

ಬಿಜೆಪಿಯ ಜನಾರ್ದನ ರೆಡ್ಡಿ ಅವರ ಪಾಳೇಗಾರಿಕೆಯಲ್ಲಿ ಅವತ್ತು ರಿಪಬ್ಲಿಕ್ ಆಫ್ ಬಳ್ಳಾರಿ. ಇವತ್ತು ಅದೇ ಊರು ರಿಪಬ್ಲಿಕ್ ಸಂಸ್ಕೃತಿಗೆ ಹಿಂತಿರುಗಿದೆ. ಗನ್ ಸಂಸ್ಕೃತಿ ಮೆರೆದಿದೆ. ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಹಳೇ ಪಾಳೇಗಾರ ಜನಾರ್ದನ ರೆಡ್ಡಿ ಅವರನ್ನು ಎದುರಿಸಲು ಹೊಸ ಪಾಳೇಗಾರರಾಗಿದ್ದಾರೆ.
ಜನಾರ್ದನ ರೆಡ್ಡಿ ಸಚಿವರಾಗಿ ದರ್ಬಾರು ನಡೆಸಿದ್ದರು. ಇವರು ಶಾಸಕರಾಗಿ ತೋಳು ಏರಿಸಿದ್ದಾರೆ. ರಾಜ್ಯದಲ್ಲಿ ಅವತ್ತು ಬಿಜೆಪಿ ಸರಕಾರ. ಇವತ್ತು ಕಾಂಗ್ರೆಸ್ ಆಳ್ವಿಕೆ. ರಿಪಬ್ಲಿಕ್ ಆಫ್ ಬಳ್ಳಾರಿಯಾದಾಗ ಜನಾರ್ದನ ರೆಡ್ಡಿ ಬಿಜೆಪಿಯಲ್ಲಿದ್ದರು. ಇವತ್ತು ಭರತ್ ರೆಡ್ಡಿ ಹಿಂದೆ ಕಾಂಗ್ರೆಸ್ ಬಂಡೆಯಂತೆ ನಿಂತಿದೆ. ವ್ಯತ್ಯಾಸ ಇಷ್ಟೇ. ಅಂದ ಹಾಗೇ ರಿಪಬ್ಲಿಕ್ ಆಫ್ ಬಳ್ಳಾರಿ ಅಂತ ಕರೆದಿದ್ದು ಆಗ ಲೋಕಾಯುಕ್ತರಾಗಿದ್ದ ನ್ಯಾ.ಎನ್.ಸಂತೋಷ ಹೆಗಡೆ ಅವರು.
ಕಾಲದ ಗಾಲಿ ಉರುಳಿದೆ. ಬಳ್ಳಾರಿ ಜಿಲ್ಲೆಯ ರಾಜಕಾರಣವನ್ನು ಹಣ, ತೋಳ್ಬಲದಿಂದ ಆಳಿದವರಿಗೆ ಇವತ್ತು ಅದಕ್ಕೆ ಅವರೇ ಗುರಿ. ಪಾತ್ರಗಳು ಬದಲು. ನಿರ್ದೇಶಕರು ಬೇರೆ. ಆದರೆ, ಕಥೆ ಒಂದೇ. ಅದು ಗಣಿ ಮಾಫಿಯಾ. ಅವತ್ತು ಪಾಳೇಗಾರರಾಗಿದ್ದವರು ಇವತ್ತು ತಮ್ಮನ್ನು ರಕ್ಷಿಸಿಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ. ಚಿತ್ರದ ಕಥಾವಸ್ತುವನ್ನೇ ಬದಲಿಸಿ ಸದಭಿರುಚಿಯ ಚಿತ್ರವನ್ನು ಕೊಡುವ ಮನಸ್ಸು ಇಲ್ಲಿ ಯಾರಿಗೂ ಇಲ್ಲ. ಇದೇ ಬಳ್ಳಾರಿಯ ಇವತ್ತಿನ ರಾಜಕಾರಣದ ದುಸ್ಥಿತಿ.
