ನೌಗಮ್ ಠಾಣಾ ಸ್ಫೋಟ: ರಸಾಯನಶಾಸ್ತ್ರ ಮತ್ತು ನಿರ್ಲಕ್ಷ್ಯಗಳ ದುರಂತ ಸಂಗಮ

ವಶಪಡಿಸಿಕೊಂಡಿದ್ದ 2,900 ಕೆಜಿಯಷ್ಟು ಸ್ಫೋಟಕ ವಸ್ತುಗಳು ಪೊಲೀಸ್ ಠಾಣೆಯಲ್ಲಿ ಸ್ಫೋಟಗೊಂಡಿದ್ದು, ಆ ತೀವ್ರತೆ 30 ಕಿಲೋಮೀಟರ್ ದೂರದ ತನಕವೂ ಕೇಳಿಸಿತ್ತು
ನೌಗಮ್ ಠಾಣಾ ಸ್ಫೋಟ: ರಸಾಯನಶಾಸ್ತ್ರ ಮತ್ತು ನಿರ್ಲಕ್ಷ್ಯಗಳ ದುರಂತ ಸಂಗಮ
Updated on

ಬಹುತೇಕ 3 ಟನ್‌ಗಳಷ್ಟು ಅತ್ಯಂತ ಅಸ್ಥಿರವಾದ ಸ್ಫೋಟಕಗಳನ್ನು ಅಜಾಗರೂಕತೆಯಿಂದ ಸಂಗ್ರಹಿಸಿಟ್ಟಿದ್ದು, ಅದು ಸಿಡಿಯಲು ಕಾಯುತ್ತಿದ್ದ ಟೈಮ್ ಬಾಂಬಿನಂತಾಗಿತ್ತು. ಅಮೋನಿಯಂ ನೈಟ್ರೇಟ್ ಹಿಂದಿನ ಅಪಾಯಕಾರಿ ರಸಾಯನಶಾಸ್ತ್ರ ಮತ್ತು ಕೆಲವು ರಾಸಾಯನಿಕಗಳನ್ನು ಮಿಶ್ರಣಗೊಳಿಸುವುದು ಹೇಗೆ ಬೆಂಕಿಯೊಡನೆ ಆಡವಾಡಿದಂತಾಗುತ್ತದೆ, ನೌಗಮ್‌ನಲ್ಲಿ ಒಂಬತ್ತು ಜನರು ಯಾಕೆ ಪ್ರಾಣ ಕಳೆದುಕೊಳ್ಳುವಂತಾಯಿತು ಎನ್ನುವುದನ್ನು ಈ ಲೇಖನದಲ್ಲಿ ಗಮನಿಸೋಣ.

ಶುಕ್ರವಾರ, ನವೆಂಬರ್ 14ರ‌ ರಾತ್ರಿ, ಶ್ರೀನಗರದ ನೌಗಮ್ ಪೊಲೀಸ್ ಠಾಣೆ ಕೇವಲ ಸ್ಫೋಟವೊಂದಕ್ಕೆ ಸಾಕ್ಷಿಯಾಗಲಿಲ್ಲ. ಬದಲಿಗೆ, ಅದು ಸ್ವತಃ ತಾನೇ ಸ್ಫೋಟಗೊಂಡಿತು! ವಶಪಡಿಸಿಕೊಂಡಿದ್ದ 2,900 ಕೆಜಿಯಷ್ಟು ಸ್ಫೋಟಕ ವಸ್ತುಗಳು ಪೊಲೀಸ್ ಠಾಣೆಯಲ್ಲಿ ಸ್ಫೋಟಗೊಂಡಿದ್ದು, ಆ ತೀವ್ರತೆ 30 ಕಿಲೋಮೀಟರ್ ದೂರದ ತನಕವೂ ಕೇಳಿಸಿತ್ತು. ಸ್ಫೋಟದಲ್ಲಿ 9 ಜನರು ಪ್ರಾಣ ಕಳೆದುಕೊಂಡು, ಅಂದಾಜು 29 ಜನರು ಗಾಯಗೊಂಡರು. ಆದರೆ, ಈ ದುರಂತ ಯಾಕೆ ಸಂಭವಿಸಿತು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾದರೆ, ವಶಪಡಿಸಿಕೊಂಡ ರಾಸಾಯನಿಕಗಳನ್ನು ಜೊತೆಯಾಗಿ, ಮುಕ್ತವಾಗಿ ಸಂಗ್ರಹಿಸಿಡುವುದು ಒಂದು ರೀತಿ ಬಾಂಬ್ ಒಂದನ್ನು ಜೋಡಿಸಿ, ಅದು ಸ್ಫೋಟಗೊಳ್ಳುವುದನ್ನೇ ಕಾಯುವಂತಿತ್ತು ಎನ್ನುವ ರಸಾಯನಶಾಸ್ತ್ರ ವಿಚಾರವನ್ನೂ ಅರಿಯಬೇಕು.

