ರಾಜ್ಯದಲ್ಲಿ ಗಟ್ಟಿಯಾಗುವತ್ತ ಬಿಜೆಪಿ-ಜೆಡಿಎಸ್‌ ಮೈತ್ರಿ (ನೇರ ನೋಟ)

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಗಳು, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳು, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಂಟಿಯಾಗಿ ಸ್ಪರ್ಧಿಸಲು ಬಿಜೆಪಿ-ಜೆಡಿಎಸ್ ಈಗಾಗಲೇ ನಿರ್ಧರಿಸಿದೆ.
Leader of Opposition R Ashoka, Union Minister HD Kumaraswamy, and BJP state president BY Vijayendra address press meet in Bengaluru.
ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿದರು.EPS Photo | Allen Egenuse J
Updated on: 

ಕರ್ನಾಟಕದ ಬಿಜೆಪಿ ಉಸ್ತುವಾರಿಯಾಗಿ ನೇಮಕಗೊಂಡ ನಂತರ ಬೆಂಗಳೂರಿಗೆ ಆಗಮಿಸಿದ್ದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹರೀಶ್‌ ದ್ವಿವೇದಿ ರಾಜ್ಯದ ಮುಖಂಡರಿಗೆ ಒಂದು ಮಾತಂತೂ ಸ್ಪಷ್ಟವಾಗಿ ಹೇಳಿ ಹೋಗಿದ್ದಾರೆ. ಅದು- ವಿಧಾನಸಭಾ ಚುನಾವಣೆಗೆ ಸಜ್ಜಾಗಬೇಕು. ಇದಕ್ಕೂ ಮುನ್ನ ಪಕ್ಷದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳಬೇಕು. ದ್ವಿವೇದಿ ಅವರ ಈ ತಾಕೀತಿನ ನಂತರ ರಾಜ್ಯ ನಾಯಕರು ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ಒಂದು ಕಡೆ ಜೆಡಿಎಸ್‌ ಜೊತೆ ಮೈತ್ರಿಯನ್ನು ಗಟ್ಟಿಮಾಡಿಕೊಳ್ಳಲು ಹೆಜ್ಜೆ ಇಟ್ಟಿದೆ. ಮತ್ತೊಂದೆಡೆ ಪಕ್ಷದ ಚಟುವಟಿಕೆಗಳನ್ನು ಬಿರುಸುಗೊಳಿಸಿ ಸರಕಾರದ ‘ಜನವಿರೋಧಿ ನೀತಿ’ಗಳ ವಿರುದ್ಧ ಪ್ರತಿಭಟನೆ ಚುರುಕುಗೊಳಿಸಿದೆ.

ಹರೀಶ್‌ ದ್ವಿವೇದಿ ರಾಜ್ಯಕ್ಕೆ ಬಂದು ಪಕ್ಷದ ಪ್ರಮುಖರ ಜೊತೆ ಚರ್ಚಿಸಿದ ನಂತರ ಬಿಜೆಪಿಯಲ್ಲಿ ಉತ್ಸಾಹ ಗರಿಗೆದರಿದೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂಬುದು ಹರೀಶ್‌ ದ್ವಿವೇದಿ ಅವರ ಸೂಚನೆ. ಶಿಕ್ಷಕರು, ಪದವೀಧರರ ಕ್ಷೇತ್ರಗಳ ವಿಧಾನಪರಿಷತ್‌ ಚುನಾವಣೆ ಫಲಿತಾಂಶದ ನಂತರ ರಾಜ್ಯ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಚರ್ಚಿಸಿರುವುದು ಮೈತ್ರಿಕೂಟದ ಬಲವರ್ಧನೆಗೆ ಒಂದು ಹೆಜ್ಜೆ. ಈ ಚುನಾವಣಾ ಗೆಲುವು ಎನ್‌ಡಿಎ ಮೈತ್ರಿಕೂಟದಲ್ಲಿ ಆತ್ಮವಿಶ್ವಾಸವನ್ನು ಚಿಮ್ಮಿಸಿದೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಗಳು, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳು, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಂಟಿಯಾಗಿ ಸ್ಪರ್ಧಿಸಲು ಬಿಜೆಪಿ-ಜೆಡಿಎಸ್ ಈಗಾಗಲೇ ನಿರ್ಧರಿಸಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಯಾಗಿ ಸ್ಪರ್ಧಿಸಿದ್ದವು. ಇದು ಯಶಸ್ವಿಯೂ ಆಗಿತ್ತು. ಆದರೆ, ನಂತರದ ದಿನಗಳಲ್ಲಿ ಉಭಯ ಪಕ್ಷಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದ್ದು ಕಡಿಮೆ. ವಿಧಾನಪರಿಷತ್‌ ಚುನಾವಣೆಯಲ್ಲಿ ಎಲ್ಲ ನಾಲ್ಕು ಕ್ಷೇತ್ರಗಳು ಗೆದ್ದ ನಂತರ ಬಿಜೆಪಿಯಲ್ಲಿ ಈಗ ಜೆಡಿಎಸ್‌ ಜೊತೆ ಮೈತ್ರಿ ಗಟ್ಟಿಯಾದರೆ ಮಾತ್ರ 2028ರ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯಬಹುದು ಎಂಬ ನಂಬಿಕೆ ಹುಟ್ಟಿದೆ.

