

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದಡಿ ವೆನೆಜುವೆಲಾದ ಅಧ್ಯಕ್ಷ ನಿಕೊಲಾಸ್ ಮಡುರೊ ಅವರನ್ನು ಬಂಧಿಸುವ ಕಾರ್ಯಾಚರಣೆ ನಡೆಯಿತು. ಈ ಕಾರ್ಯಾಚರಣೆ ಕಾನೂನುಬದ್ಧವೇ ಎಂಬ ಪ್ರಶ್ನೆ ಉದ್ಭವಿಸಿದೆ. ಅಂತಾರಾಷ್ಟ್ರೀಯ ಕಾನೂನು ತಜ್ಞರು ಈ ಕಾರ್ಯಾಚರಣೆಯನ್ನು ಕಾನೂನುಬದ್ಧವಾಗಿ ಸಮರ್ಥಿಸಲು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದ ಈ ಕ್ರಮವು ಕಾನೂನು ಬದ್ಧತೆಯ ಗೊಂದಲವನ್ನು ಉಂಟುಮಾಡಿದೆ.
ಜನವರಿ 3, 2026 ಶನಿವಾರದಂದು ರಾತ್ರಿಯ ವೇಳೆ ಅಮೆರಿಕನ್ ಸೇನಾ ಪಡೆಗಳು ವೆನೆಜುವೆಲಾದಲ್ಲಿ ಒಂದು ಮಿಲಿಟರಿ ಕಾರ್ಯಾಚರಣೆ ನಡೆಸಿ, ಆ ದೇಶದ ಅಧ್ಯಕ್ಷ ನಿಕೊಲಾಸ್ ಮಡುರೋ ಮತ್ತವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಿದವು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದಡಿ ನಡೆಸಲಾದ ಈ ಕಾರ್ಯಾಚರಣೆ, ಹಲವು ತಿಂಗಳುಗಳ ಒತ್ತಡ ಮತ್ತು ಬೆದರಿಕೆ ತಂತ್ರವನ್ನು ಕೊನೆಗೊಳಿಸಿದೆ. ಮಡುರೊ ಅವರನ್ನು ಒಂದು ಯುದ್ಧ ನೌಕೆಯ ಮೂಲಕ ಅಮೆರಿಕಗೆ ತರಲಾಗಿದ್ದು, ನ್ಯೂಯಾರ್ಕ್ ನಲ್ಲಿ ಅವರು ತಮ್ಮ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳ ವಿಚಾರಣೆಗೆ ಒಳಗಾಗಲಿದ್ದಾರೆ. ಈಗ ಎಲ್ಲರೂ ಕೇಳುತ್ತಿರುವ ಬಲುದೊಡ್ಡ ಪ್ರಶ್ನೆ ಎಂದರೆ: ಈ ಕಾರ್ಯಾಚರಣೆ ನಿಜಕ್ಕೂ ಕಾನೂನು ಬದ್ಧವಾಗಿತ್ತೇ?
ಈ ಕುರಿತು ಅಭಿಪ್ರಾಯ ಹಂಚಿಕೊಂಡ ಅಂತಾರಾಷ್ಟ್ರೀಯ ಕಾನೂನು ತಜ್ಞರುಗಳ ಪ್ರಕಾರ, ಇದಕ್ಕೆ ಉತ್ತರ ಅತ್ಯಂತ ಸಂಕೀರ್ಣವಾಗಿದ್ದು, ಆತಂಕಕಾರಿಯೂ ಆಗಿದೆ. ಟ್ರಂಪ್ ಆಡಳಿತ ಈಗ ಕಾನೂನಾತ್ಮಕವಾಗಿ ದುರ್ಬಲ ಸ್ಥಾನದಲ್ಲಿದ್ದು, ಅಮೆರಿಕನ್ ಅಧಿಕಾರಿಗಳು ಈ ಕಾರ್ಯಾಚರಣೆಯನ್ನು ಸಮರ್ಥಿಸಿಕೊಳ್ಳುತ್ತಿರುವ ರೀತಿ ಕಾನೂನು ಪಂಡಿತರೂ ತಲೆ ಕೆರೆದುಕೊಳ್ಳುವಂತೆ ಮಾಡಿದೆ.
ಅಮೆರಿಕಾ ಕಾರ್ಯಾಚರಣೆಯಲ್ಲಿ ಆಗಿದ್ದೇನು?
ನಿಜಕ್ಕೂ ಈ ಕಾರ್ಯಾಚರಣೆಯಲ್ಲಿ ಏನಾಯಿತು ಎನ್ನುವುದನ್ನು ನಾವಿಲ್ಲಿ ಗಮನಿಸೋಣ. ಕಳೆದ ಹಲವಾರು ತಿಂಗಳುಗಳಿಂದ ಡೊನಾಲ್ಡ್ ಟ್ರಂಪ್ ಮಡುರೊ ಕೆಲವೊಂದು ಮಾದಕ ದ್ರವ್ಯ ಕಾರ್ಟೆಲ್‌ಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ವಾಷಿಂಗ್ಟನ್ ಈ ಕಾರ್ಟೆಲ್‌ಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಪರಿಗಣಿಸುತ್ತದೆ. ಆದ್ದರಿಂದ ಮಡುರೊ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕೆಂದು ಟ್ರಂಪ್ ಒತ್ತಡ ಹೇರಿದ್ದರು. ಸೆಪ್ಟೆಂಬರ್ ತಿಂಗಳ ಬಳಿಕ, ಅಮೆರಿಕನ್ ಪಡೆಗಳು ವೆನೆಜುವೆಲಾದಿಂದ ಕೆರಿಬಿಯನ್ ಸಮುದ್ರ ಮತ್ತು ಪೆಸಿಫಿಕ್ ಸಾಗರದ ತನಕ ಶಂಕಿತ ಮಾದಕ ದ್ರವ್ಯ ಬೋಟ್‌ಗಳ ಮೇಲೆ 30ಕ್ಕೂ ಹೆಚ್ಚು ದಾಳಿ ನಡೆಸಿದ್ದು, 100ಕ್ಕೂ ಹೆಚ್ಚು ಜನರನ್ನು ಹತ್ಯೆಗೈದಿವೆ. ಕಾನೂನು ತಜ್ಞರ ಪ್ರಕಾರ, ಶನಿವಾರದ ದಾಳಿ ಮತ್ತು ಮಡುರೊ ಬಂಧನಕ್ಕೆ ಮುನ್ನ ನಡೆದ ಈ ಬೋಟ್ ದಾಳಿ ಕಾರ್ಯಾಚರಣೆಗಳೇ ಅಮೆರಿಕ ಮತ್ತು ಅಂತಾರಾಷ್ಟ್ರೀಯ ಕಾನೂನುಗಳನ್ನು ಮುರಿದಿವೆ.
ಅಮೆರಿಕ ಅಧಿಕಾರಿಗಳು ನೀಡುತ್ತಿರುವ ವಿವರಣೆಯ ಪ್ರಕಾರ, ಅಮೆರಿಕದ ಕಾನೂನು ಇಲಾಖೆ ನ್ಯೂಯಾರ್ಕ್ ಗ್ರ್ಯಾಂಡ್ ಜ್ಯೂರಿಯಿಂದ ಅಧಿಕೃತವಾಗಿ ಆರೋಪಕ್ಕೆ ತುತ್ತಾಗಿರುವ ಮಡುರೊ ಅವರನ್ನು ಬಂಧಿಸಲು ಮಿಲಿಟರಿ ನೆರವನ್ನು ಕೋರಿತ್ತು. ಮಡುರೊ, ಅವರ ಪತ್ನಿ ಮತ್ತು ಪುತ್ರ, ಇಬ್ಬರು ರಾಜಕೀಯ ವ್ಯಕ್ತಿಗಳು ಮತ್ತು ಓರ್ವ ಶಂಕಿತ ಗ್ಯಾಂಗ್ ಮುಖಂಡರು ಭಯೋತ್ಪಾದನೆಗೆ ಸಂಬಂಧಿಸಿದ ಆರೋಪಗಳು, ಮಾದಕ ದ್ರವ್ಯ ಸಂಬಂಧಿ ಅಪರಾಧಗಳು ಮತ್ತು ಆಯುಧ ದುರ್ಬಳಕೆ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅಮೆರಿಕದ ಅಟಾರ್ನಿ ಜನರಲ್ ಪಾಮ್ ಬೊಂಡಿ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಬರೆದುಕೊಂಡಿದ್ದು, ಈ ಆರೋಪಿಗಳು ಸದ್ಯದಲ್ಲೇ ಅಮೆರಿಕನ್ ನ್ಯಾಯಾಲಯಗಳಲ್ಲಿ ಕಟ್ಟುನಿಟ್ಟಿನ ಅಮೆರಿಕನ್ ನ್ಯಾಯವನ್ನು ಎದುರಿಸಲಿದ್ದಾರೆ ಎಂದಿದ್ದಾರೆ.
