ಹುಣಸೆ: ಪೌಷ್ಕಿಕಾಂಶ ಮತ್ತು ಔಷಧೀಯ ಗುಣಗಳ ಭಂಡಾರ (ಕುಶಲವೇ ಕ್ಷೇಮವೇ)

ಹುಣಸೆ ಕಾಯಿಯನ್ನು (ಕಚ್ಚಾ ಹುಣಸೆ) ಆಯುರ್ವೇದದಲ್ಲಿ ಔಷಧೀಯ ಗುಣಗಳಿರುವ ದ್ರವ್ಯವಾಗಿ ಪರಿಗಣಿಸಲಾಗಿದೆ. ಇದಕ್ಕೆ ಹುಳಿ ರುಚಿ (ಅಮ್ಲ ರಸ) ಮತ್ತು ಸ್ವಲ್ಪ ಉಷ್ಣ ಸ್ವಭಾವ ಇದ್ದು ಜೀರ್ಣಕ್ರಿಯೆ ಉತ್ತೇಜಿಸಲು...
Tamarind
ಹುಣಸೆ ಹಣ್ಣುonline desk
Updated on

ಹುಣಸೆ (ಸಸ್ಯಶಾಸ್ತ್ರೀಯ ಹೆಸರು ಟ್ಯಾಮರಿಂಡಸ್ ಇಂಡಿಕಾ) ಒಂದು ಉಷ್ಣ ಪ್ರದೇಶದ ಸಸ್ಯ. ಇದರ ಹಣ್ಣು, ಕಾಯಿ, ಚಿಗುರು ಮತ್ತು ಹೂವುಗಳು ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇವುಗಳನ್ನು ಆಯುರ್ವೇದ ಮತ್ತು ಸಾಂಪ್ರದಾಯಿಕ ಔಷಧಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

ಹುಣಸೆ ಹಣ್ಣು ಪೋಷಕಾಂಶಗಳ ಭಂಡಾರ

ಹುಣಸೆ ಹಣ್ಣು (ಪಕ್ವಗೊಂಡ ಬೂದು-ಕಪ್ಪು ತಿರುಳು ಭಾಗ) ಪೋಷಕಾಂಶಗಳ ಪೂರ್ಣ ಭಂಡಾರವಾಗಿದೆ. ಪ್ರತಿ 100 ಗ್ರಾಂ ಹುಣಸೆಹಣ್ಣಿನಲ್ಲಿ ಸುಮಾರು 239 ಕ್ಯಾಲೋರಿ ಶಕ್ತಿ, 2.8 ಗ್ರಾಂ ಪ್ರೋಟೀನ್, 5.1 ಗ್ರಾಂ ನಾರು, 62.5 ಗ್ರಾಂ ಕಾರ್ಬೊಹೈಡ್ರೇಟ್‌ಗಳು ಇರುತ್ತವೆ. ಇದರಲ್ಲಿ ವಿಟಮಿನ್ ಸಿ (3.5 ಮಿಲಿ ಗ್ರಾಂ, ಬಿ-ಕಾಂಪ್ಲೆಕ್ಸ್ (ಟೈಮಿನ್, ರೈಬೊಫ್ಲ್ಯಾವಿನ್, ನಿಯಾಸಿನ್), ಕ್ಯಾಲ್ಸಿಯಂ (74 ಮಿಲಿ ಗ್ರಾಂ), ಕಬ್ಬಿಣ (2.8 ಮಿಲಿ ಗ್ರಾಂ), ಮೆಗ್ನೀಷಿಯಂ (28 ಮಿಲಿ ಗ್ರಾಂ), ಪೊಟ್ಯಾಷಿಯಂ (628 ಮಿಲಿ ಗ್ರಾಂ) ಮತ್ತು ರಂಜಕ ಇವೆ.

