ಕೈಲ್‌ ಜಾಮಿಸನ್‌ ಬೌಲಿಂಗ್ ಅದ್ಭುತವಾಗಿತ್ತು: ಮಯಾಂಕ್‌ ಅಗರ್ವಾಲ್‌

ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲಿಯೇ ಕೈಲ್ ಜಾಮಿಸನ್‌ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದಾರೆ ಎಂದು ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಮಯಾಂಕ್‌ ಅಗರ್ವಾಲ್‌ ಶ್ಲಾಘಿಸಿದ್ದಾರೆ.
ಮಾಯಾಂಕ್ ಅಗರವಾಲ್
ಮಾಯಾಂಕ್ ಅಗರವಾಲ್

ವೆಲ್ಲಿಂಗ್ಟನ್‌: ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲಿಯೇ ಕೈಲ್ ಜಾಮಿಸನ್‌ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದಾರೆ ಎಂದು ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಮಯಾಂಕ್‌ ಅಗರ್ವಾಲ್‌ ಶ್ಲಾಘಿಸಿದ್ದಾರೆ.

ನ್ಯೂಜಿಲೆಂಡ್ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ ಮೊದಲನೇ ದಿನದ ಅಂತ್ಯಕ್ಕೆ 55 ಓವರ್‌ಗಳಿಗೆ ಐದು ವಿಕೆಟ್‌ ನಷ್ಟಕ್ಕೆ 122 ರನ್‌ ಗಳಿಸಿದೆ. ಚೊಚ್ಚಲ ಪಂದ್ಯದಲ್ಲಿಯೇ ಜಾಮಿಸನ್‌ ವಿರಾಟ್‌ ಕೊಹ್ಲಿ, ಚೇತೇಶ್ವರ ಪೂಜಾರ ಹಾಗೂ ಹನುಮ ವಿಹಾರಿ ಒಟ್ಟು ಮೂರು ವಿಕೆಟ್‌ಗಳನ್ನು ಪಡೆದು ಭಾರತದ ಆರಂಭಿಕ ಆಘಾತಕ್ಕೆ ಕಾರಣರಾದರು.

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಯಾಂಕ್‌," ನನಗೆ ಅನಿಸಿದ ಹಾಗೆ ಜಾಮಿಸನ್‌ ಅತ್ಯುತ್ತಮವಾಗಿ ಬೌಲಿಂಗ್‌ ಮಾಡಿದ್ದಾರೆ. ಪರಿಣಾಮಕಾರಿ ಭಾಗಗಳಲ್ಲಿ ಅವರು ಚೆಂಡನ್ನು ಹಾಕಿದ್ದಾರೆ. ಅದರಲ್ಲೂ ಹೊಸ ಚೆಂಡಿನ ನಿರ್ವಹಣೆ ಅದ್ಭುತವಾಗಿದೆ' ಎಂದು ಕೊಂಡಾಡಿದರು.

"ವಿಕೆಟ್‌ ಮೃದುವಾಗಿದ್ದರಿಂದ ಚೆಂಡು ಹೆಚ್ಚು ಪುಟಿದೇಳುತ್ತಿತ್ತು. ಬ್ಯಾಟ್ಸ್‌ಮನ್‌ ಆಗಿ ನಾವು ಬೌನ್ಸ್‌ಗೆ ಹೆಚ್ಚುವರಿಯಾಗಿ ಹೊಂದಿಕೊಳ್ಳಬೇಕಿತ್ತು,' ಎಂದು 34 ರನ್ ಗಳಿಸಿದ ಆರಂಭಿಕ ಬ್ಯಾಟ್ಸ್‌ಮನ್‌ ಹೇಳಿದರು.

