

ಇತ್ತೀಚೆಗೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಹನ್ನೊಂದನೆಯ ತರಗತಿಯ ವಿದ್ಯಾರ್ಥಿನಿ ಆಹನಾ ಅಕಾಲಿಕವಾಗಿ ಸಾವಿಗೀಡಾದ ಘಟನೆ ದೇಶದಾದ್ಯಂತ ಗಂಭೀರ ಚರ್ಚೆಗೆ ಕಾರಣವಾಗಿದೆ. ಈ ಘಟನೆಯು ನಿರಂತರ ಜಂಕ್ ಫುಡ್ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲಿದೆ. ಜೊತೆಗೆ ಹದಿಹರೆಯದ ಮಕ್ಕಳ ಆಹಾರಕ್ರಮಗಳು ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳು ಸದ್ದಿಲ್ಲದೇ ಉಂಟುಮಾಡುವ ಅಪಾಯಗಳ ವಿರುದ್ಧ ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿದೆ.
ಪತ್ರಿಕಾ ವರದಿಗಳ ಪ್ರಕಾರ ಆಹನಾಳಿಗೆ ಕೆಲವು ವಾರಗಳಿಂದ ತೀವ್ರ ಹೊಟ್ಟೆನೋವು ಮತ್ತು ಆಹಾರ ಜೀರ್ಣವಾಗದೇ ಅನೇಕ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಆರಂಭದಲ್ಲಿ ಇದು ಸಾಮಾನ್ಯ ಹೊಟ್ಟೆನೋವಿನ ತೊಂದರೆ ಸುಮ್ಮನಿರಲಾಯಿತು. ಆದರೆ ದಿನ ಕಳೆದಂತೆ ಆಕೆಯ ಸ್ಥಿತಿ ಗಂಭೀರವಾಯಿತು. ವೈದ್ಯಕೀಯ ಪರೀಕ್ಷೆಗಳಲ್ಲಿ ಅವಳ ಆಂತರಿಕ ಅಂಗಗಳಿಗೆ ಹಾನಿ, ಹೊಟ್ಟೆಯಲ್ಲಿ ದ್ರವ ಸಂಗ್ರಹಣೆ ಮತ್ತು ತೀವ್ರ ಒಳಾಂಗಗಳ ಸೋಂಕು ಇರುವುದು ಪತ್ತೆಯಾಯಿತು. ಚಿಕಿತ್ಸೆಗಾಗಿ ಮೊದಲು ಸ್ಥಳೀಯ ಆಸ್ಪತ್ರೆ, ನಂತರ ಮೊರಾದಾಬಾದ್ ಹಾಗೂ ಕೊನೆಗೆ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಏಮ್ಸ್‌ಗೆ ದಾಖಲಿಸಲಾಯಿತು. ಶಸ್ತ್ರಚಿಕಿತ್ಸೆ ಬಳಿಕ ತಾತ್ಕಾಲಿಕ ಸುಧಾರಣೆ ಕಂಡುಬಂದರೂ ಸೋಂಕು ದೇಹದ ಇತರ ಭಾಗಗಳಿಗೆ ಹರಡಿ, ಆಕೆಯ ಆರೋಗ್ಯ ಮತ್ತಷ್ಟು ಹದಗೆಟ್ಟಿತು. ಕೊನೆಗೆ ಉಂಟಾದ ಗಂಭೀರ ಸಂಕೀರ್ಣತೆಗಳಿಂದ ಆಹನಾ ಪ್ರಾಣ ಕಳೆದುಕೊಂಡಳು.
