ಕೆಪಿಎಲ್: ಪವನ್‌-ಅನಿರುದ್ಧ್‌ಗೆ ಬಂಪರ್ ಮೊತ್ತ, ಬಿಕರಿಯಾಗದ ಕರುಣ್, ಶ್ರೇಯಸ್!

ಬೆಂಗಳೂರಿನ ತಾಜ್ ವೆಸ್ಟೆಂಡ್‌ ಹೋಟೆಲ್‌ನಲ್ಲಿ ನಡೆದ ಎಂಟನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್‌ ಲೀಗ್‌ನ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಎಡಗೈ ಬ್ಯಾಟ್ಸ್‌ಮನ್‌ ಪವನ್‌ ದೇಶಪಾಂಡೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಬೆಂಗಳೂರಿನ ತಾಜ್ ವೆಸ್ಟೆಂಡ್‌ ಹೋಟೆಲ್‌ನಲ್ಲಿ ನಡೆದ ಎಂಟನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್‌ ಲೀಗ್‌ನ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಎಡಗೈ ಬ್ಯಾಟ್ಸ್‌ಮನ್‌ ಪವನ್‌ ದೇಶಪಾಂಡೆ ಅವರು ಶಿವಮೊಗ್ಗ ಲಯನ್ಸ್‌ ಹಾಗೂ ಆಫ್‌ ಸ್ಪಿನ್ನರ್‌ ಅನಿರುದ್ಧ್ ಜೋಶಿ ಅವರು ಮೈಸೂರು ವಾರಿಯರ್ಸ್‌ ಫ್ರಾಂಚೈಸಿಗಳಿಗೆ ಕ್ರಮವಾಗಿ 7.30 ಲಕ್ಷ ರೂ ಹಾಗೂ 7.10 ಲಕ್ಷ ರೂ. ಗಳಿಗೆ ಖರೀದಿಯಾದರು.
ಇತ್ತೀಚೆಗೆ ನಾಗಾಲೆಂಡ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ 32ರ ಪ್ರಾಯದ ಬ್ಯಾಟ್ಸ್‌ಮನ್ ಜೊನಾಥನ್ ರೊಂಗ್‌ಸೆನ್ ಅವರ ಖರೀದಿಸಲು ಮೈಸೂರು ವಾರಿಯರ್ಸ್, ಬಿಜಾಪುರ ಬುಲ್ಸ್ ಮತ್ತು ಬೆಂಗಳೂರು ಬ್ಲಾಸ್ಟರ್ಸ್ ನಡುವೆ ಭಾರಿ ಪೈಫೊಟಿ ನಡೆಯಿತು. ಅಂತಿಮವಾಗಿ  ಜೋನಾಥನ್‌ ಅವರನ್ನು ಬ್ಲಾಸ್ಟರ್ಸ್‌ 6 ಲಕ್ಷ ರೂ. ನೀಡಿ ಖರೀದಿಸಿತು. ಇದು ಹರಾಜು ಪ್ರಕ್ರಿಯೆಯಲ್ಲಿ ಅಚ್ಚರಿ ಮೂಡಿಸಿತು.   
ಬಿ ಗುಂಪಿನಲ್ಲಿದ್ದ ಜೋನಾಥನ್‌ ಅವರು ಅತಿ ಹೆಚ್ಚು ಮೌಲ್ಯ ಪಡೆದ ಆಟಗಾರರಾಗುವ ಮೂಲಕ ಅಚ್ಚರಿ ಮೂಡಿಸಿದರು. ಬಿ ಗುಂಪಿನ ಆಟಗಾರರ ಮೂಲ ಬೆಲೆ 20, 000 ಸಾವಿರವಿದ್ದು, ಒಂದು ತಂಡ ತನ್ನಲ್ಲಿರುವ 30 ಲಕ್ಷ ರೂ.ನಲ್ಲಿ 18 ಆಟಗಾರರನ್ನು ಖರೀದಿಸಲು ಅವಕಾಶ ನೀಡಲಾಗಿತ್ತು.  ಕರ್ನಾಟದ ಅಗ್ರ ಆರು ಆಟಗಾರರು ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಾಡುವ ಹಿನ್ನೆಲೆಯಲ್ಲಿ ಆರಂಭಿಕ ಎ ಗುಂಪಿನಲ್ಲಿ ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿಗಳು ಹೆಚ್ಚು ಆಸಕ್ತಿ ತೋರಿಸಲಿಲ್ಲ. ನಂತರ ಇನ್ನುಳಿದ 18 ಮಂದಿ ಆಟಗಾರರ ಖರೀದಿಸು ಪ್ರಕ್ರಿಯೆ ಮುಂದುವರಿದಿತ್ತು.
