

ತನ್ನ ಅತ್ಯಂತ ಕನಿಷ್ಠ ಅಗಲದ ಬಿಂದುವಿನಲ್ಲಿ ಕೇವಲ 33 ಅಡಿಗಳಷ್ಟು ಮಾತ್ರವೇ ಅಗಲವಿರುವ ಒಂದು ಕಿರಿದಾದ ಜಲಮಾರ್ಗವನ್ನು ಊಹಿಸಿಕೊಳ್ಳಿ. ಜಗತ್ತಿನ ಒಟ್ಟು ವ್ಯಾಪಾರದ ಐದನೇ ಒಂದು ಭಾಗದಷ್ಟು ಕಚ್ಚಾ ತೈಲ ಪ್ರತಿದಿನವೂ ಇದೇ ಜಲಮಾರ್ಗದಲ್ಲಿ ಹಾದುಹೋಗುವುದನ್ನು ಕಲ್ಪಿಸಿ. ನಮ್ಮ ಕಾರುಗಳಿಗೆ ಬೇಕಾದ ಇಂಧನ, ಅಡುಗೆಮನೆಗೆ ಬೇಕಾದ ಅನಿಲ, ಕಾರ್ಖಾನೆಗಳಿಗೆ ಬೇಕಾದ ಇಂಧನ, ಎಲ್ಲವನ್ನೂ ಸಾಗಿಸುವ ಟ್ಯಾಂಕರ್ಗಳು ಈ ಸಣ್ಣ ಮಾರ್ಗದ ಮೂಲಕವೇ ಹಾದು ಹೋಗುತ್ತವೆ. ಆದರೆ, ಈಗ ಈ ಜಲಮಾರ್ಗ ಬಹುತೇಕ ಮುಚ್ಚಲ್ಪಟ್ಟರೆ ಹೇಗಾಗಬಹುದು? ಇಂದು ಹೊರ್ಮುಸ್ ಜಲಸಂಧಿಯಲ್ಲಿ ವಾಸ್ತವವಾಗಿ ಇಂತಹದ್ದೇ ಬೆಳವಣಿಗೆ ತಲೆದೋರಿದ್ದು, ಅಮೆರಿಕ ತನ್ನ ಸಾವಿರಾರು ಅತ್ಯಂತ ಶಕ್ತಿಶಾಲಿ ಯೋಧರು ಮತ್ತು ಆಯುಧಗಳನ್ನು ಅಲ್ಲಿಗೆ ರವಾನಿಸುತ್ತಿದೆ.
ಅಮೆರಿಕದ ಭದ್ರತಾ ಮುಖ್ಯ ನೆಲೆಯಾದ ಪೆಂಟಗನ್ ಈಗಾಗಲೇ ಸ್ಯಾನ್ ಡಿಯಾಗೋದಿಂದ 2,000ಕ್ಕೂ ಹೆಚ್ಚು ಯುಎಸ್ ಮರೀನ್ಗಳನ್ನು ಯುಎಸ್ಎಸ್ ಬಾಕ್ಸರ್ ಎನ್ನುವ ಯುದ್ಧ ನೌಕೆಯಲ್ಲಿ ನೇರವಾಗಿ ಮಧ್ಯ ಪೂರ್ವಕ್ಕೆ ಕಳುಹಿಸಿದೆ. ಇದೇ ಸಮಯದಲ್ಲಿ, ಜಪಾನಿನ ಓಕಿನಾವಾದಿಂದ ಯುಎಸ್ಎಸ್ ಟ್ರಿಪೋಲಿ ಯುದ್ಧ ನೌಕೆಯ ಮೂಲಕ 2,200 ಮರೀನ್ಗಳನ್ನು ನೇರವಾಗಿ ಮಧ್ಯ ಪೂರ್ವಕ್ಕೆ ಕಳುಹಿಸಲಾಗುತ್ತಿದೆ. ಹಾಗೆಂದು