ಅಹನಾ ನೂಡಲ್ಸ್, ಪಿಜ್ಜಾ, ಬರ್ಗರ್‌ಗಳು ಮತ್ತು ಪ್ಯಾಕ್ ಮಾಡಿದ ಜಂಕ್ ತಿಂಡಿಗಳಂತಹ ತ್ವರಿತ ಆಹಾರವನ್ನು ಬಹಳ ಇಷ್ಟಪಡುತ್ತಿದ್ದಳು. ಮನೆಯಲ್ಲಿ ಊಟ ಮಾಡದೇ ಸದಾ ಕಾಲ ಜಂಕ್ ಫುಡ್ ಸೇವಿಸುತ್ತಿದ್ದಳು. ಇಂದಿನ ಹದಿಹರೆಯದ ಮಕ್ಕಳಲ್ಲಿ ಇಂತಹ ಆಹಾರ ಆಯ್ಕೆಗಳು ಸಾಮಾನ್ಯವಾಗಿದ್ದರೂ ಈ ಪ್ರಕರಣವು ಇಂತಹ ಅನಿಯಂತ್ರಿತ ಆಹಾರ ಪದ್ಧತಿಗಳು ಕ್ರಮೇಣ ದೇಹವನ್ನು ಹೇಗೆ ದುರ್ಬಲಗೊಳಿಸಬಹುದು ಎಂಬುದನ್ನು ಎತ್ತಿ ತೋರಿಸಿದೆ. ನಿರಂತರ ಜಂಕ್ ಫುಡ್ ಸೇವನೆ ಹೇಗೆ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಜೀರ್ಣಕ್ರಿಯೆಗೆ ಅಡ್ಡಿಪಡಿಸುತ್ತದೆ ದೇಹವನ್ನು ವಿವಿಧ ಸೋಂಕುಗಳು ಮತ್ತು ತೊಡಕುಗಳಿಗೆ ಹೆಚ್ಚು ಗುರಿಯಾಗಿಸುತ್ತದೆ ಎಂಬುದನ್ನು ಈ ಘಟನೆಯು ಸಾಬೀತುಪಡಿಸಿದೆ.
ಇಂದು ನಮ್ಮ ದೇಶ ಎಲ್ಲ ರಂಗಗಳಲ್ಲಿಯೂ ಸಾಕಷ್ಟು ಅಭಿವೃದ್ಧಿಯಾಗಿದೆ. ನಮ್ಮ ಆಹಾರವಿಹಾರಗಳೂ ಹಿಂದಿಗಿಂತ ಸಾಕಷ್ಟು ಬದಲಾಗಿವೆ. ಇದರ ಫಲವಾಗಿ ಜಂಕ್ ಫುಡ್ ನಮ್ಮ ಮಕ್ಕಳ ಆಯ್ಕೆಯೂ ಆಗಿದೆ. ಸುಲಭ ಲಭ್ಯತೆ, ಪ್ರಭಾವಶಾಲಿ ಜಾಹೀರಾತುಗಳು, ಜಡ ಜೀವನಶೈಲಿ ಮತ್ತು ಗೆಳೆಯರ ಪ್ರಭಾವವು ಜಂಕ್ ಫುಡ್ಡನ್ನು ಅಪರೂಪದ ಆಯ್ಕೆಗಿಂತ ದೈನಂದಿನ ಆಯ್ಕೆಯನ್ನಾಗಿ ಮಾಡಿದೆ. ಅತಿ ಹೆಚ್ಚು ಉಪ್ಪು, ಖಾರ, ಸಕ್ಕರೆ, ಅನಾರೋಗ್ಯಕರ ಕೊಬ್ಬುಗಳು ಮತ್ತು ಕೃತಕ ರುಚಿಕಾರಕ/ಸಂರಕ್ಷಣಾಕಾರಕಗಳಿರುವ ಇಂತಹ ಆಹಾರಗಳು ಸೇವಿಸಿದ ಕ್ಷಣಮಾತ್ರದಲ್ಲಿ ತೃಪ್ತಿಯನ್ನು ನೀಡುತ್ತವೆ. ಆದರೆ ಇವುಗಳಲ್ಲಿರುವ ಪೋಷಕಾಂಶಗಳು ಅತ್ಯಲ್ಪ ಎನ್ನುವುದಕ್ಕಿಂತ ಇಲ್ಲವೇ ಇಲ್ಲ ಎನ್ನುವುದು ಸರಿ.
