

ಕರ್ನಾಟಕದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್ ಧೋರಣೆ ಇವತ್ತು ಹೇಗಿದೆ ನೋಡಿ. ರಾಜ್ಯದಲ್ಲಿ ಅಧಿಕಾರದ ಗದ್ದುಗೆಯಲ್ಲಿರುವ ಕಾಂಗ್ರೆಸ್ಸಿನಲ್ಲಿ ಅಧಿಕಾರ ಹಸ್ತಾಂತರದ ಗೊಂದಲ. ಪ್ರತಿಪಕ್ಷ ಬಿಜೆಪಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಶಾಸಕ ಬಿ.ವೈ.ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕೆಂಬ ಒತ್ತಡ. ಆದರೆ, ಈ ಎರಡೂ ಪಕ್ಷಗಳ ಹೈಕಮಾಂಡ್ ತನ್ನ ನಿಲುವನ್ನು ಪ್ರಕಟಿಸುತ್ತಿಲ್ಲ.
ಕಾಂಗ್ರೆಸ್ ನಲ್ಲಿ ಅಧಿಕಾರ ಹಸ್ತಾಂತರ ಒಪ್ಪಂದ ಆಗಿದೆಯೇ ಇಲ್ಲವೇ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಹೇಳುತ್ತಿಲ್ಲ. ಇತ್ತ ಬಿಜೆಪಿಯಲ್ಲಿ ವಿಜಯೇಂದ್ರ ಮುಂದುವರಿಯುತ್ತಾರೆಯೇ ಅಥವ ಬದಲಾವಣೆ ಇದೆಯೇ ಎಂಬುದನ್ನೂ ಬಿಜೆಪಿ ವರಿಷ್ಠರು ಸ್ಪಷ್ಟಪಡಿಸುತ್ತಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್‌ಗಳು ಮೌನಕ್ಕೆ ಜೋತು ಬಿದ್ದಿವೆ. ಫಲಿತಾಂಶ - ಕಾಂಗ್ರೆಸ್ಸಿನ ಅಧಿಕಾರ ಹಸ್ತಾಂತರದ ಗೊಂದಲದಿಂದ ಆಡಳಿತ ಯಂತ್ರದ ಮೇಲೆ ಪ್ರತಿಕೂಲ ಪರಿಣಾಮ. ಸರಕಾರದ ಇಮೇಜಿಗೂ ಧಕ್ಕೆ. ಬಿಜೆಪಿಯಲ್ಲಿರುವ ಅಸಮಾಧಾನ ಪ್ರತಿಪಕ್ಷವಾಗಿ ಸಮರ್ಥವಾಗಿ ಕಾರ್ಯನಿರ್ವಹಣೆಯಲ್ಲಿ ವೈಫಲ್ಯ. ಸಂಘಟನೆ ದುರ್ಬಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಅಧಿಕಾರ ಹಸ್ತಾಂತರದ ಗೊಂದಲವಿದೆ. ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಇದೀಗ ಬರೋಬ್ಬರಿ ಎರಡೂವರೆ ವರ್ಷ. ಒಪ್ಪಂದ ಏರ್ಪಟ್ಟಿದ್ದರೆ ಉಳಿದ ಎರಡೂವರೆ ವರ್ಷಗಳ ಅಧಿಕಾರ ಅವಧಿ ಶಿವಕುಮಾರ್ ಅವರದ್ದಾಗಬೇಕು. ಶಿವಕುಮಾರ್ ಅವರದ್ದು ಇದೇ ಪಟ್ಟು. ಆದರೆ, ಗಾದಿ ಬಿಡಲು ಸಿದ್ದರಾಮಯ್ಯ ಸುತರಾಂ ಸಿದ್ದರಿಲ್ಲ. ಏಕೆಂದರೆ ಅವರ ಪ್ರಕಾರ ಅಂತಹ ಯಾವುದೇ ಒಪ್ಪಂದ ಆಗಿಲ್ಲ. ಒಪ್ಪಂದ ಆಗಿದ್ದರೆ ಆಗಿದೆ ಎಂದು ಹೇಳಲು ಶಿವಕುಮಾರ್ ತಯಾರಿಲ್ಲ. ಆದರೆ, ಪ್ರಯತ್ನ ಬಿಟ್ಟಿಲ್ಲ. ಆದರೆ, ಶಿವಕುಮಾರ್ ಸಹೋದರ, ಮಾಜಿ ಸಂಸದ, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರು ಸಿಎಂ ಸಿದ್ದರಾಮಯ್ಯ ಅವರು ಎಂದೂ ಕೊಟ್ಟ ಮಾತನ್ನು ತಪ್ಪುವವರಲ್ಲ. ಅವರು ಯಾರಿಗೆ ಮಾತು ಕೊಟ್ಟರೂ ತಪ್ಪುವುದಿಲ್ಲ ಎಂದಿರುವುದು ಕುತೂಹಲ ಮೂಡಿಸಿದೆ.
