

ತಮಿಳುನಾಡಿನ ಈ ಬಾರಿಯ ವಿಧಾನಸಭಾ ಚುನಾವಣೆ ಅಧಿಕಾರಕ್ಕಾಗಿ ಸಮರವಷ್ಟೇ ಅಲ್ಲ; ಡಿಎಂಕೆ ಹಾಗೂ ಅಣ್ಣಾಡಿಎಂಕೆ ಎಂಬ ದ್ರಾವಿಡ ಪಕ್ಷಗಳು ತನ್ನ ಸಾಂಪ್ರದಾಯಿಕ ನೇರ ಸೆಣಸಾಟವನ್ನು ಉಳಿಸಿಕೊಳ್ಳುತ್ತದೆಯೇ ಇಲ್ಲವೇ ತೃತೀಯ ಶಕ್ತಿ ಉದಯಿಸುತ್ತದೆಯೇ ಎಂಬ ಸತ್ವಪರೀಕ್ಷೆಗೂ ಸಾಕ್ಷಿ.
ಡಿಎಂಕೆಗೆ ಈ ಚುನಾವಣೆ ಅಧಿಕಾರದಲ್ಲಿ ಮುಂದುವರಿಯುವ ಪ್ರಶ್ನೆ. ತನ್ನ ಪರಂಪರೆಯನ್ನು ಕಾಪಾಡಿಕೊಳ್ಳುವ ಕಸರತ್ತು. ಅಣ್ಣಾಡಿಎಂಕೆಗೆ ಅಸ್ತಿತ್ವಕ್ಕಾಗಿ ಹೋರಾಟ. ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ, ನಟ ಸಿ.ಜೋಸೆಫ್ ವಿಜಯ್ ಅವರಿಗೆ ಅಭಿಮಾನಿಗಳ ಸಾಗರದ ಆಚೆಗಿನ ರಾಜಕೀಯ ವಿಶ್ವಾಸಾರ್ಹತೆಯ ಅಗ್ನಿಪರೀಕ್ಷೆ. ನಿರ್ದೇಶಕ ಸೀಮಾನ್ ನೇತೃತ್ವದ ನಾಮ್ ತಮಿಳರ್ ಕಚ್ಚಿ (ಎನ್‌ಟಿಕೆ) ಗೆ ಚುನಾವಣಾ ರಾಜಕಾರಣದಲ್ಲಿ ತನ್ನ ತತ್ವ, ಸಿದ್ದಾಂತಗಳನ್ನು ಕಾಪಾಡಿಕೊಳ್ಳುವ ಪ್ರಯತ್ನ.
ತಮಿಳುನಾಡಿನಲ್ಲಿ 234 ಅಸೆಂಬ್ಲಿ ಕ್ಷೇತ್ರಗಳು. ಏಪ್ರಿಲ್ 23 ರಂದು ಮತದಾನ. ಮೇ 4 ರಂದು ಫಲಿತಾಂಶ. ಸುಮಾರು ಆರು ಕೋಟಿ ಮತದಾರರು. ಕಣದಲ್ಲಿ ಇಪ್ಪತ್ತೊಂದು ರಾಜಕೀಯ ಪಕ್ಷಗಳು. ತಮಿಳುನಾಡಿನಲ್ಲಿ ಮೊದಲ ಬಾರಿಗೆ ಚತುಷ್ಕೋನ ಸ್ಪರ್ಧೆ. ಕಳೆದ 1967 ರಿಂದಲೂ ಡಿಎಂಕೆ ಹಾಗೂ ಅಣ್ಣಾಡಿಎಂಕೆ ನಡುವೆಯೇ ಆಳ್ವಿಕೆ. ದ್ರಾವಿಡ ಅಸ್ಮಿತೆಯ ರಾಜಕಾರಣ.
