

ಚಿನ್ನವನ್ನು ಅಸ್ಥಿರ ಸಮಯದ ಡಾರ್ಲಿಂಗ್ ಎನ್ನಲಾಗುತ್ತದೆ. ಜಾಗತಿಕವಾಗಿ ಅಸ್ಥಿರತೆ ಕಾಡಿದಾಗ ಜಗತ್ತಿನ ಎಲ್ಲಾ ದೇಶಗಳು ಚಿನ್ನವನ್ನು ಕೊಳ್ಳುವುದು ಸಾಮಾನ್ಯ ವಿಷಯವಾಗಿದೆ. ಇವತ್ತಿನ ದಿನ ಜಾಗತಿಕವಾಗಿ ಅನಿಶ್ಚಿತತೆ ಅದೆಷ್ಟು ದೊಡ್ಡ ಮಟ್ಟದಲ್ಲಿದೆ ಎಂದು ನಾನು ವಿವರಿಸಿ ಹೇಳಬೇಕಾದ ಅವಶ್ಯಕತೆಯಿಲ್ಲ. ಟ್ರಂಪ್ ಇಂದು ಜಗತ್ತಿನಾದ್ಯಂತ ಮನೆಮಾತಾಗಿದ್ದಾರೆ. ಇವತ್ತಿನ ಹಣಕ್ಲಾಸು ಅಂಕಣದಲ್ಲಿ ಚಿನ್ನದ ಬಗ್ಗೆ ಹೇಳುತ್ತಿಲ್ಲ. ಈಗಾಗಲೇ ಚಿನ್ನದ ಬಗ್ಗೆ ಇಲ್ಲಿ ಬಹಳಷ್ಟು ಲೇಖನಗಳನ್ನು ಬರೆದಾಗಿದೆ. ಬೆಳ್ಳಿ ಎನ್ನುವ ಲೋಹಕ್ಕೆ ಯಾಕಿಷ್ಟು ಡಿಮ್ಯಾಂಡ್ ಹೆಚ್ಚಾಗಿದೆ? ಚಿನ್ನಕ್ಕಿಂತ ಹೆಚ್ಚಿನ ವೇಗದಲ್ಲಿ ಇದು ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ ಏಕೆ? ಭವಿಷ್ಯದ ದೃಷ್ಟಿಯಿಂದ ಇಲ್ಲಿ ಹೂಡಿಕೆ ಮಾಡುವುದು ಎಷ್ಟು ಸರಿ ? ಎನ್ನುವ ಅಂಶಗಳನ್ನು ಒಂದಷ್ಟು ಗಮನಿಸೋಣ.
ಬೆಳ್ಳಿ (Silver) ಇತ್ತೀಚಿನ ವರ್ಷಗಳಲ್ಲಿ ವಿಶ್ವದಾದ್ಯಂತ ಹೆಚ್ಚು ಮಹತ್ವ ಪಡೆಯುತ್ತಿದೆ. ಇದಕ್ಕೆ ಒಂದೇ ಕಾರಣವನ್ನು ನೀಡಲಾಗುವುದಿಲ್ಲ. ಬೆಳ್ಳಿ ಒಂದು ಅಪರೂಪದ ದ್ವೈತ ಸ್ವಭಾವದ ಲೋಹ. ಇದು ಒಂದೆಡೆ ಮೌಲ್ಯದ ಸಂಗ್ರಹ (precious metal) ಆಗಿದ್ದರೆ, ಇನ್ನೊಂದೆಡೆ ಆಧುನಿಕ ಕೈಗಾರಿಕೆಗಳಿಗೆ ಅತ್ಯಾವಶ್ಯಕವಾದ ಕೈಗಾರಿಕಾ ಲೋಹ. ಈ ಎರಡೂ ಗುಣಗಳು ಸೇರಿ ಬೆಳ್ಳಿಗೆ ಹೊಸ ಮಹತ್ವ ತಂದುಕೊಟ್ಟಿವೆ.
