ಭಾರಿ ಬಿಗಿ ಭದ್ರತೆಯೊಂದಿಗೆ ಕೋಲ್ಕತಾಗೆ ಬಂದಿಳಿದ ಪಾಕ್ ಕ್ರಿಕೆಟ್ ತಂಡ

ಪಾಕಿಸ್ತಾನ ಕ್ರಿಕೆಟ್ ತಂಡ ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಶನಿವಾರ ರಾತ್ರಿ ಕೋಲ್ಕೋತಾಗೆ ಬಂದು ಇಳಿದಿದೆ. ...
ಕೊಲ್ಕೋತಾಗೆ ಬಂದಿಳಿದ ಪಾಕ್ ಕ್ರಿಕೆಟ್ ತಂಡ
ಕೊಲ್ಕೋತಾಗೆ ಬಂದಿಳಿದ ಪಾಕ್ ಕ್ರಿಕೆಟ್ ತಂಡ

ಕೋಲ್ಕತ್ತ: ಪಾಕಿಸ್ತಾನ ಕ್ರಿಕೆಟ್ ತಂಡ ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ  ಶನಿವಾರ ರಾತ್ರಿ ಕೋಲ್ಕೋತಾಗೆ ಬಂದು ಇಳಿದಿದೆ.

ಅಬುಧಾಬಿಯಿಂದ   ಹೊರಟಿದ್ದ 27 ಸದಸ್ಯರನ್ನೊಳಗೊಂಡ ತಂಡ ರಾತ್ರಿ 7.55ರ ಸುಮಾರಿಗೆ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.

ಹದಿನೈದು ಆಟಗಾರರು ಮತ್ತು 12 ಮಂದಿ ಸಹಾಯಕ ಸಿಬ್ಬಂದಿಗಳು ತಂಡದಲ್ಲಿದ್ದಾರೆ. ಪಾಕ್‌ ಮಹಿಳಾ ತಂಡವೂ ಚೆನ್ನೈಗೆ ಬಂದಿಳಿದಿದೆ. ನಿಲ್ದಾಣದಿಂದ  ಹೊರಬಂದ ಆಟಗಾರರು  ತಮ್ಮನ್ನು ಸ್ವಾಗತಿಸಲು  ಸೇರಿದ್ದ ಅಭಿಮಾನಿಗಳತ್ತ ಕೈಬೀಸಿದರು. ಬಳಿಕ ಪೊಲೀಸರು ಭಾರಿ ಬಿಗಿಭದ್ರತೆಯೊಂದಿಗೆ ಆಟಗಾರರನ್ನು ಎರಡು ಬಸ್‌ಗಳಲ್ಲಿ ಹೊಟೇಲ್‌ಗೆ ಕರೆದುಕೊಂಡು ಹೋದರು. ಸಿಐಎಸ್‌ಎಫ್‌ ಮತ್ತು ಬ್ಲಾಕ್‌ ಕಮಾಂಡೊಗಳನ್ನು ನಿಯೋಜಿಸಲಾಗಿತ್ತು.

ಪಾಕ್‌ ತಂಡ ಬುಧವಾರವೇ ಭಾರತಕ್ಕೆ ಬರಬೇಕಿತ್ತು. ಆದರೆ ಭದ್ರತೆಯ ನೆಪವೊಡ್ಡಿ ಅಲ್ಲಿನ ಸರ್ಕಾರ ಆಟಗಾರರಿಗೆ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿರಲಿಲ್ಲ. ಹೀಗಾಗಿ ಶನಿವಾರ ನಿಗದಿಯಾಗಿದ್ದ ಬಂಗಾಳ ಇಲೆವೆನ್‌ ಎದುರಿನ ಮೊದಲ ಅಭ್ಯಾಸ ಪಂದ್ಯ ಕೂಡ ರದ್ದಾಗಿತ್ತು. ಸೋಮವಾರ ನಡೆಯುವ ತನ್ನ ಎರಡನೇ ಅಭ್ಯಾಸ ಪಂದ್ಯದಲ್ಲಿ ಶಾಹಿದ್‌ ಅಫ್ರಿದಿ ನಾಯಕತ್ವದ ತಂಡ ಹಾಲಿ ಚಾಂಪಿಯನ್‌ ಶ್ರೀಲಂಕಾ ತಂಡದ ಸವಾಲು ಎದುರಿಸಲಿದೆ.

ಮಾರ್ಚ್‌ 16 ರಂದು ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯುವ ಸೂಪರ್‌ 10 ಹಂತದ ಪಂದ್ಯದಲ್ಲಿ ಅರ್ಹತಾ ಸುತ್ತಿನಲ್ಲಿ ಗೆಲುವು ಗಳಿಸಿದ ತಂಡದ ವಿರುದ್ಧ ಆಡುವ ಮೂಲಕ ಪಾಕ್‌ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಆ ಬಳಿಕ ಭಾರತ (ಮಾರ್ಚ್‌ 19), ನ್ಯೂಜಿಲೆಂಡ್‌ (ಮಾ.22) ಮತ್ತು ಆಸ್ಟ್ರೇಲಿಯಾ (ಮಾ.25) ವಿರುದ್ಧ ಪೈಪೋಟಿ ನಡೆಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com