ತಾಳಲಾರದೇ ಅವುಗಳನ್ನು ಪದೇ ಪದೇ ಮುಟ್ಟುವುದು ಅಥವಾ ಬಲಪ್ರಯೋಗ ಮಾಡಿ ಒಡೆಯುವುದು ಸಲ್ಲದು.

  • ಕುರುಗಳ ಮೇಲೆ ಬೆಚ್ಚಗಿನ ನೀರಿನಿಂದ ತುಂಬಿದ ಚೀಲವನ್ನು ಪ್ರತಿ ದಿನ 10-15 ದಿನಗಳ ಕಾಲ ಸ್ವಲ್ಪ ಹುತ್ತು ಇಡುವುದರಿಂದ ನೋವಿನ ಜೊತೆಗೆ ಸಮಸ್ಯೆಯೂ ಮಾಯವಾಗುತ್ತದೆ. ಬಾಧಿತ ಭಾಗವನ್ನು ನಿಯಮಿತವಾಗಿ ಸ್ವಚ್ಛವಾಗಿ ಮತ್ತು ಶುಷ್ಕವಾಗಿ ಇಡುವುದು ಸೋಂಕನ್ನು ತಡೆಯುತ್ತದೆ.

  • ಔಷಧಿ ಅಂಗಡಿಗಳಲ್ಲಿ ಸಿಗುವ ಬ್ಯಾಕ್ಟೀರಿಯಾ ವಿರೋಧಿ ಸೌಮ್ಯ ಮುಲಾಮುಗಳನ್ನು ಹಚ್ಚುವುದು ಒಳ್ಳೆಯದು. ಇದರಿಂದ ಕಿರಿಕಿರಿ ಮತ್ತು ನೋವು ಕ್ರಮೇಣ ಕಡಿಮೆಯಾಗುತ್ತದೆ. ಜೊತೆಗೆ ಬ್ಯಾಕ್ಟೀರಿಯಾದ ಬೆಳವಣಿಗೆ ನಿಲ್ಲುತ್ತದೆ. ನೋವು ಹೆಚ್ಚಾಗಿದ್ದರೆ ವೈದ್ಯರ ಸಲಹೆ ಮೇರೆಗೆ ಸಾಮಾನ್ಯ ನೋವುನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳಬಹುದು.

  • ಕುರುವಿನ ಸಮಸ್ಯೆಯು ಗಂಭೀರವಾಗಿದ್ದರೆ ಅಥವಾ ಅತಿ ಹೆಚ್ಚು ನೋವಿನಿಂದ ಕೂಡಿದ್ದರೆ ವೈದ್ಯರಿಗೆ ತೋರಿಸಿದರೆ ಅವರು ಅದರಲ್ಲಿ ಛೇದನ ಮಾಡಿ ಕೀವನ್ನು ತೆಗೆದುಹಾಕುತ್ತಾರೆ. ಈ ಸಮಸ್ಯೆ ಮರುಕಳಿಸದಂತೆ ಆಂಟಿಬಯಾಟಿಕ್ ಔಷಧಿಗಳನ್ನು ತೆಗೆದುಕೊಳ್ಳಲು ಸಲಹೆ ನೀಡಬಹುದು.

Boils
ಡೂಮ್ ಸ್ಕ್ರೋಲಿಂಗ್ ಸಿಂಡ್ರೋಮ್ (ಕುಶಲವೇ ಕ್ಷೇಮವೇ)

ಚರ್ಮದ ಮೇಲಿನ ಕುರುಗಳು ಮೂಡುವ ಸಮಸ್ಯೆಗೆ ಆಯುರ್ವೇದದ ಪರಿಹಾರಗಳು

ಕುರುಗಳನ್ನು ಪರಿಣಾಮಕಾರಿಯಾಗಿ ನಿವಾರಿಸಲು ಮತ್ತು ತಡೆಗಟ್ಟಲು ಆಯುರ್ವೇದವು ಅನೇಕ ಪರಿಹಾರಗಳನ್ನು ನೀಡುತ್ತದೆ. ಅವುಗಳೆಂದರೆ:

