

ಕೆನಡಾದ ಪ್ರಧಾನ ಮಂತ್ರಿ ಮಾರ್ಕ್ ಕಾರ್ನೀ ಅವರು ಇತ್ತೀಚೆಗೆ ನೀಡಿದ ಒಂದು ಹೇಳಿಕೆ ಜಾಗತಿಕ ನಾಯಕರನ್ನು ಕುಳಿತು ಆಲೋಚಿಸುವಂತೆ ಮಾಡಿದೆ. ಜಾಗತಿಕ ವ್ಯವಸ್ಥೆ, ಅಂದರೆ, ದೇಶಗಳು ಪರಸ್ಪರರೊಡನೆ ವ್ಯವಹರಿಸುವ ಸಲುವಾಗಿ ರೂಪಿಸಿರುವ ನಿಯಮಗಳು ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಕೈಗೊಳ್ಳುತ್ತಿರುವ ನಿರ್ಧಾರಗಳಿಂದ ಸಂಪೂರ್ಣವಾಗಿ ಹದಗೆಡುತ್ತಿದೆ ಎಂದು ಅವರು ಹೇಳಿದ್ದಾರೆ. ಪ್ರಸ್ತುತ ಸೂಪರ್ ಪವರ್‌ಗಳಲ್ಲದ, ಆದರೆ, ಸಾಕಷ್ಟು ಶಕ್ತಿಶಾಲಿಯಾಗಿರುವ ಮಧ್ಯಮ ಗಾತ್ರದ ರಾಷ್ಟ್ರಗಳು ಈಗ ಜೊತೆಯಾಗಿ ಕೈ ಹಿಡಿದುಕೊಂಡು, ನಿಯಮಾಧಾರಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿಯುವ ಮುನ್ನ ಅದನ್ನು ರಕ್ಷಿಸಬೇಕು ಎಂದು ಕರೆ ನೀಡಿದ್ದಾರೆ.
ಈ ಹೇಳಿಕೆ ಒಂದು ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈಗ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ, ಗ್ಲೋಬಲ್ ಸೌತ್ ಎಂತಹ ಪಾತ್ರವನ್ನು ನಿರ್ವಹಿಸಲಿದೆ? ಗ್ಲೋಬಲ್ ಸೌತ್ ಎಂದರೆ ಆಫ್ರಿಕಾ, ಲ್ಯಾಟಿನ್ ಅಮೆರಿಕ, ಏಷ್ಯಾ, ಮತ್ತು ಒಂದಷ್ಟು ಮಧ್ಯ ಪೂರ್ವದ ಬೆಳವಣಿಗೆ ಹೊಂದುತ್ತಿರುವ ರಾಷ್ಟ್ರಗಳಾಗಿವೆ. ಈ ವರ್ಷದ ಆರಂಭದಲ್ಲಿ, ಫಿನ್‌ಲ್ಯಾಂಡ್ ಅಧ್ಯಕ್ಷರಾದ ಅಲೆಕ್ಸಾಂಡರ್ ಸ್ಟಬ್ ಅವರು ಭಾರತದ ಒಂದು ಸಮಾವೇಶದಲ್ಲಿ ಮಾತನಾಡುತ್ತಾ, ಜಗತ್ತಿನ ಭವಿಷ್ಯವನ್ನು ಗ್ಲೋಬಲ್ ಸೌತ್ ರೂಪಿಸಲಿದೆ ಎಂದಿದ್ದರು. ಈ ದೇಶಗಳು ದೊಡ್ಡ ಜನಸಂಖ್ಯೆ ಹೊಂದಿರುವುದರಿಂದ ಮತ್ತು ಅವುಗಳ ಆರ್ಥಿಕತೆ ವೇಗವಾಗಿ ಬೆಳೆಯುತ್ತಿರುವುದರಿಂದ, ಅಧಿಕಾರದ ಸಮತೋಲನ ಬದಲಾಗುತ್ತಿದೆ ಎಂದಿದ್ದಾರೆ. ಪಾಶ್ಚಾತ್ಯ ದೇಶಗಳೇ ಎಲ್ಲವನ್ನೂ ನಿಯಂತ್ರಿಸುತ್ತಿದ್ದ ಕಾಲ ಈಗ ನಿಧಾನವಾಗಿ ಮುಕ್ತಾಯಗೊಳ್ಳುತ್ತಿದೆ. ಪಾಶ್ಚಾತ್ಯ ಜಗತ್ತು ಈ ಸತ್ಯವನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದ್ದರೂ, ಇದು ವಾಸ್ತವ.