ಮಾನವರ ಜೀರ್ಣಾಂಗ ವ್ಯವಸ್ಥೆಗೆ ಅದರಲ್ಲಿಯೂ ವಿಶೇಷವಾಗಿ ಬೆಳೆಯುತ್ತಿರುವ ಮಕ್ಕಳಲ್ಲಿ, ನಾರು, ಪ್ರೋಟೀನ್, ವಿಟಮಿನ್ ಮತ್ತು ಖನಿಜಯುಕ್ತ ಆಹಾರದ ಸುಸ್ಥಿರ ಸೇವನೆಯ ಅಗತ್ಯವಿರುತ್ತದೆ. ಜಂಕ್ ಫುಡ್ಡಿನಂತಹ ಸಂಸ್ಕರಿತ ಆಹಾರ ನಮ್ಮ ಕರುಳಿನ ಆರೋಗ್ಯವನ್ನು ಹಾನಿಗೊಳಿಸುತ್ತದೆ, ಉರಿಯೂತವನ್ನು ಉಂಟುಮಾಡುತ್ತದೆ ಮತ್ತು ದೇಹದ ನೈಸರ್ಗಿಕ ರಕ್ಷಣಾ ಕಾರ್ಯವಿಧಾನಗಳನ್ನು ನಿಧಾನವಾಗಿ ದುರ್ಬಲಗೊಳಿಸುತ್ತದೆ. ಇದರ ಪರಿಣಾಮಗಳು ತಕ್ಷಣವೇ ಗೋಚರಿಸದಿರಬಹುದು. ಆದರೆ ನಿಧಾನವಾಗಿ ಅವು ದೀರ್ಘಕಾಲದ ಆಯಾಸ, ಜೀರ್ಣಕ್ರಿಯೆ ಸಮಸ್ಯೆಗಳು, ಬೊಜ್ಜು, ಹಾರ್ಮೋನುಗಳ ಅಸಮತೋಲನ ಮತ್ತು ಸೋಂಕುಗಳಾಗಿ ಪ್ರಕಟವಾಗಬಹುದು.
ಆಹನಾಳ ಪ್ರಕರಣ ನಮಗೆ ಮೊದಲನೆಯದಾಗಿ ಕಲಿಸುವ ಪಾಠ ಎಂದರೆ ಆಹಾರ ಎಂಬುದು ಸಣ್ಣ ವಿಷಯವಲ್ಲ ಎಂಬ ಸತ್ಯ. ಇಂದಿನ ಧಾವಂತ ಜೀವನದಲ್ಲಿ ಜಂಕ್ ಫುಡ್ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದೆ. ರುಚಿ ಮತ್ತು ಸೌಲಭ್ಯಕ್ಕಾಗಿ ನಾವು ಪೌಷ್ಟಿಕತೆಯನ್ನು ಕಡೆಗಣಿಸುತ್ತಿದ್ದೇವೆ. ಆದರೆ ದೀರ್ಘಕಾಲದ ತಪ್ಪಾದ ಆಹಾರ ಪದ್ಧತಿ ದೇಹದ ರೋಗನಿರೋಧಕ ಶಕ್ತಿಯನ್ನು ನಿಧಾನವಾಗಿ ಕುಂದಿಸುತ್ತದೆ ಎಂಬುದನ್ನು ಈ ಘಟನೆ ನೆನಪಿಸುತ್ತದೆ.
ಎರಡನೆಯ ಪಾಠವೆಂದರೆ ಯಾವುದೆ ರೀತಿಯ ಆರೋಗ್ಯದ ಸಮಸ್ಯೆಗಳ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಆಹನಾಳಿಗೆ ಹೊಟ್ಟೆನೋವು ಮುಂತಾದ ಸಮಸ್ಯೆಗಳು ಕೆಲ ದಿನಗಳಿಂದ ಇದ್ದರೂ, ಅವು ಗಂಭೀರವಾಗುವವರೆಗೆ ಬಹಳ ಮಂದಿ ಅದರ ತೀವ್ರತೆಯನ್ನು ಅರಿಯಲಿಲ್ಲ. ಆನಾರೋಗ್ಯದ ಲಕ್ಷಣಗಳನ್ನು ತಕ್ಷಣ ಗಮನಿಸಿ ವೈದ್ಯಕೀಯ ಸಲಹೆ ಪಡೆಯುವುದು ಅತ್ಯಂತ ಅಗತ್ಯ.