ನಾವು ಈ ಕತೆಯ ಪ್ರಮುಖ ಖಳನಾಯಕನಾದ ಅಮೋನಿಯಂ ನೈಟ್ರೇಟ್ ಅನ್ನು ಮೊದಲು ಅರಿಯಲು ಪ್ರಯತ್ನ ನಡೆಸೋಣ. 350 ಕೆಜಿಗೂ ಹೆಚ್ಚು ತೂಕದ ಅಮೋನಿಯಂ ನೈಟ್ರೇಟ್ ಅನ್ನು ಪೊಲೀಸ್ ಠಾಣೆಯಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಈ ಬೆಳ್ಳಗಿನ ಹರಳಿನಂತಹ ರಾಸಾಯನಿಕ ಮೇಲ್ನೋಟಕ್ಕೆ ನಿರಪಾಯಕಾರಿಯಾಗಿ, ರಸಗೊಬ್ಬರದಂತೆ (ವಾಸ್ತವವಾಗಿ ಇದು ರಸಗೊಬ್ಬರವೇ) ಕಾಣುತ್ತದೆ. ಆದರೆ, ಅಮೋನಿಯಂ ನೈಟ್ರೇಟ್ ಒಂದು ಕರಾಳ ಬದಿಯನ್ನೂ ಹೊಂದಿದೆ. ಇದೇ ಅಮೋನಿಯಂ ನೈಟ್ರೇಟ್ 2020ರಲ್ಲಿ ಬೈರುತ್ ಬಂದರು ಸ್ಫೋಟಕ್ಕೆ ಕಾರಣವಾಗಿದ್ದು, ಆ ಘಟನೆಯಲ್ಲಿ 200ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡು, ಸಾವಿರಾರು ಜನರು ಗಾಯಗೊಂಡರು. 1995ರಲ್ಲಿ 168 ಜನರ ಸಾವಿಗೆ ಕಾರಣವಾದ ಓಕ್ಲಹೋಮ ನಗರದ ಬಾಂಬ್ ಸ್ಫೋಟಕ್ಕೂ ಇದನ್ನು ಬಳಸಲಾಗಿತ್ತು. ಇದು ಶಕ್ತಿಶಾಲಿಯಾಗಿದ್ದು, ಪಡೆದುಕೊಳ್ಳುವುದು ಸುಲಭವಾಗಿದೆ, ಮತ್ತು ಸ್ಫೋಟಕವಾಗಿ ಬಳಸಿದಾಗ ಅನಾಹುತಕಾರಿಯಾಗಿರುವುದರಿಂದ ಭಯೋತ್ಪಾದಕರಿಗೆ ಅಚ್ಚುಮೆಚ್ಚಿನದಾಗಿದೆ.

ನೌಗಮ್ ಠಾಣಾ ಸ್ಫೋಟ: ರಸಾಯನಶಾಸ್ತ್ರ ಮತ್ತು ನಿರ್ಲಕ್ಷ್ಯಗಳ ದುರಂತ ಸಂಗಮ
ಮರುಕಳಿಸಿದ ಇತಿಹಾಸ: ನವದೆಹಲಿಯತ್ತ ಸ್ನೇಹ ಹಸ್ತ ಚಾಚಿದ ಕಾಬೂಲ್ (ಜಾಗತಿಕ ಜಗಲಿ)

ಅಮೋನಿಯಂ ನೈಟ್ರೇಟ್ ಯಾಕೆ ಇಷ್ಟು ಅಪಾಯಕಾರಿ ಎನ್ನುವುದರ ಹಿಂದೆ ವಿಜ್ಞಾನವಿದೆ. ತನ್ನ ಪಾಡಿಗೆ ಇದ್ದಾಗ ಇದು ಸ್ಥಿರವಾಗಿರುತ್ತದೆ. ಆದರೆ, ಇದನ್ನು ಮಲಿನಗೊಳಿಸಿದಾಗ, ಅಥವಾ ಇತರ ಉತ್ಪನ್ನಗಳೊಡನೆ ಬೆರೆಸಿದಾಗ, ಉಷ್ಣ, ಅನಿಲ ಮತ್ತು ಶಾಕ್ ವೇವ್‌ಗಳ ರೂಪದಲ್ಲಿ ಅಪಾರ ಪ್ರಮಾಣದಲ್ಲಿ ಶಕ್ತಿಯನ್ನು ಬಿಡುಗಡೆಗೊಳಿಸುತ್ತದೆ. ಸರಳವಾಗಿ ಹೇಳುವುದಾದರೆ, ಭಾರೀ ಸ್ಫೋಟಕ್ಕೆ ಕಾರಣವಾಗುತ್ತದೆ. ಇದರ ರಾಸಾಯನಿಕ ಸೂತ್ರ NH4NO3 ಆಗಿದ್ದು, ಸ್ಫೋಟದ ರೂಪದಲ್ಲಿ ನಶಿಸುವಾಗ ನೈಟ್ರೋಜನ್ ಅನಿಲ, ಆಮ್ಲಜನಕ, ಮತ್ತು ನೀರಿನ ಆವಿಯ ರೂಪದಲ್ಲಿ ವಿಘಟನೆಗೊಂಡು, ತೀವ್ರವಾಗಿ ವಿಸ್ತರಿಸುತ್ತಾ, ಅನಾಹುತಕಾರಿ ಸ್ಫೋಟವನ್ನು ಉಂಟುಮಾಡುತ್ತದೆ.