ಆದರೆ, ಇಲ್ಲೊಂದು ಗಮನಾರ್ಹ ಅಂಶವಿದೆ. 'ಗ್ಲೋಬಲ್ ಸೌತ್' ಎನ್ನುವ ಆ ಪದವೇ ಗೊಂದಲ ಮೂಡಿಸುವಂತಿದೆ. ಈ ಹೆಸರು ದಕ್ಷಿಣದ ದೇಶಗಳು ಎನ್ನುವ ಭಾವನೆ ಮೂಡಿಸುತ್ತದೆ. ಆದರೆ, ಭಾರತ, ಚೀನಾ ಸೇರಿದಂತೆ ಗ್ಲೋಬಲ್ ಸೌತ್‌ನ ಬಹಳಷ್ಟು ರಾಷ್ಟ್ರಗಳು ಸಮಭಾಜಕ ವೃತ್ತದ ಉತ್ತರದಲ್ಲಿವೆ. ಇದೇ ವೇಳೆ, ನಿಜಕ್ಕೂ ಭೂಮಿಯ ದಕ್ಷಿಣ ಭಾಗದಲ್ಲಿರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳನ್ನು ಶ್ರೀಮಂತ ಪಾಶ್ಚಾತ್ಯ ಜಗತ್ತಿನ ಭಾಗ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಗ್ಲೋಬಲ್ ಸೌತ್ ಎನ್ನುವ ಪದ ಹೆಚ್ಚು ಆರ್ಥಿಕ ಮಟ್ಟ ಮತ್ತು ವಸಾಹತುಶಾಹಿ ಇತಿಹಾಸಕ್ಕೆ ಸಂಬಂಧಿಸಿದೆಯೇ ಹೊರತು, ಭೂಗೋಳಕ್ಕೆ ಸಂಬಂಧಿಸಿದ ಪದವಲ್ಲ.
ಇನ್ನೊಂದು ಸಮಸ್ಯೆ ಎಂದರೆ, ಗ್ಲೋಬಲ್ ಸೌತ್ ಯಾವುದೋ ಒಬ್ಬ ನಾಯಕನನ್ನು ಹೊಂದಿಲ್ಲ. ಚೀನಾ ಬೇರೆ ದೇಶಗಳ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎನ್ನುವ ನೀತಿಯ ಮೂಲಕ ತನ್ನ ಪ್ರಭಾವವನ್ನು ವಿಸ್ತರಿಸಲು ಪ್ರಯತ್ನ ನಡೆಸುತ್ತಿದೆ. ಇನ್ನು ಪಾಶ್ಚಾತ್ಯ ದೇಶಗಳೊಡನೆ ಉತ್ತಮ ಬಾಂಧವ್ಯ ಹೊಂದಿರುವ ಭಾರತ, ಚೀನಾವನ್ನು ತನ್ನ ನಾಯಕ ಎಂದು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಇವೆಲ್ಲದರಿಂದ ಗ್ಲೋಬಲ್ ಸೌತ್‌ನಲ್ಲಿ ಒಗ್ಗಟ್ಟಿನ ಕೊರತೆಯಿದೆ.