ಬಿಜೆಪಿ ಹಾಗೂ ಕಾಂಗ್ರೆಸ್ ಎಂಬ ಎರಡು ರಾಷ್ಟ್ರೀಯ ಪಕ್ಷಗಳು ಬಳ್ಳಾರಿಯ ರಾಜಕಾರಣದಲ್ಲಿ ಇಂತಹ ಶಕ್ತಿಗಳಿಗೆ ಕೆಲವು ವರ್ಷಗಳಿಂದ ನೀರೆರೆದಿವೆ. ಹೊಸ ಸಸಿ ನೆಡುವ ಆಸಕ್ತಿ ಅವುಗಳಿಗೆ ಇಲ್ಲ. ಹಣ ಹಾಗೂ ತೋಳ್ಬಲದವರಿಗೆ ಚುನಾವಣೆಯಲ್ಲಿ ಟಿಕೆಟ್ ಕೊಟ್ಟಿರುವ ಪರಿಣಾಮ ಇದು.
ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಬಳ್ಳಾರಿಯವರೇ ಆದ ಗಂಗಾವತಿ ಶಾಸಕ ಬಿಜೆಪಿಯ ಜನಾರ್ದನ ರೆಡ್ಡಿ ಅವರ ನಡುವಿನ ದ್ವೇಷದ ರಾಜಕಾರಣ ಸ್ಫೋಟಿಸಿದೆ. ಬಳ್ಳಾರಿಯಲ್ಲಿ ಕಳೆದ ವಾರ ನಡೆದ ಬ್ಯಾನರ್ ಸಂಘರ್ಷ ನೆಪವಷ್ಟೇ. ಭರತ್ ರೆಡ್ಡಿ ಅವರ ತಂದೆ ಕುರುಗೋಡಿನ ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ ಹಾಗೂ ಜನಾರ್ದನ ರೆಡ್ಡಿ ಮಧ್ಯೆ ಲಾಗಾಯ್ತಿನಿಂದಲೂ ದ್ವೇಷ. ಈಗ ಇದರ ಮುಂದುವರಿದ ಭಾಗ. ನೆರೆಯ ರಾಯಲಸೀಮೆಯ ಛಾಯೆ.
ಜನಾರ್ದನ ರೆಡ್ಡಿ ಹಾಗೂ ಭರತ್ ರೆಡ್ಡಿ ಇಬ್ಬರೂ ರೆಡ್ಡಿ ಸಮುದಾಯಕ್ಕೆ ಸೇರಿದವರು. ಇಬ್ಬರದೂ ಗಣಿಗಾರಿಕೆ ಬಿಸಿನೆಸ್. ಬಳ್ಳಾರಿ ಜಿಲ್ಲೆಯಲ್ಲಿ ರೆಡ್ಡಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ವಾಲ್ಮೀಕಿ ಸಮುದಾಯ, ಪರಿಶಿಷ್ಟ ಜಾತಿ, ವೀರಶೈವ- ಲಿಂಗಾಯತರು ಬಹು ಸಂಖ್ಯಾತರು. ಆದರೆ, ರೆಡ್ಡಿ ಸಮುದಾಯದವರು ಆರ್ಥಿಕವಾಗಿ ಬಲಿಷ್ಠರು.
ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮ ಜನವರಿ 3 ರಂದು ಇತ್ತು. ಇದಕ್ಕಾಗಿ ನಗರದಲ್ಲಿ ಬ್ಯಾನರ್‌ಗಳ ಹಾರಾಟ. ಪೋಸ್ಟರ್‌ಗಳ ಪ್ರದರ್ಶನ. ಬಳ್ಳಾರಿಯ ಜನಾರ್ದನ ರೆಡ್ಡಿಯವರ ಮನೆಯ ಮುಂದೆ ಭರತ್ ರೆಡ್ಡಿ ಬೆಂಬಲಿಗರು ಬ್ಯಾನರ್ ಹಾಕುವ ವಿಚಾರದಲ್ಲಿ ಜನವರಿ 1 ರಂದು ಗುಂಪು ಘರ್ಷಣೆ ನಡೆದಿದೆ. ಖಾಸಗಿ ಗನ್ ಮ್ಯಾನ್ ಹಾರಿಸಿದ ಗುಂಡಿಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಎಂಬುವರು ಮೃತಪಟ್ಟಿದ್ದಾರೆ. ಘರ್ಷಣೆಯ ಸುದ್ದಿ ತಿಳಿದು ತಮ್ಮ ಮನೆಗೆ ಧಾವಿಸಿದ ಜನಾರ್ದನ ರೆಡ್ಡಿ ಅವರು, ತಮ್ಮ ಹತ್ಯೆಗೆ ಈ ಸಂಚು ನಡೆಯಿತು ಎಂದು ಭರತ್ ರೆಡ್ಡಿ ವಿರುದ್ಧ ನೇರವಾಗಿ ಆರೋಪ ಮಾಡಿದ್ದಾರೆ. ಇದಕ್ಕೆ ಭರತ್ ರೆಡ್ಡಿ ಅವರದ್ದೂ ದ್ವೇಷದ ಪ್ರತಿಕ್ರಿಯೆ.
