ಭಾರತದ ಬಾಹ್ಯಾಕಾಶ ಜಿಗಿತ: ಮಧುಮೇಹಿಗಳಿಗೆ ಬಾಹ್ಯಾಕಾಶದ ಬಾಗಿಲು ತೆರೆಯುವ ಆಕ್ಸಿಯಮ್-4 ಮತ್ತು ಶುಭಾಂಶು ಶುಕ್ಲಾ (ಜಾಗತಿಕ ಜಗಲಿ)

ಈ ಪ್ರಯೋಗ ಇನ್ಸುಲಿನ್ ಪಡೆದುಕೊಳ್ಳುವ ಮಧುಮೇಹ ಹೊಂದಿರುವ ವ್ಯಕ್ತಿಗಳೂ (ಐಡಿಡಿಎಂ) ಬಾಹ್ಯಾಕಾಶಕ್ಕೆ ತೆರಳುವಂತೆ ಮಾಡುವ ಆಕ್ಸಿಯಂ ಸ್ಪೇಸ್ ಸಂಸ್ಥೆಯ ಯೋಜನೆಯ ಭಾಗವಾಗಿದೆ.
ಭಾರತದ ಬಾಹ್ಯಾಕಾಶ ಜಿಗಿತ: ಮಧುಮೇಹಿಗಳಿಗೆ ಬಾಹ್ಯಾಕಾಶದ ಬಾಗಿಲು ತೆರೆಯುವ ಆಕ್ಸಿಯಮ್-4 ಮತ್ತು ಶುಭಾಂಶು ಶುಕ್ಲಾ (ಜಾಗತಿಕ ಜಗಲಿ)
Updated on

ಭಾರತೀಯ ಗಗನಯಾತ್ರಿ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಜೂನ್ 8ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ತೆರಳಲು ಸಿದ್ಧತೆ ನಡೆಸಿದ್ದಾರೆ. ಈ ಯೋಜನೆಯಲ್ಲಿ, ಅವರು ಮಧುಮೇಹಕ್ಕೆ (ಸಕ್ಕರೆ ಕಾಯಿಲೆ) ಸಂಬಂಧಿಸಿದಂತೆ ಒಂದು ಮಹತ್ವದ ಪ್ರಯೋಗವನ್ನು ಕೈಗೊಳ್ಳಲಿದ್ದಾರೆ. ಈ ಸಂಶೋಧನೆ, ವಿಜ್ಞಾನಿಗಳಿಗೆ ಮಧುಮೇಹವನ್ನು ಇನ್ನಷ್ಟು ಅರ್ಥೈಸಿಕೊಳ್ಳಲು, ಮತ್ತು ಬಾಹ್ಯಾಕಾಶದಲ್ಲಿ ಅದರ ಬದಲಾವಣೆಗಳನ್ನು ತಿಳಿಯಲು ನೆರವಾಗಲಿದೆ.

ಆಕ್ಸಿಯಮ್-4 ಬಾಹ್ಯಾಕಾಶ ಯೋಜನೆ ನಾಲ್ವರು ಗಗನಯಾತ್ರಿಗಳನ್ನು ಒಳಗೊಂಡಿದ್ದು, ಭವಿಷ್ಯದಲ್ಲಿ ಮಧುಮೇಹ ಹೊಂದಿರುವ ವ್ಯಕ್ತಿಗಳೂ ಗಗನಯಾತ್ರಿಗಳಾಗಲು ನೆರವಾಗುವಂತಹ ಸಂಶೋಧನೆಗಳನ್ನು ಕೈಗೊಳ್ಳಲಿದ್ದಾರೆ. ಗಗನಯಾತ್ರಿಗಳು ತಮ್ಮ ಎರಡು ವಾರಗಳ ವಾಸದ ಅವಧಿಯಲ್ಲಿ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಶೂನ್ಯ ಗುರುತ್ವಾಕರ್ಷಣೆಯಲ್ಲಿ ಈ ಅಧ್ಯಯನ ಕೈಗೊಳ್ಳಲಿದ್ದಾರೆ.