ನೌಗಮ್ ದುರ್ಘಟನೆ ಭೀಕರ ಎನಿಸುವುದು ಇಲ್ಲಿ. ಅಮೋನಿಯಂ ನೈಟ್ರೇಟ್ ಒಂದನ್ನೇ ಠಾಣೆಯಲ್ಲಿ ಸಂಗ್ರಹಿಸಿ ಇಟ್ಟಿರಲಿಲ್ಲ. ಅದನ್ನು ಪೊಟ್ಯಾಶ್, ರಂಜಕ, ಹಾಗೂ ಇತರ ಅಪಾಯಕಾರಿ ರಾಸಾಯನಿಕಗಳೊಡನೆ ಇಡಲಾಗಿತ್ತು. ಅದರಲ್ಲೂ ರಂಜಕ ಅಪಾಯಕಾರಿಯಾಗಿದೆ. ಬಿಳಿ ರಂಜಕವನ್ನು ಗಾಳಿಯಲ್ಲಿ ತೆರೆದಿಟ್ಟಾಗ, ಅದು ನಿರಂತರವಾಗಿ ಉರಿಯಲಾರಂಭಿಸಿ, ಅತ್ಯಂತ ಹೆಚ್ಚಿನ ತಾಪಮಾನದಲ್ಲಿ ದಹಿಸುತ್ತದೆ. ಪೊಟ್ಯಾಶ್ ಅದರ ವಿಧಕ್ಕೆ ಅನುಗುಣವಾಗಿ, ಆಮ್ಲಗಳು ಅಥವಾ ಆರ್ದ್ರತೆಯೊಡನೆ ವರ್ತಿಸಿ, ಶಾಖವನ್ನು ಸೃಷ್ಟಿಸುತ್ತದೆ. ಈ ಪ್ರತಿಕ್ರಿಯಾತ್ಮಕ ರಾಸಾಯನಿಕಗಳನ್ನು ಜೊತೆಯಾಗಿ, ತೆರೆದ ಪ್ರದೇಶದಲ್ಲಿ ತಾಪಮಾನ ಬದಲಾವಣೆ, ಆರ್ದ್ರತೆ, ಮತ್ತು ಸಂಭಾವ್ಯ ಬೆರಕೆಗೆ ಮುಕ್ತವಾಗಿ ಇರಿಸಿದಾಗ, ಒಂದು ಅನಾಹುತಕ್ಕೆ ಪೂರಕ ವ್ಯವಸ್ಥೆಗಳನ್ನು ನಿರ್ಮಿಸಿ ಕೊಟ್ಟಂತಾಗುತ್ತದೆ.

