ಗ್ಲೋಬಲೈಸಷನ್ ಎನ್ನುವ ಆಟಕ್ಕೆ ಟ್ರಂಪ್ ತೆರೆ ಎಳೆಯಲಿದ್ದಾರೆಯೇ? (ಹಣಕ್ಲಾಸು)

ಯೂರೋಪಿಯನ್ ಒಕ್ಕೂಟದಲ್ಲಿ ಇಷ್ಟು ದೊಡ್ಡ ಮಟ್ಟದ ಆರ್ಥಿಕ ಚೇತರಿಕೆ. ಗ್ರೋಥ್ ರೇಟ್ ಬೇರೆಲ್ಲೂ ಇಲ್ಲ. ಹಾಗೆ ನೋಡಲು ಹೋದರೆ ಸ್ಪೇನ್ ದೇಶದಲ್ಲಿ ಹೇಳಿಕೊಳ್ಳುವಂತಹ ಯಾವ ಇಂಡಸ್ಟ್ರಿಗಳು ಇಲ್ಲ. ಇಲ್ಲೇನಿದ್ದರೂ ಟೂರಿಸಂ ಮತ್ತು ಕೃಷಿ ಆಧಾರಿತ ಉದ್ಯಮಗಳದ್ದೇ ಕಾರುಬಾರು (ಹಣಕ್ಲಾಸು-455)
Donald Trump
ಡೊನಾಲ್ಡ್ ಟ್ರಂಪ್online desk
Updated on

ಯೂರೋಪಿಯನ್ ಒಕ್ಕೂಟದಲ್ಲಿ 27 ದೇಶಗಳಿವೆ. ಅವುಗಳನ್ನು ನಾವು ಒಂದು ರೈಲು ಮತ್ತು ಬೋಗಿ ಎಂದುಕೊಂಡರೆ. ಜರ್ಮನಿ ನಿಸ್ಸಂದೇಹವಾಗಿ ಅದರ ಎಂಜಿನ್ ಎಂದು ಹೇಳಬಹುದು. ಆದರೆ 2023 /24 ರಲ್ಲಿ ಜರ್ಮನಿಯ ಆರ್ಥಿಕತೆ ಬಹಳ ಕುಸಿದಿದೆ. ಇದರ ಜಿಡಿಪಿ ಗ್ರೋಥ್ ರೇಟ್ -0.2 ಎನ್ನುವುದು ಯುರೋ ಜೋನ್ ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಹೇಳುತ್ತಿದೆ. ಫ್ರಾನ್ಸ್ , ಇಟಲಿ ಗಳ ಆರ್ಥಿಕತೆ ಕೂಡ ಹೇಳಿಕೊಳ್ಳುವಂತಹ ಮಟ್ಟದಲ್ಲಿ ಇಲ್ಲ. 2024 ರ ಆಶ್ಚರ್ಯದ ವಿಷಯವೆಂದರೆ ಸ್ಪೇನ್ ದೇಶ 3. 2 ಪ್ರತಿಶತ ಬೆಳವಣಿಗೆಯನ್ನು ಕಂಡಿದೆ.

ಯೂರೋಪಿಯನ್ ಒಕ್ಕೂಟದಲ್ಲಿ ಇಷ್ಟು ದೊಡ್ಡ ಮಟ್ಟದ ಆರ್ಥಿಕ ಚೇತರಿಕೆ. ಗ್ರೋಥ್ ರೇಟ್ ಬೇರೆಲ್ಲೂ ಇಲ್ಲ. ಹಾಗೆ ನೋಡಲು ಹೋದರೆ ಸ್ಪೇನ್ ದೇಶದಲ್ಲಿ ಹೇಳಿಕೊಳ್ಳುವಂತಹ ಯಾವ ಇಂಡಸ್ಟ್ರಿಗಳು ಇಲ್ಲ. ಇಲ್ಲೇನಿದ್ದರೂ ಟೂರಿಸಂ ಮತ್ತು ಕೃಷಿ ಆಧಾರಿತ ಉದ್ಯಮಗಳದ್ದೇ ಕಾರುಬಾರು. ಹೀಗಿದ್ದೂ ಸ್ಪೇನ್ ಈ ಮಟ್ಟದ ಆರ್ಥಿಕ ಚೇತರಿಕೆ ಕಂಡದ್ದು ಹೇಗೆ ಎನ್ನುವುದು ಎಲ್ಲಾರಿಗೂ ಆಶ್ಚರ್ಯ ತರಿಸುವ ವಿಷಯವಾಗಿದೆ.