ಇವರು ಯಾರೋ ನೌಕೆಗಳಲ್ಲಿ ರವಾನೆಯಾಗುತ್ತಿರುವ ಸಾಮಾನ್ಯ ಯೋಧರಲ್ಲ. ಇವರ ಪ್ರತಿಯೊಂದು ಗುಂಪೂ ಸ್ಟೆಲ್ತ್ ಯುದ್ಧ ವಿಮಾನಗಳು, ಬಲವಾದ ಆರ್ಟಿಲರಿ ಗನ್ಗಳು, ಹೆಲಿಕಾಪ್ಟರ್ ಗನ್ಶಿಪ್ಗಳು, ಮೊಬೈಲ್ ರಾಕೆಟ್ ಲಾಂಚರ್ಗಳು, ಆ್ಯಂಟಿ ಶಿಪ್ ಕ್ಷಿಪಣಿಗಳು, ಮತ್ತು ಡ್ರೋನ್ಗಳನ್ನು ಪತ್ತೆಹಚ್ಚಿ ನಾಶಪಡಿಸುವ ವಿಶೇಷ ವ್ಯವಸ್ಥೆಗಳನ್ನು ಹೊಂದಿದೆ. ಇದನ್ನು ಒಂದು ರೀತಿಯಲ್ಲಿ ತೇಲುವ ಸೇನಾ ನೆಲೆ ಎಂದುಕೊಳ್ಳಬಹುದು. ಈ ನೆಲೆ ಸಮಯ ಸಂದರ್ಭ ಬಂದಾಗ ಹೋರಾಡಲು ಸದಾ ಸಿದ್ಧವಾಗಿರುತ್ತದೆ.
ಇದೆಲ್ಲ ಬೆಳವಣಿಗೆ ಏಕೆ ನಡೆಯುತ್ತಿದೆ? ಯಾಕೆಂದರೆ, ಇರಾನ್ ಹೊರ್ಮುಸ್ ಜಲಸಂಧಿಯ ಮೂಲಕ ಹಾದು ಹೋಗುತ್ತಿರುವ ಸರಕು ಸಾಗಾಣಿಕಾ ಹಡಗುಗಳ ಮೇಲೆ ಡ್ರೋನ್ಗಳು ಮತ್ತು ಕ್ಷಿಪಣಿಗಳನ್ನು ಬಳಸಿಕೊಂಡು ದಾಳಿ ಮಾಡುತ್ತಿತ್ತು. ಇದರ ಪರಿಣಾಮವಾಗಿ, ಹೊರ್ಮುಸ್ ಜಲಸಂಧಿಯ ಮಹತ್ವದ ಜಲಮಾರ್ಗದ ಮೂಲಕ ಸಾಗುವ ನೌಕೆಗಳ ಪ್ರಮಾಣ 95% ಕಡಿಮೆಯಾಗಿದೆ. ಸಾವಿರಾರು ಸಾಗಾಣಿಕಾ ಹಡಗುಗಳು ಇಂದು ಚಲಿಸಲು ಸಾಧ್ಯವಾಗದೆ ಸಮುದ್ರದಲ್ಲೇ ಬಾಕಿಯಾಗಿವೆ. ಜಗತ್ತಿನ ತೈಲ ಪೂರೈಕೆ ಸರಪಳಿ ಸಂಕಷ್ಟಕ್ಕೆ ಸಿಲುಕಿದೆ. ಇದೆಲ್ಲ ಬೆಳವಣಿಗೆಗಳು ಸಹಜವಾಗಿಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೊಚ್ಚಿಗೇಳುವಂತೆ ಮಾಡಿದೆ.
