ಕೇರಳ ಚುನಾವಣೆ: ಕಮ್ಯುನಿಸ್ಟ್‌ ಮುಕ್ತ ಭಾರತಕ್ಕೆ ಕಾಂಗ್ರೆಸ್ ಪಣ; ಮೈತ್ರಿ ವಿರುದ್ಧವೇ ತೊಡೆ ತಟ್ಟಿದ LDF (ನೇರ ನೋಟ)

ಕೇರಳದಲ್ಲಿ 140 ವಿಧಾನಸಭಾ ಕ್ಷೇತ್ರಗಳು. ಈ ಚುನಾವಣೆ ದೇಶದಲ್ಲಿ ಎಡಪಂಥೀಯ ಚಳವಳಿಗೆ ಮಹತ್ವದ್ದು. ದೇಶದ ಏಕೈಕ ರಾಜ್ಯದಲ್ಲಿರುವ ಅಧಿಕಾರವನ್ನು ಉಳಿಸಿಕೊಳ್ಳುವ ಪಣ....
Left party, congress, BJP flag (file photo)
ಎಡಪಕ್ಷಗಳು, ಕಾಂಗ್ರೆಸ್, ಬಿಜೆಪಿ ಬಾವುಟ (ಸಂಗ್ರಹ ಚಿತ್ರ)online desk
Updated on

ಇಡೀ ದೇಶದಲ್ಲಿ ಕಮ್ಯುನಿಸ್ಟರು ಇವತ್ತು ಆಡಳಿತ ನಡೆಸುತ್ತಿರುವ ಏಕೈಕ ರಾಜ್ಯ ಕೇರಳ. ಅಲ್ಲಿ ಇನ್ನೆರಡು ತಿಂಗಳಲ್ಲಿ ವಿಧಾನಸಭಾ ಚುನಾವಣೆ. ಎಡಪಕ್ಷಗಳು ಅಧಿಕಾರ ಕಳೆದುಕೊಂಡರೆ ಅದು ಕಮ್ಯುನಿಸ್ಟ್‌ ಮುಕ್ತ ಭಾರತ. ಜಯ ಸಾಧಿಸಿದರೆ ಹ್ಯಾಟ್ರಿಕ್‌ ಗೆಲುವು. ಕೋಟೆ ಕಾಪಾಡಿಕೊಳ್ಳಲು ವಾಮಪಕ್ಷಗಳ ಕಸರತ್ತು. ಕಮ್ಯುನಿಸ್ಟರನ್ನು ಮಣಿಸಲೇಬೇಕೆಂಬ ಛಲ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ನದು.

ಪಶ್ಚಿಮ ಬಂಗಾಳ, ತ್ರಿಪುರಾ ರಾಜ್ಯಗಳಲ್ಲಿ ದಶಕಗಳ ಕಾಲ ಆಳ್ವಿಕೆ ನಡೆಸಿದ್ದ ವಾಮಪಂಥೀಯರ ಪಾಲಿಗೆ ಈಗ ಅದು ಗತವೈಭವ. ಕೇರಳದಲ್ಲಿ ಕಮ್ಯುನಿಸ್ಟರು ಈ ಎರಡು ರಾಜ್ಯಗಳಂತೆ ಸತತ ಆಳ್ವಿಕೆ ನಡೆಸಿದವರಲ್ಲ. ಕೇರಳದ ಎಡಪಂಥೀಯರು ಬೇವು-ಬೆಲ್ಲ ಸವಿದವರು. ಒಮ್ಮೆ ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್‌ ಮತ್ತೊಮ್ಮೆ ಕಾಂಗ್ರೆಸ್‌ ಸಾರಥ್ಯದ ಯುಡಿಎಫ್‌ ಅಧಿಪತ್ಯ ಅದು. ಆದರೆ, ಕಳೆದ ಬಾರಿ ಎಡರಂಗ ಸತತ ಎರಡನೇ ಬಾರಿಗೆ ಗದ್ದುಗೆ ಏರಿತು. ಈ ಬಾರಿ ಕಮ್ಯುನಿಸ್ಟರನ್ನು ಹಣಿಯಲು ಯುಡಿಎಫ್‌ ಸೆಣಸಾಡುತ್ತಿದೆ. ಇಬ್ಬರ ನಡುವಿನ ಸಾಂಪ್ರದಾಯಿಕ ಸಮರವನ್ನು ಭೇದಿಸುವ ಪ್ರಯತ್ನ ಬಿಜೆಪಿ ನೇತೃತ್ವದ ಎನ್‌ಡಿಎನದು.