ಈ ಚುನಾವಣೆಯಲ್ಲಿ ಮುಖ್ಯಮಂತ್ರಿ ಡಿಎಂಕೆಯ ಎಂ.ಕೆ. ಸ್ಟಾಲಿನ್ ನೇತೃತ್ವದಲ್ಲಿ ಆರು ಪಕ್ಷಗಳ ಜಾತ್ಯತೀತ ಪ್ರಜಾಸತ್ತಾತ್ಮಕ ಮೈತ್ರಿಕೂಟ. ಡಿಎಂಕೆ ಇದೇ ಮೊದಲ ಬಾರಿಗೆ 234 ರಲ್ಲಿ 167 ಕ್ಷೇತ್ರಗಳಲ್ಲಿ ಮಾತ್ರ ಸ್ಫರ್ಧೆ. ಉಳಿದ ಕ್ಷೇತ್ರಗಳಲ್ಲಿ ಮಿತ್ರಪಕ್ಷಗಳು ಕಣಕ್ಕೆ. ಕ್ಷೇತ್ರಗಳ ಹಂಚಿಕೆಯಲ್ಲಿ ಕೆಲವು ಮಿತ್ರಪಕ್ಷಗಳಿಗೆ ಅಸಮಾಧಾನ.
ಡಿಎಂಕೆ ಹಾಗೂ ಅಣ್ಣಾಡಿಎಂಕೆಗೆ ಕ್ರಮವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಎಂಬ ರಾಷ್ಟ್ರೀಯ ಪಕ್ಷಗಳ ಸಖ್ಯ. ಈ ಎರಡು ದ್ರಾವಿಡ ಪಕ್ಷಗಳು ತನ್ನ ರಾಜ್ಯದಲ್ಲಿ ದುರ್ಬಲವಾಗಿರುವ ಎರಡು ರಾಷ್ಟ್ರೀಯ ಪಕ್ಷಗಳಿಗೆ ತನ್ನ ಇಚ್ಛೆಗೆ ಅನುಗುಣವಾಗಿ ಕ್ಷೇತ್ರಗಳನ್ನು ಹಂಚಿವೆ. ಡಿಎಂಕೆಯು ಕಾಂಗ್ರೆಸ್ಸಿಗೆ 28, ಅಣ್ಣಾಡಿಎಂಕೆ ಬಿಜೆಪಿಗೆ 27 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ.
ತಮಿಳುನಾಡಿನಲ್ಲಿ ಎನ್‌ಡಿಎ ನೇತೃತ್ವ ವಹಿಸಿರುವುದು ಅಣ್ಣಾಡಿಎಂಕೆ. ಈ ಮೈತ್ರಿಕೂಟದಲ್ಲಿ ಎಂಟು ಪಕ್ಷಗಳು. ಅಣ್ಣಾಡಿಎಂಕೆ ಎಲ್ಲಿ ಡಿಎಂಕೆ ಶಕ್ತಿಯುತವಾಗಿದೆಯೋ ಅಂತಹ ಕ್ಷೇತ್ರಗಳನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಟ್ಟು ಸ್ಥಾನ ಹೊಂದಾಣಿಕೆಯ ಚೌಕಾಸಿಯಲ್ಲಿ ಮೇಲುಗೈ ಸಾಧಿಸಿದೆ. ಡಿಎಂಕೆಯ 34 ಸಚಿವರಲ್ಲಿ 14 ಮಂದಿ ಸ್ಪರ್ಧಿಸಿರುವ ಕ್ಷೇತ್ರಗಳನ್ನು ಅಣ್ಣಾಡಿಎಂಕೆ ತನ್ನ ದೋಸ್ತಿ ಪಕ್ಷಗಳಿಗೆ ಬಿಟ್ಟುಕೊಟ್ಟಿದೆ ಎಂದರೆ ಆ ಪಕ್ಷದ ತಂತ್ರಗಾರಿಕೆಯನ್ನು ಊಹಿಸಬಹುದು. ಅಣ್ಣಾಡಿಎಂಕೆ 2021ರಲ್ಲಿ 179 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿತ್ತು. ಈಗ 169 ಕ್ಷೇತ್ರಗಳಲ್ಲಿ ಕಣಕ್ಕೆ ಇಳಿದಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಡಿಎಂಕೆ ದೋಸ್ತಿ ಕೈಬಿಟ್ಟು ನಟ ವಿಜಯ್ ಅವರ ಕೈಕುಲುಕುವ ಒಲವಿತ್ತು. ಇತ್ತ ಬಿಜೆಪಿಗೂ ಎನ್‌ಡಿಎ ಮೈತ್ರಿಕೂಟಕ್ಕೆ ವಿಜಯ್ ಅವರನ್ನು ಕರೆತರುವ ಹುಮ್ಮಸ್ಸಿತ್ತು. ಪ್ರಯತ್ನ ಕೈಗೂಡಲಿಲ್ಲ. ವಿಜಯ್ ಅವರದು ಈಗ ಹೀರೋ ರೀತಿ ಏಕಾಂಗಿ ಹೋರಾಟ. ಅವರ ರಾಜಕೀಯ ಶಕ್ತಿ ಎಷ್ಟಿದೆ ಎಂಬುದು ಫಲಿತಾಂಶದಲ್ಲಿ ಸ್ಪಷ್ಟ. ಮುಂದಿನ ರಾಜಕೀಯ ಲೆಕ್ಕಾಚಾರಗಳಿಗೂ ನಾಂದಿ. ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಎಲ್ಲ 234 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಇವರಲ್ಲಿ ಅಂದಾಜು ಶೇ.45ರಷ್ಟು ಮಂದಿ ಇತರ ಪಕ್ಷಗಳಿಂದ ವಲಸೆ ಬಂದವರು. ಇನ್ನು ನಾಮ್ ತಮಿಳರ್ ಕಚ್ಚಿ (ಎನ್‌ಟಿಕೆ) ಪಕ್ಷವೂ ಎಲ್ಲ 234 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಹೂಡಿದೆ.
ನಟ ವಿಜಯ್ ತಮಿಳುನಾಡಿನ ರಾಜಕಾರಣದ ಅಂಗಳಕ್ಕೆ ಯಾವಾಗ ಧುಮುಕಿದರೋ ಆಗ ಚುನಾವಣಾ ಲೆಕ್ಕಾಚಾರಗಳೇ ಏರುಪೇರು. ಅವರ ಬಹಿರಂಗ ಸಭೆಗಳು ಜನಸಮೂಹದ ಸಾಗರ. ಯುವ ಸಮುದಾಯದ ಆಕರ್ಷಣೆ. ಹೀರೋ ವರ್ಚಸ್ಸು ಕೇಂದ್ರೀತ ರಾಜಕೀಯ ಪಕ್ಷ. ಸಿನಿಮಾ ಜನಪ್ರಿಯತೆಯೇ ಮತಗಳಿಕೆಗೆ ಆಧಾರ.
ತಮಿಳುನಾಡಿನಲ್ಲಿ ಈ ಬಾರಿ 12.5 ಲಕ್ಷ ಮಂದಿ ಮೊದಲ ಬಾರಿಗೆ ಮತ ಚಲಾಯಿಸುವವರು. ಇದು ಒಟ್ಟು ಮತದಾರರ ಸಂಖ್ಯೆಯಲ್ಲಿ ಶೇ.2.2ರಷ್ಟಾಗಿದೆ. ಮಹಿಳಾ ಮತದಾರರು ಒಟ್ಟು ಮತದಾರರಲ್ಲಿ ಶೇ.51ರಷ್ಟು ಇದ್ದಾರೆ. ವಿಜಯ್ ಈ ಮತಗಳನ್ನು ಸೆಳೆಯುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ, ಇದು ಅಷ್ಟು ಸುಲಭವಲ್ಲ. ವಿಜಯ್ ರಾಜಕೀಯ ಶಕ್ತಿ ಅರಿಯುವ ಮೊದಲ ಚುನಾವಣೆ ಇದು. ಅಭಿಮಾನ ಮತಗಳಾಗಿ ಪರಿವರ್ತನೆಯಾಗುತ್ತದೆಯೇ? ಚುನಾವಣಾ ವಿಶ್ಲೇಷಕರನ್ನು ಬಹುವಾಗಿ ಕಾಡಿರುವ ಪ್ರಶ್ನೆ ಇದು.