ಚಿನ್ನದಂತೆ ಬೆಳ್ಳಿಯೂ ಸಾವಿರಾರು ವರ್ಷಗಳಿಂದ ಮೌಲ್ಯದ ಸಂಕೇತವಾಗಿದೆ. ಆದರೆ ಚಿನ್ನಕ್ಕಿಂತ ಭಿನ್ನವಾಗಿ, ಅಂದರೆ ಚಿನ್ನವನ್ನು ಬಹಳಷ್ಟು ಜನ ಆಭರಣವಾಗಿ ಬಳಸುತ್ತಾರೆ. ಹೆಚ್ಚಿನ ಬೇಡಿಕೆ ಬರುವುದು ನಾಗರಿಕರಿಂದ! ಆದರೆ ಬೆಳ್ಳಿಯ ಒಟ್ಟು ಬೇಡಿಕೆಯ ಐವತ್ತು ಪ್ರತಿಶತಕ್ಕಿಂತ ಹೆಚ್ಚು ಕೈಗಾರಿಕಾ ಬಳಕೆಯಿಂದ ಬರುತ್ತದೆ.ಬೆಳ್ಳಿಯಿಲ್ಲದೆ ಇಂದಿನ ಜಗತ್ತು ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಏಕೆಂದರೆ ಬೆಳ್ಳಿಯನ್ನು:
ಮೊಬೈಲ್ ಫೋನ್‌ಗಳು
ಕಂಪ್ಯೂಟರ್‌ಗಳು
ವೈದ್ಯಕೀಯ ಸಾಧನಗಳು
ನೀರು ಶುದ್ಧೀಕರಣ ವ್ಯವಸ್ಥೆಗಳು
ಎಲೆಕ್ಟ್ರಾನಿಕ್ ಚಿಪ್‌ಗಳು
ಮುಂತಾದ ವಸ್ತುಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದೆ.
ಹಸಿರು ಶಕ್ತಿ (Green Energy) ಮತ್ತು ಸೌರಶಕ್ತಿ ಕ್ರಾಂತಿ
ಬೆಳ್ಳಿಯ ಮಹತ್ವ ಹೆಚ್ಚಾಗಲು ಪ್ರಮುಖ ಕಾರಣವೆಂದರೆ ಸೌರಶಕ್ತಿ (Solar Energy). ಇವತ್ತಿನ ದಿನದಲ್ಲಿ ಇದರ ಬಳಕೆ ಹೆಚ್ಚಾಗಿದೆ. ಸರಕಾರ ಅನುದಾನ ನೀಡುವ ಮೂಲಕ ಪ್ರತಿ ಕುಟುಂಬವೂ ಇದನ್ನು ಬಳಸಲು ಉತ್ತೇಜನ ನೀಡಿದೆ. ಬೆಳ್ಳಿ ಜಗತ್ತಿನಲ್ಲೇ ಅತ್ಯುತ್ತಮ ವಿದ್ಯುತ್ ವಾಹಕ ಲೋಹವಾಗಿದೆ. (best conductor of electricity). ಅದರಿಂದ:
ಪ್ರತಿಯೊಂದು ಸೌರಪ್ಯಾನೆಲ್‌ನಲ್ಲೂ ಬೆಳ್ಳಿ ಬಳಕೆಯಾಗುತ್ತದೆ
ದೊಡ್ಡ ಸೌರಶಕ್ತಿ ಪಾರ್ಕ್‌ಗಳು ಅಪಾರ ಪ್ರಮಾಣದ ಬೆಳ್ಳಿ ಬಳಸುತ್ತವೆ
ಚೀನಾ, ಅಮೆರಿಕಾ, ಭಾರತ ಸೇರಿದಂತೆ ಅನೇಕ ದೇಶಗಳು Net Zero Carbon Emission ಗುರಿ ಇಟ್ಟುಕೊಂಡಿವೆ. ಇದರಿಂದ ಸೌರಶಕ್ತಿ ಯೋಜನೆಗಳು ವೇಗವಾಗಿ ಹೆಚ್ಚುತ್ತಿವೆ. ಇದರ ಜೊತೆಗೆ ಬೆಳ್ಳಿಯ ಬೇಡಿಕೆಯೂ ಶಾಶ್ವತವಾಗಿ ಹೆಚ್ಚುತ್ತಿದೆ.