ಕೇರಳದಲ್ಲಿ 140 ವಿಧಾನಸಭಾ ಕ್ಷೇತ್ರಗಳು. ಈ ಚುನಾವಣೆ ದೇಶದಲ್ಲಿ ಎಡಪಂಥೀಯ ಚಳವಳಿಗೆ ಮಹತ್ವದ್ದು. ದೇಶದ ಏಕೈಕ ರಾಜ್ಯದಲ್ಲಿರುವ ಅಧಿಕಾರವನ್ನು ಉಳಿಸಿಕೊಳ್ಳುವ ಪಣ. ಕೇರಳ ಕಳೆದ ಹತ್ತು ವರ್ಷಗಳಲ್ಲಿ ಪ್ರಕಾಶಮಾನವಾಗಿದೆ ಎಂಬುದು ಕಮ್ಯುನಿಸ್ಟರ ಪ್ರಚಾರ. ಎಲ್‌ಡಿಎಫ್‌ ಹಾಗೂ ಯುಡಿಎಫ್‌ ನಡುವಿನ ಆಡಳಿತದ ಹೋಲಿಕೆ. ಸಿಪಿಐ (ಎಂ)ನ ಹಿರಿಯ ನಾಯಕ 80 ವರ್ಷದ ಪಿಣರಾಯಿ ವಿಜಯನ್‌ ಅವರು ಕಳೆದ ಹತ್ತು ವರ್ಷಗಳಿಂದಲೂ ಅಲ್ಲಿ ಮುಖ್ಯಮಂತ್ರಿ. ಪಿಣರಾಯಿ ವಿಜಯನ್ ಹಿಂದುಳಿದ ಈಳವ ಸಮುದಾಯಕ್ಕೆ ಸೇರಿದವರು. ಕೇರಳದಲ್ಲಿ ಈಳವ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಎಡಪಕ್ಷಗಳು ಹಾಗೂ ಕಾಂಗ್ರೆಸ್ಸಿನದು ದಿಲ್ಲಿಯಲ್ಲಿ ದೋಸ್ತಿ, ಕೇರಳದಲ್ಲಿ ಕುಸ್ತಿ ಎಂಬ ನೀತಿ. ಇಂಡಿಯಾ ಒಕ್ಕೂಟದಲ್ಲಿ ಪರಸ್ಪರ ಮಿತ್ರರು. ಕೇರಳದ ವಿಚಾರದಲ್ಲಿ ಬದ್ಧ ರಾಜಕೀಯ ಎದುರಾಳಿಗಳು. ಏಕೆಂದರೆ, ಒಬ್ಬರನ್ನು ಸೋಲಿಸಿಯೇ ಇನ್ನೊಬ್ಬರು ಅಧಿಕಾರಕ್ಕೆ ಏರಬೇಕು. ಅದಕ್ಕಾಗಿ ಪರಸ್ಪರ ಸೆಣಸಾಡಲೇಬೇಕು. ಹೀಗಾಗಿ, ಈ ಚುನಾವಣೆ ಇಂಡಿಯಾ ಒಕ್ಕೂಟದಲ್ಲಿಯೂ ಕಾಂಗ್ರೆಸ್‌ ಹಾಗೂ ಕಮ್ಯುನಿಸ್ಟರ ಮಧ್ಯೆ ಬಿರುಕು ಮೂಡಿಸಿರುವುದು ದಿಟ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ. ಕೇಂದ್ರ ಸರಕಾರ ಸಮಗ್ರ ತನಿಖೆ ನಡೆಸಿದ್ದರೆ ಪಿಣರಾಯಿ ವಿಜಯನ್‌ ಇಷ್ಟೊತ್ತಿಗಾಗಲೇ ಜೈಲಿನಲ್ಲಿರುತ್ತಿದ್ದರು ಎಂಬುದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ವಾಗ್ದಾಳಿ. ಇದಕ್ಕೆ ಪಿಣರಾಯಿ ಅವರ ಅಷ್ಟೇ ತೀಕ್ಷ್ಣ ಪ್ರತಿಕ್ರಿಯೆ ಹೀಗಿದೆ- ರಾಹುಲ್‌ ಗಾಂಧಿ ಅವರ ಅಜ್ಜಿ ಇಂದಿರಾ ಗಾಂಧಿ ಅವರು ತುರ್ತುಪರಿಸ್ಥಿತಿ ವಿರೋಧಿಸಿದ ನನ್ನನ್ನು ಒಂದೂವರೆ ವರ್ಷ ಜೈಲಿನಲ್ಲಿಟ್ಟಿದ್ದರು. ಇದು ರಾಹುಲ್‌ ಗಾಂಧಿ ಅವರಿಗೆ ನೆನಪಿರಲಿ.

