

ವಿಟಮಿನ್ ಸಿ ಅಥವಾ ಆಸ್ಕಾರ್ಬಿಕ್ ಆಮ್ಲ ಎಂಬುದು ಮಾನವ ದೇಹಕ್ಕೆ ಅತ್ಯಂತ ಅಗತ್ಯವಾದ ಪೋಷಕಾಂಶಗಳಲ್ಲಿ ಒಂದಾಗಿದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು, ಚರ್ಮವನ್ನು ಆರೋಗ್ಯವಾಗಿಡುವುದು, ಗಾಯಗಳು ಬೇಗ ಗುಣಮುಖವಾಗಲು ಸಹಾಯ ಮಾಡುವುದು ಸೇರಿದಂತೆ ಅನೇಕ ಪ್ರಮುಖ ಕಾರ್ಯಗಳಲ್ಲಿ ವಿಟಮಿನ್ ಸಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹವು ಈ ವಿಟಮಿನ್‌ಅನ್ನು ತಾನೇ ಉತ್ಪಾದಿಸಿಕೊಳ್ಳಲಾರದು ಹಾಗೂ ದೀರ್ಘಕಾಲ ಸಂಗ್ರಹಿಸಿಕೊಳ್ಳಲಾರದು. ಆದ್ದರಿಂದ ಪ್ರತಿದಿನವೂ ಆಹಾರದ ಮೂಲಕ ಇದನ್ನು ಪಡೆಯುವುದು ಅತ್ಯಂತ ಅವಶ್ಯಕ.
ವಿಟಮಿನ್ ಸಿಯ ಪ್ರಮುಖ ಕಾರ್ಯವೆಂದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ದೇಹಕ್ಕೆ ವೈರಸ್, ಬ್ಯಾಕ್ಟೀರಿಯಾ ಮುಂತಾದ ಸೋಂಕುಗಳು ಬಂದಾಗ ಅವುಗಳ ವಿರುದ್ಧ ಹೋರಾಡುವ ಬಿಳಿಯ ರಕ್ತಕಣಗಳ ಕಾರ್ಯಕ್ಷಮತೆಯನ್ನು ವಿಟಮಿನ್ ಸಿ ಬಲಪಡಿಸುತ್ತದೆ. ಇದಲ್ಲದೇ ಇದು ಶಕ್ತಿಶಾಲಿ ಆಂಟಿಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸಿ ದೇಹದ ಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ. ಇಂದಿನ ದಿನಗಳಲ್ಲಿ ಪರಿಸರ ಮಾಲಿನ್ಯ, ಒತ್ತಡ, ಧೂಮಪಾನ ಮತ್ತು ಅನಿಯಮಿತ ಜೀವನಶೈಲಿಯಿಂದ ದೇಹದಲ್ಲಿ ಹೆಚ್ಚಾಗುವ ‘ಫ್ರೀ ರಾಡಿಕಲ್ಸ್’ಎಂಬ ಹಾನಿಕಾರಕ ಅಂಶಗಳನ್ನು ನಿಷ್ಕ್ರಿಯಗೊಳಿಸಲು ವಿಟಮಿನ್ ಸಿ ಸಹಾಯ ಮಾಡುತ್ತದೆ.
ವಿಟಮಿನ್ ಸಿಯ ಮತ್ತೊಂದು ಮಹತ್ವದ ಪಾತ್ರ ಕೊಲಾಜನ್ ಉತ್ಪಾದನೆ. ಕೊಲಾಜನ್ ಎಂಬ ಪ್ರೋಟೀನ್ ಚರ್ಮ, ಎಲುಬು, ಸ್ನಾಯು ಮತ್ತು ರಕ್ತನಾಳಗಳ ಬಲವರ್ಧನೆಗೆ ಅತ್ಯಗತ್ಯ. ದೇಹದಲ್ಲಿ ವಿಟಮಿನ್ ಸಿ ಕೊರತೆ ಉಂಟಾದರೆ ಚರ್ಮ ಒಣಗುವುದು, ಗಾಯಗಳು ನಿಧಾನವಾಗಿ ಗುಣವಾಗುವುದು, ಹಲ್ಲುಗಳಿಂದ ರಕ್ತಸ್ರಾವವಾಗುವುದು, ಸಂಧಿಗಳಲ್ಲಿ ನೋವು ಕಾಣಿಸಿಕೊಳ್ಳುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಹಿಂದೆ ‘ಸ್ಕರ್ವಿ’ಎಂಬ ರೋಗ ವಿಟಮಿನ್ ಸಿ ಕೊರತೆಯಿಂದಲೇ ಹೆಚ್ಚಾಗಿ ಕಂಡುಬರುತ್ತಿತ್ತು.