'ಸೂಟ್ ರೈಡ್' ಎಂಬ ಹೆಸರು ಹೊಂದಿರುವ ಈ ಪ್ರಯೋಗ, ಇನ್ಸುಲಿನ್ ಅವಲಂಬಿತ ಗಗನಯಾತ್ರಿಗಳಿಗೆ (ಐಡಿಡಿಎಂ) ನೆರವಾಗುವ ನಿಟ್ಟಿನಲ್ಲಿ ಬಹುಮುಖ್ಯ ಪ್ರಯೋಗವಾಗಿದೆ. ಹಿಂದೆಲ್ಲ ಮಧುಮೇಹ ಎನ್ನುವುದು ಆಸಕ್ತರನ್ನೂ ಗಗನಯಾತ್ರೆಯಿಂದ ಅನರ್ಹಗೊಳಿಸಲು ಕಾರಣವಾಗಿತ್ತು. ಆದರೆ, ಈ ಯೋಜನೆ ಭವಿಷ್ಯದಲ್ಲಿ ಮಧುಮೇಹಿಗಳೂ ಗಗನುಯಾತ್ರೆ ನಡೆಸುವಂತೆ ಮಾಡುವ ನಿಟ್ಟಿನಲ್ಲಿ ಪ್ರಗತಿ ಸಾಧಿಸಲಿದೆ.

ಈ ಪ್ರಯೋಗ ಇನ್ಸುಲಿನ್ ಪಡೆದುಕೊಳ್ಳುವ ಮಧುಮೇಹ ಹೊಂದಿರುವ ವ್ಯಕ್ತಿಗಳೂ (ಐಡಿಡಿಎಂ) ಬಾಹ್ಯಾಕಾಶಕ್ಕೆ ತೆರಳುವಂತೆ ಮಾಡುವ ಆಕ್ಸಿಯಂ ಸ್ಪೇಸ್ ಸಂಸ್ಥೆಯ ಯೋಜನೆಯ ಭಾಗವಾಗಿದೆ. ಬಾಹ್ಯಾಕಾಶ ಯಾತ್ರೆಯ ಸಂದರ್ಭದಲ್ಲೂ ಮಧುಮೇಹದ ನಿರ್ವಹಣೆ ಸಾಧ್ಯ ಮತ್ತು ಮಧುಮೇಹಿಗಳೂ ಸುರಕ್ಷಿತವಾಗಿ ಬಾಹ್ಯಾಕಾಶ ಯಾತ್ರೆ ಕೈಗೊಳ್ಳಬಹುದು ಎಂದು ಸಾಬೀತುಪಡಿಸುವ ಗುರಿ ಹೊಂದಿದೆ.

ಭಾರತದ ವಿಜ್ಞಾನ ಸಚಿವರು, ಸ್ವತಃ ಮಧುಮೇಹ ತಜ್ಞರಾದ ಡಾ. ಜಿತೇಂದ್ರ ಸಿಂಗ್ ಅವರೂ ಈ ಪ್ರಯೋಗವನ್ನು ಸೂಕ್ಷ್ಮವಾಗಿ ಗಮನಿಸಲಿದ್ದಾರೆ.