ಯೂರೋಪಿನ ಇತರ ದೇಶಗಳು ಸ್ಪೇನ್ ಕಡೆಗೆ ಆಶಾಭಾವದಿಂದ ನೋಡುವ ಮಟ್ಟಕ್ಕೆ ಸ್ಪೇನ್ ಚೇತರಿಸಿಕೊಂಡಿದೆ. ಕೋವಿಡ್ ನಂತರದ 3 ರಿಂದ 4 ವರ್ಷದಲ್ಲಿ ಸ್ಪೇನ್ ಈ ಮಟ್ಟಿಗೆ ಆರ್ಥಿಕ ಸಬಲತೆ ಹೊಂದಲು ಪ್ರಮುಖ ಕಾರಣಗಳೇನಿರಬಹುದು ಎನ್ನುವುದನ್ನು ನೋಡಲು ಶುರು ಮಾಡಿದರೆ ಅಲ್ಲಿ ಸಿಗುವ ಅಂಶಗಳು ಇಂತಿವೆ.

ರಷ್ಯಾ ಮತ್ತು ಉಕ್ರೈನ್ ಯುದ್ಧ: ಜಗತ್ತಿನ ಒಂದು ಭಾಗ ಸುಖವಾಗಿ ಬದುಕ ಬೇಕು ಎಂದರೆ ಇನ್ನೊಂದು ಭಾಗ ಕಷ್ಟ ಅನುಭವಿಸಬೇಕು ಎನ್ನುವುದು ಸತ್ಯವಾದ ಮಾತು. ಉಕ್ರೈನ್ ದೇಶದಿಂದ ಸರಿಸುಮಾರು ಐದು ಲಕ್ಷಕ್ಕೂ ಹೆಚ್ಚು ಜನ ಸಿರಿವಂತರು ಯೂರೋಪಿನ ಬೇರೆ ದೇಶಗಳಿಗೆ ವಲಸೆ ಹೋಗಿದ್ದಾರೆ. ಇದ್ದುದರಲ್ಲಿ ಯೂರೋಪಿನಲ್ಲಿ ಕಡಿಮೆ ಖರ್ಚಿನ ದೇಶ ಮತ್ತು ಉತ್ತಮ ಜೀವನ ಮಟ್ಟವನ್ನು ಹೊಂದಿರುವ ದೇಶ ಎನ್ನುವ ಕಾರಣಕ್ಕೆ ಬಹಳಷ್ಟು ಜನ ಇಲ್ಲಿ ಮನೆಯನ್ನು ಕೊಂಡು, ಹಣವನ್ನು ಹೂಡಿಕೆ ಮಾಡಿ ಸಣ್ಣಪುಟ್ಟ ಉದ್ಯಮಗಳನ್ನು ಕೂಡ ತೆರೆದಿದ್ದಾರೆ. ಈ ಕಾರಣದಿಂದ ಸ್ಪೇನ್ ಆರ್ಥಿಕತೆ ಸ್ವಲ್ಪ ಮಟ್ಟದ ಚೇತರಿಕೆಗೆ ಕಂಡಿದೆ. ಒಂದು ಪ್ಲಸ್ ಇದ್ದ ಮೇಲೆ ಪಕ್ಕದಲ್ಲಿ ಒಂದು ಮೈನಸ್ ಇರಲೇಬೇಕು. ಸ್ಥಳೀಯರು ಮನೆಗಳ ಬೆಲೆ ಗಗನಕ್ಕೆ ಏರಿರುತ್ತಿದೆ. ಇಲ್ಲಿನ ಯುವ ಜನತೆ ಮನೆಯನ್ನು ಕೊಳ್ಳಲಾಗುತ್ತಿಲ್ಲ ಎನ್ನುವ ಅಸಹಾಯಕತೆಯನ್ನು ಹೊರಹಾಕುತ್ತಿದ್ದರೆ.