ರಾಜ್ಯ ಬಿಜೆಪಿಯಲ್ಲಿ ಈ ಮೊದಲು ಜೆಡಿಎಸ್ ಜೊತೆ ಮೈತ್ರಿಗೆ ಒಲ್ಲದ ಮನಸ್ಸಿತ್ತು. ಅದರಲ್ಲೂ ಮುಖ್ಯವಾಗಿ ಯಡಿಯೂರಪ್ಪ ಅವರ ಬಣದಲ್ಲಿ ಈ ಮೈತ್ರಿಗೆ ಅಷ್ಟಾಗಿ ಒಲವಿರಲಿಲ್ಲ. ಆದರೆ, ಹೈಕಮಾಂಡ್‌ ನಿರ್ಧಾರದಿಂದಾಗಿ ಮರು ಮಾತಾಡುವಂತಿರಲಿಲ್ಲ. ಆದರೆ, ಈಗ ಯಡಿಯೂರಪ್ಪ ಅವರ ಬಣಕ್ಕೂ ರಾಜ್ಯದಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿಯ ಅನಿವಾರ್ಯತೆ ಅರ್ಥವಾಗಿದೆ.

Leader of Opposition R Ashoka, Union Minister HD Kumaraswamy, and BJP state president BY Vijayendra address press meet in Bengaluru.
ಸ್ಟಿಂಗ್ ಸುಳಿಯಲಿ ಸಿಲುಕುತ್ತಿರುವ ಸರಕಾರ (ನೇರ ನೋಟ)

ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ದಿನಾಂಕ ಯಾವುದೇ ಘಳಿಗೆಯಲ್ಲೂ ಪ್ರಕಟವಾಗಬಹುದು. ಈಕ ಕ್ಷೇತ್ರದಲ್ಲಿ ಎನ್‌ಡಿಎ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದೆ ಎಂದು ಕೇಂದ್ರ ಸಚಿವ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿರುವುದು ಮೈತ್ರಿಕೂಟದ ಮುಂದಿನ ಹೆಜ್ಜೆಗಳಿಗೆ ದಿಕ್ಸೂಚಿ. ಹಿರಿಯೂರಿನಲ್ಲಿ ಕಳೆದ 2023ರಲ್ಲಿ ಕಾಂಗ್ರೆಸ್ಸಿನ ಡಿ.ಸುಧಾಕರ್‌ ಜಯಗಳಿಸಿದ್ದರು. ಸುಧಾಕರ್‌ 92,050 (ಶೇ.46.18), ಬಿಜೆಪಿಯ ಕೆ.ಪೂರ್ಣಿಮಾ 61,728 (ಶೇ.30.97), ಜೆಡಿಎಸ್‌ನ ಎಂ.ರವೀಂದ್ರಪ್ಪ 38,686 (ಶೇ.19.41) ಮತಗಳನ್ನು ಪಡೆದಿದ್ದರು. ಸುಧಾಕರ್‌ ನಂತರ ಸಚಿವರೂ ಆಗಿದ್ದರು. ಅವರ ನಿಧನದಿಂದಾಗಿ ಉಪ ಚುನಾವಣೆ ಎದುರಾಗಿದೆ. ಹಿರಿಯೂರಿನಲ್ಲಿ 1978 ರಿಂದ ಈವರೆಗೆ ಜನತಾದಳ 1994ರಲ್ಲಿ, ಜೆಡಿಎಸ್‌ 2004ರಲ್ಲಿ, ಬಿಜೆಪಿ 2018ರಲ್ಲಿ ಗೆಲುವು ಪಡೆದಿತ್ತು. ಉಳಿದಂತೆ ಕಾಂಗ್ರೆಸ್‌, ಒಮ್ಮೆ2008ರಲ್ಲಿ ಅಂದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಡಿ.ಸುಧಾಕರ್ ಅವರೇ ಗೆದ್ದಿದ್ದರು. ಆಗ ಬಿಜೆಪಿ ಸರಕಾರದಲ್ಲಿ ಸಚಿವರೂ ಆಗಿದ್ದರು.