ಅಬು ಧಾಬಿಯ ‌ಬುರ್ಜೀಲ್ ಹೋಲ್ಡಿಂಗ್ಸ್ ಸಂಸ್ಥೆಯ ಮುಖ್ಯ ವೈದ್ಯಕೀಯ ಅಧಿಕಾರಿ, ಪ್ರಸ್ತುತ ಅಧ್ಯಯನದ ಮುಖ್ಯ ಸಂಶೋಧಕರಾದ ಡಾ. ಮೊಹಮ್ಮದ್ ಫಿತ್ಯಾನ್ ಅವರು ಬಾಹ್ಯಾಕಾಶ ಯೋಜನಾ ಅವಧಿಯಲ್ಲಿ ಗಗನಯಾತ್ರಿಗಳಿಗೆ ಇನ್ಸುಲಿನ್ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬದಲಿಗೆ, ಅವರು ರಕ್ತದ ಸಕ್ಕರೆ ಮಟ್ಟವನ್ನು ಗಮನಿಸುವ ನಿಟ್ಟಿನಲ್ಲಿ ವಿಶೇಷ ಯಂತ್ರವನ್ನು ಧರಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಬಾಹ್ಯಾಕಾಶದ ವಿಶೇಷ ಮತ್ತು ಒತ್ತಡಯುತ ವಾತಾವರಣದಲ್ಲಿ ರಕ್ತದ ಸಕ್ಕರೆ ಮಟ್ಟ ಹೇಗೆ ವರ್ತಿಸುತ್ತದೆ ಎಂದು ತಿಳಿಯುವುದು ಯೋಜನೆಯ ಉದ್ದೇಶವಾಗಿದೆ.

ಗಮನಿಸಬೇಕಾದ ಅಂಶವೆಂದರೆ, ಈ ಪ್ರಯೋಗ ಬಾಹ್ಯಾಕಾಶದಲ್ಲಿ ಮಧುಮೇಹಕ್ಕೆ ಚಿಕಿತ್ಸೆ ನೀಡುವ ಉದ್ದೇಶ ಹೊಂದಿಲ್ಲ. ಯಾವುದೇ ಬಾಹ್ಯಾಕಾಶ ಯೋಜನೆಯ ಸಂದರ್ಭದಲ್ಲಿ ಗಗನಯಾತ್ರಿಗಳಿಗೆ ಇನ್ಸುಲಿನ್ ನೀಡಲಾಗುವುದಿಲ್ಲ. ಬದಲಿಗೆ, ಮೇಲ್ವಿಚಾರಣಾ ಸಾಧನದ ನೆರವಿನಿಂದ ರಕ್ತದ ಸಕ್ಕರೆ ಮಟ್ಟದಲ್ಲಿನ ಬದಲಾವಣೆಗಳನ್ನು ಗಮನಿಸಲಾಗುತ್ತದೆ. ಈ ಸಂಶೋಧನೆ ವಿಜ್ಞಾನಿಗಳಿಗೆ ಬಾಹ್ಯಾಕಾಶ ಯಾತ್ರೆ ದೇಹದ ಮೇಲೆ, ಅದರಲ್ಲೂ ಇನ್ಸುಲಿನ್ ಅವಲಂಬಿತ ಮಧುಮೇಹಿಗಳ (ಐಡಿಡಿಎಂ) ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಅರ್ಥ ಮಾಡಿಕೊಳ್ಳಲು ಸಹಾಯಕವಾಗಲಿದೆ.

ಬಾಹ್ಯಾಕಾಶದಲ್ಲಿ ರಕ್ತದ ಸಕ್ಕರೆ ಮಟ್ಟ ಗಮನಿಸುವ ಯಂತ್ರ ಹೇಗೆ ಕಾರ್ಯಾಚರಿಸುತ್ತದೆ, ಅದು ಕಲೆಹಾಕುವ ಮಾಹಿತಿಗಳನ್ನು ಭೂಮಿಗೆ ರವಾನಿಸುವುದು ಹೇಗೆ ಎಂಬ ಬಗ್ಗೆ ತಮ್ಮ ತಂಡ ಚಿಂತನೆ ನಡೆಸುತ್ತಿದೆ ಎಂದು ಡಾ. ಮೊಹಮ್ಮದ್ ಹೇಳಿದ್ದಾರೆ. ಅದರೊಡನೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇನ್ಸುಲಿನ್ ಬಳಕೆಗೆ ಯೋಗ್ಯವಾಗಿರುತ್ತದೆಯೇ ಎಂಬ ಕುರಿತೂ ಅಧ್ಯಯನ ನಡೆಯಲಿದೆ ಎಂದು ಅವರು ವಿವರಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ 2024ರ ವರದಿಯೊಂದರ ಪ್ರಕಾರ, 18ಕ್ಕಿಂತ ಹೆಚ್ಚು ವಯಸ್ಸಿನ 14% ಜನರು ಮಧುಮೇಹಕ್ಕೆ ತುತ್ತಾಗಿದ್ದಾರೆ. 1990ರಲ್ಲಿ ಈ ಪ್ರಮಾಣ 7% ಇದ್ದು, ಈಗ ಅದು ದುಪ್ಪಟ್ಟಾಗಿದೆ. ಇಂದು ಜಗತ್ತಿನಾದ್ಯಂತ 830 ಮಿಲಿಯನ್ ಜನರು ಮಧುಮೇಹಿಗಳಾಗಿದ್ದಾರೆ.