"ಬೌಲಿಂಗ್‌ ವೇಗಕ್ಕಿಂತ ಗಾಳಿ ಹೆಚ್ಚಿನದಾಗಿ ಬೀಸುತ್ತಿತ್ತು. ಹಾಗಾಗಿ, ಮೈದಾನದಲ್ಲಿ ಇದೆಲ್ಲವನ್ನೂ ಅರ್ಥ ಮಾಡಿಕೊಂಡು ಹೊಂದಾಣಿಕೆ ಸಾಧಿಸಬೇಕಿತ್ತು. ಒಬ್ಬ ಬ್ಯಾಟ್ಸ್‌ಮನ್‌ ಆಗಿ ಇದು ಸುಲಭವಾಗಿರಲಿಲ್ಲ. ಅದರಲ್ಲೂ ಮೊದಲನೇ ದಿನ ಈ ವಿಕೆಟ್‌ನಲ್ಲಿ ಕಷ್ಟವಾಗುತ್ತದೆ,' ಎಂದರು.

"ಮಧ್ಯಾಹ್ನದ ಭೋಜನ ವಿರಾಮದ ವೇಳೆವರೆಗೂ ಸಂಪೂರ್ಣ ಬ್ಯಾಟ್ಸ್‌ಮನ್‌ ಆಗಿ ಅನುಭವ ಹೊಂದಲು ಸಾಧ್ಯವಾಗಿರಲಿಲ್ಲ,' ಎಂದು ಸೇರಿಸಿದರು.

ಏಕಾಗ್ರತೆಯ ಕೊರತೆಯಿಂದ ನೀವು ವಿಕೆಟ್‌ ಒಪ್ಪಿಸಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕರ್ನಾಟಕದ ಬ್ಯಾಟ್ಸ್‌ಮನ್‌. " ಬ್ಯಾಟಿಂಗ್‌ ಮಾಡುವಾಗ ಇಂಥ ಹಲವು ಸಂಗತಿಗಳನ್ನು ನಾನು ಗಮನಿಸಲು ಹೋಗಲೇ ಇಲ್ಲ. ನೀವು ಚೆಂಡನ್ನು ಸರಿಯಾಗಿ ಅರ್ಥಮಾಡಿಕೊಂಡು ಉತ್ತಮವಾಗಿ ಬ್ಯಾಟಿಂಗ್‌ ಮಾಡುತ್ತಿದ್ದರೆ ಅಷ್ಟು ಸಾಕು. ಇಂಥ ವಾತಾವರಣದಲ್ಲಿ ಇಂಥ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಾನ್‌ ಸ್ಟ್ರೈಕ್‌ನಲ್ಲಿಉಳಿದುಕೊಳ್ಳುವುದ ಒಳ್ಳೆಯದು,' ಎಂದು ನಗುಮೊಗದಲ್ಲಿ ಉತ್ತರಿಸಿದರು.

ಅಜಿಂಕ್ಯಾ ರಹಾನೆ(38) ಹಾಗೂ ರಿಷಭ್‌ ಪಂತ್ ನಾಳೆಗೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ವೃದ್ದಿಮನ್‌ ಸಾಹ ಬದಲು ರಿಷಭ್‌ ಪಂತ್‌ಗೆ ಅಂತಿಮ 11 ರಲ್ಲಿ ಅವಕಾಶ ಸಿಕ್ಕಿದೆ.

"ಅಜಿಂಕ್ಯಾ ರಹಾನೆ ಬ್ಯಾಟಿಂಗ್ ಹಾದಿ ಅತ್ಯುತ್ತಮವಾಗಿದೆ. ರಹಾನೆ ಹಾಗೂ ಪಂತ್‌ ದೊಡ್ಡ ಜತೆಯಾಟ ಆಡಲಿದ್ದಾರೆಂಬ ನಂಬಿಕೆಯಿದ್ದು, ತಂಡದ ಮೊತ್ತ ಏರಿಸಲಿದ್ದಾರೆ,' ಎಂದು ಮಯಾಂಕ್‌ ಅಗರ್ವಾಲ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com