  • ಬಾಧಿತ ಭಾಗದ ಮೇಲೆ ಅರಿಶಿನ ಮತ್ತು ನೀರಿನ ಪೇಸ್ಟ್ ಅನ್ನು ಹಚ್ಚುವುದರಿಂದ ಉರಿ ಮತ್ತು ಊತ ಎರಡೂ ಕಡಿಮೆಯಾಗುತ್ತವೆ. ಅರಿಶಿನ ಅತ್ಯುತ್ತಮ ಸೂಕ್ಷ್ಮಾಣುಜೀವಿ ವಿರೋಧಿ ಗುಣವನ್ನು ಹೊಂದಿದೆ.

  • ಬೇವಿನ ಎಲೆಗಳನ್ನು ಪುಡಿ ಮಾಡಿ ಅದರ ಪೇಸ್ಟನ್ನು ಕುರುಗಳ ಮೇಲೆ ಹಚ್ಚುವುದೂ ಅತ್ಯಂತ ಪರಿಣಾಮಕಾರಿ.

  • ತಾಜಾ ಅಲೋವೆರಾ ರಸವನ್ನು ಕುರುಗಳ ಮೇಲೆ ಹಚ್ಚಿಕೊಂಡರೆ ನೋವು ಮಾಯವಾಗುತ್ತದೆ ಮತ್ತು ಕ್ರಮೇಣ ಸಮಸ್ಯೆಯೂ ಗುಣವಾಗುತ್ತದೆ.

  • ಬೆಳ್ಳುಳ್ಳಿ ಅಥವಾ ಈರುಳ್ಳಿ ರಸವನ್ನು ಕುರುವಿನ ಮೇಲೆ ಹಚ್ಚುವುದರಿಂದ ಕೀವು ಹೊರಬರುತ್ತದೆ ಮತ್ತು ಊತ ಕಡಿಮೆಯಾಗುತ್ತದೆ.

  • ಸೂಕ್ಷ್ಮಾಣುಜೀವಿ ವಿರೋಧಿ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ಎಣ್ಣೆಯನ್ನು ಸಮಸ್ಯೆ ಇರುವ ಬ್ಯಾಕ್ಟೀರಿಯಾದ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.

  • ಮೆಂತ್ಯ ಬೀಜಗಳನ್ನು ನೆನೆಸಿ ಪೇಸ್ಟ್ ಮಾಡಿ ತೊಂದರೆ ಇರುವ ಭಾಗಕ್ಕೆ ಹಚ್ಚುವುದೂ ಒಳ್ಳೆಯದು.

  • ಅರಿಶಿನದೊಂದಿಗೆ ಬೆರೆಸಿದ ಒಂದು ಚಮಚ ತುಪ್ಪವನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಮತ್ತು ಸೋಂಕುಗಳನ್ನು ತಡೆಯಬಹುದು.

  • ಒಂದು ಚಮಚ ತುಪ್ಪದಲ್ಲಿ ಕಾಲು ಚಮಚ ಅರಿಶಿನ ಹಾಕಿ ಹರಳೆಣ್ಣೆ ಹಾಕಿ ಸ್ವಲ್ಪ ಬೆಚ್ಚಗೆ ಕುದಿಸಿ ಕೆಲವು ದಿನಗಳ ಕಾಲ ನಿಯಮಿತವಾಗಿ ಕುರುವಿನ ಮೇಲೆ ಹಚ್ಚಿಕೊಳ್ಳುವುದರಿಂದ ಸಮಸ್ಯೆ ಗುಣವಾಗುತ್ತದೆ.