ನನ್ನ ಮೇಲೆಯೂ ಕೇಸುಗಳಿವೆ. ಇಡಿ ನನ್ನನ್ನು ವಿಚಾರಣೆಗೆ ಒಳಪಡಿಸಿತ್ತು. ಪಿಣರಾಯಿ ವಿಜಯನ್‌ ಹಾಗೂ ಅವರ ಕುಟುಂಬದವರ ವಿರುದ್ಧ ಇಡಿ ಕ್ರಮ ಕೈಗೊಳ್ಳುತ್ತಿಲ್ಲ ಏಕೆ? – ಹೀಗೆ ರಾಹುಲ್‌ ಗಾಂಧಿ ಅವರ ವಾಗ್ಬಾಣ ಬಿರುಸು ಪಡೆಯುತ್ತದೆ.

ಕೇರಳದ ಚುನಾವಣಾ ಪ್ರಚಾರದಲ್ಲಿ ರಾಹುಲ್‌ ಗಾಂಧಿ ಅವರು ಎಡಪಕ್ಷಗಳು ಇಂಡಿಯಾ ಒಕ್ಕೂಟದಲ್ಲಿ ತಮ್ಮ ದೋಸ್ತಿ ಎಂಬುದಕ್ಕೆ ಮುಲಾಜೇ ಇಟ್ಟಿಲ್ಲ. ಕೇರಳದಲ್ಲಿ ಸಿಪಿಐ (ಎಂ) ಹಾಗೂ ಬಿಜೆಪಿಯು ಕಾಂಗ್ರೆಸ್ ಪಕ್ಷವನ್ನು ಜಂಟಿಯಾಗಿ ಎದುರಿಸಲು ಒಪ್ಪಂದ ಮಾಡಿಕೊಂಡಿವೆ. ಇವು ಸಿಪಿಐ (ಎಂ) ಹಾಗೂ ಬಿಜೆಪಿ ಆಗಿ ಉಳಿದಿಲ್ಲ. ‘ಕಮ್ಯುನಿಸ್ಟ್‌ ಜನತಾ ಪಾರ್ಟಿ’ಯಾಗಿದೆ ಎಂಬುದು ರಾಹುಲ್‌ ಗಾಂಧಿ ಅವರ ಕುಹಕ. ಇದರಿಂದ ಕಮ್ಯುನಿಸ್ಟರು ಕೆಂಡಾಮಂಡಲ. ಇಂಡಿಯಾ ಒಕ್ಕೂಟದ ಸಭೆಯಲ್ಲಿ ಎಡಪಕ್ಷಗಳು ರಾಹುಲ್‌ ಗಾಂಧಿ ಅವರ ಹೇಳಿಕೆಗಳನ್ನು ಅವರ ಸಮ್ಮುಖದಲ್ಲೇ ಬಲವಾಗಿ ಆಕ್ಷೇಪಿಸಿವೆ. ಆದರೂ, ಮತಸಮರದಲ್ಲಿ ರಾಹುಲ್‌ ತಮ್ಮ ಅಸ್ತ್ರವನ್ನು ಝಳಪಿಸುತ್ತಲೇ ಇದ್ದಾರೆ.