ಹೆಚ್ಚಿದ ಟೂರಿಸಂ: ನಿಮಗೆ ಗೊತ್ತೇ, ಜಗತ್ತಿನಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವುದು ಪ್ಯಾರಿಸ್ , ಫ್ರಾನ್ಸ್ ದೇಶ. 2024 ರಲ್ಲಿ ಇಲ್ಲಿಗೆ ಭೇಟಿ ಇತ್ತ ಪ್ರವಾಸಿಗರ ಸಂಖ್ಯೆ 100 ಮಿಲಿಯನ್ ಎನ್ನುತ್ತದೆ ಅಂಕಿಅಂಶ. ಸ್ಪೇನ್ ದೇಶ 94 ಮಿಲಿಯನ್ ಜನರನ್ನು ತನ್ನತ್ತ ಸೆಳೆದುಕೊಂಡು ಎರಡನೇ ಸ್ಥಾನದಲ್ಲಿದೆ. ಈ ವರ್ಷ ಅಂದರೆ 2025 ರಲ್ಲಿ ಪ್ರಥಮ ಬಾರಿಗೆ ಫ್ರಾನ್ಸ್ ದೇಶವನ್ನು ಸಹ ಹಿಂದಿಕ್ಕುವ ಸಾಧ್ಯತೆಗಳಿವೆ ಎನ್ನಾಗಲಿದೆ.

ಕೃಷಿ ಉತ್ಪನ್ನಗಳಿಗೆ ಸ್ಪೇನ್ ಎಂದಿಗೂ ಪ್ರಸಿದ್ಧ: ಸ್ಪೇನ್ ದೇಶದ ವೈನ್, ಹಂದಿಮಾಂಸ ಮತ್ತು ಆಲಿವ್ ಆಯಿಲ್ ವಿಶ್ವ ಪ್ರಸಿದ್ಧ , ಇದರ ಜೊತೆಗೆ ಸಫ್ರಾನ್ ಕೂಡ ಬಹಳ ಪ್ರಸಿದ್ಧವಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಸ್ಪೇನ್ ಕಡಿಮೆ ಬೆಲೆಯಲ್ಲಿ ಉತ್ತಮ ಪದಾರ್ಥಗಳನ್ನು ನೀಡುತ್ತಾ ಬಂದಿದೆ. ಈ ಕಾರಣದಿಂದ ಸ್ಪೇನ್ ದೇಶದ ರಫ್ತು ಈ ವರ್ಷ ಉತ್ತಮವಾಗಿದೆ.