ಬಳ್ಳಾರಿ ರಾಜಕಾರಣದ ತೆರೆ ಸರಿಸಿದಾಗ 1980ರ ದಶಕಕ್ಕೂ ಮುನ್ನ ಕಾಂಗ್ರೆಸ್ ಪಾರುಪತ್ಯ. ನಂತರ ಜನತಾ ಪರಿವಾರದ ಅಧಿಪತ್ಯ. ಇತ್ತೀಚಿನ ದಶಕಗಳಲ್ಲಿ ಸಾಹಿತಿ, ನಾಟಕಕಾರ, ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರಂತಹ ಸೂಕ್ಷ್ಮ ಸಂವೇದನೆಯ ಸುಸಂಸ್ಕೃತ ರಾಜಕಾರಣಿಯನ್ನು ಕೊಟ್ಟ ಜಿಲ್ಲೆ ಇದು. ಆದರೆ, ಇವತ್ತು?
ಲೋಕಸಭೆಗೆ 1999ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಬಿಜೆಪಿಯ ಸುಷ್ಮಾ ಸ್ವರಾಜ್ ಬಳ್ಳಾರಿಯಲ್ಲಿ ಮುಖಾಮುಖಿ. ಆಗ ಇದು ದೇಶಾದ್ಯಂತ ರಾಜಕೀಯ ಸಂಚಲನ. ಸೋನಿಯಾ ಗಾಂಧಿ ಗೆಲುವು. ಸುಷ್ಮಾ ಸ್ವರಾಜ್ ಪರಾಭವ. ಉತ್ತರಪ್ರದೇಶದ ರಾಯ್ ಬರೇಲಿಯಲ್ಲಿಯೂ ಸೋನಿಯಾ ಗಾಂಧಿ ಗೆದ್ದ ಕಾರಣ ಬಳ್ಳಾರಿಯನ್ನು ಬಿಟ್ಟುಕೊಟ್ಟರು. ಆದರೆ ಈ ಚುನಾವಣೆ ಬಳ್ಳಾರಿ ಜಿಲ್ಲೆಯಲ್ಲಿ ಕೇಸರಿ ಪಕ್ಷಕ್ಕೆ ವರವಾಯಿತು. ಸುಷ್ಮಾ ಸ್ವರಾಜ್ ಪರ ಮುಂಚೂಣಿಯಲ್ಲಿ ನಿಂತ ಗಾಲಿ ಜನಾರ್ದನ ರೆಡ್ಡಿ ಹಾಗೂ ವಾಲ್ಮೀಕಿ ಸಮಾಜದ ಬಿ.ಶ್ರೀರಾಮುಲು ನಾಯಕರಾಗಿ ಹೊರಹೊಮ್ಮಿದರು.
ಜೆಡಿಎಸ್ - ಬಿಜೆಪಿ 2006ರ ಸಮ್ಮಿಶ್ರ ಸರಕಾರ ರಚನೆಯಲ್ಲಿ ಜನಾರ್ದನ ರೆಡ್ಡಿ ಬಹುಮುಖ್ಯಪಾತ್ರ ವಹಿಸಿದರು. ರಾಜ್ಯದಲ್ಲಿ ಆಗಲೇ ಆರಂಭವಾಗಿದ್ದು ಶಾಸಕರ ರೆಸಾರ್ಟ್ ಸಂಸ್ಕೃತಿ. ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಏರಿತು.
