

ನಾವು ಸೇವಿಸುವ ಆಹಾರದಲ್ಲಿರುವ ಪ್ಯೂರಿನ್ ಎಂಬ ರಾಸಾಯನಿಕ ಜೀರ್ಣಕ್ರಿಯೆಯ ಸಮಯದಲ್ಲಿ ವಿಭಜನೆ ಹೊಂದಿದಾಗ ಯೂರಿಕ್ ಆಮ್ಲ ಉತ್ಪತ್ತಿಯಾಗುತ್ತದೆ. ಪ್ಯೂರಿನ್ನುಗಳು ಸಾಮಾನ್ಯವಾಗಿ ಕೆಲವು ಸೊಪ್ಪುಗಳು, ತರಕಾರಿಗಳು, ಸಮುದ್ರ ಆಹಾರ, ಕೆಂಪು ಮಾಂಸ ಮತ್ತು ಆಲ್ಕೋಹಾಲಿನಲ್ಲಿ ಕಂಡುಬರುತ್ತವೆ. ಮೂತ್ರಕೋಶಗಳು ತ್ಯಾಜ್ಯವಾದ ಯೂರಿಕ್ ಆಮ್ಲವನ್ನು ಶೋಧಿಸಿ ಮೂತ್ರದ ಮೂಲಕ ದೇಹದಿಂದ ಹೊರಹಾಕುತ್ತವೆ. ಕೆಲವೊಮ್ಮೆ ಯೂರಿಕ್ ಆಮ್ಲ ಹೆಚ್ಚಾಗಿ ಉತ್ಪತ್ತಿಯಾದಾಗ ಅಥವಾ ಮೂತ್ರಕೋಶಗಳು ಯೂರಿಕ್ ಆಮ್ಲವನ್ನು ಸಂಪೂರ್ಣವಾಗಿ ಸರಿಯಾಗಿ ಹೊರಹಾಕದೇ ಇದ್ದಾಗ ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟ ಹೆಚ್ಚುತ್ತದೆ. ಇದರಿಂದ ಕೀಲು ನೋವು, ಮೂತ್ರಕೋಶದಲ್ಲಿ ಕಲ್ಲು (ಕಿಡ್ನಿ ಸ್ಟೋನ್), ಮೂತ್ರಕೋಶದ ಹಾನಿ, ಉರಿಯೂತ, ಕೀಲು ಬಿಗಿತ, ಚಯಾಪಚಯ ತೊಂದರೆಗಳಾದ ಮಧುಮೇಹ, ಬೊಜ್ಜು ಮತ್ತಿತರ ಸಮಸ್ಯೆಗಳು ಉಂಟಾಗುತ್ತವೆ. ಕೆಲವು ಮನೆಮದ್ದುಗಳಿಂದ ಈ ಸಮಸ್ಯೆಗೆ ಪರಿಹಾರ ಸಾಧ್ಯವಿದೆ. ಅವುಗಳೇನು ಎಂಬುದನ್ನು ತಿಳಿದುಕೊಳ್ಳೋಣ.
ಆರೋಗ್ಯಕ್ಕೆ ಹಿತಕರ ತರಕಾರಿಯಾಗಿರುವ ಸೋರೆಕಾಯಿಯ ಸೇವನೆ ಮೂತ್ರಕೋಶಗಳಿಗೆ ಶೀತಲ ಸ್ನಾನ. ಸೋರೆಕಾಯಿಯಲ್ಲಿ ನೀರಿನಂಶ ಶೇಕಡಾ ತೊಂಬತ್ತಾರರಷ್ಟಿದೆ. ಆದ್ದರಿಂದ ಇದರ ಸೇವನೆಯಿಂದ ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತದೆ. ಇದು ತ್ಯಾಜ್ಯ ಉತ್ಪನ್ನಗಳನ್ನು, ವಿಶೇಷವಾಗಿ ಮೂತ್ರಕೋಶಗಳಲ್ಲಿ ಸಂಗ್ರಹವಾಗುವ ಯೂರಿಕ್ ಆಮ್ಲದ ಹರಳುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. 'ಗಿಡಮೂಲಿಕೆಗಳ ರಾಣಿ' ಎಂದು ಹೆಸರಾಗಿರುವ ತುಳಸಿ ನೈಸರ್ಗಿಕ ನಿರ್ವಿಷೀಕರಣಕಾರಕವಾಗಿದ್ದು ಆಂತರಿಕ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆಯಾಗಿ ಮೂತ್ರಕೋಶದ ಕಾರ್ಯವನ್ನು ಬೆಂಬಲಿಸುತ್ತದೆ. ಅಧ್ಯಯನಗಳ ಪ್ರಕಾರ ಸೋರೆಕಾಯಿಯ ತಂಪಾಗಿಸುವ, ಕ್ಷಾರೀಯ ಸ್ವಭಾವವು ಹೊಟ್ಟೆಯನ್ನು ಶಮನಗೊಳಿಸುತ್ತದೆ. ಆಮ್ಲೀಯತೆಯನ್ನು ನಿವಾರಿಸುತ್ತದೆ. ಉಬ್ಬುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಕರುಳನ್ನು ಚೆನ್ನಾಗಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಸೋರೆಕಾಯಿಯಲ್ಲಿ ಪೊಟ್ಯಾಸಿಯಮ್ ಕೂಡ ಇದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆಯಾಗಿ ಹೃದಯದ ಕಾರ್ಯವನ್ನು ಬೆಂಬಲಿಸುತ್ತದೆ.
