2017ರ ಕ್ರಿಕೆಟ್‌ನ ಪ್ರಮುಖ ಘಟನಾವಳಿಗಳು

ಕಳೆದ ಜುಲೈನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ ಲಂಕಾ ವಿರುದ್ಧದ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಗಳಲ್ಲಿ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಮೊದಲ ಬಾರಿಗೆ ಸಾಗರೋತ್ತರ ಕ್ರಿಕೆಟ್ ಸರಣಿ ಗೆದ್ದ ಭಾರತ
ಕಳೆದ ಜುಲೈನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ ಲಂಕಾ ವಿರುದ್ಧದ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಗಳಲ್ಲಿ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಸಾಗರೋತ್ತರ ಕ್ರಿಕೆಟ್ ಸರಣಿಯನ್ನು ಗೆದ್ದು ವಿಶ್ವದಾಖಲೆ ಮಾಡಿತ್ತು. ಲಂಕಾ ವಿರುದ್ಧ ಮೂರು ಟೆಸ್ಟ್ ಪಂದ್ಯ, ಐದು ಏಕದಿನ ಪಂದ್ಯ ಹಾಗೂ ಒಂದು ಟಿ20 ಪಂದ್ಯ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿತ್ತು. 
ಚೊಚ್ಚಲ ಚಾಂಪಿಯನ್ಸ್ ಟ್ರೋಫಿ ಗೆದ್ದ ಪಾಕ್
2017ರ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಇಂಗ್ಲೆಂಡ್ ಆತಿಥ್ಯವಹಿಸಿತ್ತು. ಇಂಗ್ಲೆಂಡ್ ನ ಕೆನ್ನಿಂಗ್ ಟನ್ ಓವಲ್ ಮೈದಾನದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದಿತ್ತು. ಈ ಪಂದ್ಯದಲ್ಲಿ ಪಾಕ್ ಗೆಲುವಿನ ನಗೆ ಬೀರುವ ಮೂಲಕ ಚೊಚ್ಚಲ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದು ಬೀಗಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 50 ಓವರ್ ಗಳಲ್ಲಿ 338 ರನ್ ಗಳ ಬೃಹತ್ ರನ್ ಕಲೆ ಹಾಕಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಟೀಂ ಇಂಡಿಯಾ 33.3 ಓವರ್ ಗಳಲ್ಲಿ 158 ರನ್ ಗಳಿಗೆ ಆಲೌಟ್ ಆಗುವ ಮೂಲಕ ಭಾರಿ ಅಂತರದಿಂದ ಸೋಲು ಕಂಡಿತ್ತು.
ಟೆಸ್ಟ್‌ನಲ್ಲಿ ವೇಗವಾಗಿ 300 ವಿಕೆಟ್ ಪಡೆದು ಆರ್ ಅಶ್ವಿನ್ ವಿಶ್ವ ದಾಖಲೆ
ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಟೆಸ್ಟ್ ನಲ್ಲಿ ವೇಗವಾಗಿ 300 ವಿಕೆಟ್ ಪಡೆದು ವಿಶ್ವದಾಖಲೆ ನಿರ್ಮಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಲಂಕಾದ ಆಟಗಾರ ಘಮಗೆ ಅವರನ್ನು ಬೌಲ್ಡ್ ಮಾಡುವ ಮೂಲಕ 300ನೇ ವಿಕೆಟ್ ಪಡೆದರು. ಅಶ್ವಿನ್ ತಮ್ಮ 54ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ವೇಗವಾಗಿ 300 ವಿಕೆಟ್ ಪಡೆದ ದಾಖಲೆ ಆಸ್ಟ್ರೇಲಿಯಾ ವೇಗಿ ಡೇನಿಸ್ ಲಿಲ್ಲೇ ಅವರ ಹೆಸರಿನಲ್ಲಿತ್ತು. ಲಿಲ್ಲೇ ಅವರು 56ನೇ ಟೆಸ್ಟ್ ಪಂದ್ಯದಲ್ಲಿ 300ನೇ ವಿಕೆಟ್ ಪಡೆದರೇ ಶ್ರೀಲಂಕಾದ ಸ್ಪಿನ್ ಬೌಲರ್ ಮುತ್ತಯ್ಯ ಮುರಳಿಧರನ್ 58ನೇ ಪಂದ್ಯದಲ್ಲಿ 300ನೇ ವಿಕೆಟ್ ಪಡೆದಿದ್ದರು.