ಹಿರಿಯೂರು ಉಪ ಚುನಾವಣೆಯಲ್ಲಿ ಎನ್‌ಡಿಎ ಗೆದ್ದರೆ 2028ರ ವಿಧಾನಸಭಾ ಚುನಾವಣೆಗೆ ಈ ಕೂಟಕ್ಕೆ ಶಕ್ತಿ ತುಂಬುತ್ತದೆ. ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟ ಮತ್ತಷ್ಟು ಬಲವಾಗುವುದರಲ್ಲಿ ಸಂಶಯವಿಲ್ಲ. ಏಕಂದರೆ, ಕಾಂಗ್ರೆಸ್‌ನಿಂದ ಈ ಕ್ಷೇತ್ರವನ್ನು ಕಿತ್ತುಕೊಂಡ ಸಾಧನೆ ಎನ್‌ಡಿಎ ಕೂಟದ್ದಾಗುತ್ತದೆ. ಕಾಂಗ್ರೆಸ್‌ನಲ್ಲಿಯೂ ತಳಮಳ ಹೆಚ್ಚಾಗುತ್ತದೆ. ಉಪಚುನಾವಣೆ ಫಲಿತಾಂಶ ಕೆಲವೊಮ್ಮೆ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಬಲ್ಲವು. ಆದರೆ, ಎಲ್ಲ ಸಂದರ್ಭದಲ್ಲೂ ಈ ಮಾತನ್ನು ಹೇಳುವಂತಿಲ್ಲ. ಆದರೆ, ಸಾರ್ವತ್ರಿಕ ಚುನಾವಣೆ ಸಮೀಪದಲ್ಲಿರುವಾಗ ಉಪ ಚುನಾವಣೆಗಳ ಫಲಿತಾಂಶಕ್ಕೆ ಹೆಚ್ಚು ಅರ್ಥ ಉಂಟು. ಮುಖ್ಯಮಂತ್ರಿ ಹುದ್ದೆಯಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದ ನಂತರ ವಿಧಾನಸಭೆಗೆ ನಡೆಯುತ್ತಿರುವ ಮೊದಲ ಉಪ ಚುನಾವಣೆ ಇದು. ಹೀಗಾಗಿ, ಈ ಫಲಿತಾಂಶದ ಸಂದೇಶ ಮಹತ್ವದ್ದು.

ರಾಜ್ಯ ರಾಜಕಾರಣದಲ್ಲಿ ಈಗ ಆಡಳಿತಾರೂಢ ಕಾಂಗ್ರೆಸ್‌ ಸರಕಾರಕ್ಕೆ ಪ್ರಬಲ ಪ್ರತಿಪಕ್ಷ ನಾಯಕರಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೇ ಎಂಬ ಚಿತ್ರಣ ಮೂಡುತ್ತಿದೆ. ಬಿಜೆಪಿ ವಿಧಾನಮಂಡಲದಲ್ಲಿ ಅಧಿಕೃತ ಪ್ರತಿಪಕ್ಷವಾಗಿದ್ದರೂ ಕುಮಾರಸ್ವಾಮಿ ಅವರ ಆಕ್ರಮಣಕಾರಿ ಶೈಲಿಯ ಮುಂದೆ ಬಿಜೆಪಿ ನಾಯಕರು ಹಿಂದೆ ಸರಿಯುವಂತೆ ಆಗಿದೆ. ಕುಮಾರಸ್ವಾಮಿ ಈಗ ರಾಜ್ಯದಲ್ಲೇ ಹೆಚ್ಚು ಕಾಲ ನೆಲೆ ನಿಂತು ಪ್ರತಿದಿನ ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿ ಶಿವಕುಮಾರ್ ವಿರುದ್ಧ ಮುಗಿಬೀಳುತ್ತಿರುವುದನ್ನು ಕಂಡಾಗ ಯಾರಿಗಾದರೂ ಇಂತಹ ಅಭಿಪ್ರಾಯ ಮೂಡುವುದು ಸಹಜ.