ಉದಾಹರಣೆಗೆ ಬ್ರಿಕ್ಸ್ ಒಕ್ಕೂಟವನ್ನೇ ಪರಿಗಣಿಸೋಣ. ಈ ಗುಂಪು ಇರಾನ್ ಮತ್ತು ಯುಎಇಗಳನ್ನು ಸೇರಿದಂತೆ ಒಟ್ಟು ಹತ್ತು ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಇತ್ತೀಚೆಗೆ ಇರಾನ್ ಮೇಲೆ ದಾಳಿಯಾದಾಗಲೂ, ಬ್ರಿಕ್ಸ್ ಒಂದೇ ಧ್ವನಿಯಾಗಿ ಮಾತನಾಡಲು ಸಾಧ್ಯವಾಗಲಿಲ್ಲ. ಚೀನಾ ಮತ್ತು ರಷ್ಯಾಗಳು ಬಹಿರಂಗವಾಗಿಯೇ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲಿ ದಾಳಿಗಳನ್ನು ಟೀಕಿಸಿದವು. ಇನ್ನೊಂದೆಡೆ, ಭಾರತ ಸುರಕ್ಷಿತವಾದ ಹೆಜ್ಜೆಯನ್ನಿಟ್ಟು, ಉಭಯ ಪಕ್ಷಗಳಿಗೂ ಉದ್ವಿಗ್ನತೆಯನ್ನು ಶಮನಗೊಳಿಸುವಂತೆ ಕರೆ ನೀಡಿತು. ಬ್ರಿಕ್ಸ್ ದೇಶಗಳು ಹಲವಾರು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದು, ಅವುಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲು ಯಾವುದೇ ಬಲವಾದ ಸಮಾನ ವ್ಯವಸ್ಥೆಯನ್ನು ಹೊಂದಿಲ್ಲ.
ಈಗ ಇರಾನ್ ಯುದ್ಧ ಹೇಗೆ ಪ್ರತಿಯೊಂದು ದೇಶವೂ ಮೊದಲಿಗೆ ಕೇವಲ ತನ್ನ ಹಿತಾಸಕ್ತಿಯನ್ನು ಮಾತ್ರವೇ ಪರಿಗಣಿಸುತ್ತದೆ ಎನ್ನುವುದನ್ನು ಸಾಬೀತುಪಡಿಸಿದೆ. ಒಂದು ವೇಳೆ ಇರಾನ್ ಸರ್ಕಾರ ಪತನಗೊಂಡರೆ, ತಾನು ಓರ್ವ ಸ್ನೇಹಿತನನ್ನು ಕಳೆದುಕೊಳ್ಳುವ ಆತಂಕವನ್ನು ಚೀನಾ ಹೊಂದಿದೆ. ಇರಾನ್ ಶಾಂಘಾಯ್ ಸಹಕಾರ ಸಂಸ್ಥೆಯ ಸದಸ್ಯನೂ ಆಗಿದ್ದು, ಈ ಸಂಘಟನೆಯನ್ನು ಚೀನಾ ಪಾಶ್ಚಾತ್ಯ ನಿಯಂತ್ರಣದಿಂದ ದೂರಾಗಿರುವ ಒಂದು ವ್ಯವಸ್ಥೆಯನ್ನು ಸ್ಥಾಪಿಸುವ ಸಲುವಾಗಿ ಬಳಸುತ್ತಿದೆ. ಇದರೊಡನೆ, ಚೀನಾ ಬಹುದೊಡ್ಡ ಪ್ರಮಾಣದ ತೈಲವನ್ನು ಇರಾನ್ ಬಳಿಯ ಹೊರ್ಮುಸ್ ಜಲಸಂಧಿಯ ಮೂಲಕವೇ ಪಡೆಯುತ್ತಿದ್ದು, ಚೀನಾದ ಕಾರ್ಖಾನೆಗಳು ಮತ್ತು ಮನೆಗಳಿಗೆ ಇರಾನಿನ ಶಾಂತಿಯೂ ಬಹಳ ಮುಖ್ಯವಾಗಿದೆ.
ಪಾಕಿಸ್ತಾನ ಮೌನವಾಗಿಯೇ ಅಮೆರಿಕ ಮತ್ತು ಇರಾನ್ ನಡುವೆ ಮಧ್ಯಸ್ಥಿಕೆದಾರನಾಗಲು ಮುಂದೆ ಬಂದಿದ್ದು, ಈ ಮೂಲಕ ಜಾಗತಿಕ ರಾಜಕಾರಣದಲ್ಲಿ ಒಂದು ದೊಡ್ಡ ಹೆಸರು ಸಂಪಾದಿಸುವ ಆಲೋಚನೆಯನ್ನೂ ಪಾಕಿಸ್ತಾನ ಹೊಂದಿದೆ. ಪಾಕಿಸ್ತಾನಕ್ಕೆ ತನ್ನ ಮಿತ್ರ ರಾಷ್ಟ್ರವಾದ ಸೌದಿ ಅರೇಬಿಯಾವನ್ನು ಸುರಕ್ಷಿತವಾಗಿಡುವುದೂ ಮುಖ್ಯವಾಗಿದ್ದು, ಅವೆರಡರ ನಡುವಿನ ರಕ್ಷಣಾ ಒಪ್ಪಂದದ ಪ್ರಕಾರ, ಒಂದು ವೇಳೆ ಸೌದಿ ಅರೇಬಿಯಾ ಮೇಲೆ ದಾಳಿಯಾದರೆ, ಪಾಕಿಸ್ತಾನ ಅದರ ರಕ್ಷಣೆಗೆ ನೆರವಾಗಬೇಕು.