ಎಲೆಕ್ಟ್ರಿಕ್ ವಾಹನಗಳು (EV)
ಇವತ್ತಿನ ದಿನದಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟ ಹೆಚ್ಚಾಗುತ್ತಿದೆ. ಈ ಮಾರುಕಟ್ಟೆಯನ್ನು ಭಾರತದ ಟಾಟಾ ಮತ್ತು ಮಹಿಂದ್ರಾ ವೇಗವಾಗಿ ತಮ್ಮದಾಗಿಸಿಕೊಳ್ಳುತ್ತಿವೆ. ಎಲೆಕ್ಟ್ರಿಕ್ ಕಾರುಗಳು ಸಾಮಾನ್ಯ ಪೆಟ್ರೋಲ್/ಡೀಸೆಲ್ ಕಾರುಗಳಿಗಿಂತ 2 ರಿಂದ 3 ಪಟ್ಟು ಹೆಚ್ಚು ಬೆಳ್ಳಿ ಬಳಸುತ್ತವೆ. ಇದಕ್ಕೆ ಪ್ರಮುಖವಾಗಿ ಕಾರಣ:
ಬ್ಯಾಟರಿ ಮ್ಯಾನೇಜ್‌ಮೆಂಟ್ ಸಿಸ್ಟಮ್
ಸೆನ್ಸರ್‌ಗಳು
ಪವರ್ ಕಂಟ್ರೋಲ್ ಯೂನಿಟ್‌ಗಳು
ಇದಷ್ಟೇ ಅಲ್ಲದೆ:
EV ಚಾರ್ಜಿಂಗ್ ಸ್ಟೇಷನ್‌ಗಳು
ಸ್ಮಾರ್ಟ್ ಗ್ರಿಡ್‌ಗಳು
ಇವೆಲ್ಲಕ್ಕೂ ಬೆಳ್ಳಿ ಅತ್ಯಂತ ಅವಶ್ಯಕ. ಅಲ್ಲದೆ ಜಗತ್ತು ನಿಧಾನವಾಗಿ ವಿದ್ಯುತ್ ಆಧಾರಿತವಾಗುವತ್ತ ಸಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬೆಳ್ಳಿಯ ಪಾತ್ರವೂ ಹೆಚ್ಚಾಗಲಿದೆ. ಅದು ಚಿನ್ನವನ್ನು ಕೂಡ ಹಿಂದಿಕ್ಕಬಹುದು.
ಬುದ್ಧಿವಂತ ಹೂಡಿಕೆದಾರ ಎಲ್ಲಾ ಹಣವನ್ನು ಒಂದೇ ಕಡೆ ಹೂಡಿಕೆ ಮಾಡುವುದಿಲ್ಲ. ಷೇರುಗಳು, ಬಾಂಡ್‌ಗಳು, ರಿಯಲ್ ಎಸ್ಟೇಟ್ ಗಳ ಜೊತೆಗೆ 5–10% ಬೆಳ್ಳಿ ಸೇರಿಸಿಕೊಳ್ಳುವುದು ಅನಿವಾರ್ಯ ಎನ್ನುವಂತಾಗಿದೆ. ಇದರಿಂದ:
ಅಪಾಯ ಕಡಿಮೆಯಾಗುತ್ತದೆ.
ಅಸ್ಥಿರತೆಯ ಸಮಯದಲ್ಲಿ ಸಮತೋಲನ ಸಿಗುತ್ತದೆ.