ವಿಧಾನಸಭಾ ಚುನಾವಣೆ ಸಮೀಪಿಸಿದಾಗ ಕುಮಾರಸ್ವಾಮಿ ಕೇಂದ್ರ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯ ರಾಜಕಾರಣಕ್ಕೆ ವಾಪಸವಾಗಬಹುದು. ಆದರೆ, ಇದಕ್ಕೆ ಬಿಜೆಪಿ ಹೈಕಮಾಂಡ್‌ ಒಪ್ಪಬೇಕಾಗಬಹುದು. ಏಕೆಂದರೆ, ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ವಾಪಸಾದ ಕೂಡಲೇ ಎನ್‌ಡಿಎ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬ ಪ್ರಶ್ನೆ ಮುನ್ನೆಲೆಗೆ ಬರಲಿದೆ. ಇದು ರಾಜ್ಯ ಬಿಜೆಪಿಯಲ್ಲಿ ತಳಮಳ ಸೃಷ್ಟಿಸುತ್ತದೆ. ಉಭಯ ಪಕ್ಷಗಳ ಕಾರ್ಯಕರ್ತರೂ ಗೊಂದಲದಲ್ಲಿ ಮುಳುಗುತ್ತಾರೆ. ಹೀಗಾಗಿ, ಬಿಜೆಪಿ ಹೈಕಮಾಂಡ್‌ ಎನ್‌ಡಿಎ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಯಾರನ್ನೂ ಹೆಸರಿಸದೇ ಸಾಮೂಹಿಕ ನಾಯಕತ್ವ ಇಲ್ಲವೇ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲೇ ಚುನಾವಣೆ ಎದುರಿಸುವ ಕಾರ್ಯತಂತ್ರಕ್ಕೆ ಮೊರೆ ಹೋಗಬಹುದು. ಅದೊಂದು ರೀತಿ ಎನ್‌ಡಿಎ ರಕ್ಷಣಾತ್ಮಕ ಆಟ.

Leader of Opposition R Ashoka, Union Minister HD Kumaraswamy, and BJP state president BY Vijayendra address press meet in Bengaluru.
ಎನ್‌ಡಿಎ ಆತ್ಮವಿಶ್ವಾಸ ಹೆಚ್ಚಿಸಿದ ವಿಧಾನಪರಿಷತ್‌ ಚುನಾವಣಾ ಫಲಿತಾಂಶ (ನೇರ ನೋಟ)