ಒಂದೇ ಓವರ್‌ನಲ್ಲಿ 7 ಸಿಕ್ಸ್, ಕ್ರಿಕೆಟ್‌ನಲ್ಲಿ ಅಪರೂಪದ ವಿಶ್ವದಾಖಲೆ!
ಶ್ರೀಲಂಕಾದ ಯುವ ಆಟಗಾರನೊಬ್ಬ ಕ್ರಿಕೆಟ್ ಪಂದ್ಯವೊಂದರ ಒಂದೇ ಓವರ್ ನಲ್ಲಿ 7 ಸಿಕ್ಸರ್ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದಾನೆ. ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳಿಧರನ್ ಹೆಸರಿನಲ್ಲಿ ನಡೆಯುತ್ತಿರುವ ಗುಡ್ ನೆಸ್ ಕಪ್ ನ ಮೊದಲ ಆವೃತ್ತಿಯ ಟೂರ್ನಿಯಲ್ಲಿ ಎಫ್ಒಜಿ ತಂಡದ ಪರ ಆಡಿದ್ದ ನವಿಂದು ಪಹಸರ ಈ ದಾಖಲೆ ಮಾಡಿದ್ದಾರೆ. ನೋಬಾಲ್ ಸಹಾಯದಿಂದ ನವಿಂದು ಪಹಸರ ಈ ದಾಖಲೆ ಮಾಡಿದ್ದಾನೆ. ಹೌದು ಒಂದು ಓವರ್ ನಲ್ಲಿ ನೋಬಾಲ್ ಸಹಿತ ಏಳು ಎಸೆತಗಳನ್ನು ಎದುರಿಸಿದ ನವಿಂದು ಏಳು ಎಸೆತಗಳನ್ನು ಸಿಕ್ಸರ್ ಬಾರಿಸಿ ಈ ದಾಖಲೆ ಮಾಡಿದ ವಿಶ್ವದ ಮೊದಲ ಆಟಗಾರನೆಂಬ ದಾಖಲೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಮತ್ತು ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಸಿಡಿಸಿದ ವಿಶ್ವದಾಖಲೆ ಹೊಂದಿದ್ದಾರೆ.  
2017ರಲ್ಲಿ ಕ್ರಿಕೆಟ್ಗೆ ವಿದಾಯ ಹೇಳಿದ ಖ್ಯಾತ ಆಟಗಾರರು
ಟೀಂ ಇಂಡಿಯಾದ ವೇಗಿ ಆಶಿಶ್ ನೆಹ್ರಾ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. ನೆಹ್ರಾ 18 ವರ್ಷಗಳ ಕಾಲ ಟೀಂ ಇಂಡಿಯಾ ಪರವಾಗಿ ಆಡಿದ್ದರು. ಪಾಕಿಸ್ತಾನದ ಸ್ಫೋಟಕ ಬ್ಯಾಟ್ಸ್ ಮನ್ ಶಾಹೀದ್ ಆಫ್ರಿದಿ ಕಳೆದ ಏಪ್ರಿಲ್ ನಲ್ಲಿ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದಾರೆ. ಕ್ರಿಕೆಟ್ ನಲ್ಲಿ 21 ವರ್ಷಗಳ ಕಾಲ ಆಡಿದ ಖ್ಯಾತಿ ಅವರಿಗಿದೆ. ಇದೇ ವೇಳೆ ಪಾಕಿಸ್ತಾನದ ಸ್ಪಿನ್ನರ್ ಸಯೀದ್ ಅಜ್ಮಲ್ ಸಹ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ. 