ಸಸ್ಯಾಹಾರದಲ್ಲಿ ದೊರಕುವ ಕಬ್ಬಿಣ ಪೋಷಕಾಂಶವನ್ನು ನಮ್ಮ ದೇಹ ಸರಿಯಾಗಿ ಹೀರಿಕೊಳ್ಳಲು ವಿಟಮಿನ್ ಸಿ ಅತ್ಯಂತ ಅಗತ್ಯ. ವಿಟಮಿನ್ ಸಿ ಕಬ್ಬಿಣವನ್ನು ದೇಹಕ್ಕೆ ಸುಲಭವಾಗಿ ಹೀರಿಕೊಳ್ಳುವ ರೂಪಕ್ಕೆ ಪರಿವರ್ತಿಸುತ್ತದೆ. ಇದರಿಂದ ರಕ್ತಹೀನತೆ (ಅನೀಮಿಯಾ) ಸಮಸ್ಯೆಯನ್ನು ತಡೆಗಟ್ಟಲು ಸಹಾಯವಾಗುತ್ತದೆ. ವಿಶೇಷವಾಗಿ ಸಸ್ಯಾಹಾರಿಗಳು, ಗರ್ಭಿಣಿಯರು, ಮಕ್ಕಳು ಮತ್ತು ಮಹಿಳೆಯರಿಗೆ ವಿಟಮಿನ್ ಸಿ ಅತ್ಯಂತ ಉಪಯುಕ್ತ. ಕಬ್ಬಿಣಾಂಶ ಇರುವ ಆಹಾರದ ಜೊತೆ ವಿಟಮಿನ್ ಸಿ ಸಮೃದ್ಧ ಆಹಾರ ಸೇವಿಸುವುದು ಉತ್ತಮ ಅಭ್ಯಾಸ.
ಹೃದಯ ಆರೋಗ್ಯದ ದೃಷ್ಟಿಯಿಂದಲೂ ವಿಟಮಿನ್ ಸಿ ಪ್ರಮುಖವಾಗಿದೆ. ಇದು ರಕ್ತನಾಳಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ, ರಕ್ತದ ಒತ್ತಡವನ್ನು ನಿಯಂತ್ರಿಸುವಲ್ಲಿ ನೆರವಾಗುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಲು ಸಹಕಾರಿ ಎಂದು ಹಲವು ಅಧ್ಯಯನಗಳು ಸೂಚಿಸುತ್ತವೆ. ಹೃದಯಾಘಾತ ಮತ್ತು ಸ್ಟ್ರೋಕ್ ಮುಂತಾದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುವಲ್ಲಿ ವಿಟಮಿನ್ ಸಿ ಸಹಾಯಕ.
ವಿಟಮಿನ್ ಸಿ ಸಹಜವಾಗಿ ದೊರಕುವ ಆಹಾರಗಳು ನಮ್ಮ ಸುತ್ತಲೂ ಸಾಕಷ್ಟು ಇವೆ. ಕಿತ್ತಳೆ, ನಿಂಬೆ, ಸಿಹಿ ನಿಂಬೆ (ಮೋಸಂಬಿ) ಮುಂತಾದ ಸಿಟ್ರಸ್ ಹಣ್ಣುಗಳು ವಿಟಮಿನ್ ಸಿಗೆ ಪ್ರಸಿದ್ಧ. ಇದಲ್ಲದೆ ನೆಲ್ಲಿಕಾಯಿ (ಆಮ್ಲಾ), ಸೀಬೆಹಣ್ಣು, ಪಪ್ಪಾಯಿ, ಸ್ಟ್ರಾಬೆರಿ, ಕಿವಿ ಹಣ್ಣು, ಟೊಮೇಟೊ, ಕ್ಯಾಪ್ಸಿಕಂ, ಬ್ರೋಕೋಲಿ, ಎಲೆಕೋಸು ಮತ್ತು ಹಸಿರು ಸೊಪ್ಪುಗಳು ವಿಟಮಿನ್ ಸಿಯ ಉತ್ತಮ ಮೂಲಗಳು. ವಿಶೇಷವಾಗಿ ನೆಲ್ಲಿಕಾಯಿ ವಿಟಮಿನ್ ಸಿಯ ಅತ್ಯಂತ ಶ್ರೀಮಂತ ಮೂಲವಾಗಿದ್ದು ಆಯುರ್ವೇದದಲ್ಲಿ ಶತಮಾನಗಳಿಂದ ಔಷಧಿಯಾಗಿ ಬಳಕೆಯಲ್ಲಿದೆ.