ಮೂರನೆಯದಾಗಿ ಈ ದುರಂತ ಪಾಲಕರ ಮತ್ತು ಸಮಾಜದ ಜವಾಬ್ದಾರಿಯನ್ನು ಪ್ರಶ್ನಿಸುತ್ತದೆ. ಮಕ್ಕಳ ಆಹಾರ ಪದ್ಧತಿಯನ್ನು ಗಮನಿಸುವುದು ಮತ್ತು ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಪಾಲಕರ ಕರ್ತವ್ಯ. ಇಂದು ಪೋಷಕರು ಮಕ್ಕಳಿಗೆ ಹಿಂದಿಗಿಂತ ಹೆಚ್ಚು ಪಾಕೆಟ್ ಮನಿಯನ್ನು ಕೊಡುತ್ತಿದ್ದಾರೆ. ಹೀಗಾಗಿ ಅವರು ಸ್ನೇಹಿತರೊಂದಿಗೆ ಹೊರಗೆ ಹೋದಾಗ ಜಂಕ್ ಫುಡ್ಡನ್ನು ಹೆಚ್ಚಾಗಿ ಸೇವಿಸುತ್ತಾರೆಯೇ ಎಂದು ಗಮನ ಹರಿಸಬೇಕು. ಜೊತೆಗೆ ಮಕ್ಕಳಿಗೆ ಮೊಬೈಲ್ ಫೋನ್ ಮನೆಯಲ್ಲಿ ಸುಲಭವಾಗಿ ಸಿಗುತ್ತದೆ. ಇದರಿಂದ ಸ್ವಿಗಿ, ಜೋಮ್ಯಾಟೋನಂತಹ ಆಪ್‌ಗಳ ಮೂಲಕ ಫುಡ್ ಆರ್ಡರ್ ಮಾಡುತ್ತಾರೆ ಇದರ ಬಗ್ಗೆಯೂ ಪೋಷಕರು ಎಚ್ಚರದಿಂದಿರಬೇಕು. ಜೊತೆಗೆ ಶಾಲೆಯಲ್ಲಿ ಶಿಕ್ಷಕರು ಅವರಲ್ಲಿ ಆರೋಗ್ಯಕರ ಜೀವನಶೈಲಿಯ ಬಗ್ಗೆ ನಿರಂತರ ಜಾಗೃತಿ ಮೂಡಿಸಬೇಕು.
ಎಲ್ಲಕ್ಕಿಂತ ಮುಖ್ಯವಾಗಿ ಮತ್ತೊಂದು ಪ್ರಮುಖ ಪಾಠವೆಂದರೆ ಜಾಹೀರಾತುಗಳ ಪ್ರಭಾವವನ್ನು ಅರ್ಥಮಾಡಿಕೊಳ್ಳುವುದು. ಆಕರ್ಷಕ ಜಾಹೀರಾತುಗಳು ಮಕ್ಕಳ ಮನಸ್ಸನ್ನು ಸುಲಭವಾಗಿ ಸೆಳೆಯುತ್ತವೆ. ಅವುಗಳನ್ನು ತಿನ್ನಬೇಕೆಂದು ಬಯಸುತ್ತಾರೆ. ಆದರೆ ಪ್ರತಿಯೊಂದು ಆಕರ್ಷಕ ಆಹಾರವೂ ಆರೋಗ್ಯಕರವಲ್ಲ ಎಂಬ ವಿವೇಕವನ್ನು ನಾವು ಮಕ್ಕಳಲ್ಲಿ ಬೆಳೆಸಬೇಕು.
Advertisement