Left party, congress, BJP flag (file photo)
ಪಶ್ಚಿಮ ಬಂಗಾಳದಲ್ಲಿ ಅಗ್ನಿಕನ್ಯೆ ವರ್ಸಸ್‌ ಬಿಜೆಪಿ (ನೇರ ನೋಟ)

ಎಲ್‌ಡಿಎಫ್‌ ಹತ್ತು ವರ್ಷಗಳ ತನ್ನ ಆಡಳಿತದಲ್ಲಿ ಕೈಗೊಂಡ ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟಿದೆ. ಮೂಲ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಿರುವುದನ್ನು ಪ್ರಚಾರ ಮಾಡುತ್ತಿದೆ. ಶಿಕ್ಷಣ, ಆರೋಗ್ಯ, ಕೈಗಾರಿಕಾ ರಂಗದ ತನ್ನ ಸಾಧನೆಯನ್ನು ಬಿಂಬಿಸುತ್ತಿದೆ. ನೆರೆ ಹಾವಳಿ, ಭೂ ಕುಸಿತ, ನಿಫಾ ಎದುರಾದರೂ ಅಭಿವೃದ್ಧಿಯಲ್ಲಿ ಮುನ್ನಡೆದಿದ್ದೇವೆ ಎಂಬುದು ಸಿಪಿಐ (ಎಂ) ಸರಕಾರದ ವಿವರಣೆ.

ವಯನಾಡು ಟೌನ್‌ಶಿಪ್‌ ಅಭಿವೃದ್ಧಿ, ವಯನಾಡು ಬೆಟ್ಟ ಪ್ರದೇಶದಲ್ಲಿ ರಸ್ತೆ ಸಂಪರ್ಕ, ಪೆರುಂಬಲಮ್‌ ಸೇತುವೆ ನಿರ್ಮಾಣ ಕುರಿತು ಎಡಪಕ್ಷಗಳು ತನ್ನ ಪ್ರಚಾರದಲ್ಲಿ ಹೆಚ್ಚಾಗಿ ಮಾತಾಡುತ್ತಿವೆ. ಎಡಪಕ್ಷಗಳು 2011-16ರ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಆಡಳಿತವನ್ನು ಕತ್ತಲ ದಿನಗಳು ಎಂದು ಜರಿದಿವೆ.

ಕೇರಳ ನೇಟಿವಿಟಿ ಕಾರ್ಡ್‌ ಮಸೂದೆ 2026 ಫೆಬ್ರುವರಿಯಲ್ಲಿ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ಕಡೆ ವಾಲದಂತೆ ತಡೆಯುವುದೇ ಇದರ ಉದ್ದೇಶವಾಗಿದೆ.