2024 ರಲ್ಲಿ ಉತ್ತಮ ಆರ್ಥಿಕತೆ ದಾಖಲಿಸಿದ ಮತ್ತು 2025 ರಲ್ಲಿ ಕೂಡ ಅದನ್ನು ಪುನರಾವರ್ತಿಸುವ ಸ್ಪೇನ್ ದೇಶದ ಮತ್ತು ಯೂರೋಪಿನ ಇತರ ದೇಶಗಳ ಮೇಲೆ ಬರಸಿಡಿಲು ಎರಗಿದೆ. ಹೌದು ಟ್ರಂಪ್ ತೆರಿಗೆ ನೀತಿಗಳು ಯೂರೋಪಿಯನ್ ಒಕ್ಕೊಟವನ್ನು ಕೆಂಗೆಡೆಸಿವೆ. ಒಕ್ಕೊಟದ ಎಲ್ಲಾ ದೇಶಗಳೂ ಈ ವಿಷಯದಲ್ಲಿ ಒಂದಾಗಿ ಅಮೇರಿಕಾ ದೇಶವನ್ನು ಇನ್ನು ಮುಂದೆ ಮಿತ್ರ ದೇಶ ಎಂದು ಹೇಳಲು ಸಾಧ್ಯವಾಗುವುದಿಲ್ಲ ಎನ್ನುವ ಮಾತುಗಳನ್ನು ಆಡಿವೆ. ಟ್ರಂಪ್ ತೆರಿಗೆ ನೀತಿಗೆ ಸರಿಯಾದ ಉತ್ತರ ಕೊಡುವ ಇಂಗಿತವನ್ನು ಕೂಡ ಅವು ವ್ಯಕ್ತ ಪಡಿಸಿವೆ. ಇಂಗ್ಲೆಂಡ್ ದೇಶದ ಆರ್ಥಿಕತೆಯಂತೂ ನೆಲ ಕಚ್ಚಿ ನಿಂತಿದೆ. ಹೀಗಿದ್ದೂ ಅದು ಉಕ್ರ‍್ಟೈನ್ ದೇಶಕ್ಕೆ ಸಾಲ ಕೊಡುವ, ಸಹಾಯ ಮಾಡುವ ಮಾತನ್ನು ಆಡಿರುವುದು ಇದೆ ಉದ್ದೇಶದಿಂದ. ಅಮೇರಿಕಾ ದೇಶದ ವಿರುದ್ಧ ನಿಧಾನವಾಗಿ ಯೂರೋಪು ಸೇರಿದಂತೆ ಜಗತ್ತಿನ ಇತರ ದೇಶಗಳು ಒಂದಾಗುತ್ತಿವೆ.

Donald Trump
ಜಾಗತಿಕ ಆರ್ಥಿಕ ಕುಸಿತಕ್ಕೆ ಕಾರಣವಾಗಲಿದೆಯೇ ಅಮೇರಿಕಾ ಷೇರು ಮಾರುಕಟ್ಟೆ ಕುಸಿತ? (ಹಣಕ್ಲಾಸು)

ಗಮನಿಸಿ ನೋಡಿ. ಚೀನಾ ದೇಶದ ಫಾರಿನ್ ಮಿನಿಸ್ಟರ್ ಚೀನಾ ಮತ್ತು ಭಾರತ ಇಬ್ಬರೂ ಒಟ್ಟಾಗಿ ಹೆಜ್ಜೆ ಹಾಕಬೇಕು ಎನ್ನುವ ಮಾತನ್ನು ಆಡಿದ್ದರು. ನಾವು ಒಬ್ಬರಿಗೊಬ್ಬರು ವಿರುದ್ಧ ಹೋಗಬಾರದು ಬದಲಿಗೆ ಒಂದಾಗಿ ಹೆಜ್ಜೆ ಹಾಕಬೇಕು ಎನ್ನುವ ಅವರ ಮಾತಿಗೆ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ಹೌದು ನಾವು ಒಟ್ಟಾಗಿ ಹೆಜ್ಜೆ ಇಡಬೇಕು ಎನ್ನುವುದನ್ನು ನಾನು ಒಪ್ಪುತ್ತೇನೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಚೀನಾ ಮತ್ತು ಭಾರತದ ನಡುವೆ ಇರುವ ಗಡಿ ತಗಾದೆಗಳೊಂದಿಗೆ ಇನ್ನಿತರ ಮಾತುಕತೆಗಳಿಗೆ ಚಾಲನೆ ಸಿಕ್ಕಿದೆ.