ಭಾರತವನ್ನು ಜಾಗತಿಕ ಮಧುಮೇಹದ ರಾಜಧಾನಿ ಎಂದು ಕರೆಯಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ, 18 ವರ್ಷ ಮೇಲ್ಪಟ್ಟ 77 ಮಿಲಿಯನ್ ಭಾರತೀಯರು ಟೈಪ್ 2 ಮಧುಮೇಹಕ್ಕೆ ತುತ್ತಾಗಿದ್ದಾರೆ. ಅದರೊಡನೆ, ಬಹುತೇಕ 25 ಮಿಲಿಯನ್ ಜನರು ಮಧುಮೇಹ ಪೂರ್ವ ಸ್ಥಿತಿಯಲ್ಲಿ ಇದ್ದಾರೆ ಎನ್ನಲಾಗಿದೆ. ಅಂದರೆ, ಅವರು ಭವಿಷ್ಯದಲ್ಲಿ ಮಧುಮೇಹಕ್ಕೆ ತುತ್ತಾಗುವ ಅಪಾಯದ ಸ್ಥಿತಿಯಲ್ಲಿದ್ದಾರೆ.

ಅಬು ಧಾಬಿ ಮೂಲದ, ಅತ್ಯುನ್ನತ ಆರೋಗ್ಯ ಸಂಸ್ಥೆಯಾಗಿರುವ ಬುರ್ಜೀಲ್ ಹೋಲ್ಡಿಂಗ್ಸ್ ಪಿಎಲ್‌ಸಿ ಸಂಸ್ಥೆ ಮಧ್ಯ ಪೂರ್ವ ಮತ್ತು ಉತ್ತರ ಆಫ್ರಿಕಾದಲ್ಲಿ ಸಕ್ರಿಯವಾಗಿದ್ದು, ಪ್ರಸ್ತುತ ಯೋಜನೆಯ ನೇತೃತ್ವ ವಹಿಸಿದೆ. ಆಕ್ಸಿಯಮ್ ಸ್ಪೇಸ್ ಜೊತೆಗೂಡಿ, ಬಾಹ್ಯಾಕಾಶದ ಸೂಕ್ಷ್ಮ ಗುರುತ್ವಾಕರ್ಷಣೆಯ ವಾತಾವರಣದಲ್ಲಿ ಮಧುಮೇಹದ ನಿಯಂತ್ರಣದ ಕುರಿತು ಮಹತ್ವದ ಸಂಶೋಧನೆ ನಡೆಸುವುದಾಗಿ ಸಂಸ್ಥೆ ಹೇಳಿದೆ.

ಈ ಸಂಶೋಧನೆಯಲ್ಲಿನ ಮಹತ್ವದ ಹೆಜ್ಜೆ ಎಂಬಂತೆ, 2024ರ ಗ್ಯಾಲಾಕ್ಟಿಕ್ 07 ಯೋಜನೆಯಲ್ಲಿ ಒಂದು ಯಶಸ್ವಿ ಪರೀಕ್ಷೆ ನಡೆಸಲಾಗಿತ್ತು. ಆ ಪರೀಕ್ಷೆ, ಬಾಹ್ಯಾಕಾಶದ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲೂ ಇನ್ಸುಲಿನ್ ಪೆನ್‌ಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿ, ಅಂತಾರಾಷ್ಟ್ರೀಯ ಗುಣಮಟ್ಟವನ್ನು ತಲುಪಬಲ್ಲವು (ಐಎಸ್ಒ ನಿಯಮಾವಳಿ) ಎಂದು ಸಾಬೀತುಪಡಿಸಿತ್ತು. ಈ ಧನಾತ್ಮಕ ಫಲಿತಾಂಶಗಳು ಮಧುಮೇಹ ಕೇಂದ್ರಿತವಾದ ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗೆ ಸಿದ್ಧತೆ ನಡೆಸಲು ನೆರವಾಗಿವೆ.