ಸೋರೆಕಾಯಿ ತುಳಸಿ ತಂಪು ಪಾನೀಯ ತಯಾರಿಸಲು ಮೊದಲಿಗೆ ಒಂದು ಬಟ್ಟಲು ತುರಿದ ಸೋರೆಕಾಯಿಯನ್ನು ಮತ್ತು ಸ್ವಲ್ಪ ತುಳಸಿ ಎಲೆಗಳೊಂದಿಗೆ ರುಬ್ಬಿ. ನಂತರ ಇದನ್ನು ಸೋಸಿಕೊಂಡು ಸ್ವಲ್ಪ ಕಲ್ಲುಪ್ಪು ಮತ್ತು ಜೀರಿಗೆ ಪುಡಿಯನ್ನು ಸೇರಿಸಿಕೊಂಡು ಕುಡಿಯಬೇಕು.
ನುಗ್ಗೆಸೊಪ್ಪಿನ ಪುಡಿ-ನಿಂಬೆ ಪಾನೀಯವು ಕ್ಷಾರೀಯತೆಯನ್ನು ಹೆಚ್ಚಿಸುವ ಸಾಧನವಾಗಿದೆ. ಆಮ್ಲೀಯತೆ ಇರುವ ದೇಹದಲ್ಲಿ ಯೂರಿಕ್ ಆಮ್ಲವು ಹೆಚ್ಚಾಗುತ್ತದೆ. ನುಗ್ಗೆಸೊಪ್ಪು ನೈಸರ್ಗಿಕವಾಗಿ ತೊಂಬತ್ತಕ್ಕೂ ಹೆಚ್ಚು ಪೋಷಕಾಂಶಗಳ ಮೂಲ ಮತ್ತು ಕ್ಷಾರೀಯ. ಇದನ್ನು ಸೇವಿಸಿದಾಗ ಯೂರಿಕ್ ಆಮ್ಲದ ಉತ್ಪತ್ತಿ ಕಡಿಮೆಯಾಗುತ್ತದೆ. ಜೊತೆಗೆ ನಿಂಬೆ ವಿಟಮಿನ್ ಸಿಯ ಸಮೃದ್ಧ ಮೂಲ. ಇದು ರಕ್ತವನ್ನು ಕ್ಷಾರೀಯಗೊಳಿಸುತ್ತದೆ ಮತ್ತು ಯೂರಿಕ್ ಆಮ್ಲದ ಹರಳುಗಳನ್ನು ಕರಗಿಸಲು ಸಹಾಯ ಮಾಡುತ್ತದೆ, ಇದರಿಂದ ಈ ಹರಳುಗಳು ದೇಹದಿಂದ ಸುಲಭವಾಗಿ ಹೊರಹಾಕಲ್ಪಡುತ್ತವೆ. ಈ ಪಾನೀಯವು ಯೂರಿಕ್ ಆಮ್ಲವನ್ನು ಕಡಿಮೆ ಮಾಡುವುದಲ್ಲದೇ ಉತ್ಕರ್ಷಣ ನಿರೋಧಕಗಳನ್ನು (ಆಂಟಿಆಕ್ಸಿಡೆಂಟ್ಸ್) ಹೆಚ್ಚಿಸುತ್ತದೆ, ಕೀಲುಗಳನ್ನು ಮೃದುವಾಗಿ ಮತ್ತು ಶಕ್ತಿಯ ಮಟ್ಟವನ್ನು ಸ್ಥಿರವಾಗಿರಿಸುತ್ತದೆ.
ಈ ಪಾನೀಯವನ್ನು ಮಾಡಲು ಅರ್ಧ ಚಮಚ ನುಗ್ಗೆಸೊಪ್ಪಿನ ಪುಡಿಯನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ. ಅರ್ಧ ನಿಂಬೆ ಹೋಳಿನ ರಸವನ್ನು ಹಿಂಡಿ ಚೆನ್ನಾಗಿ ಬೆರೆಸಿ ಬೆಳಗ್ಗೆ ಹೊತ್ತು ಸೇವಿಸಿ.