ಇದು ಟಾರ್ಟಾರಿಕ್ ಆಸಿಡ್ ಮತ್ತು ಮ್ಯಾಲಿಕ್ ಆಸಿಡ್‌ಗಳಂತಹ ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದೆ. ಕರುಳು ಸ್ವಚ್ಛಗೊಳಿಸುವುದು, ರಕ್ತಶುದ್ಧೀಕರಣ ಮತ್ತು ಮಧುಮೇಹ ನಿಯಂತ್ರಣಕ್ಕೆ ಉಪಯುಕ್ತ. ಹೃದಯಾಘಾತ ಅಪಾಯವನ್ನು ಕಡಿಮೆ ಮಾಡಿ ದೇಹದಲ್ಲಿ ಆಮ್ಲೀಯತೆಯನ್ನು ಸಮತೋಲನಗೊಳಿಸುತ್ತದೆ.

ಹುಣಸೆ ಕಾಯಿ

ಹುಣಸೆ ಕಾಯಿ (ಹಸಿರು ತಿರುಳು ಭಾಗ, ಹಣ್ಣಿನ ಮೇಲಿನ ಚರ್ಮ) ಹಣ್ಣಿಗಿಂತ ಹೆಚ್ಚು ಆಮ್ಲೀಯ ಗುಣ ಹೊಂದಿದ್ದು ವಿಟಮಿನ್ ಸಿ (53 ಮಿಲಿ ಗ್ರಾಂ/100 ಗ್ರಾಂ), ಪೊಟ್ಯಾಷಿಯಂ, ಮೆಗ್ನೀಷಿಯಂ, ಕಬ್ಬಿಣ, ಲಿಪೊಯಿಕ್ ಆಸಿಡ್ ಮತ್ತು ಪಾಲಿಫೆನಾಲ್‌ಗಳ ಸಮೃದ್ಧ ಮೂಲವಾಗಿದೆ. ಇದು ಉರಿಯೂತ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಹಾಗೆಯೇ ಕರುಳಿನ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ ಮತ್ತು ರಕ್ತಹೀನತೆಯನ್ನು ನಿವಾರಿಸುತ್ತದೆ.

ಹುಣಸೆ ಹೂವುಗಳು

ಹುಣಸೆ ಹೂವುಗಳ (ಹಳದಿ-ಕೆಂಪು ಬಣ್ಣದವು) ಯಾರೂ ಹೆಚ್ಚಾಗಿ ಮಾತನಾಡುವುದಿಲ್ಲ. ಅದರೆ ಇವುಗಳು ಔಷಧೀಯ ಮೌಲ್ಯ ಹೊಂದಿವೆ. ಇವುಗಳಲ್ಲಿ ವಿಟಮಿನ್ ಸಿ, ಕಬ್ಬಿಣ, ಕ್ಯಾಲ್ಸಿಯಂ, ಫ್ಲ್ಯಾವೊನಾಯ್ಡ್ಗಳು ಮತ್ತು ಆಂಟಿಮೈಕ್ರೋಬಿಯಲ್ ಸಂಯುಕ್ತಗಳಿವೆ.

ಆಯುರ್ವೇದದಲ್ಲಿ ಶಿಲೀಂಧ್ರ ರೋಗ ನಿರೋಧಕ, ಜೀರ್ಣ ಸುಧಾರಕ, ಮಹಿಳೆಯರ ಸಮಸ್ಯೆಗಳಿಗೆ ಉಪಯುಕ್ತವಾಗಿ ಹುಣಸೆ ಹೂವುಗಳನ್ನು ಬಳಸಲಾಗುತ್ತದೆ. ಈ ಹೂವುಗಳ ರಸವು ದೇಹದ ಶಕ್ತಿ ಹೆಚ್ಚಿಸಿ ಆಂಟಿಆಕ್ಸಿಡೆಂಟ್ ಗುಣದಿಂದ ವೃದ್ಧಾಪ್ಯವನ್ನು ತಡೆಯುತ್ತದೆ.

