12ನೇ ವರ್ಷದ ಹುಟ್ಟುಹಬ್ಬಕ್ಕೆ ಆರ್ ಸಿಬಿ ತಂಡಕ್ಕೆ ಉತ್ತೇಜನ ನೀಡಲು ಸೋಲಾಪುರದಿಂದ ಬೆಂಗಳೂರಿಗೆ ಬಂದ ಬಾಲಕಿ!

ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಕ್ರಿಕೆಟ್ ಪ್ರೇಮಿಗಳು ತಮ್ಮ ಇಷ್ಟದ ತಂಡಕ್ಕೆ ತಮ್ಮದೇ ...
ಆರ್ ಸಿಬಿ ತಂಡಕ್ಕೆ ಉತ್ತೇಜನ ನೀಡಲು ಸಿದ್ಧವಾಗಿ ಬಂದಿದ್ದ ಆರುಷಿ ಯೆಮುಲ್
ಆರ್ ಸಿಬಿ ತಂಡಕ್ಕೆ ಉತ್ತೇಜನ ನೀಡಲು ಸಿದ್ಧವಾಗಿ ಬಂದಿದ್ದ ಆರುಷಿ ಯೆಮುಲ್
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಕ್ರಿಕೆಟ್ ಪ್ರೇಮಿಗಳು ತಮ್ಮ ಇಷ್ಟದ ತಂಡಕ್ಕೆ ತಮ್ಮದೇ ಆದ ರೀತಿಯಲ್ಲಿ ಉತ್ತೇಜನ ನೀಡುತ್ತಿರುತ್ತಾರೆ.
ಇಲ್ಲೊಬ್ಬ ಬಾಲಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ತಾನ್ ರಾಯಲ್ಸ್ ತಂಡಗಳ ನಡುವಿನ ಪಂದ್ಯವನ್ನು ವೀಕ್ಷಿಸಲು ತನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಮಹಾರಾಷ್ಟ್ರದ ಸೋಲಾಪುರದಿಂದ 600 ಕಿಲೋ ಮೀಟರ್ ಗೂ ಹೆಚ್ಚು ದೂರ ಪ್ರಯಾಣಿಸಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗೆ ತಲುಪಿದಳು. ಆದರೆ ಮಳೆಯ ಕಾರಣದಿಂದ ನಿನ್ನೆಯ ಪಂದ್ಯ ರದ್ದಾಗಿತ್ತು.
ನಾನು ನನ್ನ ಹುಟ್ಟುಹಬ್ಬದ ದಿನ ಆರ್ ಸಿಬಿ ತಂಡ ಗೆಲ್ಲುವುದನ್ನು ನೋಡಲು ಕಾತರದಿಂದ ಕಾಯುತ್ತಿದ್ದೆ. ಆದರೆ ಅಕಾಲಿಕ ಮಳೆ ನನ್ನ ಆಸೆಯನ್ನು ನುಚ್ಚುನೂರು ಮಾಡಿ ನಿರಾಸೆಯುಂಟಾಯಿತು ಎಂದಳು ಆರುಷಿ ಶ್ರೀನಿವಾಸ್ ಯೆಮುಲ್.
ಸೋಲಾಪುರದ ಇಂಡಿಯನ್ ಮಾಡೆಲ್ ಸ್ಕೂಲ್ ನಲ್ಲಿ 7ನೇ ತರಗತಿ ಓದುತ್ತಿರುವ ಯೆಮುಲ್ ತನ್ನ ಹುಟ್ಟುಹಬ್ಬವನ್ನು ಈ ಬಾರಿ ಆರ್ ಸಿಬಿ ತಂಡದೊಂದಿಗೆ ಆಚರಿಸಲು ನಿರ್ಧರಿಸಿದ್ದಳು. ಹಲವು ವರ್ಷಗಳಿಂದ ವಿರಾಟ್ ಕೊಹ್ಲಿ ಮತ್ತು ಆರ್ ಸಿಬಿ ತಂಡದ ಅಪ್ಪಟ ಅಭಿಮಾನಿಯಾಗಿರುವ ಆರುಷಿ ಚಿಕ್ಕ ವಯಸ್ಸಿನಿಂದಲೇ ಕ್ರೀಡೆ ಬಗ್ಗೆ ಅದರಲ್ಲೂ ಕ್ರಿಕೆಟ್ ಮೇಲೆ ತೀವ್ರ ಆಸಕ್ತಿ ಹೊಂದಿದ್ದಾಳೆ.
ಆಕೆಯ ತಂದೆ ಡಾ ಶ್ರೀನಿವಾಸ್ ಯೆಮುಲ್, ನನ್ನ ಮಗಳು ಚಿಕ್ಕವಳಿಂದಲೇ ವಿರಾಟ್ ಕೊಹ್ಲಿ ಮತ್ತು ಆರ್ ಸಿಬಿ ಅಭಿಮಾನಿ. ಅವಳ ಹುಟ್ಟುಹಬ್ಬಕ್ಕೆ ಇಲ್ಲಿಗೆ ಬರಬೇಕೆಂದಳು. ಹೀಗಾಗಿ ನಾವು ಬೆಂಗಳೂರಿಗೆ ಬಂದೆವು. ಕಳೆದ ವರ್ಷ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಆರ್ ಸಿಬಿ ಪಂದ್ಯಕ್ಕೆ ಡೆಲ್ಲಿಗೆ ಹೋಗಿದ್ದೆವು ಎಂದರು.
ಯೆಮುಲ್ ಏಳನೇ ವರ್ಷದಿಂದಲೇ ಆರ್ ಸಿಬಿ ಅಭಿಮಾನಿಯಾಗಿದ್ದು ಪ್ರತಿ ಪಂದ್ಯವನ್ನು ಕೂಡ ವೀಕ್ಷಿಸುತ್ತಾಳಂತೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ತಂಡ ಆಡುವುದನ್ನು ಕಣ್ಣಾರೆ ನೋಡಲು ಇಲ್ಲಿಗೆ ಬಂದೆ ಎನ್ನುತ್ತಾಳೆ ಯೆಮುಲ್.
ನಮ್ಮ ಮಗಳಿಗೆ ಕ್ರಿಕೆಟ್ ಎಂದರೆ ಪಂಚಪ್ರಾಣ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್ ಸಿಬಿ ಸೋತಾಗ ನಮ್ಮ ಮಗಳು ಅತ್ತಿದ್ದಳು. ಅವಳನ್ನು ಸಾಮಾಧಾನ ಪಡಿಸಲು ನಾವಿಬ್ಬರೂ ಬಹಳ ಶ್ರಮಪಟ್ಟೆವು. ನಿನ್ನ ಬರ್ತ್ ಡೇಗೆ ಏನು ಬೇಕು ಎಂದು ಕೇಳಿದಾಗ ಬೆಂಗಳೂರಿಗೆ ಹೋಗಿ ಮ್ಯಾಚ್ ನೋಡಬೇಕು ಎಂದಳು. ಅದಕ್ಕೆ ಟ್ರೈನ್ ನಲ್ಲಿ ಬಂದೆವು ಎಂದರು ಯೆಮುಲ್ ತಾಯಿ ಡಾ ವೈಶಾಲಿ ಶ್ರೀನಿವಾಸ್ ಯೆಮುಲ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com