ಕೊಲ್ಲಿಯಲ್ಲಿ ಯುದ್ಧ: ಆಗಸಗಳು ಮೌನವಾದಾಗ ಬೆಲೆ ತೆರುವವರಾರು? (ಜಾಗತಿಕ ಜಗಲಿ)

ಢಾಕಾ, ಕಾಠ್ಮಂಡು, ಮತ್ತು ಬಾಲಿಗಳಲ್ಲಿ ಪ್ರಯಾಣಿಕರ ಭವನಗಳು ಕೊಲ್ಲಿ ರಾಷ್ಟ್ರಗಳಲ್ಲಿನ ಕಟ್ಟಡ ನಿರ್ಮಾಣ ಕಾಮಗಾರಿ, ಡ್ರೈವರ್, ಮನೆ ಕೆಲಸದ ಸಹಾಯಕರಂತಹ ತಮ್ಮ ಉದ್ಯೋಗಗಳಿಗೆ ತೆರಳಲು ಸಜ್ಜಾಗಿರುವ ವಲಸಿಗ ಕಾರ್ಮಿಕರಿಂದ ತುಂಬಿವೆ.
ಕೊಲ್ಲಿಯಲ್ಲಿ ಯುದ್ಧ: ಆಗಸಗಳು ಮೌನವಾದಾಗ ಬೆಲೆ ತೆರುವವರಾರು? (ಜಾಗತಿಕ ಜಗಲಿ)
Updated on

ಫೆಬ್ರವರಿ 28, 2026ರ ಬೆಳಗ್ಗೆ, ಒಂದು ಇರಾನಿಯನ್ ಕ್ಷಿಪಣಿ ಗಲ್ಫ್‌ಗೆ ಅಪ್ಪಳಿಸಿತು. ಕೆಲವೇ ನಿಮಿಷಗಳ ಒಳಗೆ, ಜಗತ್ತಿನ ಅತ್ಯಂತ ಜನ ನಿಬಿಡ ವಿಮಾನ ನಿಲ್ದಾಣವಾಗಿರುವ, ವಾರ್ಷಿಕವಾಗಿ 92 ಮಿಲಿಯನ್ ಪ್ರಯಾಣಿಕರನ್ನು (9.2 ಕೋಟಿ ಪ್ರಯಾಣಿಕರು), ಅಂದರೆ ಬೆಂಗಳೂರಿನ ಸಂಪೂರ್ಣ ವಿಮಾನ ನಿಲ್ದಾಣ ನಿರ್ವಹಿಸುವ (4.38 ಕೋಟಿ) ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪೂರ್ಣವಾಗಿ ಕತ್ತಲಾವರಿಸಿತು. ಪ್ರತಿ 72 ಸೆಕೆಂಡುಗಳಿಗೆ ಒಂದು ಟೇಕಾಫ್ ಅಥವಾ ಲ್ಯಾಂಡಿಂಗ್ ನಡೆಯುವ ದುಬೈ ವಿಮಾನ ನಿಲ್ದಾಣದಲ್ಲಿ ಎಲ್ಲ ಚಟುವಟಿಕೆಗಳೂ ಸ್ಥಗಿತಗೊಂಡವು.

ಅದಾಗಿ ಕೆಲವೇ ಗಂಟೆಗಳೊಳಗೆ, ದುಬೈ, ದೋಹಾ, ಮತ್ತು ಅಬು ಧಾಬಿಗಳೂ ವಿಮಾನ ಕಾರ್ಯಾಚರಣೆ ನಿಲ್ಲಿಸಿದವು. ಕೇವಲ 3 ದಿನಗಳ ಅವಧಿಯಲ್ಲಿ 12,000ಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡವು. ಅಂದರೆ, ಉದ್ದೇಶಿತ ವಿಮಾನ ಕಾರ್ಯಾಚರಣೆಯಲ್ಲಿ 40% ರದ್ದುಗೊಂಡಂತಾಯಿತು! ಇದರ ಪರಿಣಾಮವಾಗಿ, ಒಂದು ಮಿಲಿಯನ್‌ಗೂ ಹೆಚ್ಚು (10 ಲಕ್ಷ) ಪ್ರಯಾಣಿಕರು ಬೇರೆಲ್ಲೂ ಹೋಗಲು ಜಾಗವಿಲ್ಲದೆ, ವಿಮಾನ ನಿಲ್ದಾಣಗಳಲ್ಲೇ ಉಳಿದಿದ್ದರು.