ನಿಜ. ತಮಿಳುನಾಡಿನಲ್ಲಿ ಡಿಎಂಕೆ, ಅಣ್ಣಾಡಿಎಂಕೆ ಹೊರತಾಗಿ ಮೂರನೇ ಶಕ್ತಿಗೆ ಅವಕಾಶ ಇದೆ. ಶೇಕಡಾವಾರು ಮತಗಳ ಪ್ರಮಾಣದಲ್ಲಿ ಇದು ಶೇ.15 ರಿಂದ 18ರಷ್ಟು ಇದೆ ಎಂಬ ಅಂದಾಜು. ಮೊದಲು ಕಾಂಗ್ರೆಸ್ ಇದನ್ನು ಬಳಸಿಕೊಂಡಿತು. ನಂತರ ಇದು ವೈಕೋ ಅವರ ಎಂಡಿಎಂಕೆ, ನಟ ವಿಜಯಕಾಂತ್ ಅವರ ಡಿಎಂಡಿಕೆ ಕಡೆ ವಾಲಿತು. ಡಿಎಂಡಿಕೆ ದುರ್ಬಲಗೊಂಡ ನಂತರ ಎನ್‌ಟಿಕೆ ಕಡೆಗೆ ಸಾಗಿತು. ಎನ್‌ಟಿಕೆ 2021ರ ಅಸೆಂಬ್ಲಿ ಚುನಾವಣೆಯಲ್ಲಿ ಶೇ 6.7 ಮತ ಪಡೆದಿತ್ತು. ಆದರೆ, ಒಂದೇ ಒಂದು ಸೀಟು ದಕ್ಕಿರಲಿಲ್ಲ ಎಂಬ ಮಾತು ಬೇರೆ.
ನಟ ವಿಜಯಕಾಂತ್ ಡಿಎಂಡಿಕೆ ಪಕ್ಷವನ್ನು ಹುಟ್ಟು ಹಾಕಿ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದಾಗ ಶೇ. 8ರಷ್ಟು ಮತಗಳನ್ನು ಪಡೆದಿದ್ದರು. ಇಲ್ಲಿ ಒಂದನ್ನು ಗಮನಿಸಬಹುದು. ಡಿಎಂಕೆ, ಅಣ್ಣಾಡಿಎಂಕೆ ಹೊರತಾದ ತೃತೀಯ ಶಕ್ತಿ ಮತಗಳನ್ನು ಸೆಳೆದರೂ ಅಧಿಕಾರಕ್ಕೆ ಏರುವಷ್ಟು ಸೀಟುಗಳು ದಕ್ಕುತ್ತಿಲ್ಲ. ಹೀಗಿರುವಾಗ ನಟ ವಿಜಯ್ ಈ ಮತಗಳನ್ನು ಸೆಳೆದು ಡಿಎಂಕೆ ಹಾಗೂ ಅಣ್ಣಾಡಿಎಂಕೆ ಮತಗಳ ಬುಟ್ಟಿಗೆ ಲಗ್ಗೆ ಹಾಕಬೇಕಾಗುತ್ತದೆ. ಇದು ಸಾಧ್ಯವೇ?
ಡಿಎಂಕೆ ಅಲ್ಪಸಂಖ್ಯಾತ ಕ್ರಿಶ್ಚಿಯನ್ನರು, ಮುಸ್ಲಿಮರ ಮತಗಳನ್ನು ಸೆಳೆಯುತ್ತಿತ್ತು. ಈ ಬಾರಿ ವಿಜಯ್ ಪರ ವಾಲುತ್ತದೆಯೇ? ಇದಕ್ಕೆ ಸಿನಿಮಾ ಜನಪ್ರಿಯತೆಯೊಂದೇ ಸಾಕೇ? ತಳಮಟ್ಟದಲ್ಲಿ ಪಕ್ಷದ ಸಂಘಟನೆ ಅಗತ್ಯವಿಲ್ಲವೇ? ಎಂಜಿಆರ್, ಜಯಲಲಿತಾ ಅವರಿಗೆ ಸಿನಿಮಾ ಜನಪ್ರಿಯತೆ ಇದ್ದರೂ ರಾಜಕಾರಣದಲ್ಲಿ ಸಾಕಷ್ಟು ಶ್ರಮಿಸಿದ ನಂತರವೇ ಅಧಿಕಾರಕ್ಕೆ ಏರಲು ಸಾಧ್ಯವಾಗಿದ್ದು ಎಂಬುದನ್ನು ಮರೆಯುವಂತಿಲ್ಲ.
