ನವದೆಹಲಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ತಮ್ಮ ಜೀವನಾಧರಿತ ಚಿತ್ರ ಸಚಿನ್ ಎ ಬಿಲಿಯನ್ ಡ್ರೀಮ್ಸ್ ಕುರಿತು ಚರ್ಚೆ ನಡೆಸಿದ್ದಾರೆ.
ಚಿತ್ರದ ಕುರಿತು ಪ್ರಧಾನಿ ಮೋದಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದು ಶುಭ ಹಾರೈಸಿದರು. ಚಿತ್ರ ಕೇವಲ ಮುಂದಿನ ಜನಾಂಗಕ್ಕೆ ಸ್ಫೂರ್ತಿದಾಯಕ ಮಾತ್ರವಲ್ಲ. ನಿಮ್ಮ ಜೀವನದಲ್ಲಿ ಉಂಟಾದ ಏರಿಳಿತಗಳು. ಎದುರಾದ ಸವಾಲುಗಳನ್ನು ನೀವು ನಿಭಾಯಿಸಿದ ರೀತಿ. ಸಂಕಷ್ಟಗಳಿಂದ ಹೊರ ಬಂದದ್ದು ಇವು ಪ್ರತಿಯೊಬ್ಬರ ಜೀವನಕ್ಕೂ ಅನ್ವಯಿಸುತ್ತದೆ ಎಂದು ಮೋದಿ ಹೊಗಳಿಕೆಯ ಮಾತುಗಳನ್ನಾಡಿದರು ಎಂದು ಸಚಿನ್ ಸುದ್ದಿಗಾರರಿಗೆ ವಿವರಿಸಿದರು.
ಮೋದಿ ಅವರನ್ನು ಭೇಟಿ ಮಾಡಿದ್ದು ಸಂತಸವನ್ನುಂಟು ಮಾಡಿತು. ಜೋ ಖೇಲೆ, ವಹಿ ಖೀಲೆ(ಯಾರಲ್ಲಿ ಪ್ರತಿಭೆ ಇರುತ್ತದೋ ಅವರು ಅರಳುತ್ತಾರೆ) ಎಂಬ ಅದ್ಭುತ ಸಂದೇಶವನ್ನು ಮೋದಿ ನೀಡಿದರು ಎಂದು ಸಚಿನ್ ತಿಳಿಸಿದರು. ಈ ಮೇಳೆ ತೆಂಡೂಲ್ಕರ್ ಗೆ ಅವರ ಪತ್ನಿ ಅಂಜಲಿ ಸಾಥ್ ನೀಡಿದರು.