ಈ ಘಟನೆ ಯಾಕೆ ಇಷ್ಟೊಂದು ಗಂಭೀರ ಪರಿಣಾಮ ಬೀರಿತು? ಯುರೋಪಿನಿಂದ ದಕ್ಷಿಣ ಏಷ್ಯಾ (ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಭೂತಾನ್, ಮಾಲ್ಡೀವ್ಸ್, ಅಫ್ಘಾನಿಸ್ತಾನ), ಮತ್ತು ಆಗ್ನೇಯ ಏಷ್ಯಾ (ಇಂಡೋನೇಷ್ಯಾ, ಥೈಲ್ಯಾಂಡ್, ವಿಯೆಟ್ನಾಂ, ಮಲೇಷ್ಯಾ, ಸಿಂಗಾಪುರ, ಫಿಲಿಪೈನ್ಸ್, ಮತ್ತು ಇತರ ಪ್ರದೇಶಗಳು) ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ವಾಯು ಮಾರ್ಗ ಇರಾಕ್ ಮತ್ತು ಇರಾನ್ ಮೇಲಿನ ವಾಯು ಪ್ರದೇಶದ ಮೂಲಕವೇ ಹಾದು ಹೋಗುತ್ತದೆ. ಮೂರು ಕೊಲ್ಲಿ ರಾಷ್ಟ್ರಗಳ ವಿಮಾನ ನಿಲ್ದಾಣಗಳಾದ ದುಬೈ, ದೋಹಾ, ಮತ್ತು ಅಬು ಧಾಬಿಗಳು ಪ್ರತಿದಿನವೂ 90,000 ಪ್ರಯಾಣಿಕರಿಗೆ ಸಂಚಾರ ಸೇವೆ ಒದಗಿಸುತ್ತವೆ. ಎಮಿರೇಟ್ಸ್, ಕತಾರ್ ಏರ್‌ವೇಸ್, ಮತ್ತು ಎತಿಹಾದ್‌ಗಳು ಜೊತೆಯಾಗಿ, ವರ್ಷಕ್ಕೆ 68 ಬಿಲಿಯನ್ ಡಾಲರ್‌ಗೂ ಹೆಚ್ಚು ಹಣ ಸಂಪಾದಿಸುತ್ತವೆ. ಯುದ್ಧ ಆರಂಭವಾದಾಗ, ಹತ್ತಕ್ಕೂ ಹೆಚ್ಚು ವಿಮಾನಯಾನ ಸಂಸ್ಥೆಗಳು ರಾತ್ರೋರಾತ್ರಿ ಕಾರ್ಯಾಚರಣೆ ಸ್ಥಗಿತಗೊಳಿಸಿದವು. ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದ ಕನಿಷ್ಠ 145 ವಿಮಾನಗಳು ಹಿಂದಿರುಗಿ, ಆರಂಭದ ನಿಲ್ದಾಣಕ್ಕೆ ಮರಳಿದವು.

