ಕೋಲ್ಕತಾ: ಲಾಸ್ ಎಂಜಲೀಸ್ ನಲ್ಲಿ ನಡೆಯುವ 2028ರ ಒಲಂಪಿಕ್ಸ್ ನಲ್ಲಿ ಕ್ರಿಕೆಟ್ ಸೇರ್ಪಡೆಯಾಗಲಿದೆ ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ)ಯ ಮುಖ್ಯ ಕಾರ್ಯನಿರ್ವಾಹಕ ಡೇವಿಡ್ ರಿಚರ್ಡ್ ಸನ್ ಅವರು ಗುರುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೋಲ್ಕತಾದಲ್ಲಿ ಒಂದು ವಾರದಿಂದ ನಡೆದ ಐಸಿಸಿ ಸಭೆಯ ಕೊನೆಯ ದಿನ ಸುದ್ದಿಗಾರರೊಂದಿಗೆ ಮಾತನಾಡಿದ ರಿಚರ್ಡ್ ಸನ್ ಅವರು, ವಿಶ್ವದ ಕ್ರಿಕೆಟ್ ಆಡುವ ಎಲ್ಲ ದೇಶಗಳು ಒಂದಾದರೆ 2028ರ ಒಲಂಪಿಕ್ಸ್ ನಲ್ಲಿ ಕ್ರಿಕೆಟ್ ಮಿಂಚಲಿದೆ ಎಂದರು.
ಪ್ಯಾರಿಸ್ ನಲ್ಲಿ ನಡೆಯುವ 2024ರ ಒಲಂಪಿಕ್ಸ್ ಗೆ ಕ್ರಿಕೆಟ್ ಸೇರಿಸುವಂತೆ ಅಂತರಾಷ್ಟ್ರೀಯ ಒಲಂಪಿಕ್ ಸಮಿತಿ(ಐಒಸಿ)ಗೆ ಅಧಿಕೃತವಾಗಿ ಮನವಿ ಸಲ್ಲಿಸಲು ಐಸಿಸಿ ಈಗಾಗಲೇ ವಿಳಂಬ ಮಾಡಿದೆ. ಆದರೂ ಈ ಸಂಬಂಧ ಐಸಿಸಿ, ಐಒಸಿ ಜೊತೆ ಮಾತುಕತೆ ಮುಂದುವರೆಸಲಿದೆ ಎಂದು ಅವರು ತಿಳಿಸಿದ್ದಾರೆ.
ಕ್ರಿಕೆಟ್ ಸಹ ಒಂದು ಕ್ರೀಡೆಯಾಗಿದ್ದು, ಇದನ್ನು ಆಡುವ ಎಲ್ಲಾ ದೇಶಗಳು ಒಗ್ಗಟ್ಟಿನಿಂದ ಒಲಂಪಿಕ್ಸ್ ಗೆ ಸೇರಿಸಬೇಕು ಎಂದು ಮನವಿ ಮಾಡಿದರೆ, ಒಲಂಪಿಕ್ ಮೌಲ್ಯ ಮತ್ತಷ್ಟು ಹೆಚ್ಚಲಿದೆ ಎಂದರು.
ಒಲಿಂಪಿಕ್ಸ್ ನಲ್ಲಿ ಟಿ20 ಕ್ರಿಕೆಟ್ ಆಡಿಸಬೇಕು ಎನ್ನುವುದು ಐಸಿಸಿಯ ಮಹತ್ವಾಕಾಂಕ್ಷೆಯಾಗಿದೆ. ಆದರೆ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಸೇರಿಸಲು ವಿಶ್ವದ ಕ್ರಿಕೆಟ್ ಆಡುವ ಎಲ್ಲ ದೇಶಗಳ ಬೆಂಬಲ ಅತ್ಯಗತ್ಯವಾಗಿದೆ.