ಜಗತ್ತಿನಲ್ಲಿ ಒಟ್ಟು 197 ದೇಶಗಳಿವೆ. ಅವುಗಳಲ್ಲಿ ಸರಿಸುಮಾರು 25 ದೇಶಗಳು ಮಾತ್ರ ಆಟಕ್ಕುಂಟು ಮಿಕ್ಕವು ಕೇವಲ ಲೆಕ್ಕದಲ್ಲಿ ಉಳಿದು ಕೊಳ್ಳುತ್ತವೆ. ಈ 25 ದೇಶದಲ್ಲೂ ಪ್ರಥಮ ಹತ್ತು ದೇಶಗಳು ಜಾಗತಿಕ ಬದಲಾವಣೆಗಳಿಗೆ , ಅದರಲ್ಲೂ ಅಮೇರಿಕಾ ಹೇರುವ ಬದಲಾವಣೆಗಳಿಗೆ ಸೆಡ್ಡು ಹೊಡೆದು ನಿಲ್ಲುವ ತಾಕತ್ತು ಹೊಂದಿವೆ. ಇವತ್ತಿನ ಕಾಲಘಟ್ಟದಲ್ಲಿ ಒಂಟಿಯಾಗಿ ಯಾವ ದೇಶವೂ ಇನ್ನೊಂದು ದೇಶವನ್ನು ಎದುರಿಸುವ ಮಟ್ಟದಲ್ಲಿಲ್ಲ. ಅಮೇರಿಕಾ ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ ಅಮೇರಿಕಾ ಇಂದು ಗಾಯಗೊಂಡು ಮೂಡಿ ಸಿಂಹವಾಗಿದೆ. ಅದು ತಾನು ಕಾಡಿನ ರಾಜ ಎನ್ನುವುದನ್ನು ಮಾತ್ರ ನೆನಪಿನಲ್ಲಿ ಇಟ್ಟು ಕೊಂಡಿದೆ. ಕೈಯಲ್ಲಿ ಶಕ್ತಿಯಿಲ್ಲ ಎನ್ನುವುದನ್ನು ಮರೆತಿದೆ.

ಇವುಗಳ ಮಧ್ಯೆ ಇನ್ನೊಂದು ಅಂಶವನ್ನು ನಾವು ಮರೆಯುವಂತಿಲ್ಲ. ಈ ಬಾರಿ ಟ್ರಂಪ್ ಗೆಲ್ಲಲು ಕಾರಣ ಎಲಾನ್ ಮಸ್ಕ್ ಎನ್ನುವ ಉದ್ಯಮಿ ಕಾರಣ. ಆತ ಟ್ರಂಪ್ ಗೆಲುವಿಗೆ ಹಣದ ಹೊಳೆಯನ್ನೇ ಹರಿಸಿದ್ದಾನೆ. ಬದಲಿಗೆ ಆತನಿಗೆ ಏನು ಬೇಕು ಅದನ್ನು ಆತ ಪಡೆದುಕೊಳ್ಳುತ್ತಾನೆ. ಆತನಿಗೆ ಭಾರತ ದೇಶದಲ್ಲಿ ವ್ಯಾಪಾರ ಮಾಡಬೇಕು ಎನ್ನುವ ಹಂಬಲವಿದೆ. ಆದರೆ ಭಾರತ ಅಮೇರಿಕಾ ದೇಶದಿಂದ ಆಮದು ಮಾಡಿಕೊಳ್ಳುವ ಪದಾರ್ಥಗಳ ಮೇಲೆ ಹೆಚ್ಚಿನ ತೆರಿಗೆಯನ್ನು ಹಾಕುತ್ತಿದೆ. ಹೀಗಾಗಿ ಸದ್ಯದ ಮಟ್ಟದಲ್ಲಿ ಭಾರತ ಅಮೇರಿಕಾ ಪಾಲಿಗೆ ನುಂಗಲಾಗದ, ಉಗುಳಲೂ ಆಗದ ಬಿಸಿ ತುಪ್ಪವಾಗಿದೆ. ಭಾರತ ಒಂದು ಅತ್ಯುತ್ತಮ ಮಾರುಕಟ್ಟೆ ಎನ್ನುವುದು ಎಲಾನ್ ಮಸ್ಕ್ ಮನದ ಮಾತು. ನಿಮಗೆಲ್ಲಾ ಗೊತ್ತಿರಲಿ ಅಮೇರಿಕಾ ದೇಶವನ್ನು ನಿಜವಾಗಿ ಆಳುತ್ತಿರುವುದು ಟ್ರಂಪ್ ಅಲ್ಲ. ಬದಲಿಗೆ ಎಲಾನ್ ಮಸ್ಕ್.

