ಕೆಪಿಎಲ್ ಹರಾಜು: ದಾಖಲೆ ಮೊತ್ತ ಪಡೆದ ಅನುಭವಿ ರಾಬಿನ್ ಉತ್ತಪ್ಪ, ಮಿಥುನ್

ಕರ್ನಾಟಕ ಪ್ರೀಮಿಯರ್‌ ಲೀಗ್‌(ಕೆಪಿಎಲ್‌) 7ನೇ ಆವೃತ್ತಿಗೆ ನಡೆಸಲಾದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಅನುಭವಿ ಆಟಗಾರರು ಗರಿಷ್ಠ ಮೊತ್ತಕ್ಕೆ ಹರಾಜಾಗಿದ್ದಾರೆ.
ರಾಬಿನ್ ಉತ್ತಪ್ಪ, ಅಭಿಮನ್ಯು ಮಿಥುನ್
ರಾಬಿನ್ ಉತ್ತಪ್ಪ, ಅಭಿಮನ್ಯು ಮಿಥುನ್
ಬೆಂಗಳೂರು: ಕರ್ನಾಟಕ ಪ್ರೀಮಿಯರ್‌ ಲೀಗ್‌(ಕೆಪಿಎಲ್‌) 7ನೇ ಆವೃತ್ತಿಗೆ ನಡೆಸಲಾದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಅನುಭವಿ ಆಟಗಾರರು ಗರಿಷ್ಠ ಮೊತ್ತಕ್ಕೆ ಹರಾಜಾಗಿದ್ದಾರೆ. ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್ ಕೆಪಿಎಲ್ ಇತಿಹಾಸದ ಅತ್ಯಧಿಕ ಮೊತ್ತಕ್ಕೆ ಹರಾಜಾಗಿದ್ದು ಇನ್ನೋರ್ವ ಅನುಭವಿ ಆಟಗಾರ ರಾಬಿನ್ ಉತ್ತಪ್ಪ ಸಹ ಅತ್ಯುತ್ತಮ ಮೊತ್ತಕ್ಕೆ ಬಿಕರಿಯಾಗಿದ್ದಾರೆ.
ಶನಿವಾರ  ನಡೆದ ಕೆಪಿಎಲ್ ಹರಾಜು ಪ್ರಕ್ರಿಯೆಯಲ್ಲಿ 28 ವರ್ಷದ ಅಭಿಮನ್ಯು ಮಿಥುನ್​ರನ್ನು 8.30 ಲಕ್ಷ ರು. ಗೆ ಶಿವಮೊಗ್ಗ ಲಯನ್ಸ್ ಪಾಲಾಗಿದ್ದಾರೆ. ರಾಬಿನ್ ಉತ್ತಪ್ಪ ಅವರನ್ನು 7.90 ಲಕ್ಷ  ರು.ಗೆ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡ ಖರೀದಿಸಿದೆ.
ಅಭಿಮನ್ಯು ಮಿಥುನ್ ಕಳೆದ ಸಾಲಿನಲ್ಲಿ  1 ಲಕ್ಷಕ್ಕೆ ಬಿಜಾಪುರ ಬುಲ್ಸ್ ಪರ ಆಡಿದ್ದರೆ ಉತ್ತಪ್ಪ ಅಲಭ್ಯರಾಗಿದ್ದರು. ಇದೇ ವೇಳೆ ಅಮಿತ್ ಶರ್ಮಾ ಅವರನ್ನು ಮೈಸೂರು ವಾರಿಯರ್ಸ್‌ 7.6 ಲಕ್ಷ ರು. ಗೆ ಖರೀದಿಸಿದೆ.
ಇನ್ನು ರಾಜ್ಯದ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ ಎಂ.ನಿದೇಶ್‌  5.85 ಲಕ್ಷ ರು.ಗೆ ಬೆಳಗಾವಿ ಪ್ಯಾಂಥರ್ಸ್‌ ಪಾಲಾದರೆ ಶಿವಮೊಗ್ಗ ಲಯನ್ಸ್‌ ತಂಡವು 5.45 ಲಕ್ಷ ರು. ನೀಡಿ ಆರ್‌. ಜೋನಾಥನ್‌ ಅವರನ್ನು ತಮ್ಮವರನ್ನಾಗಿ ಸೇರಿಸಿಕೊಂಡಿದೆ.ಇಷ್ಟಲ್ಲದೆ ಕೆ.ಬಿ. ಪವನ್‌ ಅವರನ್ನು ಬೆಂಗಳೂರು ಬ್ಲಾಸ್ಟರ್ಸ್‌ ತಂಡವು  4.55ಲಕ್ಷ ರು. ಗೆ ಖರೀದಿ ಮಾಡಿದೆ.
ಭಾರತ ಎ ತಂಡಕ್ಕೆ ಆಯ್ಕೆಯಾಗಿರುವ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಶ್ರೇಯಸ್ ಗೋಪಾಲ್ ಮತ್ತು ಆರ್ ಸಮರ್ಥ್ ಮಾತ್ರ ಯಾವ ತಂಡದವರ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ. 
ಇನ್ನುಳಿದಂತೆ ಮೊಹಮದ್ ತಾಹ 5 ಲಕ್ಷ ಪಡೆದು ಹುಬ್ಬಳ್ಳಿ ತಂಡ ಸೇರಿದರೆ ಟಿ ಪ್ರದೀಪ್ 6.5 ಲಕ್ಷ  ಪಡೆದು ಬಳ್ಳಾರಿ ತಂಡದ ಪಾಲಾದರು. ಅರ್ಜುನ್ ಹೊಯ್ಸಳ(3.10 ಲಕ್ಷ), ಶುಭಾಂಗ್ ಹೆಗ್ಡೆ(3.05 ಲಕ್ಷ) ಬೆಳಗಾವಿ ತಂಡ ಸೇರಿ ಉತ್ತಮ ಮೊತ್ತ ಗಳಿಸಿದ್ದಾರೆ.
ಆಗಸ್ಟ್‌ 15ರಿಂದ ಸೆ.9ರವರೆಗೆ ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ನಡೆಯಲಿರುವ ಪ್ರಸಕ್ತ ಸಾಲಿನ ಕರ್ನಾಟಕ ಪ್ರೀಮಿಯರ್ ಲೀಗ್ ಗಾಗಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ(ಕೆಎಸ್​ಸಿಎ) ಆಟಗಾರರ ಹರಾಜು ಪ್ರಕ್ರಿಯೆ ಆಯೋಜಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com