ತಮಿಳುನಾಡಿನ ಚುನಾವಣೆಯಲ್ಲಿ ಈ ಬಾರಿ ಮಾದಕ ವಸ್ತುಗಳ ಹಾವಳಿ, ಭ್ರಷ್ಟಾಚಾರ, ಕಾನೂನು ಮತ್ತು ಸುವ್ಯವಸ್ಥೆ, ಹಿಂದಿ ಹೇರಿಕೆ ಪ್ರಮುಖವಾಗಿ ಪ್ರಸ್ತಾಪವಾಗುತ್ತಿರುವ ವಿಷಯಗಳು.
ಡಿಎಂಕೆ ಚುನಾವಣಾ ಪ್ರಣಾಳಿಕೆಯಲ್ಲಿ ಆದಾಯ ತೆರಿಗೆ ಪಾವತಿಸದ ಗೃಹಿಣಿಯರಿಗೆ ಎಂಟು ಸಾವಿರ ರೂಪಾಯಿ ಕೂಪನ್ ವಿತರಿಸುವುದಾಗಿ ಘೋಷಿಸಿದೆ. ಮಹಿಳೆಯರು ಈ ಕೂಪನ್ ಬಳಸಿ ವಾಷಿಂಗ್ ಮೆಷಿನ್, ರೆಫ್ರಿಜಿರೇಟರ್ ಖರೀದಿಸಬಹುದು. ಇದರಿಂದ 1.39 ಕೋಟಿ ಮಹಿಳೆಯರಿಗೆ ಅನುಕೂಲ ಆಗಲಿದೆ ಎಂಬ ಅಂದಾಜಿದೆ.
ದುಡಿಯುವ ಮಹಿಳೆಯರಿಗಾಗಿ ರಾಜ್ಯದಲ್ಲಿ ಒಂದು ಸಾವಿರ ಶಿಶು ಕೇಂದ್ರಗಳ ಸ್ಥಾಪನೆ, ಕಾಲೇಜಿನ ಸುಮಾರು 35 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಪ್ರಣಾಳಿಕೆಯ ಇತರ ಭರವಸೆಗಳು. ಅಣ್ಣಾಡಿಎಂಕೆ ಅಧಿಕಾರಕ್ಕೆ ಬಂದರೆ ಪಡಿತರ ಚೀಟಿದಾರರಿಗೆ ಉಚಿತವಾಗಿ ರೆಫ್ರಿಜರೇಟರ್, ಒಂದು ಕೆಜಿ ಬೇಳೆ, ಒಂದು ಲೀಟರ್ ಅಡುಗೆ ಎಣ್ಣೆ ವಿತರಿಸಲಾಗುವುದು ಎಂದು ಭರವಸೆ ನೀಡಿದೆ.
ಡಿಎಂಕೆ ಮತ್ತು ಅಣ್ಣಾಡಿಎಂಕೆ ಪಕ್ಷಗಳು ಮಹಿಳೆಯರಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ನೀಡುವ ಭರವಸೆ ನೀಡಿದೆ. ಟಿವಿಕೆ 2,500 ರೂಪಾಯಿ ನೀಡುವುದಾಗಿ ಹೇಳಿದೆ. ಡಿಎಂಕೆ ಪ್ರಣಾಳಿಕೆಯೇ ಈ ಬಾರಿ ಸೂಪರ್ ಸ್ಟಾರ್ ಆಗಿ ಚುನಾವಣೆಗೆ ಧುಮುಕಿದೆ ಎಂಬುದು ಸಿಎಂ ಸ್ಟಾಲಿನ್ ಅವರ ವಿಶ್ವಾಸ. ಡಿಎಂಕೆಯ ದ್ರಾವಿಡ ಮಾದರಿ ಆಡಳಿತವನ್ನು ಜನತೆ ಮುಂದುವರಿಸುತ್ತಾರೆ ಎಂಬ ನಂಬಿಕೆ.