ಆದರೆ, ಇಷ್ಟರಲ್ಲಿ ಸ್ವತಃ ಟ್ರಂಪ್ ಈ ಕಥೆಗೆ ಬೇರೆಯೇ ಆಯಾಮ ನೀಡಿಬಿಟ್ಟಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ವೆನೆಜುವೆಲಾ ಅಮೆರಿಕದ ತೈಲ ಹಿತಾಸಕ್ತಿಯನ್ನು ತನ್ನದಾಗಿಸಿಕೊಂಡಿದ್ದು, ಅದನ್ನು ಅಮೆರಿಕ ಮರಳಿ ವಶಪಡಿಸಿಕೊಳ್ಳಲಿದೆ ಎಂದಿದ್ದಾರೆ. ಎಲ್ಲಕ್ಕಿಂತ ಆತಂಕಕಾರಿ ಎಂಬಂತೆ, ಕೆಲ ಕಾಲ ಅಮೆರಿಕವೇ ವೆನೆಜುವೆಲಾದ ಆಡಳಿತ ನಡೆಸುವ ಉದ್ದೇಶ ಹೊಂದಿದೆ ಎಂದಿದ್ದಾರೆ. ಆದರೆ ಟ್ರಂಪ್ ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನೇನೂ ನೀಡಿಲ್ಲ. ಟ್ರಂಪ್ ನೀಡಿರುವ ಈ ಹೇಳಿಕೆಯೇ ಕಾರ್ಯಾಚರಣೆಯ ಮೂಲ ಉದ್ದೇಶವನ್ನೇ ಬದಲಿಸುವಂತೆ ತೋರುತ್ತಿದೆ.
ಕಾನೂನು ಸ್ಥಾನಮಾನದ ಕುರಿತೇ ಗೊಂದಲ ಏಕೆ?
ಅಂತಾರಾಷ್ಟ್ರೀಯ ವರದಿಗಳ ಪ್ರಕಾರ, ಅಂತಾರಾಷ್ಟ್ರೀಯ ಕಾನೂನು ತಜ್ಞರು ಟ್ರಂಪ್ ಆಡಳಿತ ತನ್ನ ಕಾನೂನು ಸ್ಥಾನಮಾನದ ಕುರಿತೇ ಗೊಂದಲ ಹೊಂದಿರುವಂತೆ ತೋರುತ್ತಿದ್ದು, ಅವರು ಈ ಬಂಧನವನ್ನು ಕಾನೂನು ಜಾರಿಯ ಬಂಧನ ಎಂದೂ ಕರೆದಿದ್ದಾರೆ, ಜೊತೆಗೆ ದೀರ್ಘಕಾಲ ವೆನೆಜುವೆಲಾವನ್ನು ಅಮೆರಿಕ ನಿಯಂತ್ರಿಸುವ ಮಾತುಗಳನ್ನೂ ಆಡಿದ್ದಾರೆ ಎಂದು ವಿವರಿಸಿದ್ದಾರೆ. ನಾರ್ತ್‌ಈಸ್ಟರ್ನ್ ವಿಶ್ವವಿದ್ಯಾಲಯದ ಸಾಂವಿಧಾನಿಕ ಕಾನೂನು ತಜ್ಞರಾದ ಜೆರೆಮಿ ಪಾಲ್ ಅವರು ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದು, “ನೀವು ಕೈಗೊಂಡಿರುವ ಕ್ರಮವನ್ನು ಕಾನೂನು ಜಾರಿ ಎಂದು ಸಮರ್ಥಿಸಿ, ಬಳಿಕ ಅಮೆರಿಕ ವೆನೆಜುವೆಲದ ಆಡಳಿತ ನಿರ್ವಹಿಸಬೇಕು ಎನ್ನಲು ಸಾಧ್ಯವಿಲ್ಲ. ಇವೆರಡು ಹೇಳಿಕೆಗಳು ತಾರ್ಕಿಕವಾಗಿ ಸರಿಹೊಂದುವುದಿಲ್ಲ” ಎಂದಿದ್ದಾರೆ.