ಈ ವಿಧೇಯಕ ಕುರಿತು ಸಿಎಂ ಪಿಣರಾಯಿ ವಿಜಯನ್‌ ಅವರು ಹೇಳುವುದು- ದೇಶದಲ್ಲಿ ಸಮಾಜದ ಒಂದು ವರ್ಗದವರಲ್ಲಿ ಬಹಳ ಆತಂಕವಿದೆ. ಆದರೆ, ಕೇರಳದ ಜನರಿಗೆ ಇಂತಹ ಆತಂಕ ಬೇಡ. ಅವರ ಬಳಿ ನೇಟಿವಿಟಿ ಕಾರ್ಡ್‌ ಇರಲಿದೆ. ನಮ್ಮ ರಾಜ್ಯ ಸದಾ ಸುರಕ್ಷಿತ. ಆದರೆ, ಬಿಜೆಪಿ ಈ ನೇಟಿವಿಟಿ ಕಾರ್ಡ್‌ ಔಚಿತ್ಯವನ್ನೇ ಪ್ರಶ್ನಿಸಿದೆ. ಇಂತಹ ಕಾರ್ಡ್‌ ನೀಡಲು ಕೇರಳ ಸರಕಾರಕ್ಕೆ ಸಂವಿಧಾನಬದ್ದವಾಗಿ ಅಧಿಕಾರವೇ ಇಲ್ಲ. ಪೌರತ್ವ ಕಾಯ್ದೆ ಪ್ರಕಾರ ಇಂತಹ ಅಧಿಕಾರ ಇರುವುದು ಭಾರತ ಸರಕಾರಕ್ಕೆ ಮಾತ್ರ ಎಂದಿದೆ.

ಶಬರಿಮಲೆ ದ್ವಾರಪಾಲಕ ವಿಗ್ರಹದಿಂದ ಹಾಗೂ ಬಾಗಿಲಿನ ಚೌಕಟ್ಟಿನಿಂದ ಚಿನ್ನವನ್ನು ಕದ್ದ ಪ್ರಕರಣ ದೇಶದಲ್ಲೇ ಸದ್ದು ಮಾಡಿತು. ಈ ಪ್ರಕರಣದ ತನಿಖೆ ಮಂದಗತಿಯಲ್ಲಿ ಸಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಿರುವನಂತಪುರದಲ್ಲಿ ಈ ಬಗ್ಗೆ ಮಾತಾಡುತ್ತಾ ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ಭಾಗಿಯಾದವರನ್ನು ಶಿಕ್ಷಿಸುತ್ತೇವೆ. ಇದು ಮೋದಿ ಗ್ಯಾರಂಟಿ ಎಂದು ಮಾತು ಕೊಟ್ಟಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಯುಡಿಎಫ್‌ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ಬಡ್ಡಿ ರಹಿತ ಸಾಲ, ಆರೋಗ್ಯ ವಿಮೆ, ಕಾಲೇಜು ವಿದ್ಯಾರ್ಥಿಗಳಿಗೆ ಮಾಸಿಕ ಒಂದು ಸಾವಿರ ರೂಪಾಯಿ ಭತ್ಯೆ, ಸಾಮಾಜಿಕ ಕಲ್ಯಾಣದ ಪಿಂಚಣಿಗಳು ಮೂರು ಸಾವಿರ ರೂಪಾಯಿಗಳಿಗೆ ಏರಿಕೆ -ಇವು ಯುಡಿಎಫ್‌ ಆಶ್ವಾಸನೆಗಳು.

ವಾಮಪಕ್ಷಗಳು ಕಾಂಗ್ರೆಸ್‌ ಆಳ್ವಿಕೆ ಇರುವ ಕರ್ನಾಟಕ, ತೆಲಂಗಾಣ, ಹಿಮಾಚಲಪ್ರದೇಶದಲ್ಲಿ ಗ್ಯಾರಂಟಿ ಯೋಜನೆಗಳಿಂದ ಅಲ್ಲಿನ ಸರಕಾರಗಳು ಹೇಗೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿವೆ ಎಂಬುದನ್ನು ಪ್ರಸ್ತಾಪಿಸಿವೆ. ಹೆಸರಾಂತ ಚಲನಚಿತ್ರ ನಟ, ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಸೂಪರ್‌ಸ್ಟಾರ್‌ ಮೋಹನ್‌ ಲಾಲ್‌ ಅವರು ಚುನಾವಣೆ ಹೊಸ್ತಿಲಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಸಂದರ್ಶನ ನಡೆಸಿರುವುದು ಕಳೆದ ತಿಂಗಳು ಪ್ರಸಾರವಾಯಿತು. ಈ ಸಂದರ್ಶನ ವ್ಯಾಪಕವಾಗಿ ಸದ್ದು ಮಾಡಿದೆ.