ಕ್ರಿಕೆಟ್ ಇತಿಹಾಸದಲ್ಲೇ ಕಳಪೆ ದಾಖಲೆ: ಕೇವಲ 2 ರನ್‍ಗಳಿಗೆ ಆಲೌಟ್, 9 ಡಕ್ ಔಟ್
ಕ್ರಿಕೆಟ್ ಇತಿಹಾಸದಲ್ಲಿ ಹಲವು ದಾಖಲೆಗಳು ಸೃಷ್ಠಿಯಾಗಿವೆ. ಆದರೆ ಇದೇ ಮೊದಲ ಬಾರಿಗೆ ಕ್ರಿಕೆಟ್ ತಂಡವೊಂದು ಕೇವಲ 2 ರನ್ ಗಳಿಗೆ ಆಲೌಟ್ ಆಗುವ ಮೂಲಕ ಇತಿಹಾಸ ಸೃಷ್ಟಿಸಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಮಹಿಳಾ ಅಂಡರ್ 19 ಏಕದಿನ ಲೀಗ್ ಮತ್ತು ನಾಕ್ ಔಟ್ ಟೂರ್ನಮೆಂಟ್ ನಲ್ಲಿ ನಾಗಲ್ಯಾಂಡ್ ಅಂಡರ್ 19 ಮಹಿಳಾ ಕ್ರಿಕೆಟ್ ತಂಡದ 17 ಓವರ್ ಗಳಲ್ಲಿ ಕೇವಲ 2 ರನ್ ಗಳಿಗೆ ಆಲ್ ಔಟ್ ಆಗಿದೆ. ಗುಂಟೂರಿನ ಜೆಕೆಸಿ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೇರಳ ಮಹಿಳಾ ಅಂಡರ್ 19 ತಂಡದ ವಿರುದ್ಧ ನಾಗಲ್ಯಾಂಡ್ ಪರ ಆರಂಭಿಕ ಆಟಗಾರ್ತಿ ಮೇನಕಾ 18 ಎಸೆತಗಳಲ್ಲಿ ಎರಡು ರನ್ ಗಳಿಸಿದ್ದು ಬಿಟ್ಟರೇ ಇನ್ನುಳಿದ 9 ಬ್ಯಾಟ್ ಮನ್ ಗಳು ಡಕ್ ಔಟ್ ಆಗಿದ್ದಾರೆ. ನಂತರ ಬ್ಯಾಟಿಂಗ್ ಮಾಡಿದ ಕೇರಳ ಮಹಿಳಾ ತಂಡ ಒಂದೇ ಎಸೆತದಲ್ಲಿ ಪಂದ್ಯವನ್ನು ಗೆದ್ದು ಬೀಗಿತು. ನಾಗಲ್ಯಾಂಡ್ ನ ಆರಂಭಿಕ ಬೌಲರ್ ದೀಪಿಕಾ ಕೈಂತುರಾ ಮೊದಲ ಎಸತೆವನ್ನು ವೈಡ್ ಹಾಕಿದರು. ನಂತರದ ಎಸೆತದಲ್ಲಿ ಕೇರಳದ ಅಂಶು ಎಸ್. ರಾಜು ಚೆಂಡನ್ನು ಬೌಂಡರಿಗಟ್ಟುವ ಮೂಲಕ ನಾಲ್ಕು ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗರು
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಆಟಗಾರರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇನ್ನು ವೇಗಿ ಭುವನೇಶ್ವರ್ ಕುಮಾರ್ ಪ್ರೇಯಸಿ ನೂಪುರ್ ನಗರ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಟೀಂ ಇಂಡಿಯಾದ ಮಾಜಿ ವೇಗಿ ಜಹೀರ್ ಖಾನ್ ನಟಿ ಸಾಗರಿಕಾ ಘಟ್ಕೆ ಜತೆ ಹಸೆಮಣೆ ಹೇರಿದರು.
