ಒಬ್ಬೊಬ್ಬರಿಗೆ ಒಂದೊಂದು ನಿಯಮವೇ? ಟೀಮ್‌ ಇಂಡಿಯಾ ಮ್ಯಾನೇಜ್‌ಮೆಂಟ್‌ ವಿರುದ್ಧ ಗವಾಸ್ಕರ್‌ ಆಕ್ರೋಶ

ಯುವ ವೇಗಿ ಟಿ ನಟರಾಜನ್‌ ಅವರನ್ನು ಟೀಮ್‌ ಇಂಡಿಯಾದಲ್ಲಿ ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಭಾರತ ತಂಡದ ಮಾಜಿ ನಾಯಕ ಸುನೀಲ್‌ ಗವಾಸ್ಕರ್‌, ಒಬ್ಬೊಬ್ಬ ಆಟಗಾರರಿಗೆ ಒಂದೊಂದು ನಿಯಮವೇ? ಎಂದು ಟೀಮ್‌ ಮ್ಯಾನೇಜ್‌ಮೆಂಟ್‌ ವಿರುದ್ಧ ಕಿಡಿಕಾರಿದ್ದಾರೆ.
ಸುನಿಲ್ ಗವಾಸ್ಕರ್
ಸುನಿಲ್ ಗವಾಸ್ಕರ್
Updated on

ನವದೆಹಲಿ: ಯುವ ವೇಗಿ ಟಿ ನಟರಾಜನ್‌ ಅವರನ್ನು ಟೀಮ್‌ ಇಂಡಿಯಾದಲ್ಲಿ ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಭಾರತ ತಂಡದ ಮಾಜಿ ನಾಯಕ ಸುನೀಲ್‌ ಗವಾಸ್ಕರ್‌, ಒಬ್ಬೊಬ್ಬ ಆಟಗಾರರಿಗೆ ಒಂದೊಂದು ನಿಯಮವೇ? ಎಂದು ಟೀಮ್‌ ಮ್ಯಾನೇಜ್‌ಮೆಂಟ್‌ ವಿರುದ್ಧ ಕಿಡಿಕಾರಿದ್ದಾರೆ.

ಆಸ್ಟ್ರೇಲಿಯಾ ಸೀಮಿತ ಓವರ್‌ಗಳ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿ ಟೀಮ್‌ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿರುವ ತಮಿಳುನಾಡು ಮೂಲದ ಎಡಗೈ ವೇಗಿ ಟಿ. ನಟರಾಜನ್‌, ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆಯದೇ ಇದ್ದರೂ ನೆಟ್‌ ಬೌಲರ್‌ ಆಗಿ ತಂಡದೊಂದಿಗೆ ಇರುವಂತೆ ಸೂಚಿಸಲಾಗಿದೆ.

ಹದಿಮೂರನೇ ಆವೃತ್ತಿಯ ಐಪಿಎಲ್‌ ಪ್ಲೇಆಫ್ಸ್ ಸಮಯದಲ್ಲಿ ಜನಿಸಿದ್ದ ತಮ್ಮ ಹೆಣ್ಣು ಮಗಳನ್ನು ನೋಡುವ ಭಾಗ್ಯ ನಟರಾಜನ್‌ಗೆ ಇನ್ನೂ ಸಿಕ್ಕಿಲ್ಲ. ನೆಟ್‌ ಬೌಲರ್‌ ಆಗಿರುವ ಅವರು ಜನವರಿ ಮೂರನೇ ವಾರದಲ್ಲಿ ತವರಿಗೆ ಮರಳಲಿದ್ದಾರೆ. ಆದರೆ ಜನವರಿ ಆರಂಭದಲ್ಲಿ ಮೊದಲನೇ ಮಗುವಿನ ನಿರೀಕ್ಷೆಯಲ್ಲಿರುವ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ, ಪ್ರಥಮ ಟೆಸ್ಟ್‌ ಬಳಿಕ ಪಿತೃತ್ವ ರಜೆಗೆ ತವರಿಗೆ ಮರಳಿದ್ದಾರೆ.

ಟೀಮ್‌ ಇಂಡಿಯಾದಲ್ಲಿ ವಿಭಿನ್ನ ಆಟಗಾರರನ್ನು ವಿಭಿನ್ನವಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಸುನೀಲ್ ಗವಾಸ್ಕರ್, ತಂಡದ ಪ್ರತಿಯೊಬ್ಬರನ್ನೂ ಒಂದೇ ರೀತಿ ಕಾಣಬೇಕು ಎಂದು ಹೇಳಿದ್ದಾರೆ. 