ದೇಹದಲ್ಲಿ ಯೂರಿಕ್ ಆಮ್ಲವು ಸಂಗ್ರಹವಾದಾಗ ಉರಿಯೂತ ಹೆಚ್ಚಾಗುತ್ತದೆ. ನೆಲ್ಲಿಕಾಯಿ ವಿಟಮಿನ್ ಸಿ ಯ ಶ್ರೀಮಂತ ಮೂಲಗಳಲ್ಲಿ ಒಂದಾಗಿದೆ, ಇದು ಯೂರಿಕ್ ಆಮ್ಲವನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಅರಿಷಿಣದಲ್ಲಿ ಸಕ್ರಿಯವಾಗಿರುವ ಸಂಯುಕ್ತ ಕರ್ಕ್ಯುಮಿನ್ ಪ್ರಬಲ ಉರಿಯೂತ ನಿವಾರಕವಾಗಿದೆ. ಇದು ಮೂಲದಲ್ಲಿ ಊತ ಮತ್ತು ನೋವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ನೆಲ್ಲಿಕಾಯಿ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದೆ ಮತ್ತು ಇದರ ಕ್ರೋಮಿಯಂ ಅಂಶವು ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದು ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿದೆ. ಇದು ಕೆಟ್ಟ (ಎಲ್ ಡಿ ಎಲ್) ಕೊಲೆಸ್ಟ್ರಾಲನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ಈ ಪಾನೀಯವನ್ನು ತಯಾರಿಸಲು, 30 ಮಿಲಿ ತಾಜಾ ನೆಲ್ಲಿಕಾಯಿ ರಸವನ್ನು ಬೆಚ್ಚಗಿನ ನೀರಿನಲ್ಲಿ ಅರ್ಧ ಚಮಚ ಅರಿಶಿನದೊಂದಿಗೆ ಬೆರೆಸಿ. ಇದಕ್ಕೆ ಒಂದು ಚಿಟಿಕೆ ಕರಿಮೆಣಸಿನ ಪುಟಿಯನ್ನು ಸೇರಿಸಿ ಬೆಳಿಗ್ಗೆ ಹೊತ್ತು ಸೇವಿಸಿ.
ಇದು ದೇಹ ತಂಪಾಗಿಸುವ ಶುದ್ಧಿಕಾರಿಕವಾಗಿದೆ. ಯೂರಿಕ್ ಆಮ್ಲವು ಹೆಚ್ಚಾಗಿ ಆಂತರಿಕ ಶಾಖವನ್ನು ಉಂಟುಮಾಡುತ್ತದೆ, ಇದು ಊತ ಮತ್ತು ನೋವನ್ನು ಇನ್ನಷ್ಟು ಹದಗೆಡಿಸುತ್ತದೆ. ಕೊತ್ತಂಬರಿ (ಧನಿಯಾ) ಎಲೆಗಳು ಕ್ಷಾರೀಕರಣಕಾರಕಗಳು ಮತ್ತು ದೇಹವು ಮೂತ್ರದ ಮೂಲಕ ಹೆಚ್ಚಾಗಿರುವ ಯೂರಿಕ್ ಆಮ್ಲವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತವೆ. ಪುದೀನಾ ನೈಸರ್ಗಿಕವಾಗಿ ತಂಪುಕಾರಕ ಇದು ಉರಿಯೂತದ ಅಂಗಾಂಶಗಳನ್ನು ಶಮನಗೊಳಿಸುತ್ತದೆ.ಜೊತೆಗೆ ಯೂರಿಕ್ ಆಮ್ಲದ ಹರಳುಗಳ ರಚನೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಈ ಪಾನೀಯವನ್ನು ತಯಾರಿಸಲು ಒಂದು ಹಿಡಿ ಕೊತ್ತಂಬರಿ ಸೊಪ್ಪು ಮತ್ತು ಏಳೆಂಟು ಪುದೀನಾ ಎಲೆಗಳನ್ನು ಎರಡು ಬಟ್ಟಲು ನೀರಿನಲ್ಲಿ ಮೂರು-ನಾಲ್ಕು ನಿಮಿಷಗಳ ಕಾಲ ಕುದಿಸಿ. ನಂತರ ಇದನ್ನು ಬಿಸಿಯಾಗಿ ಅಥವಾ ತಣ್ಣಗೆ ಕುಡಿಯಿರಿ.
Advertisement