ಸಿದ್ದರಾಮಯ್ಯ ಅವರು ಕೆಲವು ತಿಂಗಳ ಹಿಂದೆ ದೆಹಲಿಯ ಹೈಕಮಾಂಡ್ ಅಂಗಳದಲ್ಲೇ ನಿಂತು ಇಂತಹ ಯಾವುದೇ ಒಪ್ಪಂದ ಆಗಿಯೇ ಇಲ್ಲ. ಶಿವಕುಮಾರ್ ಅವರಿಗೆ ಶಾಸಕರ ಬೆಂಬಲವೂ ಇಲ್ಲ. ಉಳಿದ ಅವಧಿಗೂ ನಾನೇ ಮುಖ್ಯಮಂತ್ರಿ. ಮುಂದಿನ ಬಾರಿಗೂ ತಮ್ಮ ನೇತೃತ್ವದಲ್ಲೇ ಚುನಾವಣೆ ಎಂದು ಮೊದಲ ಬಾರಿಗೆ ಸಾರಿದ್ದರು. ಆಗ ಹೈಕಮಾಂಡ್ ಆಗಲಿ, ಶಿವಕುಮಾರ್ ಆಗಲಿ ಪ್ರತಿಕ್ರಿಯೆಯನ್ನೇ ನೀಡಲಿಲ್ಲ. ಅಲ್ಲಿಗೆ ಇದು ಮುಗಿದ ಅಧ್ಯಾಯ ಆಗಬೇಕಿತ್ತು. ಆದರೆ, ಆಗಲಿಲ್ಲ.
ಕೆಲವು ದಿನಗಳ ನಂತರ ಸಿದ್ದರಾಮಯ್ಯ ಅವರೇ ಮೆದುವಾದರು. ಹೈಕಮಾಂಡ್ ತೀರ್ಮಾನಿಸಿದರೆ ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ರಕ್ಷಣಾತ್ಮಕ ಆಟ ಆಡಿದರು. ನಂತರ ಪರ್ಯಾಯ ನಾಯಕರ ಹೆಸರು ಪ್ರಸ್ತಾಪವಾಗತೊಡಗಿತು. ಸಿದ್ದರಾಮಯ್ಯ ಅವರ ಪುತ್ರ, ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಸಚಿವ ಸತೀಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಎಂದಿದ್ದು ವಿವಾದದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯಿತು. ಈ ನಡುವೆ ದಲಿತ ಮುಖ್ಯಮಂತ್ರಿ ಕೂಗು ಎದ್ದಿತು.
ಇಲ್ಲಿ ಮೂಲಭೂತವಾದ ಪ್ರಶ್ನೆ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರ ಮಧ್ಯೆ ಅಧಿಕಾರ ಹಸ್ತಾಂತರದ ಒಪ್ಪಂದ ಆಗಿದೆಯೇ? ಡಾ.ಜಿ.ಪರಮೇಶ್ವರ್ ಅವರಂತಹ ಹಿರಿಯ ಸಚಿವರಿಗೂ ಇಂತಹ ಒಪ್ಪಂದದ ಬಗ್ಗೆ ಗೊತ್ತಿಲ್ಲ. ನಾಯಕತ್ವ ಬದಲಾವಣೆ ಗೊಂದಲವನ್ನು ಹೈಕಮಾಂಡ್ ಬಗೆಹರಿಸಲಿ ಎಂದು ಹಿರಿಯ ಸಚಿವರು ದೆಹಲಿ ಕಡೆ ನೋಟ ಹರಿಸಿದ್ದಾರೆ. ಆದರೆ, ಹೈಕಮಾಂಡ್ ಮೌನಕ್ಕೆ ಶರಣು. ಈ ಗೊಂದಲ ಬಹಳ ದಿನಗಳ ಕಾಲ ಮುಂದುವರಿಯಲು ಬಿಟ್ಟರೆ ರಾಜ್ಯದ ಆಡಳಿತ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂಬ ಸತ್ಯ ಹೈಕಮಾಂಡ್‌ಗೆ ಗೊತ್ತಿದೆ. ಪಕ್ಷದ ಇಮೇಜಿಗೆ ಧಕ್ಕೆಯಾಗುತ್ತಿರುವುದು ತಿಳಿದಿದೆ. ಆದರೂ ಮೌನ. ಏಕೆ?