ಆಕ್ಸಿಯಮ್-4 (ಎಎಕ್ಸ್-4) ಯೋಜನೆಯಲ್ಲಿ ಕಂಟಿನ್ಯುವಸ್ ಗ್ಲೂಕೋಸ್ ಮಾನಿಟರ್‌ಗಳನ್ನು (ಸಿಜಿಎಂ) ಬಳಸಲಾಗುತ್ತಿದ್ದು, ಇವುಗಳನ್ನು ಸಾಮಾನ್ಯವಾಗಿ ಮಧುಮೇಹ ಹೊಂದಿರುವವರು ತಮ್ಮ ರಕ್ತದ ಸಕ್ಕರೆ ಮಟ್ಟವನ್ನು ಪರಿಶೀಲಿಸಲು ಬಳಸುತ್ತಾರೆ. ಈ ಯಂತ್ರಗಳು ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲೂ ನಿಖರವಾಗಿ ಕಾರ್ಯಾಚರಿಸಬಲ್ಲವೇ ಎಂದು ತಿಳಿಯುವ ಸಲುವಾಗಿ ಅವುಗಳನ್ನು ಬಾಹ್ಯಾಕಾಶದಲ್ಲಿ ಪರೀಕ್ಷಿಸಲಾಗುತ್ತದೆ. ಅವುಗಳು ಒದಗಿಸುವ ನೈಜ ಸಮಯದ ಅಂಕಿಅಂಶಗಳು ಭವಿಷ್ಯದ ಬಾಹ್ಯಾಕಾಶ ಯೋಜನೆಗಳಲ್ಲಿ ಇನ್ಸುಲಿನ್ ಮೇಲೆ ಅವಲಂಬಿತವಾಗಿರುವ ಗಗನಯಾತ್ರಿಗಳ ಆರೋಗ್ಯ ನಿರ್ವಹಣೆಗೆ ನೆರವಾಗಲಿವೆ.

ಎಎಕ್ಸ್-4 ಯೋಜನೆಯಲ್ಲಿ ಈ ತಂತ್ರಜ್ಞಾನಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂದು ತಿಳಿಯಲು ಯೋಜನಾ ಪೂರ್ವ, ಯೋಜನೆಯ ಸಂದರ್ಭದಲ್ಲಿ, ಯೋಜನೆಯ ನಂತರವೂ ಪರೀಕ್ಷಿಸಲಾಗುತ್ತದೆ. ಅವುಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲು ವಿಭಿನ್ನ ವಿಧಾನಗಳನ್ನು ಅನುಸರಿಸಲಾಗುತ್ತದೆ.

ಅದರೊಡನೆ, ಬಾಹ್ಯಾಕಾಶದಲ್ಲಿ ಇಟ್ಟ ಬಳಿಕವೂ ಇನ್ಸುಲಿನ್ ಸಮರ್ಪಕವಾಗಿ ಕಾರ್ಯ ನಿರ್ವಹಿಸಬಲ್ಲದೇ ಎಂದು ಈ ಯೋಜನೆ ಖಚಿತಪಡಿಸಲಿದೆ. ಭೂಮಿಗೆ ಮರಳುವ ವೇಳೆಗೆ ಬಾಹ್ಯಾಕಾಶದ ಪರಿಸ್ಥಿತಿಗಳು ಇನ್ಸುಲಿನ್ ಗುಣಮಟ್ಟ ಅಥವಾ ಅದರ ಸಾಮರ್ಥ್ಯವನ್ನು ಬದಲಾಯಿಸಬಹುದೇ ಎಂದು ಪರಿಶೀಲಿಸುವ ಉದ್ದೇಶವನ್ನು ವಿಜ್ಞಾನಿಗಳು ಹೊಂದಿದ್ದಾರೆ.