ಬಹಳಷ್ಟು ಜನರ ಅರಿವಿಗೆ ಬರದ, ಆದರೆ, ಅಲ್ ಜಝೀರಾ ವಾಹಿನಿ ವರದಿ ಮಾಡಿದ ವಿಚಾರ ಏನೆಂದರೆ, ನಿಜವಾದ ಹಾನಿ ಆರಂಭಗೊಂಡಿದ್ದು ಇಲ್ಲಿಂದ. ಆಕಾಶ ಮುಚ್ಚಲ್ಪಟ್ಟಾಗ, ಕೇವಲ ಪ್ರಯಾಣಿಕರು ಮಾತ್ರವೇ ಕಷ್ಟಕ್ಕೆ ಸಿಲುಕುವುದಲ್ಲ. ವಿಮಾನದ ಮೂಲಕ ಸಾಗಿಸಲ್ಪಡುವ ಸರಕುಗಳೂ (ಏರ್ ಕಾರ್ಗೋ) ಸಮಸ್ಯೆಗೆ ಒಳಗಾಗುತ್ತವೆ. ವಿಮಾನಗಳ ಮೂಲಕ ಜಾಗತಿಕ ವ್ಯಾಪಾರ ಮೌಲ್ಯದ 35% ಸರಕುಗಳ ಸಾಗಾಣಿಕೆಯಾಗುತ್ತದೆ. ಅಂದರೆ, ಪ್ರತಿವರ್ಷವೂ 8 ಟ್ರಿಲಿಯನ್ ಡಾಲರ್‌ಗೂ ಹೆಚ್ಚು ಮೌಲ್ಯದ ಸರಕುಗಳು ವಾಯು ಮಾರ್ಗದಲ್ಲಿ ಸಾಗಿಸಲ್ಪಡುತ್ತವೆ. ಆದರೆ, ಇವುಗಳು ಒಟ್ಟಾರೆ ವ್ಯಾಪಾರಿ ಸರಕಿನ 1%ಕ್ಕೂ ಕಡಿಮೆ ತೂಕ ಹೊಂದಿರುತ್ತವೆ. ಹಾಗಾದರೆ ವಿಮಾನದ ಮೂಲಕ ಸಾಗಿಸಲ್ಪಡುವ ಸರಕುಗಳು ಯಾವುವು? ಕಟ್ಟುನಿಟ್ಟಿನ ಎಕ್ಸ್‌ಪೈರಿ ದಿನಾಂಕ ಹೊಂದಿರುವ ಲಸಿಕೆಗಳು, ನಮ್ಮ ಫೋನ್, ಕಾರ್, ಟಿವಿಗಳು ಕಾರ್ಯಾಚರಿಸುವಂತೆ ಮಾಡುವ ಸಣ್ಣ ಚಿಪ್‌ಗಳಾದ ಸೆಮಿಕಂಡಕ್ಟರ್‌ಗಳು, ಕೆಲವೇ ದಿನಗಳಲ್ಲಿ ಹಾಳಾಗುವಂತಹ ಉತ್ಪನ್ನಗಳು, ಏರ್‌ಕ್ರಾಫ್ಟ್ ಬಿಡಿಭಾಗಗಳು, ಜೀವ ರಕ್ಷಕ ಔಷಧಿಗಳು, ಒಟ್ಟಾರೆಯಾಗಿ ಜಗತ್ತು ಕಾಯುತ್ತಾ ಕುಳಿತಿರಲು ಸಾಧ್ಯವಿಲ್ಲದಂತಹ ಉತ್ಪನ್ನಗಳು ವಾಯು ಮಾರ್ಗದಲ್ಲಿ ಸಾಗುತ್ತವೆ.