ಶನಿವಾರ ಬೆಳಗ್ಗೆ, ಜಮ್ಮು ಮತ್ತು ಕಾಶ್ಮೀರದ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ನಳಿನ್ ಪ್ರಭಾತ್ ಅವರು ಸಂಗ್ರಹಿಸಿಟ್ಟಿದ್ದ ಸ್ಫೋಟಕಗಳನ್ನು ವಿವರಿಸುವಾಗ 'ಅಸ್ಥಿರ' ಎಂಬ ಪ್ರಮುಖ ಪದವನ್ನು ಬಳಸಿದ್ದರು. ಈ ವಿಚಾರ ಅತ್ಯಂತ ಮಹತ್ವದ್ದಾಗಿದೆ. ರಸಾಯನಶಾಸ್ತ್ರದಲ್ಲಿ ಸ್ಥಿರತೆ ಎನ್ನುವುದು ಊಹಿಸುವಿಕೆಯನ್ನು ಸೂಚಿಸುತ್ತದೆ. ಅಸ್ಥಿರ ಸ್ಫೋಟಕಗಳನ್ನು ಊಹಿಸಲು ಸಾಧ್ಯವಿಲ್ಲ. ಅವುಗಳು ಶಾಖ, ಘರ್ಷಣೆ, ಆಘಾತ, ಮಿಶ್ರಣ, ಅಥವಾ ನಿರಂತರ ವಿಘಟನೆಯಿಂದಲೂ ಡೆಟೊನೇಟ್ ಆಗಬಲ್ಲವು. ಡಿಜಿಪಿ ಈ ಸ್ಫೋಟಕಗಳು ಅಸ್ಥಿರವಾಗಿದ್ದವು ಎಂದಾಗ, ಅದು ಒಂದು ರೀತಿಯಲ್ಲಿ ಗುಂಡು ತುಂಬಿ, ಸಿಡಿಯಲು ಸಿದ್ಧವಾದ ಬಂದೂಕಿನಂತಿತ್ತು ಎಂದರ್ಥ.

ಈ ದುರಂತದಲ್ಲಿ ಬಲಿಯಾದವರೆಲ್ಲ ತಮ್ಮ ಕೆಲಸದಲ್ಲಿ ನಿರತರಾಗಿದ್ದ ವೃತ್ತಿಪರರು. ಓರ್ವ ರಾಜ್ಯ ತನಿಖಾ ಸಂಸ್ಥೆಯ ಸದಸ್ಯ, ಮೂವರು ವಿಧಿವಿಜ್ಞಾನ (ಫೊರೆನ್ಸಿಕ್) ಪ್ರಯೋಗಾಲಯ ಸಿಬ್ಬಂದಿಗಳು, ಮತ್ತು ಇಬ್ಬರು ಅಪರಾಧ ಸ್ಥಳದ ಛಾಯಾಗ್ರಾಹಕರು, ಮ್ಯಾಜಿಸ್ಟ್ರೇಟರ ತಂಡದ ಇಬ್ಬರು ಕಂದಾಯ ಅಧಿಕಾರಿಗಳು, ಮತ್ತು ಈ ತಂಡದೊಡನೆ ಇದ್ದ ಓರ್ವ ದರ್ಜಿ ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅದರೊಡನೆ, 27 ಪೊಲೀಸ್ ಸಿಬ್ಬಂದಿ, ಇಬ್ಬರು ಕಂದಾಯ ಅಧಿಕಾರಿಗಳು, ಮತ್ತು ಆಸುಪಾಸಿನ ಮೂವರು ನಾಗರಿಕರು ಗಾಯಗೊಂಡಿದ್ದಾರೆ. ಅವರಾರಿಗೂ ತಾವು ಕೆಲಸ ಮಾಡುತ್ತಿರು ಸ್ಥಳದಲ್ಲಿರುವುದು ಒಂದು ಸಂಭಾವ್ಯ ರಾಸಾಯನಿಕ ಬಾಂಬ್ ಎಂಬ ಕಲ್ಪನೆಯೂ ಇದ್ದಂತಿರಲಿಲ್ಲ.

ಈ ಸ್ಫೋಟ ಒಂದು ಕಾನೂನು ಪ್ರಕ್ರಿಯೆಯಾದ, ವಿಧಿವಿಜ್ಞಾನ ಪರೀಕ್ಷೆಗಾಗಿ ಮಾದರಿ ಸಂಗ್ರಹಿಸುವ ಸಂದರ್ಭದಲ್ಲಿ ನಡೆದಿದೆ. ಮ್ಯಾಜಿಸ್ಟ್ರೇಟ್ ಮತ್ತು ಎಫ್ಎಸ್ಎಲ್ ತಂಡ ತಾವು ಯಾವ ಕಾರ್ಯ ನಡೆಸಬೇಕೋ ಅದನ್ನು ಕೈಗೊಳ್ಳಲು ಬಂದಿದ್ದರು. ರಸಾಯನಶಾಸ್ತ್ರದ ಪ್ರಕಾರ ನೋಡುವುದಾದರೆ, ಅಲ್ಲಿ ನಡೆದಿರುವ ಘಟನೆ ಇಂತಿದೆ: ಅಸ್ಥಿರವಾದ, ಇತರ ಪ್ರತಿಕ್ರಿಯಾತ್ಮಕ ರಾಸಾಯನಿಕಗಳೊಡನೆ ಬೆರೆತಿರುವ ಅಮೋನಿಯಂ ನೈಟ್ರೇಟ್ ಅನ್ನು ನಿರ್ವಹಿಸುವಾಗ, ಒಂದು ಸಣ್ಣ ಘಟನೆಯೂ ಅನಾಹುತಕ್ಕೆ ಕಾರಣವಾದೀತು. ಸಂಗ್ರಾಹಕಗಳನ್ನು ತೆರೆಯುವ ಸಂದರ್ಭದಲ್ಲಿ, ರಾಸಾಯನಿಕಗಳು ಗಾಳಿ ಮತ್ತು ಆರ್ದ್ರತೆಗೆ ತೆರೆದುಕೊಂಡಿರಬಹುದು. ಈ ರಾಸಾಯನಿಕಗಳನ್ನು ಸಾಗಿಸುವಾಗಲೂ ಘರ್ಷಣೆ ಅಥವಾ ಪರಿಣಾಮ ಉಂಟಾಗಿರುವ ಸಾಧ್ಯತೆಗಳಿವೆ. ಅವುಗಳ ತನಿಖೆಯ ಸಂದರ್ಭದಲ್ಲೇ, ಶಾಖ ಅಥವಾ ಸ್ಟ್ಯಾಟಿಕ್ ಇಲೆಕ್ಟ್ರಿಸಿಟಿಗೆ ಕಾರಣವಾಗಿರಬಹುದು. ಇವುಗಳಲ್ಲಿ ಯಾವ ಕಾರಣವೂ ಸರಣಿ ಪ್ರತಿಕ್ರಿಯೆಗಳಿಗೆ ಚಾಲನೆ ನೀಡಿರುವ ಸಾಧ್ಯತೆಗಳಿವೆ.