ಅದು ಎರಡೂವರೆ ವರ್ಷಗಳ ಹಿಂದಿನ ವಿದ್ಯಮಾನಗಳು. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದಿತ್ತು. ಆದರೆ, ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕಗ್ಗಂಟಾಯಿತು. ದೆಹಲಿಯ ಹೈಕಮಾಂಡ್ ಅಂಗಳದಲ್ಲಿ ಬೆಳವಣಿಗೆಗಳಾದವು. ಶಿವಕುಮಾರ್ ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದರು. ಕೊನೆಗೆ ಉಪ ಮುಖ್ಯಮಂತ್ರಿ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಕೆಯಿಂದಾಗಿ ಬಿಕ್ಕಟ್ಟು ಬಗೆಹರಿದಿತ್ತು. ಈ ಹಂತದಲ್ಲೇ ಅಧಿಕಾರ ಹಸ್ತಾಂತರದ ಒಪ್ಪಂದ ಆಗಿದೆಯೇ? ಇಲ್ಲವೇ? ಎಂಬುದೇ ಪ್ರಶ್ನೆ.
ಸಿದ್ದರಾಮಯ್ಯ ಹಾಗೂ ಶಿವಕುಮಾರ್ ನಡುವಿನ ಸಂಘರ್ಷದ ಒಡಲಲ್ಲೇ ಹೊಸ ಸರಕಾರ ರಚನೆಯಾಯಿತು. ಒಂದೇ ಪಕ್ಷದ ಸರಕಾರವಾದರೂ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಎರಡು ಅಧಿಕಾರ ಕೇಂದ್ರವಿದೆ. ಹೀಗಾಗಿ, ಎರಡು ಪಕ್ಷಗಳ ಸಮ್ಮಿಶ್ರ ಸರಕಾರದಂತೆ ಈ ಸರಕಾರ ಭಾಸವಾಗುತ್ತದೆ ಎಂಬ ಟೀಕೆಯೂ ಇದೆ.
ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಈಗ ತಮ್ಮ ದಾಳಗಳನ್ನು ಉರುಳಿಸತೊಡಗಿದ್ದಾರೆ. ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರಿಯಲು, ಶಿವಕುಮಾರ್ ಸಿಎಂ ಸ್ಥಾನಕ್ಕೆ ಏರಲು ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಇಬ್ಬರೂ ನಾಯಕರು ದೆಹಲಿಯ ವರಿಷ್ಠರನ್ನು ಭೇಟಿ ಮಾಡಿ ಚರ್ಚಿಸಿ ಬಂದಿದ್ದಾರೆ.
ಸಂಪುಟ ಪುನಾರಚನೆಯ ಸಿದ್ದರಾಮಯ್ಯ ಅವರ ಮನವಿಗೆ ಹೈಕಮಾಂಡ್ ಒಪ್ಪಿದರೆ ಸಿದ್ದರಾಮಯ್ಯ ನಾಯಕತ್ವ ಮುಂದುವರಿಯುವುದು ಖಚಿತ. ಹೀಗಾಗಿಯೇ ಶಿವಕುಮಾರ್ ಸಂಪುಟ ಪುನಾರಚನೆ ಬೇಡ ಎಂದು ಪಟ್ಟು ಹಿಡಿದಿದ್ದಾರೆ. ಹೈಕಮಾಂಡ್ ಯಥಾಸ್ಥಿತಿ ಮುಂದುವರಿಕೆಗೆ ಒಲವು ತೋರಿದೆ ಎಂಬ ವರದಿ ಇದೆ. ಈ ಯಥಾಸ್ಥಿತಿಯನ್ನೂ ಬಹಳ ಕಾಲ ಮುಂದುವರಿಸಲು ಸಾಧ್ಯವಿಲ್ಲ.
ಸದ್ಯಕ್ಕೆ ಯಥಾಸ್ಥಿತಿ ಮುಂದುವರಿದರೆ ನಾಯಕತ್ವ ಬದಲಾವಣೆಯೂ ಇಲ್ಲ, ಸಂಪುಟ ಪುನಾರಚನೆಯೂ ಇಲ್ಲ. ಈ ಪರಿಸ್ಥಿತಿಯಲ್ಲೇ ಶಿವಕುಮಾರ್ ಬೆಂಗಳೂರಿನಲ್ಲಿ ಮೊನ್ನೆ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಒಬ್ಬ ಕೆಲಸ ಮಾಡುವವನು, ಮತ್ತೊಬ್ಬ ಇದರ ಲಾಭ ಪಡೆಯುವವನು ಎಂಬ ಮಾತನ್ನು ಉಲ್ಲೇಖಿಸಿರುವುದು ಗಮನಾರ್ಹ. ಶಿವಕುಮಾರ್ ತಮ್ಮ ದುಡಿಮೆಗೆ ಕೂಲಿ ಕೇಳುತ್ತಿದ್ದಾರೆ. ಕೂಲಿ ಕೊಡುವವರು ದೆಹಲಿಯಲ್ಲಿ ಕುಳಿತಿದ್ದಾರೆ.
