ಮಹಿಳಾ ಏಷ್ಯಾಕಪ್ ಟಿ20 ಫೈನಲ್: ಭಾರತ ವಿರುದ್ಧ ಗೆದ್ದ ಬಾಂಗ್ಲಾ ಚೊಚ್ಚಲ ಬಾರಿಗೆ ಚಾಂಪಿಯನ್

ಮಲೇಷ್ಯಾದಲ್ಲಿ ನಡೆದ ಮಹಿಳಾ ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತವನ್ನು ಮಣಿಸಿ ಬಾಂಗ್ಲಾದೇಶ ಚಾಂಪಿಯನ್ ಆಗಿ ಹೊರಹೊಮ್ಮಿದೆ...
ಬಾಂಗ್ಲಾದೇಶ
ಬಾಂಗ್ಲಾದೇಶ
ಕೌಲಾಲಂಪುರ: ಮಲೇಷ್ಯಾದಲ್ಲಿ ನಡೆದ ಮಹಿಳಾ ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತವನ್ನು ಮಣಿಸಿ ಬಾಂಗ್ಲಾದೇಶ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಮಲೇಷ್ಯಾದ ಕೌಲಾಲಂಪುರದ ಕಿನಾರಾ ಅಕಾಡೆಮಿ ಓವಲ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯುತ್ತಿದ್ದು, ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಬಾಂಗ್ಲಾದೇಶ ಮಹಿಳೆಯರ ಪ್ರಬಲ ಬೌಲಿಂಗ್ ದಾಳಿಗೆ ತತ್ತರಿಸಿದ್ದು, ಕೇವಲ 112 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. 113 ರನ್ ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಕೊನೆಯ ಎಸೆತದಲ್ಲಿ ಎರಡು ರನ್ ಬಾರಿಸಿ 3 ವಿಕೆಟ್ ಗಳಿಂದ ಗೆಲುವಿನ ನಗೆ ಬೀರಿತು. 
ಬಾಂಗ್ಲಾ ಪರ ಶಾಮಿಮಾ ಸುಲ್ತಾನ್ 16, ಆಯೂಶ್ ರೆಹಮಾನ್ 17, ನಿಗಾರ್ ಸುಲ್ತಾನ್ 27, ಸುಮಾನ್ ಅಹಮ್ಮದ್ 23 ರನ್ ಬಾರಿಸಿದ್ದಾರೆ. 
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಸ್ಫೋಟಕ ಆಟಗಾರ್ತಿ ಸ್ಮೃತಿ ಮಂದಾನಾ ಇನ್ನಿಂಗ್ಸ್ ಮೂರನೇ ಓವರ್ ನಲ್ಲಿ ಕೇವಲ 7 ರನ್ ಗಳಿಸಿ ರನೌಟ್ ಗೆ ಬಲಿಯಾದರು. ಬಳಿಕ ಬಂದ ದೀಪ್ತಿ ಶರ್ಮಾ ಕೇವಲ 4ರನ್ ಗಳಿಸಿ ಔಟಾದರೆ, 11 ರನ್ ಗಳಿಸಿದ್ದ ಮಿಥಾಲಿ ರಾಜ್ ಕೂಡ ಬೇಗನೆ ವಿಕೆಟ್ ಒಪ್ಪಿಸಿದರು.
ಬಳಿಕ ಕಣಕ್ಕಿಳಿದ ನಾಯಕಿ ಹರ್ಮನ್ ಪ್ರೀತ್ ಕೌರ್ ಅರ್ಧಶತಕ ಗಳಿಸಿ ತಂಡಕ್ಕೆ ಬೆನ್ನೆಲುಬಾಗಿ ನಿಂತರು. ಆದರೆ ಕೌರ್ ಗೆ ಇತರೆ ಆಟಗಾರ್ತಿಯರ ಸಾಥ್ ದೊರೆಯಲಿಲ್ಲ. ಕೆಳ ಕ್ರಮಾಂಕದ ಆಟಗಾರ್ತಿಯರೆಲ್ಲರೂ ಬಂದಷ್ಟೇ ವೇಗವಾಗಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 112 ರನ್ ಗಳನ್ನು ಗಳಿಸಿತು. ಅಂತೆಯೇ ಬಾಂಗ್ಲಾದೇಶಕ್ಕೆ ಗೆಲ್ಲಲು 113 ರನ್ ಗಳ ಗುರಿ ನೀಡಿದೆ.
ಇನ್ನು ಬಾಂಗ್ಲಾದೇಶದ ಪರ ರುಮಾನಾ ಅಹ್ಮದ್ ಮತ್ತು ಖದಿಜಾ ಟುಲ್ ಕುಬ್ರಾ ತಲಾ 2 ವಿಕೆಟ್ ಪಡೆದಿದ್ದು, ಜಹನ್ಸಾ ಆಲಂ ಮತ್ತು ಸಲ್ಮಾ ಕುಟನ್ ತಲಾ 1 ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com