ಈ ವಿರೋಧಾಭಾಸವೇ ಕಾನೂನು ಸಮಸ್ಯೆಯ ಕೇಂದ್ರವಾಗಿದೆ. ಇದು ಓರ್ವ ಅಪರಾಧಿಯನ್ನು ಬಂಧಿಸಲು ಕೈಗೊಂಡ ಪೊಲೀಸ್ ಕಾರ್ಯಾಚರಣೆಯೇ? ಅಥವಾ ಇನ್ನೊಂದು ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ನಡೆಸಿರುವ ಮಿಲಿಟರಿ ಆಕ್ರಮಣವೇ? ಕಾನೂನಾತ್ಮಕವಾಗಿ ಈ ಘಟನೆ ಎರಡೂ ಆಗಿರಲು ಸಾಧ್ಯವೇ ಇಲ್ಲ!
ದೇಶಗಳು ಯಾವಾಗ ತಮ್ಮ ಮಿಲಿಟರಿ ಬಲವನ್ನು ಇನ್ನೊಂದು ದೇಶದ ಮೇಲೆ ಪ್ರಯೋಗಿಸಬಹುದು ಎನ್ನುವುದನ್ನು ಅಂತಾರಾಷ್ಟ್ರೀಯ ಕಾನೂನುಗಳು ಬಹಳ ಸ್ಪಷ್ಟವಾಗಿ ಹೇಳಿವೆ. ಸಾಮಾನ್ಯವಾಗಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅನುಮೋದನೆ ಇದ್ದಾಗ, ಅಥವಾ ಒಂದು ದೇಶದ ಸ್ವ ರಕ್ಷಣೆಯ ಉದ್ದೇಶಕ್ಕಾಗಿ ಮಾತ್ರವೇ ಇಂತಹ ಮಿಲಿಟರಿ ಕ್ರಮವನ್ನು ಕೈಗೊಳ್ಳಲು ಅಂತಾರಾಷ್ಟ್ರೀಯ ಕಾನೂನುಗಳು ಅನುಮತಿಸುತ್ತವೆ. ಮಾದಕ ದ್ರವ್ಯ ಕಳ್ಳ ಸಾಗಣೆ ಮತ್ತು ಗುಂಪು ಹಿಂಸಾಚಾರಗಳು ದೊಡ್ಡ ಅಪರಾಧಗಳೇ ಆಗಿದ್ದರೂ, ಯುದ್ಧದಂತಹ ಕ್ರಮಗಳಲ್ಲ. ಈ ವಿಚಾರಗಳಿಗೆ ಸಂಬಂಧಿಸಿದಂತೆ ಮಿಲಿಟರಿ ಕ್ರಮಗಳನ್ನು ಕೈಗೊಳ್ಳುವುದನ್ನು ಅಂತಾರಾಷ್ಟ್ರೀಯ ಕಾನೂನಿನಡಿ ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಕಾನೂನು ತಜ್ಞರು ವಿವರಿಸಿದ್ದಾರೆ. ಒಂದು ದೇಶದಲ್ಲಿ ಮಾದಕ ದ್ರವ್ಯ ಮತ್ತು ಅಪರಾಧಗಳಿವೆ ಎಂದಾಕ್ಷಣ ಆ ದೇಶದ ಮೇಲೆ ಇನ್ನೊಂದು ದೇಶ ಮಿಲಿಟರಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಈ ಸಮಸ್ಯೆಗಳನ್ನು ಪೊಲೀಸ್ ಮತ್ತು ನ್ಯಾಯಾಲಯಗಳೇ ನಿರ್ವಹಿಸಬೇಕೇ ಹೊರತು ಟ್ಯಾಂಕ್‌ಗಳು ಮತ್ತು ಸೈನಿಕರಲ್ಲ.