ಇದಕ್ಕಾಗಿಯೇ ದೊಡ್ಡ ಹೂಡಿಕೆ ಸಂಸ್ಥೆಗಳೂ ಬೆಳ್ಳಿಯನ್ನು ತಮ್ಮ ಪೋರ್ಟ್‌ಫೋಲಿಯೊದಲ್ಲಿ ಸೇರಿಸುತ್ತಿವೆ. ಸಣ್ಣ ಹೂಡಿಕೆದಾರರು ಕೂಡ ಇದನ್ನು ಒಂದಷ್ಟು ಅಧ್ಯಯನ ಮಾಡಿ ತಮ್ಮ ಹೂಡಿಕೆ ಖಾತೆಯಲ್ಲಿ ಸೇರಿಸಿಕೊಳ್ಳುವ ಪ್ರಯತ್ನವನ್ನು ಮಾಡಬಹುದು. ಅಂದಹಾಗೆ ಟ್ರಂಪ್ ಅವರು ಬೆಳ್ಳಿಯ ಬೆಲೆಯ ಬಗ್ಗೆ ಒಂದು ಎಗ್ಸಿಕ್ಯುಟಿವ್ ಆರ್ಡರ್ ಸಹಿ ಮಾಡಿದ್ದಾರೆ. ಇದರಿಂದ ಪೇಪರ್ ಬೆಳ್ಳಿಯ ಬೆಲೆಯಲ್ಲಿ ಕುಸಿತವಾಗುತ್ತದೆ. ಕೇವಲ ಭೌತಿಕ ಬೆಳ್ಳಿಯ ಬೆಲೆ ಮಾತ್ರ ಹೆಚ್ಚಾಗುತ್ತದೆ ಎನ್ನುವ ಸಂದೇಶವನ್ನು ಸಾರುವ ವಿಡಿಯೋಗಳು, ರಿಲ್ಸ್ ಗಳು ಸಾಕಷ್ಟು ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿವೆ. ನಿಮಗೆಲ್ಲಾ ಗೊತ್ತಿರಲಿ ಅವೆಲ್ಲವೂ ಫೇಕ್. ಅವುಗಳಲ್ಲಿ ಸತ್ಯಾಂಶವಿಲ್ಲ. ಹೀಗಾಗಿ ಹೂಡಿಕೆಗ ಮುಂಚೆ ಸರಿಯಾದ ಸಲಹೆಯನ್ನು ಪಡೆದುಕೊಳ್ಳಬೇಕು ಎನ್ನುವ ಅರಿವು ಇರಲಿ.
ಬೆಳ್ಳಿಯ ಬೆಲೆ ಏರಿಕೆಗೆ ಇನ್ನೊಂದು ಮಹತ್ವದ ಕಾರಣವೂ ಇದೆ. ಅದೇ ಸರಬರಾಜಿನ ಮಿತಿಗಳು (Supply Constraints). ನಿಮಗೆಲ್ಲಾ ಗೊತ್ತಿರಲಿ, ಬೆಳ್ಳಿಯ ಉತ್ಪಾದನೆ ಸುಲಭವಲ್ಲ. ಬಹುತೇಕ ಬೆಳ್ಳಿ ತಾಮ್ರ, ಜಿಂಕ್, ಸೀಸ ಇವುಗಳ ಗಣಿಗಾರಿಕೆಯ ಉಪ ಉತ್ಪನ್ನ (by-product) ಆಗಿ ಸಿಗುತ್ತದೆ. ಹೀಗಾಗಿ:
ಬೆಳ್ಳಿ ಬೆಲೆ ಏರಿದರೂ ಉತ್ಪಾದನೆ ತಕ್ಷಣ ಹೆಚ್ಚಿಸಲಾಗುವುದಿಲ್ಲ
ಉತ್ತಮ ಗುಣಮಟ್ಟದ ಧಾತುಗಳು ಕಡಿಮೆಯಾಗುತ್ತಿವೆ
ಗಣಿಗಾರಿಕೆಯ ವೆಚ್ಚ ಮತ್ತು ಪರಿಸರ ನಿಯಮಗಳು ಹೆಚ್ಚುತ್ತಿವೆ
ಇದು ಬೇಡಿಕೆ ಹೆಚ್ಚಾಗುತ್ತಾ, ಸರಬರಾಜು ಸೀಮಿತವಾಗುವ ಸ್ಥಿತಿ ನಿರ್ಮಿಸುತ್ತದೆ .ಹೀಗಾಗಿ ದೀರ್ಘಾವಧಿಯಲ್ಲಿ ಬೆಳ್ಳಿ ಬೆಲೆ ಬೆಳ್ಳಿಮೋಡವನ್ನು ಸಹ ಮೀರಲಿದೆ. ಹೀಗಾಗಿ ಚಿನ್ನಕ್ಕೆ ಪರ್ಯಾಯ ಹೂಡಿಕೆಯಾಗಿ ಬೆಳ್ಳಿ ಬೆಳೆಯಲಿದೆ. ಚಿನ್ನದ ಬೆಲೆ ತುಂಬಾ ಹೆಚ್ಚಾದಾಗ, ಸಾಮಾನ್ಯ ಹೂಡಿಕೆದಾರರಿಗೆ ಬೆಳ್ಳಿ ಸುಲಭವಾಗಿ ಕೈಗೆಟುಕುವ ಪರ್ಯಾಯವಾಗುತ್ತದೆ. ಹೀಗಾಗಿ ಇತಿಹಾಸದ ಪುಟಗಳಲ್ಲಿ ಆರ್ಥಿಕ ಅನಿಶ್ಚಿತತೆ ಇದ್ದಾಗ ಬೆಳ್ಳಿ ಉತ್ತಮ ಪ್ರದರ್ಶನ ನೀಡಿದ ಉದಾಹರಣೆಗಳು ಸಿಗುತ್ತವೆ. ಕೆಲವೊಮ್ಮೆ ಅದು ಚಿನ್ನಕ್ಕಿಂತಲೂ ಹೆಚ್ಚು ವೇಗವಾಗಿ ಏರಿಕೆ ಕಂಡಿದೆ. ಕಳೆದ ವಾರದಲ್ಲಿ ಏರಿಕೆಯಾದ ಬೆಳ್ಳಿ ಬೆಲೆ ತಾಜಾ ಉದಾಹರಣೆ.