ನಂತರ 2008ರ ಅಸೆಂಬ್ಲಿ ಚುನಾವಣೆ. ಆಗ ಬಿಜೆಪಿ ಅಧಿಕಾರಕ್ಕೆ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ. ರೆಡ್ಡಿ ಸಹೋದರರು ಸಚಿವರೂ ಆದರು. ಬಿಜೆಪಿ ಸರಕಾರದ ಮೇಲೆ ಬಿಗಿ ಹಿಡಿತ ಸಾಧಿಸಿದರು. ಜೊತೆಯಲ್ಲಿ ಶ್ರೀರಾಮುಲು ಬಲ. ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಕಾನೂನಿನ ಕುಣಿಕೆಗೆ ಸಿಲುಕಿದರು. ಸಿಬಿಐನಿಂದ ಬಂಧನ, ಜೈಲುಪಾಲು. ಅದು 2011ನೇ ಇಸವಿ.
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಪಾಳೇಗಾರಿಕೆ ಹೆಚ್ಚಾದಾಗಲೇ ಆಗ ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಗುಡುಗಿದ್ದು. ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ಕಾಂಗ್ರೆಸ್ ಪಾದಯಾತ್ರೆ ನಡೆಸಿತು. ಬಳ್ಳಾರಿ ಅಕ್ರಮ ಗಣಿಗಾರಿಕೆ ವಿರುದ್ಧದ ಈ ಐತಿಹಾಸಿಕ ಪಾದಯಾತ್ರೆ ಸಿದ್ದರಾಮಯ್ಯ ಅವರನ್ನು 2013ರಲ್ಲಿ ಮುಖ್ಯಮಂತ್ರಿ ಪಟ್ಟಕ್ಕೆ ಏರಿಸಿದ್ದು ಇತಿಹಾಸ.
ಜನಾರ್ದನ ರೆಡ್ಡಿ ಜೈಲು ಸೇರಿದ ಮೇಲೆ ಬಿಜೆಪಿ ನಾಯಕರು ಅವರಿಂದ ಅಂತರ ಕಾಯ್ದುಕೊಂಡರು. ಜನಾರ್ದನ ರೆಡ್ಡಿ ಬಲವೂ ಕುಗ್ಗಿತು. ಬಿಜೆಪಿಯಲ್ಲಿ ತಮ್ಮನ್ನು ನಿರ್ಲಕ್ಷಿಸಿದ್ದರಿಂದ ಬೇಸತ್ತರು. ಬೆಂಗಳೂರಿನಲ್ಲಿ 22 ಡಿಸೆಂಬರ್ 2022 ರಂದು ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ತೊರೆದಿರುವುದಾಗಿ ಘೋಷಿಸಿದರು. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹುಟ್ಟು ಹಾಕಿದರು.
ಅದು 2023ರ ಅಸೆಂಬ್ಲಿ ಚುನಾವಣೆ. ನಾರಾ ಭರತ್ ರೆಡ್ಡಿ ಬಳ್ಳಾರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧಿ. ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮೀ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ. ಭರತ್ ರೆಡ್ಡಿ ಸುಮಾರು 37 ಸಾವಿರ ಮತಗಳ ಅಂತರದಿಂದ ವಿಜಯ. ರಾಜ್ಯದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಆ ಚುನಾವಣೆಯಲ್ಲಿ ಶ್ರೀರಾಮುಲು ಅವರಿಗೆ ಸೋಲು. ಗಂಗಾವತಿಯಿಂದ ಜನಾರ್ದನ ರೆಡ್ಡಿ ಗೆಲುವು.
ರಾಜ್ಯಸಭೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಫೆಬ್ರವರಿ 2024ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು ಅಚ್ಚರಿಯ ಬೆಳವಣಿಗೆಯಾಯಿತು. ಸಿದ್ದರಾಮಯ್ಯ ಯಾರ ವಿರುದ್ಧ ಪಾದಯಾತ್ರೆ ಮಾಡಿದ್ದರೋ ಅವರ ಕೈ ಕುಲುಕಿದ್ದರು. ಅದು ರಾಜ್ಯಸಭಾ ಚುನಾವಣೆಯ ಮರ್ಮ. ರಾಜ್ಯಸಭಾ ಚುನಾವಣೆ ನಂತರ ಜನಾರ್ದನ ರೆಡ್ಡಿ, ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಿರುವುದಾಗಿ ಹೇಳಿದ್ದರು.