ಚರ್ಮದ ಮೇಲಿನ ಕುರುಗಳ ಸಮಸ್ಯೆ ತಡೆಗಟ್ಟುವ ಕ್ರಮಗಳು

  • ದೇಹದಲ್ಲಿ ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ: ನಿಯಮಿತವಾಗಿ ಸ್ನಾನ ಮಾಡಿ. ಚರ್ಮವನ್ನು ಸದಾ ಕಾಲ ಶುಚಿಯಾಗಿಟ್ಟುಕೊಳ್ಳಬೇಕು. ಸೌಮ್ಯ ಸಾಬೂನುಗಳನ್ನು ಬಳಸಬೇಕು. ಒಳ್ಳೆಯ ಪೌಡರನ್ನು ಹಚ್ಚಿಕೊಳ್ಳಬೇಕು. ನಿಮ್ಮ ವೈಯಕ್ತಿಕ ವಸ್ತುಗಳನ್ನು ಅಂದರೆ ಟವೆಲ್ಲುಗಳು, ರೇಜರ್ ಅಥವಾ ಬಟ್ಟೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

  • ಸಡಿಲವಾದ ಬಟ್ಟೆಗಳನ್ನು ಧರಿಸಿ: ಘರ್ಷಣೆ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ಬಿಗಿಯಾದ ಬಟ್ಟೆಗಳನ್ನು ತಪ್ಪಿಸಿ.

  • ಆರೋಗ್ಯಕರ ಆಹಾರವನ್ನು ಸೇವಿಸಿ: ವಿಟಮಿನ್ ಎ, ಸಿ, ಇ ಮತ್ತು ಸತುವು ಸಮೃದ್ಧವಾಗಿರುವ ತಾಜಾ ತರಕಾರಿಗಳು, ಹಣ್ಣುಗಳು ಮತ್ತು ಸೊಪ್ಪುಗಳನ್ನು ಆಹಾರದಲ್ಲಿ ದಿನನಿತ್ಯ ಸೇರಿಸಿಕೊಂಡು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.ಯಾವುದೇ ರೀತಿಯ ಸೂಕ್ಷ್ಮಾಣುಜೀವಿಗಳ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಮೊಡವೆ, ಎಕ್ಜಿಮಾ ಮತ್ತಿತರ ಸಮಸ್ಯೆಗಳಿಗೆ ಚಿಕಿತ್ಸೆ ಪಡೆದುಕೊಳ್ಳಿ.

  • ನಿಯಮಿತವಾಗಿ ವ್ಯಾಯಾಮ ಮತ್ತು ಬಿರುಸು ನಡಿಗೆ ಅಭ್ಯಾಸ ಮಾಡಿ: ನಿಯಮಿತ ವ್ಯಾಯಾಮ ಮತ್ತು ಬಿರುಸು ನಡಿಗೆ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

  • ಹೀಗೆ ಚರ್ಮದ ಸಮಸ್ಯೆ ಇರುವವರು ದಿನಕ್ಕೆರಡು ಬಾರಿ (ಬೆಳಗ್ಗೆ ಮತ್ತು ರಾತ್ರಿ) ಸ್ನಾನ ಮಾಡಿ.

ಸಾರಾಂಶ

ಒಟ್ಟಾರೆಯಾಗಿ ಹೇಳುವುದಾದರೆ ಚರ್ಮದ ಮೇಲೆ ಕುರುಗಳು ಕಾಣಿಸಿಕೊಳ್ಳುವುದು ಒಂದು ಸಾಮಾನ್ಯ ಸಮಸ್ಯೆ. ಇದರಿಂದ ನೋವು, ಕಿರಿಕಿರಿ ಮತ್ತು ಉರಿ ಉಂಟಾಗಬಹುದು. ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು, ಆರೋಗ್ಯಕರ ಆಹಾರವನ್ನು ಸೇವಿಸುವುದು ಮತ್ತು ಮನೆಮದ್ದುಗಳು ಅಥವಾ ಆಯುರ್ವೇದ ಪರಿಹಾರಗಳನ್ನು ಮಾಡಿಕೊಳ್ಳುವುದರ ಮೂಲಕ ಈ ಸಮಸ್ಯೆ ನಿವಾರಣೆ ಸಾಧ್ಯ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com