ಬಿಜೆಪಿಯಲ್ಲೂ ಅಷ್ಟೇ. ಬಿ.ವೈ.ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾಗಿ ಮೂರು ವರ್ಷಗಳು ಕಳೆಯಿತು. ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರಿಸಲಾಗುತ್ತದೆಯೋ ಅಥವಾ ಬೇರೆಯವರಿಗೆ ಪಟ್ಟ ಕಟ್ಟಲಾಗುತ್ತದೆಯೇ ಎಂಬ ಪ್ರಶ್ನೆ ಆ ಪಕ್ಷದ ಕಾರ್ಯಕರ್ತರನ್ನು ಕಾಡಿದೆ. ಆದರೆ, ಪಕ್ಷದಲ್ಲಿ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಬದಲಿಸಿದರೆ ಆಗುವ ಅನುಕೂಲ ಹಾಗೂ ಅನಾನುಕೂಲಗಳ ಬಗ್ಗೆ ಹೈಕಮಾಂಡ್‌ ಅಳೆದು ತೂಗಿ ನೋಡುತ್ತಿದೆ. ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರೆ ಅವರ ತಂದೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಂಭಾಳಿಸುವುದು ಹೇಗೆ ಎಂಬ ಲೆಕ್ಕಾಚಾರದಲ್ಲಿ ಹೈಕಮಾಂಡ್‌ ಇದೆ. ಆದರೆ, ಬಿಜೆಪಿಯಲ್ಲಿ ಈಗಿರುವ ಪರಿಸ್ಥಿತಿಯನ್ನು ಗಮನಿಸಿದರೆ ಅಧ್ಯಕ್ಷ ಸ್ಥಾನಕ್ಕೆ ಜಾತಿ, ಅನುಭವ, ವರ್ಚಸ್ಸು, ಗಟ್ಟಿ ನಾಯಕತ್ವ, ಪ್ರದೇಶವಾರು ಲೆಕ್ಕಾಚಾರದ ಮೇಲೆ ಸಮರ್ಥರ ಆಯ್ಕೆ ಕಷ್ಟವಿದೆ. ಹೀಗಾಗಿ, ವಿಜಯೇಂದ್ರ ಅವರನ್ನೇ ಮುಂದುವರಿಸಿ ಯಡಿಯೂರಪ್ಪ ಅವರನ್ನು ಸಂಭಾಳಿಸುವ ದಾರಿಯನ್ನೇ ಹೈಕಮಾಂಡ್‌ ಕೊನೆಗೆ ಆಯ್ಕೆ ಮಾಡಿಕೊಂಡರೆ ಆಶ್ಚರ್ಯವಿಲ್ಲ.

ಕರ್ನಾಟಕ ವಿಧಾನಸಭೆಗೆ ಚುನಾವಣೆ ಇನ್ನೂ 18 ತಿಂಗಳಿವೆ. ನಿಧಾನವಾಗಿ ಭೂಮಿಕೆ ಸಿದ್ದವಾಗುತ್ತಿದೆ. ಹೀಗೆ ಭೂಮಿಕೆ ಸಿದ್ದಪಡಿಸುವ ಹಂತದಲ್ಲಿ ರಾಜಕೀಯ ಪಕ್ಷಗಳ ನಾಯಕರು ಎದುರಾಳಿಗಳನ್ನು ಟೀಕಿಸುವಾಗ ಪರಸ್ಪರ ಬಳಸುತ್ತಿರುವ ಭಾಷೆ, ವರ್ತನೆಗಳು ರಾಜ್ಯ ರಾಜಕಾರಣ ಅಧೋಗತಿಗೆ ಇಳಿದಿರುವುದಕ್ಕೆ ಸಾಕ್ಷಿಯಾಗಿದೆ.

ಕೇಂದ್ರ ಸಚಿವ ಕುಮಾರಸ್ವಾಮಿ, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಬಳಸುತ್ತಿರುವ ಭಾಷೆ, ಕಾಂಗ್ರೆಸ್‌ ಕಾರ್ಯಕರ್ತರು ವಿಜಯೇಂದ್ರ ಅವರ ಮನೆಯ ಗೋಡೆಯ ಮೇಲೆ ಬರೆದಿದ್ದು, ಛಲವಾದಿ ನಾರಾಯಣಸ್ವಾಮಿ ಅವರ ಮನೆಗೆ ಚಾಕು, ಚೂರಿ ಪಾರ್ಸಲ್‌ ಕಳುಹಿಸಿದ ವರ್ತನೆಗಳು ರಾಜಕೀಯದಲ್ಲಿ ದ್ವೇಷ, ಕೀಳು ಸಂಸ್ಕೃತಿ ಮನೆ ಮಾಡಿರುವುದನ್ನು ಸಾರುತ್ತದೆ. ಕರ್ನಾಟಕ ರಾಜಕಾರಣ ಅಧೋಗತಿ ತಲುಪಿರುವುದಕ್ಕೂ ಸಾಕ್ಷಿಯಾಗಿದೆ. ಸಾರ್ವಜನಿಕ ಜೀವನದಲ್ಲಿ ಸಭ್ಯ ಮಾತು, ನಡುವಳಿಕೆಗಳೇ ಇತ್ತೀಚೆಗೆ ಮಾಯವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ.