ಅಮೋನಿಯಂ ನೈಟ್ರೇಟ್ ಸ್ಫೋಟಿಸಲು ಯಾವಾಗಲೂ ಡೆಟೊನೇಟರ್ (ಆಸ್ಫೋಟಕ) ಅಗತ್ಯ ಇರುವುದಿಲ್ಲ. ಯಾವುದಾದರೂ ಜೈವಿಕ ವಸ್ತುವಿನಿಂದ (ಬಟ್ಟೆ, ಕಾಗದ, ಅಥವಾ ಎಣ್ಣೆಯಂತಹ ಸರಳ ವಸ್ತುವೂ) ಅದಕ್ಕೆ ಸಣ್ಣ ಪ್ರಮಾಣದ ಪ್ರಚೋದನೆ ಸಿಕ್ಕಂತಾದರೂ ಅದು ಸ್ಫೋಟಿಸಬಲ್ಲದು. ಸ್ವತಃ ತಾನೇ ದಹಿಸಬಲ್ಲ ರಂಜಕದ ಬಳಿ ಇಟ್ಟರೆ, ಒಂದು ಆಂತರಿಕ ದಹನ ಮೂಲವನ್ನೂ ಇರಿಸಿದಂತಾಗುತ್ತದೆ. ಇವುಗಳೊಡನೆ ಅಲ್ಲಿಟ್ಟಿದ್ದ ಸರ್ಕ್ಯುಟ್‌ಗಳು, ಬ್ಯಾಟರಿಗಳು, ವಯರ್‌ಗಳು, ರಿಮೋಟ್ ಕಂಟ್ರೋಲ್‌ಗಳು, ಟೈಮರ್‌ಗಳು ಮತ್ತು ಲೋಹದ ಹಾಳೆಗಳನ್ನೂ ಸೇರಿಸಿದರೆ, ಸ್ಫೋಟಕ್ಕೆ ಬೇಕಾಗುವ ಸಂಭಾವ್ಯ ವಿದ್ಯುತ್ ಕಿಡಿಗಳು ಮತ್ತು ಹೆಚ್ಚುವರಿ ಇಂಧನವೂ ಲಭಿಸಿದಂತಾಗುತ್ತದೆ.

ಕೆಂಪು ಕೋಟೆಯ ಭಯೋತ್ಪಾದಕ ದಾಳಿ ಪ್ರಕರಣದ ತನಿಖೆಯ ವೇಳೆ ವಶಪಡಿಸಿಕೊಂಡ 2,900 ಕೆಜಿಯಷ್ಟು ಸ್ಫೋಟಕಗಳ ಜೊತೆಗೆ ದಹನಶೀಲ ವಸ್ತುಗಳೂ ಇದ್ದವು. ದಹನಶೀಲ ವಸ್ತುಗಳನ್ನು ಅಮೋನಿಯಂ ನೈಟ್ರೇಟ್‌ನಂತಹ ಆಮ್ಲಜನಕ ಬಿಡುಗಡೆಗೊಳಿಸುವ ವಸ್ತುಗಳ ಜೊತೆಗೆ ಸೇರಿಸಿದಾಗ, ರಸಾಯನಶಾಸ್ತ್ರಜ್ಞರು 'ಇಂಧನ ಆಕ್ಸಿಡೈಸರ್'ಗಳು ಎಂದು ಕರೆಯುವ ಮಿಶ್ರಣ ತಯಾರಾಗುತ್ತದೆ. ಇದು ಭಾರೀ ಸ್ಫೋಟಕ್ಕೆ ಸೂಕ್ತವಾದ ವ್ಯವಸ್ಥೆ.