ರಾಜ್ಯಸಭಾ ಚುನಾವಣೆ ನಂತರ ಜನಾರ್ದನ ರೆಡ್ಡಿ ಮಾರ್ಚ್ 2024ರಲ್ಲಿ ಮತ್ತೆ ಬಿಜೆಪಿ ಸೇರಿದರು. ಆಗಲೂ ರಾಜ್ಯ ಬಿಜೆಪಿ ನಾಯಕರು ಅವರಿಂದ ದೂರವೇ ಇದ್ದರು. ಸಂಡೂರು ಉಪ ಚುನಾವಣೆ ಫಲಿತಾಂಶ ನಂತರ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಮಧ್ಯೆ ಪರಸ್ಪರ ಆರೋಪ- ಪ್ರತ್ಯಾರೋಪಗಳು ತಾರಕ್ಕೇರಿತು. ಬಳಿಕ ಮತ್ತೆ ಒಂದಾದರು.
ಇತ್ತ ಜನಾರ್ದನ ರೆಡ್ಡಿ ವಿರುದ್ಧದ ಓಬಳಾಪುರಂ ಕಂಪನಿಯ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ವಿಚಾರಣೆ ನಡೆದು ಹೈದರಾಬಾದಿನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯ ಕಳೆದ ವರ್ಷ ಮೇ ತಿಂಗಳಿನಲ್ಲಿ ಏಳು ವರ್ಷ ಜೈಲು ಶಿಕ್ಷೆ ನೀಡಿದೆ. ಜನಾರ್ದನ ರೆಡ್ಡಿ ಇದನ್ನು ತೆಲಂಗಾಣ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ನ್ಯಾಯಾಲಯ ಈ ಶಿಕ್ಷೆಯನ್ನು ಕಳೆದ ಜೂನ್‌ನಲ್ಲಿ ಸಸ್ಪೆಂಡ್‌ನಲ್ಲಿಟ್ಟು ಜನಾರ್ದನ ರೆಡ್ಡಿ ಅವರಿಗೆ ಷರತ್ತುಬದ್ಧ ಜಾಮೀನು ನೀಡಿದೆ.
ಬಿಜೆಪಿಯ ನಾಯಕರು ಯಾವ ಜನಾರ್ದನ ರೆಡ್ಡಿ ಅವರನ್ನು ನಿರ್ಲಕ್ಷಿಸಿದ್ದರೋ ಈಗ ಅದೇ ಜನಾರ್ದನ ರೆಡ್ಡಿ ಅವರ ಬೆಂಬಲಕ್ಕೆ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಕಳೆದ ವಾರದ ಬಳ್ಳಾರಿ ಬ್ಯಾನರ್ ಗಲಭೆ. ಜೆಡಿಎಸ್ ನಾಯಕ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೂ ಜನಾರ್ದನ ರೆಡ್ಡಿ ಅವರ ಬೆಂಬಲಕ್ಕೆ ನಿಂತಿರುವುದು ಬಿಜೆಪಿ-ಜೆಡಿಎಸ್ ದೋಸ್ತಿಯಲ್ಲಿ ಹೊಸ ಬೆಳವಣಿಗೆ.
ಇನ್ನು ಶಾಸಕ ನಾರಾ ಭರತ್ ರೆಡ್ಡಿ ಪರ ತಮ್ಮ ಪಕ್ಷ ನಿಲ್ಲಲಿದೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಶಿವಕುಮಾರ್ ಸಾರಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಅವರು ಬೆಂಬಲಿಸಿದ್ದರೆ ಆ ಮಾತು ಬೇರೆ. ಆದರೆ, ಉಪ ಮುಖ್ಯಮಂತ್ರಿಯಾಗಿ ಶಿವಕುಮಾರ್ ಅವರು ಭರತ್ ರೆಡ್ಡಿ ಅವರನ್ನು ಬೆಂಬಲಿಸಿರುವುದು ಪೊಲೀಸ್ ತನಿಖೆಯ ಮೇಲೆ ಪ್ರಭಾವ ಬೀರುವುದಿಲ್ಲವೇ? ಬಳ್ಳಾರಿ ಕದನದ ಹೊಸ ಅಧ್ಯಾಯ ಈಗ ಆರಂಭವಾಗಿದೆ.
- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com
Advertisement