ಈ ರೀತಿ ವಾಯು ಮಾರ್ಗಗಳು ಸ್ಥಗಿತಗೊಂಡಾಗ, ಕಾರ್ಖಾನೆಗಳ ಕಾರ್ಯಾಚರಣೆ ನಿಧಾನಗೊಳ್ಳುತ್ತದೆ, ಔಷಧ ಪೂರೈಕೆ ವಿಳಂಬಗೊಳ್ಳುತ್ತದೆ, ವಿವಿಧ ಖಂಡಗಳ ಪೂರೈಕೆ ಸರಪಳಿ ಅಸ್ತವ್ಯಸ್ತಗೊಳ್ಳುತ್ತದೆ. ಇರಾನಿನ ಸುತ್ತ ಮಾರ್ಗ ಬದಲಾಯಿಸಿ ಚಲಿಸಬೇಕಾದ ವಿಮಾನಗಳ ಪ್ರತಿ ಹಾರಾಟಕ್ಕೂ 90 ಹೆಚ್ಚುವರಿ ನಿಮಿಷಗಳು ತಗಲುತ್ತವೆ. ಪ್ರತಿ ಹೆಚ್ಚುವರಿ ಒಂದು ಗಂಟೆ ಕಾರ್ಯಾಚರಣೆಗೆ ತಲಾ 6,000 ಡಾಲರ್ ವೆಚ್ಚ ತಗಲುತ್ತದೆ. ಇದು ನಿಜಕ್ಕೂ ಅತ್ಯಂತ ದುಬಾರಿ ವೆಚ್ಚವೇ ಸರಿ. ಇನ್ನು ವಾಯು ದಾಳಿಗಳ ನಂತರ ಬ್ರೆಂಟ್ ಕ್ರೂಡ್ (ಅಂತಾರಾಷ್ಟ್ರೀಯ ತೈಲ ದರ) 4.5% ಹೆಚ್ಚಳ ಕಂಡಿತು. ಏಷ್ಯಾ ಮತ್ತು ಆಸ್ಟ್ರೇಲಿಯಾಗಳಾದ್ಯಂತ ವಿಮಾನಯಾನ ಸಂಸ್ಥೆಗಳ ಷೇರು ಮೌಲ್ಯ ಕುಸಿತ ಕಂಡಿತು. ವಿಮಾನಯಾನ ಸಂಸ್ಥೆಗಳು ಆ ಪ್ರತಿಯೊಂದು ಹೆಚ್ಚುವರಿ ರೂಪಾಯಿ ಖರ್ಚನ್ನು ಪ್ರಯಾಣಿಕರ ಮೇಲೆ ವರ್ಗಾಯಿಸುತ್ತವೆ. ಟಿಕೆಟ್ ದರಗಳು ಮೇಲೇರಿ, ತಿಂಗಳುಗಳ ಕಾಲ ದರಗಳು ದುಬಾರಿಯಾಗಿಯೇ ಉಳಿಯುತ್ತವೆ.

ಕೊಲ್ಲಿಯಲ್ಲಿ ಯುದ್ಧ: ಆಗಸಗಳು ಮೌನವಾದಾಗ ಬೆಲೆ ತೆರುವವರಾರು? (ಜಾಗತಿಕ ಜಗಲಿ)
ಯುದ್ಧ ದೂರದಲ್ಲಿ; ನೋವು ಮನೆ ಬಾಗಿಲಲ್ಲಿ

ಆದರೆ, ಅತಿದೊಡ್ಡ ನೋವು ಹೆಚ್ಚಾಗಿ ಯಾರೂ ಮಾತನಾಡದ ಗುಂಪಿನ ಮೇಲಾಗುತ್ತದೆ.