ಈ ಸಂದರ್ಶನದ ಶೀರ್ಷಿಕೆ ಇರುವರ್‌ ( ಇಬ್ಬರು). ಪಿಣರಾಯಿ ವಿಜಯನ್‌ ಹಾಗೂ ಮೋಹನ್‌ ಲಾಲ್‌ ಅವರ ನಡುವಿನ ಮಾತುಕತೆ ಈ ಸಂದರ್ಶನ. ಚುನಾವಣೆಯ ಹೊಸ್ತಿಲಲ್ಲಿ ಇದಕ್ಕೆ ಮಹತ್ವ. ಇಲ್ಲಿ ಪಿಣರಾಯಿ ವಿಜಯನ್‌ ಅವರ ವ್ಯಕ್ತಿತ್ವದ ಮತ್ತೊಂದು ಮುಖದ ಪರಿಚಯ. ಪಿಣರಾಯಿ ವಿಜಯನ್‌ ಅವರನ್ನು ಕಟ್ಟಾ ಕಮ್ಯುನಿಸ್ಟ್‌ ಎಂಬ ಇಮೇಜಿನಿಂದ ಹೊರತಂದು ವ್ಯಕ್ತಿಯಾಗಿ ಅವರು ಹೇಗಿದ್ದಾರೆ ಎಂದು ಬಿಂಬಿಸುವ ಪ್ರಯತ್ನ.

ಪಿಣರಾಯಿ ವಿಜಯನ್‌ ಬಾಲ್ಯದಲ್ಲಿ ರಾಮಾಯಣ, ಮಹಾಭಾರತವನ್ನು ಓದುತ್ತಾ ಬೆಳೆದವರು. ಈ ಸಂದರ್ಶನದಲ್ಲಿ ಪಿಣರಾಯಿ ವಿಜಯನ್‌ ಅವರೇ ಹೇಳಿಕೊಂಡಿರುವಂತೆ ಇದು ಅವರ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಿದೆ. ಈ ಸಂದರ್ಶನದಲ್ಲಿ ಪಿಣರಾಯಿ ವಿಜಯನ್‌ ಉಪನಿಷತ್ತಿನ ಕೆಲವು ಸಾಲುಗಳನ್ನು ಉಲ್ಲೇಖಿಸಿದ್ದಾರೆ. ಧಾರ್ಮಿಕ ಶ್ರದ್ಧೆಯ ಕುಟುಂಬದಲ್ಲಿ ತಾವು ಬೆಳೆದಿದ್ದನ್ನು ವಿವರಿಸಿದ್ದಾರೆ.

ಪಿಣರಾಯಿ ವಿಜಯನ್‌ ಅವರ ತಂದೆ-ತಾಯಿಗೆ 14 ಮಂದಿ ಮಕ್ಕಳು. ಪಿಣರಾಯಿ ವಿಜಯನ್‌ ಅವರೇ ಕೊನೆಯವರು. ಒಡಹುಟ್ಟಿದ 11 ಮಂದಿ ಸಣ್ಣ ವಯಸ್ಸಿನಲ್ಲಿಯೇ ತೀರಿಕೊಂಡರು. ಈಗ ಅವರ ಇಬ್ಬರು ಹಿರಿಯ ಸಹೋದರರು ಇದ್ದಾರೆ. ಬಡತನದಲ್ಲಿ ಬೆಳೆದವರು. ಸಣ್ಣ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡವರು.