ಜಾಗತಿಕ ಯುದ್ಧಗಳು, ರಾಜಕೀಯ ಸಂಘರ್ಷಗಳು, ಬ್ಯಾಂಕಿಂಗ್ ಸಂಕಷ್ಟಗಳು, ಇವೆಲ್ಲವೂ ಹೂಡಿಕೆದಾರರನ್ನು ಹಾರ್ಡ್ ಅಸೆಟ್‌ಗಳ ಕಡೆಗೆ ತಳ್ಳುತ್ತವೆ. ನೆನಪಿರಲಿ ಬೆಳ್ಳಿಯನ್ನು ಮುದ್ರಿಸಲು ಸಾಧ್ಯವಿಲ್ಲ, ಸರ್ಕಾರದ ನಿಯಂತ್ರಣಕ್ಕೆ ಸುಲಭವಾಗಿ ಸಿಗುವುದಿಲ್ಲ. ಹೀಗಾಗಿ ದೀರ್ಘಾವಧಿಯಲ್ಲಿ ಮೌಲ್ಯ ಹೆಚ್ಚಾಗುತ್ತದೆ. ಈ ಕಾರಣದಿಂದ ಇದು Safe Haven Asset ಆಗಿಯೂ ಮಹತ್ವ ಪಡೆದು ಕೊಳ್ಳುತ್ತಿದೆ.
ಕೊನೆಮಾತು: ಏಪ್ರಿಲ್, ಮೇ ವೇಳೆಗೆ ಚಿನ್ನ ಮತ್ತು ಬೆಳ್ಳಿಯ ಬೆಲೆ ಇವತ್ತಿನ ಬೆಲೆಗಿಂತ ಬಹಳಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಬೆಳ್ಳಿ, ಚಿನ್ನವನ್ನು ಕೂಡ ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದುಕೊಳ್ಳುವ ಸಾಧ್ಯತೆಗಳು ನಿಚ್ಚಳವಾಗಿ ಕಾಣುತ್ತಿದೆ. ಹೀಗಾಗಿ ಬೆಳ್ಳಿಯು ಇನ್ನು ಮುಂದೆ “ಬಡವರ ಚಿನ್ನ” ಮಾತ್ರವಲ್ಲದೆ ,ಭವಿಷ್ಯದ ತಂತ್ರಜ್ಞಾನ, ಹಸಿರು ಶಕ್ತಿ,ವಿದ್ಯುತ್ ಕ್ರಾಂತಿ,ಕೈಗಾರಿಕಾ ಬೆಳವಣಿಗೆಗೆ ಬೇಕಾದ ಮಹತ್ವದ ಲೋಹವಾಗಿ ಮಹತ್ವವನ್ನು ಪಡೆದುಕೊಳ್ಳಲಿದೆ. ಹೀಗಾಗಿ ಬೆಳ್ಳಿ ಬೆಲೆ ಏರಿಕೆ ಆಗುತ್ತಿರುವುದು ಕೇವಲ ಇವತ್ತಿನ ಟ್ರೆಂಡ್ ಮಾತ್ರವಾಗಿ, ಇವತ್ತಿನ ಲಾಭ ಗಳಿಕೆಯ ಹೂಡಿಕೆಯಾಗಿ ಉಳಿದುಕೊಳ್ಳದೆ. ಭವಿಷ್ಯದ ಅನಿವಾರ್ಯತೆಯಾಗುವ ಸಾಧ್ಯತೆಯನ್ನು ಗಮನಿಸಬೇಕು.
Advertisement