ಢಾಕಾ, ಕಾಠ್ಮಂಡು, ಮತ್ತು ಬಾಲಿಗಳಲ್ಲಿ ಪ್ರಯಾಣಿಕರ ಭವನಗಳು ಕೊಲ್ಲಿ ರಾಷ್ಟ್ರಗಳಲ್ಲಿನ ಕಟ್ಟಡ ನಿರ್ಮಾಣ ಕಾಮಗಾರಿ, ಡ್ರೈವರ್, ಮನೆ ಕೆಲಸದ ಸಹಾಯಕರಂತಹ ತಮ್ಮ ಉದ್ಯೋಗಗಳಿಗೆ ತೆರಳಲು ಸಜ್ಜಾಗಿರುವ ವಲಸಿಗ ಕಾರ್ಮಿಕರಿಂದ ತುಂಬಿವೆ. ವಿಮಾನಗಳೇ ಇಲ್ಲ ಎಂದರೆ, ಅವರು ತಮ್ಮ ಗುತ್ತಿಗೆಗಳನ್ನು ಕಳೆದುಕೊಳ್ಳುವ, ಕೆಲಸಕ್ಕೆ ಗೈರು ಹಾಜರಾದ ಅವಧಿಗೆ ಸಂಬಳ ಕಡಿತ ಎದುರಿಸುವ, ಮತ್ತು ಸಂಬಳವಿಲ್ಲದೇ ಜೀವನ ನಡೆಸುವ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಯುಎಇಯಲ್ಲಿ 60%ಕ್ಕೂ ಹೆಚ್ಚು ವಲಸಿಗ ಕಾರ್ಮಿಕರು ಪ್ರತಿ ತಿಂಗಳು 1,360 ಡಾಲರ್‌ಗೂ ಕಡಿಮೆ ಆದಾಯ ಹೊಂದಿದ್ದಾರೆ. ಸಂಬಳವಿಲ್ಲದೆ ಕಳೆಯುವ ಒಂದೊಂದು ದಿನವೂ ಅವರಿಗೆ ದೊಡ್ಡ ಬಿಕ್ಕಟ್ಟಾಗಲಿದೆ.

ಅಂಕಿ ಸಂಖ್ಯೆಗಳು ನಮಗೆ ಪೂರ್ಣ ಕಥೆಯನ್ನು ಹೇಳುತ್ತವೆ. ಕೊಲ್ಲಿ ರಾಷ್ಟ್ರಗಳಲ್ಲಿರುವ ಭಾರತೀಯ ಕಾರ್ಮಿಕರು ಪ್ರತಿವರ್ಷವೂ ತಮ್ಮ ಮನೆಗೆ ಕಳುಹಿಸುವ ಒಟ್ಟು ಮೊತ್ತ 49 ಬಿಲಿಯನ್ ಡಾಲರ್ ಆಗಿದೆ. ಇದೇ ವೇಳೆ, ಪಾಕಿಸ್ತಾನಿ ಕಾರ್ಮಿಕರು ಸ್ವದೇಶಕ್ಕೆ 17 ಬಿಲಿಯನ್ ಡಾಲರ್‌ಗೂ ಹೆಚ್ಚು ಹಣ ಕಳುಹಿಸುತ್ತಾರೆ. ಇನ್ನು ಗಲ್ಫ್‌ನಲ್ಲಿರುವ ಬಾಂಗ್ಲಾದೇಶಿ ಕಾರ್ಮಿಕರು 11 ಬಿಲಿಯನ್ ಡಾಲರ್ ರವಾನಿಸುತ್ತಾರೆ.

ಗಲ್ಫ್ ರಾಷ್ಟ್ರಗಳು ಸ್ಥಗಿತಗೊಂಡಾಗ, ಈ ನೋವು ಕೇವಲ ವಿಮಾನ ನಿಲ್ದಾಣದ ಗೇಟುಗಳಿಗೆ ಸೀಮಿತವಾಗಿರುವುದಿಲ್ಲ. ಅದು ಸಾವಿರಾರು ಕಿಲೋಮೀಟರ್ ಪ್ರಯಾಣಿಸಿ, ಎಷ್ಟೋ ದೂರದ ಮನೆಗಳಲ್ಲಿ ಕುಳಿತು, ಈ ತಿಂಗಳು ಬರುವ ಹಣಕ್ಕಾಗಿ ಕಾದಿರುವ, ಆದರೆ ಆ ಹಣವನ್ನು ಪಡೆಯಲಾಗದ ಕುಟುಂಬಗಳಿಗೂ ಅಪ್ಪಳಿಸುತ್ತದೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com