ಮುಖ್ಯಮಂತ್ರಿ ಡಿಎಂಕೆಯ ಸ್ಟಾಲಿನ್ ಚೆನ್ನೈನ ಕೊಳತ್ತೂರು ಕ್ಷೇತ್ರದಲ್ಲಿ ಮರು ಆಯ್ಕೆ ಬಯಸಿದ್ದಾರೆ. ಸ್ಟಾಲಿನ್ ಒಮ್ಮೆ ಚೆನ್ನೈನ ಮೇಯರ್ ಕೂಡ ಆಗಿದ್ದವರು. ವಿಧಾನಸಭೆ ಪ್ರತಿಪಕ್ಷದ ನಾಯಕ ಅಣ್ಣಾಡಿಎಂಕೆ ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ತವರು ಕ್ಷೇತ್ರ ಸೇಲಂ ಜಿಲ್ಲೆಯ ಎಡಪ್ಪಾಡಿಯಲ್ಲಿ ಉಮೇದುವಾರರು. ಇಲ್ಲಿ ಅವರದು ಎಂಟನೇ ಬಾರಿಗೆ ಸ್ಪರ್ಧೆ. ನಟ ವಿಜಯ್ ಉತ್ತರ ಚೆನ್ನೈನ ಪೆರಂಬೂರು ಹಾಗೂ ತಿರುಚ್ಚಿ ಪೂರ್ವ ಕ್ಷೇತ್ರಗಳಲ್ಲಿ ಹುರಿಯಾಳು. ಕಳೆದ ಬಾರಿ ಈ ಎರಡೂ ಕ್ಷೇತ್ರಗಳಲ್ಲಿ ಡಿಎಂಕೆ ಗೆದ್ದಿದೆ. ಈ ಮೂವರು ನಾಯಕರಿಗೆ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಆಗಬೇಕೆಂಬ ಹಂಬಲ. ಈ ಮೂವರಿಗೂ ಅವರ ಪಕ್ಷಗಳಲ್ಲಿ ಮುಖ್ಯಮಂತ್ರಿ ಗಾದಿಗೆ ಪ್ರತಿಸ್ಪರ್ಧಿಗಳಿಲ್ಲ.
ಡಿಎಂಕೆ ಸರಕಾರದ ಬಗ್ಗೆ ಕೆಲವು ಕಡೆ ಋಣಾತ್ಮಕ ಅಭಿಪ್ರಾಯವಿದೆ. ಡಿಎಂಕೆಗೆ ವಿಶ್ವಾಸಾರ್ಹ ಪರ್ಯಾಯದ ಅಗತ್ಯವಿದೆ. ಆದರೆ ಪ್ರತಿಪಕ್ಷಗಳು ಚದುರಿವೆ. ವಿಜಯ್ ರಾಜಕೀಯ ರಂಗ ಪ್ರವೇಶ ಲೆಕ್ಕಾಚಾರಗಳನ್ನು ಸಂಕೀರ್ಣಗೊಳಿಸಿದೆ. ಚತುಷ್ಕೋನ ಸ್ಪರ್ಧೆ ಡಿಎಂಕೆಗೆ ಅನುಕೂಲಕರ.
ಅಲ್ಪಸಂಖ್ಯಾತರಾದ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಸುಮಾರು 30-40 ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವರು. ಅಲ್ಪಸಂಖ್ಯಾತರ ಮತಗಳು ಡಿಎಂಕೆ ಹಾಗೂ ಟಿವಿಕೆ ಮಧ್ಯೆ ಚದುರಿದರೆ ಪರೋಕ್ಷವಾಗಿ ಎನ್‌ಡಿಎಗೆ ವರವಾಗಲಿದೆ. ತಮಿಳುನಾಡು ಈ ಬಾರಿ ಸಾಂಪ್ರದಾಯಿಕ ಡಿಎಂಕೆ ಹಾಗೂ ಅಣ್ಣಾಡಿಎಂಕೆ ನಡುವಿನ ಸೆಣಸಾಟದಿಂದ ಹೊರ ಬಂದು ತೃತೀಯ ಶಕ್ತಿ ಉದಯವಾಗುತ್ತದೆಯೇ ಕಾದು ನೋಡಬೇಕು.
- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com
Advertisement