Leader of Opposition R Ashoka, Union Minister HD Kumaraswamy, and BJP state president BY Vijayendra address press meet in Bengaluru.
ವಿಧಾನಸಭಾ ಚುನಾವಣೆಗೆ ಹಿಮ್ಮೇಳ ಆರಂಭ (ನೇರ ನೋಟ)

ಇನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಶಿವಕುಮಾರ್ ನಡುವೆ ವಾಕ್ಸಮರ ಕೆಲವು ತಿಂಗಳುಗಳಿಂದ ಮುಂದುವರಿದಿದೆ. ಚುನಾವಣೆ ಸಮೀಪಿಸಿದಾಗ ಇದು ಇನ್ನೂ ಬಿರುಸಾಗುವುದು ಖಚಿತ. ಈ

ವ್ಯಕ್ತಿ ಪ್ರತಿಷ್ಠೆಗಳ ಕಾಳಗದಲ್ಲಿ ಪರಸ್ಪರ ರಾಜಕೀಯ ದ್ವೇಷ ಢಾಳಾಗಿ ಕಾಣಿಸುತ್ತಿದೆ.

ಕಾವೇರಿ ನದಿ ತೀರದ ಪ್ರದೇಶದಲ್ಲಿ ಒಕ್ಕಲಿಗ ಸಮುದಾಯದವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಜೆಡಿಎಸ್‌ಗೆ ರಾಜಕೀಯ ಅಸ್ತಿತ್ವ ಇರುವುದೇ ಈ ಪ್ರದೇಶದಲ್ಲಿ. ಶಿವಕುಮಾರ್ ಅವರೂ ಇದೇ ಪ್ರದೇಶದವರು. ಬೆಂಗಳೂರು ದಕ್ಷಿಣ ಜಿಲ್ಲೆ ಅವರ ರಾಜಕೀಯ ಕರ್ಮಭೂಮಿ. ಶಿವಕುಮಾರ್‌ ಮುಖ್ಯಮಂತ್ರಿಯಾದ ನಂತರ ಒಕ್ಕಲಿಗ ಸಮಾಜದ ಪ್ರಬಲ ನಾಯಕರಾಗಿ ಹೊರಹೊಮ್ಮುವ ಲಕ್ಷಣಗಳು ಗೋಚರಿಸುತ್ತಿವೆ. ಇದು ನೇರವಾಗಿ ಕುಮಾರಸ್ವಾಮಿ ಅವರ ನಾಯಕತ್ವ ಹಾಗೂ ಅವರ ಪಕ್ಷಕ್ಕೆ ಸವಾಲು. ಇದಕ್ಕೆ ತಡೆಯೊಡ್ಡಲು ಕುಮಾರಸ್ವಾಮಿ ಅಖಾಡಕ್ಕೆ ಇಳಿದಿದ್ದಾರೆ. ಅದಕ್ಕಾಗಿಯೇ ಯಾವುದೇ ವಿಚಾರ ಸಿಕ್ಕರೂ ಶಿವಕುಮಾರ್ ವಿರುದ್ಧ ಬಹಿರಂಗ ಸಮರಕ್ಕೆ ಇಳಿಯುತ್ತಿದ್ದಾರೆ. ಪ್ರಾರಂಭದಲ್ಲಿ ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಿದ್ದ ಶಿವಕುಮಾರ್ ಈಗ ಉಪೇಕ್ಷೆ ಮಾಡುತ್ತಿದ್ದಾರೆ. ಇದು ಅವರ ರಾಜಕೀಯ ಕಾರ್ಯತಂತ್ರದ ಒಂದು ಭಾಗವಾಗಿರಬಹುದು. ಇಲ್ಲವೇ ಮುಖ್ಯಮಂತ್ರಿಯಾಗಿ ಎಲ್ಲದ್ದಕ್ಕೂ ಪ್ರತಿಕ್ರಿಯಿಸುತ್ತಾ ಹೋದರೆ ಅಪಾಯ ಮೈಮೇಲೆ ಎಳೆದುಕೊಂಡಂತೆ ಎಂಬ ಮುನ್ನೆಚ್ಚರಿಕೆಯ ಕ್ರಮವಾಗಿರಬಹುದು.

ವಿಧಾನಸಭಾ ಚುನಾವಣೆಗೆ ಭೂಮಿಕೆ ಈ ಬಾರಿ ಬಹುಬೇಗ ಸಿದ್ದವಾಗುತ್ತಿರುವಂತೆ ಕಾಣುತ್ತಿದೆ.

- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X