ಕಳೆದ ಮೂರು ವಾರಗಳ ಅವಧಿಯಲ್ಲಿ, ಅಮೆರಿಕದ ಯುದ್ಧ ವಿಮಾನಗಳು ಮತ್ತು ನೌಕಾ ಪಡೆಗಳು ಇರಾನಿನ ಕ್ಷಿಪಣಿ ಸಂಗ್ರಹಣಾ ತಾಣಗಳು, ನೌಕಾ ನೆಲೆಗಳು ಮತ್ತು ಡ್ರೋನ್ ಉಡಾವಣಾ ತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿವೆ. ಅಮೆರಿಕನ್ ಮಿಲಿಟರಿ ತಾನು ಈಗಾಗಲೇ ಇರಾನಿನ ಸಂಪೂರ್ಣ ಯುದ್ಧ ನೌಕೆಗಳನ್ನು, ಅದರ ಎಲ್ಲಾ 11 ಸಬ್ಮರೀನ್ಗಳನ್ನು, ಮತ್ತು ಸಮುದ್ರದಲ್ಲಿ ಮೈನ್ಗಳನ್ನು ಹರಡಲು ಬಳಕೆಯಾಗುತ್ತಿದ್ದ 44 ಬೋಟ್ಗಳನ್ನು ನಾಶಪಡಿಸಿದೆ. ಸಮುದ್ರ ಮೈನ್ ಎನ್ನುವುದು ನೀರಿನಾಳದಲ್ಲಿ ಇಡುವ ಸ್ಫೋಟಕ ಉಪಕರಣಗಳಾಗಿದ್ದು, ತನ್ನ ಮೂಲಕ ಸಾಗಿ ಹೋಗುವ ಹಡಗುಗಳನ್ನು ಸ್ಫೋಟಿಸುತ್ತದೆ. ಈ ಕಾರ್ಯಾಚರಣೆಯಲ್ಲಿ ಅಮೆರಿಕ ಅಸಾಧಾರಣ ಸಾಧನೆಯನ್ನೇ ಮಾಡಿರುವಂತೆ ಕಂಡರೂ, ಈ ಸಮಸ್ಯೆ ಮಾತ್ರ ಸದ್ಯಕ್ಕೆ ಮುಗಿಯುವಂತೆ ಕಾಣುವುದಿಲ್ಲ.
ಇರಾನಿನ ಮಹತ್ವದ ಮಿಲಿಟರಿ ಪಡೆಯಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಅಥವಾ ಐಆರ್ಜಿಸಿ ಬಳಿ ಇನ್ನೂ 5,000 - 6,000 ಸಣ್ಣದಾದ, ವೇಗದ ದಾಳಿ ನಡೆಸುವ ಸ್ಪೀಡ್ ಬೋಟ್ಗಳಿವೆ. ಅವುಗಳಲ್ಲಿ ಬಹಳಷ್ಟು ಬೋಟ್ಗಳನ್ನು ಇರಾನಿನ ದಕ್ಷಿಣ ಕರಾವಳಿ ಪ್ರದೇಶದಲ್ಲಿರುವ ನೆಲದಾಳದ ಟನೆಲ್ಗಳು ಮತ್ತು ಬಂಕರ್ಗಳಲ್ಲಿ ಬಚ್ಚಿಡಲಾಗಿದೆ. ಆ ಸ್ಥಳಗಳನ್ನು ಪತ್ತೆಹಚ್ಚಿ, ಆಗಸದಿಂದಲೇ ಬಾಂಬ್ ದಾಳಿ ನಡೆಸುವುದು ಅತ್ಯಂತ ಕಷ್ಟಕರವಾಗಿದೆ. ಈ ಸಣ್ಣ ಬೋಟ್ಗಳು ರಾತ್ರಿಯ ವೇಳೆ ಮೌನವಾಗಿಯೇ ಹೊರ ಸಾಗಿ, ನೀರಿನಾಳದಲ್ಲಿ ಮೈನ್ಗಳನ್ನು ಹರಡಿ, ಅವುಗಳನ್ನು ಯಾರಾದರೂ ತಡೆಯುವ ಮುನ್ನವೇ ಅಲ್ಲಿಂದ ಪರಾರಿಯಾಗುತ್ತವೆ. ಕೆಳ ಹಂತದಲ್ಲಿ ಸಾಗುವ ಯುದ್ಧ ವಿಮಾನಗಳು ಮತ್ತು ಅಪಾಚೆ ದಾಳಿ ಹೆಲಿಕಾಪ್ಟರ್ಗಳು ಸೇರಿದಂತೆ, ಅಮೆರಿಕದ ಎಲ್ಲ ವಾಯುದಾಳಿಗಳು ಈ ಬೋಟ್ಗಳ ಮೇಲೆ ದಾಳಿ ನಡೆಸಿದರೂ, ಇಲ್ಲಿಯ ತನಕ ಈ ಅಪಾಯವನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಿಲ್ಲ.
ಆದ್ದರಿಂದ ಈಗ ಯುಎಸ್ ಮರೀನ್ಗಳನ್ನು ಬೇರೆಯೇ ರೀತಿಯ ಕಾರ್ಯಾಚರಣೆಗಾಗಿ ಕರೆತರಲಾಗುತ್ತಿದೆ. ಇವರ ಪೈಕಿ ಕೆಲವು ಯೋಧರನ್ನು ವಾಣಿಜ್ಯಿಕ ಹಡಗುಗಳಿಗೆ ರಕ್ಷಣೆ ನೀಡುವ ಸಲುವಾಗಿ, ನೇರವಾಗಿ ಅವುಗಳಲ್ಲೇ ನಿಯೋಜಿಸಲಾಗುತ್ತದೆ. ಇವರು ಡ್ರೋನ್ಗಳನ್ನು ಹೊಡೆದುರುಳಿಸಲು, ಸಂಕೇತಗಳನ್ನು ತಡೆಗಟ್ಟಿ ಡ್ರೋನ್ಗಳು ದಿಕ್ಕು ತಪ್ಪುವಂತೆ ಮಾಡಲು, ಮತ್ತು ಸ್ಪೀಡ್ ಬೋಟ್ ದಾಳಿಗಳಿಂದ ವಾಣಿಜ್ಯಿಕ ಹಡಗುಗಳನ್ನು ರಕ್ಷಿಸಲು ನೆರವಾಗಲಿದ್ದಾರೆ. ಯುಎಸ್ ಮರೀನ್ಗಳನ್ನು ನಿಯೋಜಿಸುವ ಆಲೋಚನೆಯೇ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎನ್ನುವುದನ್ನು ಸೂಚಿಸುತ್ತಿದೆ.
ಇನ್ನು ಶ್ವೇತ ಭವನದ ಒಳಗೆ ಈಗಾಗಲೇ ಇನ್ನೂ ದೊಡ್ಡ ಮತ್ತು ಅಪಾಯಕಾರಿಯಾದ ಯೋಜನೆಯೊಂದನ್ನು ಚರ್ಚಿಸಲಾಗುತ್ತಿದೆ. ಅದೇನೆಂದರೆ, ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವುದು. ಕೇವಲ 8 ಕಿಲೋಮೀಟರ್ ಉದ್ದ ಮತ್ತು 4 ಕಿಲೋಮೀಟರ್ ಅಗಲವಿದ್ದು, ಅಂದಾಜು 20,000ದಿಂದ 30,000 ಜನಸಂಖ್ಯೆ ಹೊಂದಿರುವ ಈ ಸಣ್ಣ ದ್ವೀಪ ಇರಾನಿನ ಪ್ರಮುಖ ತೈಲ ರಫ್ತು ಪ್ರದೇಶವಾಗಿದೆ. ಒಂದು ವೇಳೆ ಅಮೆರಿಕ ಏನಾದರೂ ಈ ದ್ವೀಪದ ನಿಯಂತ್ರಣ ಕೈಗೆತ್ತಿಕೊಂಡರೆ, ಇರಾನ್ ತನ್ನ ಬಹುದೊಡ್ಡ ತೈಲ ಆದಾಯ ಕಳೆದುಕೊಳ್ಳಲಿದೆ. ಕಳೆದ ವಾರ, ಅಮೆರಿಕ ಈ ದ್ವೀಪದಲ್ಲಿದ್ದ 90ಕ್ಕೂ ಹೆಚ್ಚು ಮಿಲಿಟರಿ ಗುರಿಗಳ ಮೇಲೆ ವಾಯು ದಾಳಿ ನಡೆಸಿದ್ದು, ವಾಯು ರಕ್ಷಣಾ ವ್ಯವಸ್ಥೆಗಳು, ನೌಕಾ ನೆಲೆಗಳು, ಮತ್ತು ಮೈನ್ ಸಂಗ್ರಹಾಗಾರಗಳನ್ನು ಗುರಿಯಾಗಿಸಿಕೊಂಡಿದೆ.