ವಿಟಮಿನ್ ಸಿ ಉಷ್ಣತೆಗೆ ಮತ್ತು ಬೆಳಕಿಗೆ ಸೂಕ್ಷ್ಮವಾಗಿರುವುದರಿಂದ ಹೆಚ್ಚು ಬೇಯಿಸಿದ ಆಹಾರದಲ್ಲಿ ಇದರ ಪ್ರಮಾಣ ಕಡಿಮೆಯಾಗುತ್ತದೆ. ಹೀಗಾಗಿ ಹಣ್ಣುಗಳನ್ನು ತಾಜಾ ಸೇವಿಸುವುದು ಮತ್ತು ತರಕಾರಿಗಳನ್ನು ಸ್ವಲ್ಪವೇ ಬೇಯಿಸುವುದು ಉತ್ತಮ. ತರಕಾರಿಗಳನ್ನು ಕತ್ತರಿಸುವ ಮೊದಲು ಚೆನ್ನಾಗಿ ತೊಳೆಯುವುದು, ಕಡಿಮೆ ನೀರಿನಲ್ಲಿ ಬೇಯಿಸುವುದು, ಅತಿಯಾಗಿ ಬೇಯಿಸದಿರುವುದು ಮುಂತಾದ ಸರಳ ಕ್ರಮಗಳು ವಿಟಮಿನ್ ಸಿಯನ್ನು ಆಹಾರದಲ್ಲಿಯೇ ಹೆಚ್ಚು ಪಾಲು ಉಳಿಸಿಕೊಳ್ಳಲು ಸಹಕಾರಿಯಾಗುತ್ತವೆ.
ವಿಟಮಿನ್ ಸಿಯ ಅಗತ್ಯ ಪ್ರಮಾಣ ವಯಸ್ಸು, ಲಿಂಗ ಮತ್ತು ಆರೋಗ್ಯ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ ಸಮತೋಲನ ಆಹಾರ ಸೇವಿಸುವವರಿಗೆ ಪ್ರತ್ಯೇಕ ಪೂರಕಗಳ ಅವಶ್ಯಕತೆ ಇರುವುದಿಲ್ಲ. ಆದರೆ ಧೂಮಪಾನ ಮಾಡುವವರು, ದೀರ್ಘಕಾಲದ ಒತ್ತಡದಲ್ಲಿರುವವರು, ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವವರು ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿಯ ಅವಶ್ಯಕತೆ ಹೊಂದಿರಬಹುದು. ಅವರು ವಿಟಮಿನ್ ಸಿ ಸಪ್ಲಿಮೆಂಟ್ಸನ್ನು ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳಬಹುದು. ಆದರೆ ಅತಿಯಾದ ಪೂರಕ (ಸಪ್ಲಿಮೆಂಟ್ಸ್) ಸೇವನೆಯಿಂದ ಹೊಟ್ಟೆ ನೋವು ಅಥವಾ ಕಿಡ್ನಿ ಕಲ್ಲುಗಳ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವುದರಿಂದ ಅತಿಯಾದ ಸೇವನೆ ತಪ್ಪಿಸಬೇಕು.
ಕೊನೆಮಾತು: ಒಟ್ಟಾರೆಯಾಗಿ ಹೇಳುವುದಾದರೆ ವಿಟಮಿನ್ ಸಿ ಒಂದು ಸರಳ ವಿಟಮಿನ್ ಆದರೂ ಅತ್ಯಂತ ಶಕ್ತಿಶಾಲಿ ಪೋಷಕಾಂಶ. ಪ್ರತಿದಿನವೂ ವಿಟಮಿನ್ ಸಿ ಭರಿತ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಸಿಯನ್ನು ಸಹಜವಾಗಿ ಪಡೆಯಬಹುದು. ಆರೋಗ್ಯಕರ ಜೀವನಶೈಲಿಗಾಗಿ ಹಾಗೂ ರೋಗಗಳಿಂದ ದೂರವಿರಲು ವಿಟಮಿನ್ ಸಿಯಂತಹ ಮೂಲಭೂತ ಪೋಷಕಾಂಶಗಳಿಗೆ ನಾವು ಹೆಚ್ಚಿನ ಗಮನ ನೀಡುವುದು ಇಂದಿನ ಅಗತ್ಯವಾಗಿದೆ.
Advertisement