ಅಮೇರಿಕಾ ದೇಶಕ್ಕೆ , ಎಲಾನ್ ಮಸ್ಕ್ ಗೆ ಭಾರತ ಬೇಕು ಆದರೆ ಭಾರತೀಯರು ಅಮೇರಿಕಾದಲ್ಲಿ ಉನ್ನತ ಹುದ್ದೆಗೆ ಏರುವುದು ಬೇಕಿಲ್ಲ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ. ನೀವು ಯಾರನ್ನು ಇಷ್ಟಪಡುತ್ತೀರಿ? ಇಲ್ಲಿಗಲ್ ಮೆಕ್ಸಿಕನ್ ಅಥವಾ ಲೀಗಲ್ ಇಂಡಿಯನ್ ಎನ್ನುವ ಪ್ರಶ್ನೆಗೆ ಅಲ್ಲಿನ ಮೂಲಭೂತ ವಾದಿಗಳು ಇಲ್ಲಿಗಲ್ ಮೆಕ್ಸಿಕನ್ ಎನ್ನುವ ಉತ್ತರವನ್ನು ನೀಡುತ್ತಿದ್ದಾರೆ ಎನ್ನುವುದನ್ನು ಭಾರತದ ಮೂಲಭೂತವಾದಿಗಳು ಗಮನಿಸಬೇಕು. ಇದರರ್ಥ ಇಷ್ಟೇ , ಇಲ್ಲಿ ಎಲ್ಲರಿಗೂ ಅವರವರ ದೇಶದ ಭದ್ರತೆ ಮತ್ತು ಉತ್ತಮ ಹಣಕಾಸು ಸ್ಥಿತಿ ಮಾತ್ರ ಮುಖ್ಯವಾಗುತ್ತದೆ. ಇತರ ದೇಶಗಳ ಗೊಡವೆ, ಆ ದೇಶದ ಅಳಿವು, ಉಳಿವು ಮುಖ್ಯವಲ್ಲ ಎನ್ನುವುದನ್ನು ಅಪರೋಕ್ಷವಾಗಿ ಹೇಳುತ್ತಿವೆ.

Donald Trump
ಜಾಗತಿಕ ಆರ್ಥಿಕ ಕುಸಿತಕ್ಕೆ ಕಾರಣವಾಗಲಿದೆಯೇ ಅಮೇರಿಕಾ ಷೇರು ಮಾರುಕಟ್ಟೆ ಕುಸಿತ? (ಹಣಕ್ಲಾಸು)