ಈ ಸಂಪೂರ್ಣ ಅಪಾಯಕಾರಿ ಮಿಶ್ರಣಗಳನ್ನು ತಾಪಮಾನ ನಿಯಂತ್ರಿತ ವ್ಯವಸ್ಥೆಯಲ್ಲಿ ಇರಿಸುವ ಬದಲು, ಪೊಲೀಸ್ ಠಾಣೆಯ ಬಳಿ ತೆರೆದ ಪ್ರದೇಶದಲ್ಲಿ ಇಡಲಾಗಿತ್ತು. ಅವುಗಳನ್ನು ರಸಾಯನ ಹೊಂದಾಣಿಕೆಯ ಆಧಾರದಲ್ಲಿ ಪ್ರತ್ಯೇಕಿಸಿರಲೂ ಇಲ್ಲ, ಸ್ಫೋಟ ನಿರೋಧಕ ಸಂಗ್ರಾಹಕಗಳಲ್ಲೂ ಇರಿಸಿರಲಿಲ್ಲ. ಸ್ಫೋಟಕಗಳ ತಜ್ಞರನ್ನೂ ಸಂಪರ್ಕಿಸಿರಲಿಲ್ಲ. ಶ್ರೀನಗರದ ಬದಲಾಗುತ್ತಿರುವ ಹವಾಮಾನದಲ್ಲಿ, ಅಂದರೆ ಬೇಸಿಗೆಯ ಬಿಸಿಲು ಮಳೆ ಚಳಿಗಾಲದ ತಂಪು ರಾಸಾಯನಿಕಗಳನ್ನು ವಿಸ್ತರಿಸುವ, ಸಂಪರ್ಕಿಸುವಂತೆ ಮಾಡುವ, ಒಂದಕ್ಕೊಂದು ಪ್ರತಿಕ್ರಿಯಿಸುವಂತೆ ಮಾಡುವ ಸನ್ನಿವೇಶದಲ್ಲಿ ಅವುಗಳನ್ನು ಹಾಗೇ ಇಡಲಾಗಿತ್ತು.

ರಾಸಾಯನಿಕಗಳನ್ನು ವಶಪಡಿಸಿಕೊಂಡ ಕಾರ್ಯಾಚರಣೆ ಅತ್ಯಂತ ಮಹತ್ವದ್ದಾಗಿತ್ತು. ಇದು ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಅಪಾಯಕಾರಿ ಭಯೋತ್ಪಾದನಾ ಮಾದರಿಯನ್ನು ಬಯಲಿಗೆಳೆದಿತ್ತು. ಫರಿದಾಬಾದ್‌ ಮತ್ತು ಸಹರಾನ್‌ಪುರದ ಮೂವರು ವೈದ್ಯರನ್ನು ಬಂಧಿಸಲಾಗಿದ್ದು, ನಾಲ್ಕನೇ ವೈದ್ಯ ಉಮರ್ ನಬಿ ಇನ್ನೂ ಪತ್ತೆಯಾಗಿಲ್ಲ. ಒಂದು ಭಯೋತ್ಪಾದನಾ ದಾಳಿಯನ್ನು ತಡೆಯುವ ನಿಟ್ಟಿನಲ್ಲಿ, ಅಧಿಕಾರಿಗಳು ಭಯೋತ್ಪಾದಕರು ಯೋಜಿಸಿದ್ದ ಅದೇ ದುರ್ಘಟನೆ ನಡೆಯುವಂತೆ ಮಾಡಿದ್ದರು.