"ಟಿ ನಟರಾಜನ್‌ ಐಪಿಎಲ್‌ ಪ್ಲೇಆಫ್ಸ್‌ ಸಮಯದಲ್ಲಿಯೇ ಮೊದಲ ಬಾರಿ ಹೆಣ್ಣು ಮಗುವಿನ ತಂದೆಯಾಗಿದ್ದರು. ಆದರೆ, ಅವರನ್ನು ಟೆಸ್ಟ್ ಸರಣಿ ನಿಮಿತ್ತ ನೆಟ್‌ ಬೌಲರ್‌ ಇರುವಂತೆ ಆಸ್ಟ್ರೇಲಿಯಾದಲ್ಲಿಯೇ ಉಳಿದುಕೊಳ್ಳುವಂತೆ ಹೇಳಲಾಗಿತ್ತು. ನೀವೇ ಊಹೆ ಮಾಡಿಕೊಳ್ಳಿ, ಸೀಮಿತ ಓವರ್‌ಗಳ ತಂಡದಲ್ಲಿ ಮ್ಯಾಚ್‌ ವಿನ್ನರ್‌ ಬೌಲರ್‌ ಅನ್ನು ನೆಟ್‌ ಬೌಲರ್‌ ಆಗಿ ಇರಿ ಎಂದು ಹೇಳಿದರೆ ಏನರ್ಥ?" ಎಂದು ಗವಾಸ್ಕರ್‌ ಟೀಮ್‌ ಮ್ಯಾನೇಜ್‌ಮೆಂಟ್‌ ವಿರುದ್ಧ ಹರಿಹಾಯ್ದಿದ್ದಾರೆ.

"ಟೆಸ್ಟ್ ಸರಣಿ ಮುಗಿದ ಬಳಿಕ ಅಂದರೆ, ಜನವರಿ ಮೂರನೇ ವಾರ ಅವರು ತನ್ನ ಮಗಳನ್ನು ಮೊದಲ ಬಾರಿ ನೋಡಲಿದ್ದಾರೆ. ಆದರೆ, ಟೀಮ್‌ ಇಂಡಿಯಾ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಅಡಿಲೇಡ್‌ ಟೆಸ್ಟ್ ಮುಗಿಸಿಕೊಂಡು ಆಗಲೇ ತನ್ನ ಮೊದಲ ಮಗುವಿನ ಜನನದ ಹಿನ್ನೆಲೆಯಲ್ಲಿ ತವರಿಗೆ ವಾಪಸ್‌ ಆಗಿದ್ದಾರೆ. ಕೊಹ್ಲಿಗೆ ಒಂದು ನ್ಯಾಯ? ನಟರಾಜನ್ ಗೆ ಒಂದು ನ್ಯಾಯವೇ? ಎಂದು ಗವಾಸ್ಕರ್‌ ಬೇಸರ ವ್ಯಕ್ತಪಡಿಸಿದ್ದಾರೆ. 

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್ ಡಿ.26ರಿಂದ ಮೆಲ್ಬೋರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಆರಂಭವಾಗಲಿದೆ. ಮೊದಲನೇ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಗೆದ್ದಿರುವ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದಿದೆ. 

ಅಡಿಲೇಡ್‌ ಟೆಸ್ಟ್ ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ 36 ರನ್‌ಗಳಿಗೆ ಸರ್ವಪತನ ಕಂಡಿದ್ದ ಟೀಮ್‌ ಇಂಡಿಯಾ ಬ್ಯಾಟ್ಸ್‌ಮನ್‌ಗಳನ್ನು ಎರಡನೇ ಪಂದ್ಯದಲ್ಲಿ ನೋಡುವುದು ತೀವ್ರ ಕುತೂಹಲ ಕೆರಳಿಸಿದೆ. ವಿಶೇಷವಾಗಿ ನಾಯಕ ವಿರಾಟ್‌ ಕೊಹ್ಲಿ ಅನುಪಸ್ಥಿತಿಯಲ್ಲಿ ಆಸೀಸ್‌ ಸವಾಲು ಹೇಗೆ ಸ್ವೀಕರಿಸುತ್ತಾರೆಂಬುದು ಆಸಕ್ತಿ ಕೆರಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com