ಕಳೆದ ಆವೃತ್ತಿಯಲ್ಲಿ ಆಡಿದ್ದ ಅದೇ ಫ್ರಾಂಚೈಸಿಗಳು ಮತ್ತೇ ಅದೇ ಆಟಗಾರರನ್ನು ಖರೀದಿಸಲು ಆಸಕ್ತಿ ತೋರಿಸಿದ್ದರು. ವೇಗಿ ಪ್ರಸಿದ್ಧ್‌ ಕೃಷ್ಣ ಅವರು ಟಸ್ಕರ್ಸ್‌ ತಂಡಕ್ಕೆ 5.80 ಲಕ್ಷ ರೂ.ಗಳಿಗೆ ಬಿಕರಿಯಾದರು. ಮನೀಶ್‌ ಪಾಂಡೆ ಹಾಗೂ ಆರ್‌. ಸಮರ್ಥ್‌ ಕ್ರಮವಾಗಿ 2 ಲಕ್ಷ ಹಾಗೂ 2.10 ಲಕ್ಷ ರೂ.ಗಳಿಗೆ ಬೆಳಗಾವಿ ಪ್ಯಾಂಥರ್ಸ್‌ ಪಾಲಾದರು. ಸ್ಟಾರ್‌ ಆಟಗಾರರಾದ ಕರುಣ್‌ ನಾಯರ್‌, ಶ್ರೇಯಸ್‌ ಗೋಪಾಲ್‌ ಹಾಗೂ ರೋನಿತ್‌ ಮೋರೆ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಲೇ ಇಲ್ಲ.  
"ಖರೀದಿಸಿದ ಆಟಗಾರರು ದುಲೀಪ್ ಟ್ರೋಫಿ ಆಯ್ಕೆಯಾದರೆ, ಫ್ರಾಂಚೈಸಿಗಳು ಅವರನ್ನು ಹರಾಜು ಪಟ್ಟಿಯಿಂದ ಅವರ ಸ್ಥಾನಕ್ಕೆ ಬದಲಾಯಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಆದರೂ, ಅವರಿಗೆ ಪ್ರೊ ರಾಟಾ ಆಧಾರದ ಮೇಲೆ ಪರಿಹಾರ ನೀಡಲಾಗುವುದು "ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಸಹಾಯಕ ಕಾರ್ಯದರ್ಶಿ ಸಂತೋಷ್ ಮೆನನ್ ತಿಳಿಸಿದ್ದಾರೆ. 
“ಎನ್‌ಒಸಿ ಪಡೆದು ಇತರ ರಾಜ್ಯಗಳಿಗೆ ಆಡುವ ಆಟಗಾರರಿಗೆ ಕೆಪಿಎಲ್‌ನಲ್ಲಿ ಆಡಲು ಇನ್ನೂ ಅವಕಾಶವಿದೆ. ಏಕೆಂದರೆ, ಅವರು ಈ ಹಿಂದೆ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಆದ್ದರಿಂದ ಕೆ.ಬಿ.ಪವನ್ ಮತ್ತು ಅಮಿತ್ ವರ್ಮಾ ಅವರ ಹೆಸರನ್ನು ಹರಾಜಿನ ಪಟ್ಟಿಯಲ್ಲಿ ಸೇರಿಸಲಾಗಿತ್ತು ಎಂದರು.  ಕೇರಳ ಕ್ರಿಕೆಟ್ ಅಸೋಸಿಯೇಷನ್‌ನೊಂದಿಗಿನ ಬದ್ಧತೆಯಿಂದಾಗಿ ಹರಾಜಿನಿಂದ ಹೊರಗುಳಿಯುವಂತೆ ಮನವಿ ಮಾಡಿದ್ದ ಮತ್ತೊಬ್ಬ ರಾಜ್ಯದ ಮುಖ್ಯ ಆಟಗಾರ ರಾಬಿನ್ ಉತ್ತಪ್ಪ ಕೂಡ ಹರಾಜಿನಲ್ಲಿರಲಿಲ್ಲ. 