ಬಾಹ್ಯಾಕಾಶದಲ್ಲಿ ಯಾವುದೇ ಗುರುತ್ವಾಕರ್ಷಣೆ ಇಲ್ಲದಿರುವುದರಿಂದ, ಮತ್ತು ಮಲಗುವುದು - ಏಳುವುದು ವ್ಯವಸ್ಥಿತವಾಗಿಲ್ಲದಿರುವುದರಿಂದ (ಇದನ್ನು ಸರ್ಕೇಡಿಯನ್ ರಿದಮ್ಸ್ ಎಂದು ಕರೆಯಲಾಗುತ್ತದೆ), ಇದರ ಪರಿಣಾಮಗಳು ಸಿಜಿಎಂಗಳು ಮತ್ತು ಇನ್ಸುಲಿನ್ ಪೂರೈಕಾ ವ್ಯವಸ್ಥೆಗಳ ಕಾರ್ಯನಿರ್ವಹಣೆಯ ಮೇಲೆ ಹೇಗಿರಲಿವೆ ಎಂಬ ಕುರಿತು ವಿಜ್ಞಾನಿಗಳು ಪರೀಕ್ಷಿಸಲಿದ್ದಾರೆ. ಈ ಬಾಹ್ಯಾಕಾಶ ಪರಿಸ್ಥಿತಿಗಳು ಭೂಮಿಯಲ್ಲಿನ ದುರ್ಗಮ ಪ್ರದೇಶಗಳಲ್ಲಿನ ಸವಾಲಿನ ಪರಿಸ್ಥಿತಿಗಳನ್ನು ಹೋಲುತ್ತವೆ.

ಈ ಸಂಶೋಧನೆಗಳು ಮಧುಮೇಹದ ನಿರ್ವಹಣೆ ಮತ್ತು ಚಿಕಿತ್ಸೆಯಲ್ಲಿ ನೆರವಾಗಲಿವೆ. ಅದರಲ್ಲೂ, ತೈಲ ಬಾವಿಗಳಿ, ಮರುಭೂಮಿಗಳು, ಅಥವಾ ದೂರದ ಹಳ್ಳಿಗಳಂತಹ ವೈದ್ಯಕೀಯ ಸಹಾಯ ಕಷ್ಟಕರವಾಗಿರುವ ಪ್ರದೇಶಗಳಲ್ಲಿ ಮಧುಮೇಹ ನಿರ್ವಹಣೆಗೆ ಇವು ನೆರವಾಗಲಿವೆ. ಈ ಸಂಶೋಧನೆಗಳಲ್ಲಿ ಕಂಡುಕೊಳ್ಳುವ ಅಂಶಗಳು ಮಧುಮೇಹ ಚಿಕಿತ್ಸೆ ಹೆಚ್ಚು ಸುಲಭವಾಗುವಂತೆ, ಪರಿಣಾಮಕಾರಿಯಾಗುವಂತೆ ಮಾಡಿ, ದುರ್ಗಮ ಪ್ರದೇಶಗಳಲ್ಲಿರುವ ಜನರ ಜೀವನ ಉತ್ತಮಗೊಳಿಸಬಹುದು.