ಹಾಗಾದರೆ ನಿಜಕ್ಕೂ ಅಲ್ಲಿ ಏನಾಗಬೇಕಿತ್ತು? ಪೊಲೀಸರು ಬಹುತೇಕ 3 ಟನ್ ಅಸ್ಥಿರ ಸ್ಫೋಟಕಗಳನ್ನು ವಶಪಡಿಸಿಕೊಂಡಾಗ, ವಿಶೇಷ ಬಾಂಬ್ ನಿಷ್ಕ್ರಿಯ ದಳಗಳನ್ನು ಕರೆಸಬೇಕಿತ್ತು. ಈ ವಸ್ತುಗಳನ್ನು ತಕ್ಷಣವೇ ಸ್ಫೋಟಕಗಳನ್ನು ಇಡುವ ವ್ಯವಸ್ಥೆ ಇರುವ ಮಿಲಿಟರಿ ಆಯುಧಾಗಾರಕ್ಕೆ ರವಾನಿಸಬೇಕಿತ್ತು. ಪ್ರತಿಯೊಂದು ರಾಸಾಯನಿಕವನ್ನೂ ಪ್ರತ್ಯೇಕಗೊಳಿಸಿ, ಸುರಕ್ಷತಾ ಅವಶ್ಯಕತೆಗಳಿಗೆ ಅನುಗುಣವಾಗಿ ಇಡಬೇಕಿತ್ತು. ತಾಪಮಾನ ಮತ್ತು ಆರ್ದ್ರತೆಗಳನ್ನು ನಿಯಂತ್ರಿಸಬೇಕಿತ್ತು. ಯಾವುದೇ ಪರಿಶೀಲನೆ ಇದ್ದರೂ, ಸುರಕ್ಷಿತಾ ಉಪಕರಣಗಳನ್ನು ಧರಿಸಿರುವ, ಸ್ಫೋಟಕ ನಿಷ್ಕ್ರಿಯಾ ತಜ್ಞರು ಜನನಿಬಿಡ ಪ್ರದೇಶದಿಂದ ದೂರದಲ್ಲಿ ನಡೆಸಬೇಕಿತ್ತು.

ಇದೆಲ್ಲದರ ಬದಲು, ಅಪಾಯಕಾರಿ ರಾಸಾಯನಿಕಗಳು ನಿತ್ಯವೂ ಅಧಿಕಾರಿಗಳು ಕಾರ್ಯಾಚರಿಸುವ, ಜನರು ದೂರು ದಾಖಲಿಸಲು ಬರುವ, ಎಫ್ಎಸ್ಎಲ್ ತಂಡ ಮತ್ತು ಮ್ಯಾಜಿಸ್ಟ್ರೇಟರ ಸಿಬ್ಬಂದಿಗಳು ದೈನಂದಿನ ಪರಿಶೀಲನೆಗೆ ಬರುವ ಪೊಲೀಸ್ ಠಾಣೆಯ ತೆರೆದ ಪ್ರದೇಶದಲ್ಲಿ ಸಂಗ್ರಹಿಸಿ ಇಟ್ಟಿದ್ದರು. ಆದರೆ ಅವರು ಯಾರಿಗೂ ತಾವು ಸಾವಿನ ಬಲೆಯೊಳಗೆ ಕಾಲಿಡುತ್ತಿದ್ದೇವೆ ಎಂಬ ಕಲ್ಪನೆಯೂ ಇರಲಿಲ್ಲ.

ನೌಗಮ್ ಠಾಣಾ ಸ್ಫೋಟ: ರಸಾಯನಶಾಸ್ತ್ರ ಮತ್ತು ನಿರ್ಲಕ್ಷ್ಯಗಳ ದುರಂತ ಸಂಗಮ
ಬಾಗ್ರಾಮ್ ಜೂಜು: ಅಮೆರಿಕದ ಅಪಾಯಕಾರಿ ಪುನರಾಗಮನ (ಜಾಗತಿಕ ಜಗಲಿ)

ರಸಾಯನಶಾಸ್ತ್ರ ಸುಳ್ಳು ಹೇಳುವುದಿಲ್ಲ. ಅಮೋನಿಯಂ ನೈಟ್ರೇಟ್ ಮತ್ತು ಶಾಖ ಮತ್ತು ಮಿಶ್ರಣ ಮತ್ತು ಇತರ ಪ್ರತಿಕ್ರಿಯಾತ್ಮಕ ರಾಸಾಯನಿಕಗಳು ಜೊತೆಯಾದವು ಎಂದರೆ ಸ್ಫೋಟ ಸಂಭವಿಸುತ್ತದೆ. ಇದು ಸ್ಫೋಟ ಆದರೆ ಎಂಬ ಪ್ರಶ್ನೆಯ ಬದಲು, ಸ್ಫೋಟ ಯಾವಾಗ ಎಂಬ ಪ್ರಶ್ನೆಯನ್ನು ಮೂಡಿಸುತ್ತದೆ. ನೌಗಮ್ ಈ ಪ್ರಶ್ನೆಗೆ ಒಂಬತ್ತು ಜೀವಗಳೊಡನೆ ಉತ್ತರಿಸಿದೆ.