ಈ ನಡುವೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ತೊರೆಯುವ ಸುಳಿವನ್ನು ನೀಡಿರುವುದು ಕುತೂಹಲಕಾರಿ ಬೆಳವಣಿಗೆಯಾಗಿದೆ. ಇದು ಶಿವಕುಮಾರ್ ಅವರ ಹತಾಶೆಯ ಹೇಳಿಕೆ ಅಥವಾ ಒತ್ತಡದ ತಂತ್ರ ಇರಬಹುದು. ಅವರ ಪರವಾದ ಮುಂದಿನ ವಿದ್ಯಮಾನಗಳ ಮುನ್ಸೂಚನೆಯೂ ಆಗಿರಬಹುದು.
ರಾಜ್ಯದಲ್ಲಿ ಮೇ, 2023 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಗೊಂದಲ ಇದ್ದೇ ಇದೆ. ಚುನಾವಣೆಗೆ ಮುನ್ನ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಹೆಗಲ ಮೇಲೆ ಕೈ ಹಾಕಿ ರಾಜ್ಯದಲ್ಲಿ ಪ್ರವಾಸ ಮಾಡಿದವರು. ಈ ಇಬ್ಬರು ನಾಯಕರಲ್ಲಿ ಆಗಿದ್ದ ಒಗ್ಗಟ್ಟು ಈಗ ಕಂಡು ಬರುತ್ತಿಲ್ಲ.
ಸಿದ್ದರಾಮಯ್ಯ ಸರಕಾರ ಗ್ಯಾರಂಟಿ ಯೋಜನೆಗಳಿಂದ ಮೇಲೆದ್ದಿಲ್ಲ. ಗ್ಯಾರಂಟಿ ಯೋಜನೆಗಳ ಅನುಷ್ಠಾನವನ್ನೇ ಸರಕಾರದ ಸಾಧನೆ ಎಂದು ಬಿಂಬಿಸಿಕೊಳ್ಳಬೇಕಿದೆ. ಚುನಾವಣಾ ಪ್ರಣಾಳಿಕೆಯಲ್ಲಿದ್ದ ಅನೇಕ ಆಶ್ವಾಸನೆಗಳು ಈಡೇರಿಲ್ಲ. ಅನೇಕ ಸಚಿವರಿಗೆ ಕಾರ್ಯ ನಿರ್ವಹಿಸಲು ಉತ್ಸಾಹವೇ ಇಲ್ಲ. ಕೆಲವು ಸಚಿವರು ರಾಜಧಾನಿ ಹಾಗೂ ತಮ್ಮ ತವರು ಜಿಲ್ಲೆ ಬಿಟ್ಟು ರಾಜ್ಯದ ಎಲ್ಲೆಡೆ ಪ್ರವಾಸ ಮಾಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಅವಧಿಗೆ ಹೋಲಿಸಿದರೆ ಎರಡನೇ ಅವಧಿಯಲ್ಲಿ ಹುರುಪು ಕಳೆದುಕೊಂಡಿದ್ದಾರೆ. ಆಡಳಿತದ ಮೇಲೆ ಬಿಗಿ ಹಿಡಿತವಿಲ್ಲ.
ಬಿಹಾರದಲ್ಲಿ ಮಹಾಘಟಬಂಧನ್‌ಗೆ ಹೀನಾಯ ಸೋಲಾಗಿರುವುದು ರಾಜ್ಯ ಕಾಂಗ್ರೆಸ್ ಮೇಲೆ ಪ್ರತಿಕೂಲ ಪರಿಣಾಮ ಬೀರುವುದೇ ಇಲ್ಲ ಎನ್ನಲಾಗದು. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿ ವಿಧಾನಸಭಾ ಚುನಾವಣೆಗೂ ಮುಂದುವರಿದರೆ ಕಾಂಗ್ರೆಸ್ ಪರಿಸ್ಥಿತಿ ಕಷ್ಟವಾಗಲಿದೆ. ರಾಜ್ಯದ ಕಾಂಗ್ರೆಸ್ ಸರಕಾರ ನುಡಿದಂತೆ ನಡೆದವರು ಎಂದು ಹೇಳಿಕೊಳ್ಳುತ್ತಿತ್ತು. ಆದರೆ, ಈಗ ಆ ಮಾತನ್ನು ಹೇಳುವ ಆತ್ಮವಿಶ್ವಾಸ ಇದೆಯೇ?
- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com
Advertisement