ಚೀನಾ ಹೇಗಾದರೂ ಸರಿಯೇ ಈ ಸಮಯವನ್ನು ಜಗತ್ತಿನ ಹಿರಿಯಣ್ಣನಾಗಲು ಬಳಸಿಕೊಳ್ಳಬೇಕು ಎನ್ನುವ ಹವಣಿಕೆಯಲ್ಲಿದೆ. ಯೂರೋಪಿಯನ್ ಒಕ್ಕೊಟ, ಬ್ರಿಟನ್ ದೇಶಗಳು ಉಳಿವಿಗಾಗಿ ಹೋರಾಡುತ್ತಿವೆ. ಈ ಮಧ್ಯೆ, ಬ್ರೆಝಿಲ್, ಮೆಕ್ಸಿಕೋ, ಭಾರತ ಮತ್ತು ಸೌತ್ ಆಫ್ರಿಕಾ ದೇಶಗಳು ಕಾದು ನೋಡುವ ಮತ್ತು ಯಾವಾಗ ಸನ್ನಿವೇಶ ತಮ್ಮ ಒಳಿತಿಗಾಗಿ ಬದಲಾಗುತ್ತದೆ ಆಗ ಅದರ ಲಾಭ ಪಡೆದುಕೊಳ್ಳಲು ಹವಣಿಸುತ್ತ ನಿಂತಿವೆ. ರಷ್ಯಾ ಸದ್ಯದ ಮಟ್ಟಿಗೆ ಅಮೇರಿಕಾ ದೇಶದ ಗೆಳೆಯನಾಗುವ ನಾಟಕವಾಡುತ್ತಿದೆ. ಅದಕ್ಕೆ ಈಗಿನ ಪರಿಸ್ಥಿತಿಯಲ್ಲಿ ಬೇರೆ ದಾರಿಯಿಲ್ಲ. ಜಪಾನ್ ಗೆ ಅಮೇರಿಕಾ ಕುಸಿತ ಬೇಕಿಲ್ಲ. ತನ್ನ ಪ್ರಜೆಗಳ ಉಳಿಕೆ , ಹೂಡಿಕೆ ಎರಡೂ ಅಮೆರಿಕಾದಲ್ಲಿದೆ. ಹೀಗಾಗಿ ಅದಕ್ಕೆ ಅಮೇರಿಕಾ ಉಳಿವು ತನ್ನ ಉಳಿವು ಎನ್ನುವಂತಾಗಿದೆ. ಉಳಿದ ದೇಶಗಳು ಮೊದಲೇ ಹೇಳಿದಂತೆ ಕೇವಲ ಸಂಖ್ಯೆಯ ಲೆಕ್ಕಾಚಾರಕ್ಕೆ ಮಾತ್ರ ಸೀಮಿತವಾಗುತ್ತದೆ.

ಕೊನೆಮಾತು: ಅಮೇರಿಕಾ ದೇಶ ತನ್ನ ದೇಶದ ಬಾಹುಗಳನ್ನು ವಿಸ್ತರಿಸಲು, ತನ್ನ ಪದಾರ್ಥಗಳನ್ನು ಇತರ ದೇಶಗಳಿಗೆ ಮಾರಲು ಹುಟ್ಟುಹಾಕಿದ ಗ್ಲೋಬಲೈಸಷನ್ ಎನ್ನುವ ಆಟ 30 ವರ್ಷದಲ್ಲಿ ಅದಕ್ಕೆ ತಿರುಗುಬಾಣವಾಗಿದೆ. ಚೀನಾ ಎನ್ನುವ ದೇಶ ಅಮೇರಿಕಾ ದೇಶವನ್ನು ಅವರು ಹುಟ್ಟುಹಾಕಿದ ಆಟದಲ್ಲಿ ಹೀನಾಯವಾಗಿ ಅವರನ್ನು ಸೋಲಿಸಿದೆ. ಸೋತು ಗಾಯಗೊಂಡ ಅಮೇರಿಕಾ ದೇಶಕ್ಕೆ ಈಗ ಆ ಆಟ ಬೇಡವಾಗಿದೆ. ಹೀಗಾಗಿ ಲೋಕಲೈಸಷನ್ ಎನ್ನುವ ಹೊಸ ಕೂಗು, ಆಟವನ್ನು ಶುರು ಮಾಡಿದೆ. ಅಲ್ಲಿನ ಪ್ರಜೆಗಳು ಕೂಡ ಬೇಸೆತ್ತಿದ್ದಾರೆ. ಅವರಿಗೂ ಬದಲಾವಣೆ ಬೇಕಿದೆ. ಪರಿಣಾಮ ಏನಾಗುತ್ತದೆ ಎನ್ನುವುದು ಆಮೇಲಿನ ಮಾತು. ಒಟ್ಟಾರೆ ಎಲ್ಲರಿಗೂ ಈಗ ಒಂದು ಹೊಸ ಆಟ ಬೇಕಾಗಿದೆ. ಪರಿಣಾಮದ ಚಿಂತೆ ಇಲ್ಲವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com