ಕೆ ಗೌತಮ್ ಈ ಬಾರಿ ಹೆಚ್ಚು ಕೆಪಿಎಲ್ ಪಂದ್ಯಗಳನ್ನು ಆಡದೇ ಇದ್ದರೂ ಕೂಡ ಅವರನ್ನು ಬಳ್ಳಾರಿ ಟಸ್ಕರ್ಸ್ 1.90 ಲಕ್ಷ ರೂ.ಗೆ ಖರೀದಿಸಿತು.  ಈ ಬಾರಿ ಅತಿ ಹೆಚ್ಚು ಮೊತ್ತಕ್ಕೆ ಹರಾಜಾಗಿರುವ ಪವನ್ ದೇಶಪಾಂಡೆ ಅವರು 2018ರ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಅಲ್ಲದೇ, 2017-18ರಲ್ಲಿ ಅವರು ಕರ್ನಾಟಕ ಪರ ಅತ್ಯಂತ ಸ್ಥಿರ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ. ಪವನ್‌ ಹೆಸರು ಮುಂಚೂಣಿಗೆ ಬಂದಾಗ ಮೈಸೂರು ವಾರಿಯರ್ಸ್ 3 ಲಕ್ಷ ರೂ. ಬಿಡ್‌ ಮಾಡಿತ್ತು. ಈ ವೇಳೆ ಲಯನ್ಸ್‌ ಹೆಚ್ಚು ಪ್ರಯತ್ನ ನಡೆಸಿ ಅಂತಿಮವಾಗಿ 7.30 ಲಕ್ಷ ರೂಗೆ ಧಾರವಾಡ ಆಟಗಾರನನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು. 
ಶಿವಮೊಗ್ಗ ಲಯನ್ಸ್‌ ಹಾಗೂ ಮೈಸೂರು ವಾರಿಯರ್ಸ್ ನಡುವೆ 31ರ ಪ್ರಾಯದ ಆಲ್‌ರೌಂಡರ್‌ ಅನಿರುದ್ಧ್‌ ಜೋಶಿ ಅವರನ್ನು ಖರೀದಿಸಲು ಭಾರಿ ಪೈಪೋಟಿ ನಡೆಯಿತು. ಎ ಗುಂಪಿನಲ್ಲಿ ಅನಿರುದ್ಧ್ ಜೋಶಿ ಅವರು 7.10 ಲಕ್ಷ ರೂ. ಮೊತ್ತಕ್ಕೆ ವಾರಿಯರ್ಸ್ ಪಾಲಾದರು. ಜೋಶಿ ಅವರು 12 ಲಿಸ್ಟ್‌ ಎ ಪಂದ್ಯಗಳಾಡಿದ್ದು, ಐಪಿಎಲ್‌ 2018 ರ ಆವೃತ್ತಿಯಲ್ಲಿ ಆರ್‌ಸಿಬಿ ತಂಡದಲ್ಲಿದ್ದರು.  ಗುಂಪು ಎ ನಲ್ಲಿ ನಡೆದಿದ್ದ ಹರಾಜು ಪ್ರಕ್ರಿಯೆ ತೀವ್ರ ಕುತೂಹಲ ಕೆರಳಿಸಿದ್ದರೆ, ಬಿ ಗುಂಪಿನಲ್ಲಿ ಅಷ್ಟೊಂದು ಉತ್ಸಾಹ ಫ್ರಾಂಚೈಸಿಗಳಲ್ಲಿ ಕಂಡು ಬಂದಿರಲಿಲ್ಲ. 
ಅಬ್ರಾರ್‌ ಖಾಜಿ ಬಳ್ಳಾರಿ ಟಸ್ಕರ್ಸ್‌ ತಂಡಕ್ಕೆ 4.60 ಲಕ್ಷ ರೂ. ಗಳಿಗೆ ಖರೀದಿಯಾದರು. ಶೊಯೆಬ್‌ ಮ್ಯಾನೇಜರ್‌ 4.65 ಲಕ್ಷ ರೂ.ಗೆ ಮೈಸೂರು ವಾರಿಯರ್ಸ್‌ ಪಾಲಾದರು. 3.55 ಲಕ್ಷ ರೂ.ಗೆ ನಾಗ ಭರತ್ ಅವರು ಬೆಂಗಳೂರು ಬ್ಲಾಸ್ಟರ್ಸ್‌ ಸೇರ್ಪಡೆಯಾದರು. ಬಿ ಗುಂಪಿನಲ್ಲಿ ಜೋನಾಥನ್‌ ಅವರ ರೀತಿ ಬೇರೆ ಯಾವ ಆಟಗಾರನು ಹೆಚ್ಚು ಬೆಲೆಗೆ ಖರೀದಿಯಾಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com