ಕೊಲಂಬಿಯಾ ವಿಶ್ವಿವಿದ್ಯಾಲಯದ ಕಾನೂನು ಉಪನ್ಯಾಸಕರಾದ ಮ್ಯಾಥ್ಯೂ ವಾಕ್ಸ್‌ಮ್ಯಾನ್ ಅವರು ಕೇವಲ ಕ್ರಿಮಿನಲ್ ಮೊಕದ್ದಮೆಯ ಆಧಾರದಲ್ಲಿ ಒಂದು ದೇಶದ ಸರ್ಕಾರವನ್ನು ಉರುಳಿಸಲು ಕಾನೂನು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಟ್ರಂಪ್ ಆಡಳಿತ ಇದನ್ನೂ ಸಮರ್ಥನೆ ಮಾಡಿಕೊಳ್ಳುತ್ತಾ, ಸ್ವಯಂ ರಕ್ಷಣೆಯಂತಹ ನೆಪಗಳನ್ನು ಮುಂದಿಡಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದು, ಇಂತಹ ವಾದ ದುರ್ಬಲವಾಗಿಯೇ ಕಾಣುತ್ತದೆ ಎಂದಿದ್ದಾರೆ.
ಇದರೊಡನೆ ಕಾನೂನು ಬಾಧ್ಯತೆಯ ಪ್ರಶ್ನೆಯೂ ಎದುರಾಗುತ್ತದೆ. ಯಾಕೆಂದರೆ, ಅಮೆರಿಕ 2019ರಿಂದಲೂ ಮಡುರೊ ಅವರನ್ನು ವೆನೆಜುವೆಲಾದ ಕಾನೂನುಬದ್ಧ ಅಧ್ಯಕ್ಷ ಎಂದು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಅಮೆರಿಕ 2019ರಲ್ಲಿ ಮಡುರೊ ಅಧಿಕಾರಕ್ಕೆ ಬಂದ ಚುನಾವಣೆಯಲ್ಲಿ ಅಕ್ರಮ ನಡೆದಿತ್ತು ಎಂದು ಆರೋಪಿಸಿದೆ. ವಾಷಿಂಗ್ಟನ್ ಮಡುರೊ ಅವರನ್ನು ನ್ಯಾಯಯುತ ಅಧ್ಯಕ್ಷ ಎಂದು ಒಪ್ಪಿಕೊಂಡಿಲ್ಲವಾದರೂ, ಅವರ ಬಂಧನಕ್ಕೆ ಕಾನೂನು ಬದ್ಧವಾಗಿ ಅನುಮತಿ ನೀಡಬಲ್ಲ ಬೇರೊಬ್ಬ ವೆನೆಜುವೆಲಾ ನಾಯಕರನ್ನೂ ಗುರುತಿಸಿಲ್ಲ. ಇದೂ ಒಂದು ಕಾನೂನಿನ ದೃಷ್ಟಿಯ ಹಿನ್ನಡೆಯೇ ಆಗಿದೆ.
ಅಮೆರಿಕಾ ಕಾರ್ಯಾರಣೆಗಳ ಇತಿಹಾಸ
ಹಾಗೆಂದು ಅಮೆರಿಕ ಇಂತಹ ಕ್ರಮ ಕೈಗೊಂಡಿರುವುದು ಇದೇನೂ ಮೊದಲ ಬಾರಿಯಲ್ಲ. 1989ರಲ್ಲಿ, ಅಮೆರಿಕನ್ ಪಡೆಗಳು ಪನಾಮಾದ ಮುಖಂಡನಾಗಿದ್ದ ಜನರಲ್ ಮಾನ್ಯುಯೆಲ್ ನೊರೀಗ ಅವರನ್ನು ಇದೇ ರೀತಿಯ ಸನ್ನಿವೇಶದಲ್ಲಿ ಬಂಧಿಸಿದ್ದವು. ನೊರೀಗಾ ವಿರುದ್ಧ ಮಾದಕ ದ್ರವ್ಯದ ಆರೋಪ ಹೊರಿಸಿದ್ದ ಅಮೆರಿಕ, ಪನಾಮಾ ಪಡೆಗಳು ಓರ್ವ ಅಮೆರಿಕನ್ ಯೋಧನನ್ನು ಕೊಂದ ಬಳಿಕ ತನ್ನ ರಾಷ್ಟ್ರೀಯ ಹಿತಾಸಕ್ತಿಗಾಗಿ ಈ ಕ್ರಮ ಕೈಗೊಳ್ಳಬೇಕಾಗಿ ಬಂತು ಎಂದಿತ್ತು. ಅಮೆರಿಕ ನೊರೀಗಾರನ್ನು ನ್ಯಾಯಯುತ ಆಡಳಿತಗಾರನಲ್ಲ ಎಂದು ಘೋಷಿಸಿ, ವಿರೋಧ ಪಕ್ಷನ ಅಭ್ಯರ್ಥಿಯನ್ನು ನ್ಯಾಯಸಮ್ಮತ ಎಂದು ಗುರುತಿಸಿತು. ಬಹಳ ಇತ್ತೀಚೆಗೆ, ಅಂದರೆ 2022ರಲ್ಲಿ, ಹೊಂಡುರಾಸಿನ ಮಾಜಿ ಅಧ್ಯಕ್ಷ ಜುವಾನ್ ಒರ್ಲಾಂಡೊ ಹೆರ್ನಾಂಡೀಸ್ ಅವರನ್ನು ಅಮೆರಿಕಗೆ ಗಡೀಪಾರು ಮಾಡಿ, ಮಾದಕ ದ್ರವ್ಯ ಅಪರಾಧದಲ್ಲಿ ಅಪರಾಧಿ ಎಂದು ಗುರುತಿಸಿ, 45 ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಆದರೆ ಬಳಿಕ ಟ್ರಂಪ್ ಡಿಸೆಂಬರ್ ತಿಂಗಳಲ್ಲಿ ಅವರಿಗೆ ಕ್ಷಮಾದಾನ ನೀಡಿದರು.
ಶನಿವಾರದ ಕಾರ್ಯಾಚರಣೆಯನ್ನು ಪ್ರಾಯೋಗಿಕವಾಗಿ ಆತಂಕಕಾರಿಯಾಗಿಸಿದ್ದು ಎಂದರೆ, ಈ ಕಾರ್ಯಾಚರಣೆ ಹಿಂದಿನ ಪ್ರಕರಣಗಳ ರೀತಿ ಹೆಚ್ಚು ಕಾನೂನಾತ್ಮಕವಾಗಿ ಕಂಡು ಬರದೆ, ಹೆಚ್ಚು ಆಕ್ರಮಣಕಾರಿಯಾಗಿ ತಲೆದೋರಿತ್ತು. ಅಮೆರಿಕ ಹಿಂದೆಯೂ ಶಂಕಿತರನ್ನು ಲಿಬಿಯಾದಂತಹ ದೇಶಗಳಲ್ಲಿ ಬಂಧಿಸಿತ್ತಾದರೂ, ಅದಕ್ಕೆ ಮುನ್ನ ಸ್ಥಳೀಯ ಆಡಳಿತದಿಂದ ಅನುಮತಿ ಪಡೆದುಕೊಂಡಿತ್ತು. ಆದರೆ ವೆನೆಜುವೆಲಾದ ಪ್ರಕರಣದಲ್ಲಿ ವಾಷಿಂಗ್ಟನ್ ಯಾರನ್ನೂ ವೆನೆಜುವೆಲಾದ ಕಾನೂನುಬದ್ಧ ಆಡಳಿತಗಾರ ಎಂದು ಗುರುತಿಸಿಲ್ಲವಾದ್ದರಿಂದ, ಅಮೆರಿಕ ಯಾರ ಬಳಿಯೂ ಅನುಮತಿ ಕೇಳಿಲ್ಲ.
ಆಸಕ್ತಿಕರ ವಿಚಾರವೆಂದರೆ, ಟ್ರಂಪ್ ಆಡಳಿತದ ಒಳಗೂ ಸರಿಯಾದ ಕ್ರಮಗಳ ಕುರಿತಂತೆ ಒಂದಷ್ಟು ಗೊಂದಲಗಳಿದ್ದಂತೆ ತೋರುತ್ತದೆ. ಡೊನಾಲ್ಡ್ ಟ್ರಂಪ್ ಅವರ ಚೀಫ್ ಆಫ್ ಸ್ಟಾಫ್ ಆಗಿರುವ ಸೂಸಿ ವೈಲ್ಸ್ ಅವರು ಕಳೆದ ವರ್ಷ ವೆನೆಜುವೆಲಾ ವಿಚಾರದ ಕುರಿತು ಚರ್ಚಿಸುವಾಗ, ವೆನೆಜುವೆಲಾ ಮೇಲೆ ಏನಾದರೂ ಮಿಲಿಟರಿ ಕ್ರಮ ಕೈಗೊಳ್ಳಬೇಕಾದರೆ ಅದಕ್ಕೂ ಮುನ್ನ ಕಾಂಗ್ರೆಸ್ ಅನುಮತಿ ಪಡೆಯಬೇಕಾಗುತ್ತದೆ ಎಂದಿದ್ದರು. ಆದರೆ, ಸೆಕ್ರೆಟರಿ ಆಫ್ ಸ್ಟೇಟ್ ಮಾರ್ಕೊ ರುಬಿಯೋ ಅವರು ಶನಿವಾರದ ಕಾರ್ಯಾಚರಣೆಯ ಕುರಿತು ಕಾಂಗ್ರೆಸ್‌ಗೆ ಮೊದಲೇ ಮಾಹಿತಿ ನೀಡಿರಲಿಲ್ಲ ಎಂದು ಖಚಿತಪಡಿಸಿದ್ದಾರೆ.