ಡಾ. ಮೊಹಮ್ಮದ್ ಅವರು ನೂತನ ಆಲೋಚನೆಗಳನ್ನು ಪರೀಕ್ಷೆಗೊಳಪಡಿಸಲು ಬಾಹ್ಯಾಕಾಶ ಸೂಕ್ತ ತಾಣ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಪ್ರಸ್ತುತ ಸಂಶೋಧನೆ ಜಗತ್ತಿನಾದ್ಯಂತ ಬಡ, ದುರ್ಗಮ ಪ್ರದೇಶಗಳಲ್ಲಿರುವ ಜನರ ಜೀವನಮಟ್ಟ ಸುಧಾರಿಸಲು ಪ್ರಯೋಜನಕಾರಿಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಕ್ಸಿಯಮ್ ಸ್ಪೇಸ್ ಸಂಸ್ಥೆಯ ಮುಖ್ಯ ಇಂಜಿನಿಯರ್ ಆಗಿರುವ ಡಾ. ಲೂಸಿ ಲೋ ಅವರು ಮಧುಮೇಹದ ಕುರಿತ ಸಂಶೋಧನೆ ಇನ್ಸುಲಿನ್ ಅವಲಂಬಿತ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಲಿದೆ ಎಂದಿದ್ದಾರೆ.

ಈಗಿನ ಸಂಶೋಧನೆಯಲ್ಲಿ ಮಧುಮೇಹ ಹೊಂದಿರದ ಗಗನಯಾತ್ರಿಗಳ ರಕ್ತದ ಸಕ್ಕರೆ ಮಟ್ಟವನ್ನು ಗಮನಿಸಲಾಗುತ್ತದೆ ಎಂದು ಡಾ. ಲೂಸೀ ವಿವರಿಸಿದ್ದಾರೆ. ಒಂದು ವೇಳೆ ಇದು ಸರಿಯಾಗಿ ಕಾರ್ಯಾಚರಿಸಿದರೆ, ಮುಂದಿನ ಹಂತದಲ್ಲಿ ಟೈಪ್ 2 ಮಧುಮೇಹ (ಇನ್ಸುಲಿನ್ ಅವಶ್ಯಕತೆ ಇಲ್ಲದವರು) ಹೊಂದಿರುವ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. ಮಧುಮೇಹಿಗಳೂ ಸಹ ಬಾಹ್ಯಾಕಾಶದಲ್ಲಿ ಸಾಮಾನ್ಯರಂತೆ ಕಾರ್ಯ ನಿರ್ವಹಿಸಬಲ್ಲರು, ಸುರಕ್ಷಿತವಾಗಿರಬಲ್ಲರು ಎಂದು ಸಾಬೀತುಪಡಿಸುವುದು ಈ ಸಂಶೋಧನೆಯ ಗುರಿ ಎಂದು ಡಾ‌. ಲೂಸೀ ಹೇಳಿದ್ದಾರೆ.

ವೈಯಕ್ತಿಕವಾಗಿ ತಾನೂ 'ಸೂಟ್ ರೈಡ್' ಪ್ರಯೋಗದ ಕುರಿತು ಉತ್ಸುಕರಾಗಿರುವುದಾಗಿ ಡಾ. ಲೂಸಿ ಹೇಳಿದ್ದಾರೆ. ಆಕ್ಸಿಯಮ್ ಸ್ಪೇಸ್ ಸಂಸ್ಥೆಗೆ ಈ ಯೋಜನೆ ಭವಿಷ್ಯದಲ್ಲಿ ಮಧುಮೇಹಿಗಳೂ ಸೇರಿದಂತೆ, ವಿವಿಧ ವಿಭಿನ್ನ ಜನರಿಗೆ ಬಾಹ್ಯಾಕಾಶದ ಬಾಗಿಲು ತೆರೆಯಲು ನೆರವಾಗಲಿದೆ. ಸೂಟ್ ರೈಡ್ ಬಾಹ್ಯಾಕಾಶ ಸಂಶೋಧನೆಯ ಫಲಿತಾಂಶಗಳು ಭೂಮಿಯಲ್ಲಿರುವ ಮಧುಮೇಹಿಗಳಿಗೂ ಉತ್ತಮ ಆರೋಗ್ಯ ಸೇವೆ ಒದಗಿಸಲು ನೆರವಾಗಬಲ್ಲವು ಎಂದು ಡಾ. ಲೂಸಿ ಆಶಾವಾದ ಹೊಂದಿದ್ದಾರೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com