ಆದರೆ, ಮರೀನ್ಗಳನ್ನು ಖಾರ್ಗ್ ದ್ವೀಪದ ಮೇಲೆ ಇಳಿಸುವುದು ಒಂದು ಸಂಪೂರ್ಣ ಭಿನ್ನವಾದ ಮತ್ತು ಅತ್ಯಂತ ಅಪಾಯಕಾರಿಯಾದ ಕೆಲಸ ಎಂದು ಮಿಲಿಟರಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ದ್ವೀಪ ಇರಾನಿನ ಮುಖ್ಯ ಕರಾವಳಿಯಿಂದ ಕೇವಲ 25 ಕಿಲೋಮೀಟರ್ ಮಾತ್ರ ದೂರದಲ್ಲಿದ್ದು, ಇಲ್ಲಿಗೆ ಅಮೆರಿಕನ್ ಪಡೆಗಳು ಬಂದಿಳಿದ ಕೆಲವೇ ಕ್ಷಣಗಳಲ್ಲಿ ಇರಾನಿನ ಕ್ಷಿಪಣಿಗಳು, ಡ್ರೋನ್ಗಳು ಮತ್ತು ಸ್ಪೀಡ್ ಬೋಟುಗಳು ತಲುಪಬಲ್ಲವು. ಮರೀನ್ಗಳನ್ನು ಹೊತ್ತ ಯುದ್ಧ ನೌಕೆಗಳು ಇಲ್ಲಿಗೆ ತಲುಪುತ್ತಿದ್ದಂತೆ ಇರಾನಿನ ಆ್ಯಂಟಿ ಶಿಪ್ ಕ್ಷಿಪಣಿಗಳಿಗೆ ತೆರೆಯಲ್ಪಡಬಹುದು. ಒಂದೇ ಒಂದು ಕ್ಷಿಪಣಿ ಇಲ್ಲಿಗೆ ತಲುಪಿದರೂ, ಊಹಿಸಲಸಾಧ್ಯವಾದ ಅನಾಹುತ ಉಂಟಾದೀತು ಎಂದು ಅಮೆರಿಕದ ಮಾಜಿ ರಕ್ಷಣಾ ಅಧಿಕಾರಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ದ್ವೀಪದ ಒಳಗೆ ಮರೀನ್ಗಳನ್ನು ರಕ್ಷಿಸುವ ಸಲುವಾಗಿ ಅಮೆರಿಕನ್ ಯುದ್ಧ ವಿಮಾನಗಳು ಹಗಲು ರಾತ್ರಿ ಎನ್ನದೆ ನಿರಂತರವಾಗಿ ಹಾರಾಟ ನಡೆಸುತ್ತಲೇ ಇರಬೇಕಾಗುತ್ತದೆ. ಪ್ರತಿ ದಾಳಿಯನ್ನು ತಡೆಗಟ್ಟುವ ಸಲುವಾಗಿ, ಇರಾನಿನ ಉಡಾವಣಾ ನೆಲೆಗಳ ಮೇಲೆ ನಿರಂತರವಾಗಿ ಆಕ್ರಮಣ ಮಾಡಬೇಕಾಗುತ್ತದೆ. ಇದು ಒಂದು ರೀತಿಯಲ್ಲಿ ಸುಸ್ತಾಗಿಸುವ, ದುಬಾರಿಯಾದ, ಮತ್ತು ಕೊನೆಯಿಲ್ಲದ ಕಾರ್ಯಾಚರಣೆ ಆಗಬಲ್ಲದು.