ಭಾರತ ತನ್ನ ಹಳೆಯ ನೀತಿಯಾದ 'ಕಾರ್ಯತಂತ್ರದ ಸ್ವಾಯತ್ತತೆ'ಯನ್ನು ಅನುಸರಿಸುತ್ತಿದೆ. ಅಂದರೆ, ಭಾರತ ಕುರುಡಾಗಿ ಯಾವುದೇ ಗುಂಪಿಗೆ ಸೇರ್ಪಡೆಗೊಳ್ಳುವುದಿಲ್ಲ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಭಾರತ ಪಾಶ್ಚಾತ್ಯ ದೇಶಗಳ ಜೊತೆಗೂ ಇಲ್ಲ, ಅವುಗಳ ವಿರುದ್ಧವೂ ಇಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಭಾರತದ ಈ ಬುದ್ಧಿವಂತಿಕೆಯ ನಿಲುವು ಅಮೆರಿಕದೊಡನೆ ಉತ್ತಮ ಸಹಭಾಗಿತ್ವ ಹೊಂದಿ, ಅವಶ್ಯಕತೆ ಎದುರಾದಾಗ ಇರಾನಿನಿಂದ ತೈಲ ಖರೀದಿಸಲೂ ಅವಕಾಶ ಮಾಡಿಕೊಡುತ್ತದೆ.
ತನ್ನ 'ದ ಟ್ರಯಾಂಗಲ್ ಆಫ್ ಪವರ್' ಎನ್ನುವ ಪುಸ್ತಕದಲ್ಲಿ ಅಲೆಕ್ಸಾಂಡರ್ ಸ್ಟಬ್ ಅವರು ಜಗತ್ತು ಇಂದು ಮೂರು ಗುಂಪುಗಳಾಗಿ ವಿಭಜನೆಗೊಂಡಿದೆ ಎಂದಿದ್ದಾರೆ. ಗ್ಲೋಬಲ್ ವೆಸ್ಟ್ ಎನ್ನುವ ಗುಂಪಿಗೆ ಅಮೆರಿಕದ ನಾಯಕತ್ವವಿದೆ. ಇನ್ನು ಗ್ಲೋಬಲ್ ಈಸ್ಟನ್ನು ಚೀನಾ ಮತ್ತು ರಷ್ಯಾಗಳು ಮುನ್ನಡೆಸುತ್ತಿವೆ. ಇನ್ನು ಗ್ಲೋಬಲ್ ಸೌತ್ ಎನ್ನುವುದು ಮಧ್ಯಮ ಮತ್ತು ಸಣ್ಣ ರಾಷ್ಟ್ರಗಳ ಗುಂಪಾಗಿದ್ದು, ಇದು ಎರಡು ಗುಂಪುಗಳ ನಡುವೆ ಸಮತೋಲನ ಸಾಧಿಸಬಲ್ಲದು. ಸ್ಟಬ್ ಪ್ರಕಾರ, ಒಂದು ವೇಳೆ ಪಾಶ್ಚಾತ್ಯ ರಾಷ್ಟ್ರಗಳು ನಿಯಮಾಧಾರಿತ ಜಾಗತಿಕ ವ್ಯವಸ್ಥೆಯನ್ನು ಉಳಿಸಲು ಬಯಸಿದರೆ, ಅವು ಮೊದಲಿಗೆ ಗ್ಲೋಬಲ್ ಸೌತ್ ರಾಷ್ಟ್ರಗಳ ವಿಶ್ವಾಸ ಗಳಿಸಬೇಕು.
