ನವದೆಹಲಿ: ದುಲೀಪ್ ಟ್ರೋಫಿ ಕ್ರಿಕೆಟ್ ವೇಳಾಪಟ್ಟಿ ಪ್ರಕಟವಾಗಿದೆ. ಟೂರ್ನಿಯಲ್ಲಿ ಆಡಲಿರುವ ಇಂಡಿಯಾ ಬ್ಲೂ ತಂಡಕ್ಕೆ ಭಾರತ ತಂಡದ ಕ್ರಿಕೆಟಿಗ ಸುರೇಶ್ ರೈನಾ ನಾಯಕರಾಗಿದ್ದಾರೆ..
ಸೆ.7ರಿಂದ 29ರವರೆಗೆ ದುಲೀಪ್ ಟ್ರೋಫಿ ಟೂರ್ನಿಯ ಪಂದ್ಯಗಳು ಕಾನ್ಪುರ ಹಾಗೂ ಲಖನೌದಲ್ಲಿ ನಡೆಯಲಿವೆ. ಎರಡೂ ಸ್ಥಳಗಳಲ್ಲಿ ಕ್ರಮವಾಗಿ ಎರಡು ಪಂದ್ಯಗಳು ಆಯೋಜನೆಗೊಂಡಿವೆ.
2015ರ ಅಕ್ಟೋಬರ್ ನಿಂದಲೂ ಸುರೇಶ್ ರೈನಾ ಭಾರತದ ಏಕದಿನ ತಂಡದಿಂದ ಹೊರಗುಳಿದಿದ್ದಾರೆ. ಇದೀಗ ದುಲೀಪ್ ಟ್ರೋಫಿಯಲ್ಲಿ ನಾಯಕ ಸ್ಥಾನ ನಿಭಾಯಿಸುವ ಮೂಲಕ ಭಾರತ ತಂಡಕ್ಕೆ ಮರಳುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿಯೂ ರೈನಾ ಗೆ ಸ್ಥಾನ ಸಿಕ್ಕಿರಲಿಲ್ಲ. ಆಸ್ಟ್ರೇಲಿಯಾ ವಿರುದ್ಧ ಸೆ.17ರಿಂದ ಆರಂಭವಾಗುವ ಏಕದಿನ ಸರಣಿಯಲ್ಲಿ ಸ್ಥಾನ ಗಿಟ್ಟಿಸಲು ರೈನಾಗೆ ಇದು ಉತ್ತಮ ಅವಕಾಶ ಎನ್ನಲಾಗಿದೆ.
ಇನ್ನು ಗಾಯದ ಸಮಸ್ಯೆಯಿಂದ ಭಾರತ ತಂಡದಲ್ಲಿ ಅವಕಾಶ ಪಡೆಯದ ಮುರಳಿ ವಿಜಯ್ ಸಹ ಇಲ್ಲಿ ಅವಕಾಶ ಗಿಟ್ಟಿಸಿದ್ದಾರೆ. ವಿಜಯ್ ಇಂಡಿಯಾ ಗ್ರೀನ್ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಈ ತಂಡದ ಸಾರಥ್ಯವನ್ನು ಪಾರ್ಥಿವ್ ಪಟೇಲ್ ವಹಿಸಲಿದ್ದಾರೆ. ಗಾಲೆನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಡಿದ್ದ ಅಭಿನವ್ ಮುಕುಂದ್ ಇಂಡಿಯಾ ರೆಡ್ ತಂಡದ ನಾಯಕರಾಗಿದ್ದಾರೆ.
ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಮುಂದಾಳತ್ವದಲ್ಲಿ ದುಲೀಪ್ ಟ್ರೋಫಿ ವೇಳಾಪಟ್ಟಿ ಹಾಗೂ ತಂಡವನ್ನು ಅಂತಿಮಗೊಳಿಸಲಾಗಿದೆ. ಐದು ದಿನಗಳ ಫೈನಲ್ ಪಂದ್ಯ ಸೆಪ್ಟೆಂಬರ್ 25ರಿಂದ 29ರವರೆಗೆ ಉತ್ತರಪ್ರದೇಶದಲ್ಲಿ ನಡೆಯಲಿದೆ. ಸರಣಿಯಲ್ಲಿ ಒಟ್ಟು 45 ಕ್ರಿಕೆಟಿಗರು ಆಡಲಿದ್ದಾರೆ.