ಈಡನ್ ಗಾರ್ಡನ್ ನಲ್ಲಿ ಮೊದಲ ಹಗಲು-ರಾತ್ರಿ ಟೆಸ್ಟ್ ಪ೦ದ್ಯ: ಖಚಿತಪಡಿಸಿದ ಗಂಗೂಲಿ
ಕೋಲ್ಕತಾ: ಭಾರತ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಯೋಜನೆಯಾಗಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಐತಿಹಾಸಿಕ ಈಡನ್ ಗಾರ್ಡನ್ ಕ್ರೀಡಾಂಗಣ ಸಾಕ್ಷಿಯಾಗಲಿದೆ.
ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿರುವ ಈಡನ್ ಗಾರ್ಡನ್ ನಲ್ಲಿ ಟೀಂ ಇಂಡಿಯಾ, ಬಾಂಗ್ಲಾದೇಶ ವಿರುದ್ಧ ಮೊದಲ ಹಗಲು-ರಾತ್ರಿ ಟೆಸ್ಟ್ ಪಂದ್ಯವಾಡಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಮಂಗಳವಾರ ಹೇಳಿದ್ದಾರೆ. ಈ ಮೂಲಕ ಹಗಲು -ರಾತ್ರಿ ಟೆಸ್ಟ್ ಪಂದ್ಯಕ್ಕೆ ಸಂಬಂಧಿಸಿದ ವದಂತಿಗೆ ತೆರೆ ಎಳೆದಿದ್ದಾರೆ.
ಭಾರತ - ಬಾಂಗ್ಲಾದೇಶ ನಡುವಿನ ಎರಡು ಟೆಸ್ಟ್ ಪಂದ್ಯಗಳ ಸರಣಿ ನವೆಂಬರ್ 22 ರಿಂದ 26ರ ವರೆಗೆ ಈಡನ್ ಗಾರ್ಡನ್ ನಲ್ಲಿ ನಡೆಯಲಿದೆ.
ಹಗಲು - ರಾತ್ರಿ ಟೆಸ್ಟ್ ಪಂದ್ಯ ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಟೆಸ್ಟ್ ಕ್ರಿಕೆಟ್ ಗೆ ಇದರ ಅಗತ್ಯ ಇತ್ತು. ನಾನು ಮತ್ತು ನನ್ನ ತಂಡ ಅದನ್ನು ಸಕಾರಗೊಳಿಸಿದ್ದೇವೆ. ಇದಕ್ಕೆ ಒಪ್ಪಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೂ ಧನ್ಯವಾದ ಎಂದು ಗಂಗೂಲಿ ಹೇಳಿದ್ದಾರೆ.
ಹಗಲು ರಾತ್ರಿ ಟೆಸ್ಟ್ ಪಂದ್ಯದ ವೇಳೆ ಒಲಿಂಪಿಕ್ ಪದಕ ವಿಜೇತರಾದ ಅಭಿನವ್ ಬಿಂದ್ರಾ, ಪಿವಿ ಸಿಂಧು, ಮೇರಿ ಕೋಮ್ ಅವರನ್ನು ಕರೆದು ಸನ್ಮಾನಿಸಲಾಗುವುದು ಎಂದು ನೂತನ ಬಿಸಿಸಿಐ ಅಧ್ಯಕ್ಷರು ತಿಳಿಸಿದ್ದಾರೆ.
ಇದೇ ವೇಳೆ ದೇಶಿಯ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಗುತ್ತಿಗೆ ಆಧಾರದ ಪದ್ಧತಿ ತರಲು ಚಿಂತನೆ ನಡೆದಿದೆ ಎಂದು ದಾದಾ ಹೇಳಿದ್ದಾರೆ.
ಈ ಬಗ್ಗೆ ಬಿಸಿಸಿಐ ಆಧಾಯ ಇಲಾಖೆಯೊಂದಿಗೆ ಚರ್ಚೆ ನಡೆಸಿದ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗಂಗೂಲಿ ತಿಳಿಸಿದ್ದಾರೆ.
ದಾದಾ ಅಧ್ಯಕ್ಷ ಗಾದಿ ಏರಿದ ಬಳಿಕ ಆಡಳಿತಾತ್ಮಕ ಸುಧಾರಣೆ ತರುವ ನಿಟ್ಟಿನಲ್ಲಿ ದೃಷ್ಟಿ ನೆಟ್ಟಿದ್ದಾರೆ.
ಸದ್ಯ ಬಿಸಿಸಿಐ ತನ್ನ ಆದಯದಲ್ಲಿ ಶೇಕಡಾ 13ರಷ್ಟು ಹಣವನ್ನು ದೇಶಿಯ ಆಟಗಾರರಿಗೆ ನೀಡುತ್ತಿದೆ. ಪ್ರತಿಯೊಬ್ಬ ಆಟಗಾರ ಸರಿ ಸುಮಾರು 25 ರಿಂದ 30 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ. ಒಂದು ವೇಳೆ ದೇಶಿಯ ಕ್ರಿಕೆಟ್ ನಲ್ಲಿ ಗುತ್ತಿಗೆ ಪದ್ಧತಿ ಜಾರಿ ಆದರೆ, ಕ್ರಿಕೆಟ್ ಬೆಳವಣಿಗೆಗೆ ಪೂರವಕವಾಗುತ್ತದೆ ಎನ್ನಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