ಆದರೆ ವಾಸ್ತವ ಚಿತ್ರಣ ಅಂದುಕೊಂಡದ್ದಕ್ಕಿಂತ ಹೆಚ್ಚು ಸಂಕೀರ್ಣವಾಗಿದೆ. ಬಹುತೇಕ ಗ್ಲೋಬಲ್ ಸೌತ್ ದೇಶಗಳು ಜಗತ್ತನ್ನು ಯಾವುದೋ ಒಂದೆರಡು ದೇಶಗಳು ನಿಯಂತ್ರಿಸುವುದನ್ನು ಇಚ್ಛಿಸುತ್ತಿಲ್ಲ. ಅವುಗಳು 'ಬಹುಧ್ರುವೀಯ' ಜಗತ್ತನ್ನು ಅಪೇಕ್ಷಿಸುತ್ತಿದ್ದು, ಅಲ್ಲಿ ಅಧಿಕಾರ ಹಲವು ರಾಷ್ಟ್ರಗಳ ನಡುವೆ ಹಂಚಿಕೆಯಾಗಿರುತ್ತದೆ. ಇವುಗಳಲ್ಲಿ ಬಹಳಷ್ಟು ದೇಶಗಳು ಹಿಂದೆ ಪಾಶ್ಚಾತ್ಯ ದೇಶಗಳ ವಸಾಹತುಶಾಹಿ ಆಡಳಿತಕ್ಕೆ ತುತ್ತಾಗಿದ್ದು, ಅವು ಇಂದಿಗೂ ಅದೇ ಹಳೆಯ ಅನ್ಯಾಯ ಮುಂದುವರಿದಿದೆ ಎನ್ನುವ ಭಾವನೆ ಹೊಂದಿವೆ. ಉದಾಹರಣೆಗೆ, ದಕ್ಷಿಣ ಆಫ್ರಿಕಾ ಗಾಜಾ಼ ಯುದ್ಧದ ವಿಚಾರವಾಗಿ ಇಸ್ರೇಲನ್ನು ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್‌ಗೆ ಎಳೆದಿದ್ದು, ಈಗ ಗ್ಲೋಬಲ್ ಸೌತ್ ರಾಷ್ಟ್ರಗಳು ದಿಟ್ಟವಾಗಿ ಮಾತನಾಡಲು ಆರಂಭಿಸಿರುವುದಕ್ಕೆ ಸಾಕ್ಷಿಯಾಗಿದೆ.
ಇಂದಿನ ಮುರಿದ ಜಗತ್ತಿನಲ್ಲಿ, ಸ್ಮಾರ್ಟ್ ದೇಶಗಳು ನಿಷ್ಠೆಯ ಬದಲು ತಮಗೆ ಯಾವುದು ಸೂಕ್ತವೋ ಅದನ್ನು ಆರಿಸುತ್ತಿವೆ. ಇಂಡೋನೇಷ್ಯಾ ಇತ್ತೀಚೆಗೆ ಅಮೆರಿಕದ ಜೊತೆಗೆ ಒಂದು ದೊಡ್ಡ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿತು. ಅದೇ ತಿಂಗಳಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಂತೊ ಅವರು ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿಯಾಗಲು ರಷ್ಯಾಗೆ ತೆರಳಿದರು. ಇದೊಂದು ಹೊಸ ವಿಧಾನವಾಗಿದ್ದು, ನಮ್ಮ ರಾಷ್ಟ್ರೀಯ ಹಿತಾಸಕ್ತಿಗೆ ಯಾವುದು ಸೂಕ್ತ ಎನ್ನುವ ಆಧಾರದಲ್ಲಿ ಎಲ್ಲರೊಡನೆಯೂ ಕೈ ಕುಲುಕಲಾಗುತ್ತಿದೆ.
ಗ್ಲೋಬಲ್ ಸೌತ್ ಬೆಳವಣಿಗೆ ಹೊಂದುತ್ತಿರುವುದು ಖಂಡಿತಾ ಸ್ಪಷ್ಟ. ಆದರೆ, ಗ್ಲೋಬಲ್ ಸೌತ್ ತನ್ನ ಹೊಸದಾದ ಶಕ್ತಿ ಸಾಮರ್ಥ್ಯವನ್ನು ಹೇಗೆ ಬಳಸಲಿದೆ ಎನ್ನುವುದು ನಮ್ಮ ಕಾಲಘಟ್ಟದ ನೈಜ ಕಥನವಾಗಲಿದೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್ : girishlinganna@gmail.com
Advertisement