ಆಯುರ್ವೇದದಲ್ಲಿ ಹುಣಸೆ ಕಾಯಿ ಬಳಕೆ

ಹುಣಸೆ ಕಾಯಿಯನ್ನು (ಕಚ್ಚಾ ಹುಣಸೆ) ಆಯುರ್ವೇದದಲ್ಲಿ ಔಷಧೀಯ ಗುಣಗಳಿರುವ ದ್ರವ್ಯವಾಗಿ ಪರಿಗಣಿಸಲಾಗಿದೆ. ಇದಕ್ಕೆ ಹುಳಿ ರುಚಿ (ಅಮ್ಲ ರಸ) ಮತ್ತು ಸ್ವಲ್ಪ ಉಷ್ಣ ಸ್ವಭಾವ ಇದ್ದು ಜೀರ್ಣಕ್ರಿಯೆ ಉತ್ತೇಜಿಸಲು ಸಹಕಾರಿ.

ಹುಣಸೆ ಕಾಯಿಯನ್ನು ಹಸಿವು ಹೆಚ್ಚಿಸಲು, ಅಜೀರ್ಣ ಮತ್ತು ಹೊಟ್ಟೆ ಉಬ್ಬರ ಕಡಿಮೆ ಮಾಡಲು ಉಪಯೋಗಿಸುತ್ತಾರೆ. ಇದು ಲಘು ವಿಸರ್ಜಕ ಗುಣ ಹೊಂದಿರುವುದರಿಂದ ಮಲಬದ್ಧತೆ ನಿವಾರಣೆಗೆ ಸಹಾಯ ಮಾಡುತ್ತದೆ. ಪಿತ್ತ ಹೆಚ್ಚಿದಾಗ ಸ್ವಲ್ಪ ಪ್ರಮಾಣದಲ್ಲಿ ಬಳಸಿದರೆ ಸಮತೋಲನಕ್ಕೆ ಸಹಕಾರಿ.

ಹುಣಸೆ ಕಾಯಿಯಿಂದ ಮಾಡಿದ ಕಷಾಯ ಅಥವಾ ಸಾರು ದೇಹದ ದೌರ್ಬಲ್ಯ ಕಡಿಮೆ ಮಾಡಿ ಜೀರ್ಣಕ್ರಿಯೆಯನ್ನು ಬಲಪಡಿಸುತ್ತದೆ. ಕೆಲವೊಮ್ಮೆ ಗಂಟಲು ನೋವು ಅಥವಾ ಕಫ ಸಮಸ್ಯೆಗಳಲ್ಲಿ ಕೂಡ ಹುಣಸೆಕಾಯಿಯ ಕಷಾಯವನ್ನು ಉಪಯೋಗಿಸುತ್ತಾರೆ.

Tamarind
ರಂಜಾನ್ ಉಪವಾಸದ ಸಮಯದಲ್ಲಿ ಆರೋಗ್ಯಕರ ಆಹಾರ ಸೇವನೆ (ಕುಶಲವೇ ಕ್ಷೇಮವೇ)

ಹುಣಸೆ ಚಿಗುರು

ಹುಣಸೆ ಚಿಗುರು ದಕ್ಷಿಣ ಭಾರತದ ಅಡುಗೆ ಹಾಗೂ ಪರಂಪರೆಯಲ್ಲಿ ವಿಶೇಷ ಸ್ಥಾನ ಹೊಂದಿದೆ. ಇದು ಸ್ವಲ್ಪ ಹುಳಿ ರುಚಿಯ ಜೊತೆಗೆ ದೇಹಕ್ಕೆ ತಂಪು ನೀಡುವ ಗುಣವನ್ನು ಹೊಂದಿದೆ. ಆಯುರ್ವೇದದಲ್ಲಿ ಹುಣಸೆ ಚಿಗುರನ್ನು ಜೀರ್ಣಕ್ರಿಯೆ ಸುಧಾರಿಸಲು, ಪಿತ್ತ ಸಮತೋಲನಕ್ಕೆ ಮತ್ತು ದೇಹದ ಉಷ್ಣತೆ ಕಡಿಮೆ ಮಾಡಲು ಉಪಯೋಗಿಸುತ್ತಾರೆ.