Left party, congress, BJP flag (file photo)
ಹೈಕಮಾಂಡ್‌ ಮೌನ ವಹಿಸಿದಷ್ಟು ಹಾನಿ ಅಧಿಕ (ನೇರ ನೋಟ)

ಪಿಣರಾಯಿ ವಿಜಯನ್‌ ಶಾಲಾ ಶಿಕ್ಷಣದ ನಂತರ ಹೊಟ್ಟೆಪಾಡಿಗೆ ಕೈಮಗ್ಗ ನೇಯ್ಗೆಯಲ್ಲಿ ದುಡಿದವರು. ನಂತರ ಕಾಲೇಜು ವಿದ್ಯಾಭ್ಯಾಸಕ್ಕೆ ಸೇರಿ ಬಿಎ ಪದವೀಧರರಾದರು. ಕಾಲೇಜು ವಿದ್ಯಾಭ್ಯಾಸದಲ್ಲೇ ವಿದ್ಯಾರ್ಥಿ ನಾಯಕರಾಗಿ ಹೊರಹೊಮ್ಮಿದವರು. ವಿದ್ಯಾರ್ಥಿಗಳ ಸಂಘಟನೆ ಎಸ್‌ಎಫ್‌ಐನಲ್ಲಿದ್ದವರು. ಪಿಣರಾಯಿ ಮೊದಲ ಬಾರಿಗೆ 1970ರಲ್ಲಿ ಕುತುಪರಂಬ ಕ್ಷೇತ್ರದಲ್ಲಿ ಗೆದ್ದು ಶಾಸಕರಾದಾಗ ಅವರ ಮನೆಗೆ ವಿದ್ಯುತ್‌ ಸಂಪರ್ಕವೇ ಇರಲಿಲ್ಲ.

ವಿಜಯನ್‌ 1977, 1991, 1996, 2016ರಲ್ಲಿ ಗೆದ್ದು ಶಾಸಕರಾದರು. ಪ್ರತಿ ಬಾರಿಯೂ ಅವರ ಗೆಲುವಿನ ಮತಗಳ ಅಂತರ ಹೆಚ್ಚಾಗುತ್ತಲೇ ಹೋಯಿತು. ವಿಜಯನ್‌ ಪಕ್ಷದ ಸಂಘಟನೆಯಲ್ಲಿ ತಳಮಟ್ಟದಿಂದಲೂ ದುಡಿಮೆ. ಸಂಘಟನೆಯಲ್ಲಿ ನಿಸ್ಸೀಮರು. ಸಿಪಿಐ (ಎಂ) ಪಾಲಿಟ್‌ ಬ್ಯೂರೋ ಸದಸ್ಯರು. ಕಮ್ಯುನಿಸ್ಟ್‌ ಪಕ್ಷದ ಹಿರಿಯ ನಾಯಕ ಎ.ಕೆ.ಗೋಪಾಲನ್‌ ಅವರ ರೋಲ್‌ ಮಾಡೆಲ್‌.

ವಿಜಯನ್‌ ಮೊದಲ ಬಾರಿಗೆ 1996ರಲ್ಲಿ ಇ.ಕೆ.ನಯನಾರ್‌ ಸಂಪುಟದಲ್ಲಿ ಸಚಿವರು. ವಿದ್ಯುತ್‌ ಹಾಗೂ ಸಹಕಾರ ಖಾತೆ ಅವರ ಹೆಗಲಿಗೆ. ಯಾರ ಮನೆಯಲ್ಲಿ ಒಂದು ಕಾಲದಲ್ಲಿ ವಿದ್ಯುತ್‌ ಸಂಪರ್ಕವೇ ಇರಲಿಲ್ಲವೋ ಅವರು ವಿದ್ಯುತ್‌ ಸಚಿವರಾಗಿದ್ದರು. ಇದು ಪ್ರಜಾಪ್ರಭುತ್ವದ ಸೌಂದರ್ಯ. ಕೇರಳದಲ್ಲಿ ಈ ಬಾರಿಯ ಚುನಾವಣೆಗೆ ಎಲ್‌ಡಿಎಫ್ ಘೋಷಣೆ - ‘ಮಟ್ಯಾರುಂಡ್‌ ಎಲ್‌ಡಿಎಫ್‌ ಅಲ್ಲಾದೇ?’ ( ಎಲ್‌ಡಿಎಫ್‌ ಅಲ್ಲದೇ ಮತ್ಯಾರಿದ್ದಾರೆ?) ಕೇರಳದ ಜನರು ತೀರ್ಮಾನಿಸಬೇಕು.

- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com