
ರಾಂಚಿ: ರಾಂಚಿಯಲ್ಲಿ ನಡೆದ ಭಾರತ-ನ್ಯೂಜಿಲ್ಯಾಂಡ್ ನಡುವಿನ 4 ನೇ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ನ್ಯೂಜಿಲ್ಯಾಂಡ್ ಗೆ ರೋಚಕ ಜಯ ದೊರೆತಿದ್ದು, ಕಿವೀಸ್ ಪಡೆ ಏಕದಿನ ಸರಣಿಯಲ್ಲಿ ಸಮಬಲ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, ಭಾರತ ಗೆಲ್ಲಲು 261ರನ್ ಗಳ ಟಾರ್ಗೆಟ್ ನೀಡಿತ್ತು. ನ್ಯೂಜಿಲ್ಯಾಂಡ್ ತಂಡ ನೀಡಿದ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ನ್ಯೂಜಿಲ್ಯಾಂಡ್‌ನ ವೇಗಿ ಟಿಮ್ ಸೌಥಿ ಆರಂಭಿಕ ಆಘಾತ ನೀಡಿದರು. ಭಾರತ ತಂಡ ಕೇವಲ 19 ರನ್ ಗಳನ್ನು ಗಳಿಸಿದ್ದಾಗ ಆರಂಭಿಕ ಆಟಗಾರ ರೋಹಿತ್ ಶರ್ಮಾ ಸೌಥಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ನಡೆದರು.
ನಂತರ ಬಂದ ವಿರಾಟ್ ಕೊಹ್ಲಿ 45 ರನ್ ಗಳಿಸಿ ಸೌಥಿಗೆ ವಿಕೆಟ್ ಒಪ್ಪಿಸುವ ಮೂಲಕ ತಮ್ಮ ಮೇಲಿದ್ದ ನಿರೀಕ್ಷೆಯನ್ನು ಹುಸಿಗೊಳಿಸಿದರು. ನಂತರ ಬ್ಯಾಟ್ಸ್ ಮ್ಯಾನ್ ಗಳು ನ್ಯೂಜಿಲ್ಯಾಂಡ್ ಬೌಲರ್ ಗಳ ದಾಳಿಗೆ ತತ್ತರಿಸಿದ ಪರಿಣಾಮ ಭಾರತ 33 ಓವರ್ ಗಳಿಗೆ ಕೇವಲ 154 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿತು.
40 ನೇ ಓವರ್ ವೇಳೆಗೆ ಭಾರತ ತನ್ನ ಪ್ರಮುಖ 7 ವಿಕೆಟ್ ಗಳನ್ನು ಕೆಳೆದುಕೊಂಡು ಕೇವಲ 195 ರನ್ ಗಳನ್ನಷ್ಟೇ ಕಲೆಹಾಕಲು ಸಾಧ್ಯವಾಯಿತು. 43 ನೇ ಓವರ್ ವೇಳೆಗೆ 9 ವಿಕೆಟ್ ಗಳನ್ನು ಕಳೆದುಕೊಂಡು 207 ರನ್ ಗಳಿಸಿದ್ದ ಭಾರತ ಬಹುತೇಕ ಸೋಲಿನ ಹಂತಕ್ಕೆ ತಲುಪಿತ್ತು. ಧವಳ್ ಕುಲಕರ್ಣಿ ಹಾಗು ಉಮೇಶ್ ಯಾದವ್ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಲು ಯತ್ನಿಸಿದರಾದರೂ ಗುರಿಯನ್ನು ತಲುಪಲು 19 ರನ್ ಗಳಿರಬೇಕಾದರೆ ವಿಕೆಟ್ ಒಪ್ಪಿಸಿ ಭಾರತದ ಗೆಲುವಿನ ಕನಸನ್ನು ಭಗ್ನಗೊಳಿಸಿದರು. ನ್ಯೂಜಿಲ್ಯಾಂಡ್ ಪರ ಟಿಮ್ ಸೌಥಿ 3 ವಿಕೆಟ್, ಜೇಮ್ಸ್ ನಿಸಾಮ್ ಹಾಗು ಟ್ರೆಂಡ್ ಬೌಲ್ಟ್ ಗೆ ತಲಾ ಎರಡು ವಿಕೆಟ್ ದೊರೆತರೆ, ಮಿಶೆಲ್ ಸಾಂಟ್ನರ್, ಈಶ್ ಸೋಧಿ ತಲಾ ಒಂದು ವಿಕೆಟ್ ಪಡೆದರು. ಭಾರತದ ವಿರುದ್ಧ 4 ನೇ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿರುವ ನ್ಯೂಜಿಲ್ಯಾಂಡ್ 2-2 ಅಂತರದಿಂದ ಸರಣಿಯಲ್ಲಿ ಸಮಬಲ ಸಾಧಿಸಿದೆ.
Advertisement