ಹುಣಸೆ ಚಿಗುರಿನಲ್ಲಿ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ಸ್ ಮತ್ತು ಲೋಹಾಂಶ ಸಾಕಷ್ಟು ಇರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಹಸಿವು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಹೊಟ್ಟೆ ಉಬ್ಬರ, ಅಜೀರ್ಣ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಚಿಗುರನ್ನು ತೊವ್ವೆ, ಚಟ್ನಿ ಅಥವಾ ತಂಬಳಿ ರೂಪದಲ್ಲಿ ಸೇವಿಸುವ ಪದ್ಧತಿ ಇದೆ. ಹುಣಸೆ ಚಿಗುರಿನ ಕಷಾಯವನ್ನು ಕೆಲವೊಮ್ಮೆ ಸಣ್ಣ ಜ್ವರ ಮತ್ತು ಕಫ ಸಮಸ್ಯೆಗಳಿಗೆ ಉಪಯೋಗಿಸುತ್ತಾರೆ.

ಹುಣಸೆ ಚಿಗುರು ಒಂದು ಮುಷ್ಟಿ, ಜೀರಿಗೆ ಸ್ವಲ್ಪ, ಉಪ್ಪು ಸೇರಿಸಿ ಕಷಾಯ ಮಾಡಿ ಊಟದ ನಂತರ ಅರ್ಧ ಕಪ್ ಕುಡಿದರೆ ಜೀರ್ಣಕ್ರಿಯೆ ಸುಧಾರಿಸುತ್ತದೆ. ಹುಣಸೆ ಚಿಗುರನ್ನು ಬೇಯಿಸಿ ತಂಬಳಿ ಮಾಡಿ ಮಜ್ಜಿಗೆ ಜೊತೆ ಸೇವಿಸಿದರೆ ದೇಹ ತಂಪಾಗುತ್ತದೆ.

ಹುಣಸೆ ಚಿಗುರು ಚಟ್ನಿ ಮಾಡಿ ಊಟದ ಜೊತೆ ತಿನ್ನುವುದರಿಂದ ಹಸಿವು ಹೆಚ್ಚುತ್ತದೆ. ಸಣ್ಣ ಜ್ವರ/ಕಫಕ್ಕೆ ಹುಣಸೆ ಚಿಗುರನ್ನು ನೀರಲ್ಲಿ ಕುದಿಸಿ ಸ್ವಲ್ಪ ಜೇನು ಸೇರಿಸಿ ಬಿಸಿಯಾಗಿಯೇ ಕುಡಿಯಬೇಕು. ಬಾಯಿ ಹುಣ್ಣಿಗೆ ಹುಣಸೆ ಚಿಗುರಿನ ಕಷಾಯದಿಂದ ದಿನಕ್ಕೆ ಎರಡು ಬಾರಿ ಮುಕ್ಕಳಿಸಿದರೆ ಆರಾಮ ಸಿಗುತ್ತದೆ. ಹೀಗೆ ಹುಣಸೆ ಚಿಗುರು ಸರಳವಾದರೂ ಪೌಷ್ಟಿಕ ಹಾಗೂ ಔಷಧೀಯ ಗುಣಗಳಿಂದ ಕೂಡಿದ ಪ್ರಕೃತಿದತ್ತ ಆಹಾರವಾಗಿದ್ದು, ಮಿತವಾಗಿ ಸೇವಿಸಿದರೆ ದೇಹಕ್ಕೆ ಉತ್ತಮ ಆರೋಗ್ಯ ಲಾಭಗಳನ್ನು ನೀಡುತ್ತದೆ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com