ಇದರಿಂದ ಏನಾದರೂ ಪರಿಣಾಮಗಳು ಎದುರಾಗಬಹುದೇ? ಕಾನೂನು ತಜ್ಞರ ಪ್ರಕಾರ ಈ ಕ್ರಮಗಳು ಕಾನೂನುಬಾಹಿರ ಎಂದು ಸಾಬೀತಾದರೂ ಅಮೆರಿಕ ಯಾವುದೇ ಶಿಕ್ಷೆಗೆ ಒಳಗಾಗುವ ಸಾಧ್ಯತೆಗಳಿಲ್ಲ. ಯಾಕೆಂದರೆ, ಅಂತಾರಾಷ್ಟ್ರೀಯ ಕಾನೂನು ಜಾರಿ ವ್ಯವಸ್ಥೆ ಅತ್ಯಂತ ದುರ್ಬಲವಾಗಿದೆ. ಪಾಲ್ ಹೇಳಿದಂತೆ, “ಅಮೆರಿಕ ಆಡಳಿತದ ಮೇಲೆ ನಿಜವಾದ ಕ್ರಮ ಕೈಗೊಳ್ಳುವಂತಹ ಯಾವುದಾದರೂ ಕಾನೂನು ವ್ಯವಸ್ಥೆ ಇರುವುದು ಕಷ್ಟಕರ”.
ವೆನೆಜುವೆಲಾ ಕಾರ್ಯಾಚರಣೆ ಅಂತಾರಾಷ್ಟ್ರೀಯ ಕಾನೂನಿಗೆ ಸಂಬಂಧಿಸಿದಂತೆ ಒಂದು ಅಪ್ರಿಯ ಸತ್ಯವನ್ನು ಬಯಲುಗೊಳಿಸಿದೆ: ಶಕ್ತಿಶಾಲಿ ದೇಶಗಳು ಅಂತಾರಾಷ್ಟ್ರೀಯ ಕಾನೂನುಗಳನ್ನು ಪಾಲಿಸುವುದನ್ನು ಆಯ್ಕೆ ಮಾಡಿಕೊಂಡಾಗ ಮಾತ್ರ ಅವು ಶಕ್ತಿಶಾಲಿಯಾಗಿ ಕಂಡುಬರುತ್ತವೆ. ಈ ದೇಶಗಳು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸಿದಾಗ, ಅದನ್ನು ತಡೆಯುವವರು ಯಾರೂ ಇರುವುದಿಲ್ಲ. ಈ ಕ್ರಮಗಳು ನ್ಯಾಯಯುತವಾಗಿದ್ದವೇ ಎನ್ನುವುದು ಎರಡನೆಯ ವಿಚಾರ. ಯಾರಿಗಾದರೂ ಅಮೆರಿಕದ ಕ್ರಮವನ್ನು ಪ್ರಶ್ನಿಸಲು ಸಾಧ್ಯವಿತ್ತೇ ಎನ್ನುವುದು ಮುಖ್ಯ ಪ್ರಶ್ನೆಯಾಗಿದೆ. ಆದ್ದರಿಂದ ಇದು ಕೇವಲ ನ್ಯಾಯದ ವಿಚಾರವಲ್ಲ. ಬದಲಿಗೆ ಒಂದು ದೇಶದ ಶಕ್ತಿಯ ವಿಚಾರವೂ ಹೌದು.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com
Advertisement