ಇನ್ನು ಯುದ್ಧಕ್ಕೆ ತಗುಲಿದ ಮಾನವರ ವೆಚ್ಚವೂ ಕಡಿಮೆ ಏನಲ್ಲ. ಇಲ್ಲಿಯ ತನಕ, 13 ಅಮೆರಿಕನ್ ಯೋಧರು ಮತ್ತು ಏರ್ಮೆನ್ ಹತ್ಯೆಗೀಡಾಗಿದ್ದು, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಬಹುತೇಕರಿಗೆ ಇರಾನಿನ ನೆರೆಯ ದೇಶಗಳಲ್ಲಿ ಇರಾನ್ ನಡೆಸಿದ ಪ್ರತಿದಾಳಿಯ ವೇಳೆ ಗಂಭೀರ ಸ್ವರೂಪದ ತಲೆಯ ಗಾಯಗಳಾಗಿವೆ.
ಇನ್ನು ಅಮೆರಿಕದ ಜನಸಾಮಾನ್ಯರು ಯುದ್ಧದ ಕುರಿತು ಏನಂದುಕೊಂಡಿದ್ದಾರೆ? ಇತ್ತೀಚಿನ ಸಮೀಕ್ಷೆಯ ಪ್ರಕಾರ, ಅಂದಾಜು 65% ಜನರು ಟ್ರಂಪ್ ಇರಾನ್ ಒಳಗೆ ಭೂ ಸೇನೆಯನ್ನು ಕಳುಹಿಸಬಹುದು ಎಂದು ಅಭಿಪ್ರಾಯ ಪಟ್ಟಿದ್ದು, ಕೇವಲ 7% ಜನರು ಮಾತ್ರವೇ ಇದಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಅಂದರೆ, ಜನರು ಈ ಯುದ್ಧ ಯಾವ ದಿಕ್ಕಿನತ್ತ ಹೊರಳುತ್ತಿದೆ ಎನ್ನುವುದನ್ನು ಊಹಿಸಿದ್ದಾರೆ. ಬಹುತೇಕ ಯಾರಿಗೂ ಒಂದು ಪೂರ್ಣ ಪ್ರಮಾಣದ ಭೂ ಯುದ್ಧ ಬೇಕಾಗಿಲ್ಲ.
ಇನ್ನು ಇರಾನ್ ಮುಂದೆ ಹೊರ್ಮುಸ್ ಜಲಸಂಧಿಗೇ ಮೈನ್ಗಳನ್ನು ಅಳವಡಿಸುವ ಆಯ್ಕೆ ಇದ್ದು, ಹೀಗೆ ಮಾಡಿದರೆ ಇರಾನಿನ ತೈಲ ರಫ್ತೂ ತೊಂದರೆಗೆ ಸಿಲುಕಲಿದೆ. ಆದ್ದರಿಂದ ಟ್ರಂಪ್ ಈ ಆಯ್ಕೆಯನ್ನು ಆತ್ಮಹತ್ಯೆಯ ವಿಧಾನ ಎಂದಿದ್ದಾರೆ. ನ್ಯಾಟೋ ಸಹಯೋಗಿಗಳು ಸಹಾಯಕ್ಕೆ ಬರುತ್ತಿಲ್ಲ ಎಂದು ಅವರನ್ನು ಹೇಡಿಗಳು ಎಂದು ಟ್ರಂಪ್ ಟೀಕಿಸಿದ್ದಾರೆ. ಬಳಿಕ ಅಮೆರಿಕಕ್ಕೆ ಯಾರ ನೆರವೂ ಬೇಕಾಗಿಲ್ಲ ಎಂದು ಅವರೇ ಹೇಳಿದ್ದಾರೆ!
ಹೊರ್ಮುಸ್ ಜಲಸಂಧಿ ಕೇವಲ 33 ಕಿಲೋಮೀಟರ್ ಅಗಲವಿದೆ. ಈಗ ಅಮೆರಿಕ ಇದರ ಕುರಿತು ಕೈಗೊಳ್ಳುವ ಮುಂದಿನ ನಿರ್ಧಾರ, ಸಂಪೂರ್ಣ ಜಗತ್ತನ್ನೇ ನಲುಗಿಸಬಲ್ಲದು.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
Advertisement