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡೆರಡು ಶತಕ ಸಿಡಿಸಿದ ಕ್ರಿಕೆಟಿಗರು
ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಶತಕ ಸಿಡಿಸುವುದೇ ಕಷ್ಟ ಅಂತಹದಲ್ಲಿ ಈ ಸ್ಫೋಟಕ ಆಟಗಾರರು ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಎರಡೆರಡು ಬಾರಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ ಒಂದು ಶತಕ ಬಾರಿಸಿದರೇ ಹೆಚ್ಚು ಅಂತಹದ್ದರಲ್ಲಿ ನಾಲ್ವರು ಬ್ಯಾಟ್ಸ್ ಮನ್ ಗಳು ಎರಡೆರಡು ಬಾರಿ ಶತಕ ಸಿಡಿಸಿ ಮಿಂಚಿದ್ದಾರೆ. ನಾಲ್ವರ ಪೈಕಿ ಇಬ್ಬರು ನ್ಯೂಜಿಲೆಂಡ್ ಬ್ಯಾಟ್ಸ್ ಮನ್ ಗಳಾದರೆ ಮತ್ತಿಬ್ಬರು ವೆಸ್ಟ್ ಇಂಡೀಸ್ ಆಟಗಾರರು. ಟೀಂ ಇಂಡಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಎರಡನೇ ಶತಕ ಸಿಡಿಸಿರುವ ಮೂಲಕ ಕಾಲಿನ್ ಮನ್ರೋ ಎರಡು ಬಾರಿ ಶತಕ ಸಿಡಿಸಿದ ಬ್ಯಾಟ್ಸ್ ಮನ್ ಗಳ ಕ್ಲಬ್ ಗೆ ಸೇರಿಕೊಂಡಿದ್ದಾರೆ. ಇದಕ್ಕೂ ಮೊದಲು ಕ್ರಿಸ್ ಗೇಲ್, ಬ್ರೆಂಡನ್ ಮೆಕಲಮ್, ಎವಿನ್ ಲೆವಿಸ್ ಎರಡು ಬಾರಿ ಟಿ20ಯಲ್ಲಿ ಶತಕ ಸಿಡಿಸಿದ್ದಾರೆ.
ಟೀಂ ಇಂಡಿಯಾ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಹಾಟ್ ಫೋಟೋಶೂಟ್! ಟೀಕೆ
ಟೀಂ ಇಂಡಿಯಾ ಮಹಿಳಾ ತಂಡದ ನಾಯಕಿ ಹಾಗೂ ವಿಶ್ವದ ನಂಬರ್ 1 ಬ್ಯಾಟಿಂಗ್ ಅಗ್ರ ಶ್ರೇಯಾಂಕಿತೆ ಮಿಥಾಲಿ ರಾಜ್ ಹಾಟ್ ಫೋಟೋ ಶೂಟ್ ಮಾಡಿಸಿಕೊಳ್ಳುವ ಮೂಲಕ ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ. ಮಿಥಾಲಿ ರಾಜ್ ಸಾಕಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬ್ಲಾಕ್ ಡ್ರೆಸ್ ತೊಟ್ಟಿರುವ ಮಿಥಾಲಿ ಬ್ಯಾಟಿಂಗ್ ಶೈಲಿಯನ್ನು ಪ್ರದರ್ಶಿಸುವ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಮಿಥಾಲಿ ರಾಜ್ ಹಾಟ್ ಫೋಟೋಶೂಟ್ ಮಾಡಿಸಿಕೊಂಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಹಿಂದೆ ಸ್ನೇಹಿತೆಯರೊಂದಿಗೆ ಕ್ಲಿಕ್ಸಿಸಿದ ಸೆಲ್ಫಿಯನ್ನು ಮಿಥಾಲಿ ರಾಜ್ ಟ್ವೀಟರ್ ನಲ್ಲಿ ಪ್ರಕಟಿಸಿದ್ದರು. ಈ ಚಿತ್ರದಲ್ಲಿ ಮಿಥಾಲಿ ತೊಟ್ಟಿದ್ದ ಬಟ್ಟೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಕೇಳಿ ಬಂದಿದ್ದವು.
- ವಿಶ್ವನಾಥ್ ಎಸ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com