ನಮ್ಮ ಬಳಿ ಸ್ಫೋಟಕ ರಸಾಯನಶಾಸ್ತ್ರದ ಜ್ಞಾನ ಹೊಂದಿರುವ ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ ಇದೆ, ಸೇನಾ ಬಾಂಬ್ ನಿಷ್ಕ್ರಿಯ ದಳ ಇದೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ತಜ್ಞರಿದ್ದಾರೆ. ಸ್ಫೋಟಕಗಳು ಅಪಾಯಕಾರಿ ಎಂಬ ಕಾರಣದಿಂದಾಗಿಯೇ ವಿಶೇಷ ಶಿಷ್ಟಾಚಾರಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇಷ್ಟಾದರೂ , ಬಹುತೇಕ ಮೂರು ಟನ್‌ಗಳಷ್ಟು ಅಸ್ಥಿರ ಬಾಂಬ್ ಉತ್ಪಾದನಾ ಸಾಮಗ್ರಿಗಳನ್ನು ಅಜಾಗರೂಕತೆಯಿಂದ ಒಂದು ಪೊಲೀಸ್ ಠಾಣೆಯಲ್ಲಿ ಇಡಲಾಗಿತ್ತು.

ಇದು ಭಯೋತ್ಪಾದನೆಯಲ್ಲ. ಇದು ರಸಾಯನಶಾಸ್ತ್ರ ಮತ್ತು ಅಜಾಗರೂಕತೆಯ ಸಮ್ಮಿಲನವಾಗಿತ್ತು. ಸ್ಫೋಟಕಗಳನ್ನು ಸರಿಯಾಗಿ ಸಂಗ್ರಹಿಸಿ ಇಡಬೇಕಾದ ಕ್ರಮವನ್ನು ಅನುಸರಿಸಬೇಕಾಗಿಲ್ಲ ಎಂದು ಯಾರೋ ತೀರ್ಮಾನಿಸಿದ್ದರ ಪರಿಣಾಮವಾಗಿ ಇಂದು ಒಂಬತ್ತು ಕುಟುಂಬಗಳು ಶೋಕಿಸುತ್ತಿವೆ. ಆದೇಶದ ಸರಣಿಯಲ್ಲಿ ಎಲ್ಲಿಯೋ ಈ ಉತ್ಪನ್ನಗಳನ್ನು ನಿರಪಾಯಕಾರಿ ಎಂದು ಅಪಾರ್ಥ ಮಾಡಿಕೊಳ್ಳಲಾಗಿದೆ, ಅಥವಾ ನಿರ್ಲಕ್ಷಿಸಲಾಗಿದೆ.

ನೌಗನ್ ಸ್ಫೋಟದ ಬಳಿಕ, ಈಗ ವಶಪಡಿಸಿಕೊಂಡ ಸ್ಫೋಟಕಗಳನ್ನು ಹೇಗೆ ಸಂಗ್ರಹಿಸಲಾಗಿದೆ ಎಂಬ ಕುರಿತು ದೇಶಾದ್ಯಂತ ಪರಿಶೀಲನೆ ನಡೆಸಬೇಕು. ರಾಸಾಯನಿಕ ಪುರಾವೆಗಳನ್ನು ಸಂಗ್ರಹಿಸಿ ಇಟ್ಟಿರುವ ಪ್ರತಿಯೊಂದು ಪೊಲೀಸ್ ಠಾಣೆಯನ್ನೂ ತಕ್ಷಣವೇ ತನಿಖೆಗೊಳಪಡಿಸಬೇಕು. ಬಹುತೇಕ ಮೂರು ಟನ್ ಅಸ್ಥಿರ ಸ್ಫೋಟಕಗಳನ್ನು ಪೊಲೀಸ್ ಠಾಣೆಯಲ್ಲಿ ಮಾಮೂಲಿಯಾಗಿ ಸಂಗ್ರಹಿಸಿಡಲು ಆದೇಶ ನೀಡಿದವರನ್ನು ಇದಕ್ಕೆ ಜವಾಬ್ದಾರಿಯಾಗಿಸಬೇಕು.

ರಸಾಯನಶಾಸ್ತ್ರ ನಿಯಮಗಳನ್ನು ಅನುಸರಿಸುತ್ತದೆ. ಅಸ್ಥಿರ ಸ್ಫೋಟಕಗಳ ಮೂಲಕ ಆ ನಿಯಮಗಳನ್ನು ಮುರಿದರೆ, ಜನರು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ನೌಗಮ್ ಘಟನೆ ಇದನ್ನು ದುರಂತಮಯವಾಗಿ ಸಾಬೀತುಪಡಿಸಿದೆ. ಇಂತಹ ಘಟನೆ ಇನ್ನೊಂದು ಬಾರಿ ನಡೆಯದಂತೆ ನಾವು ಜಾಗರೂಕತೆ ವಹಿಸಲೇಬೇಕು.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com