ಕೊಲೊಂಬೊ: 2011 ರ ವಿಶ್ವಕಪ್ ಟೂರ್ನಿಯ ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ 2011 ರಲ್ಲಿ ತಂಡವನ್ನು ಮುನ್ನಡೆಸಿದ್ದ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ಅವರನ್ನು 10 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ.
ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಲುತ್‌ಗಮಗೆ ಲಂಕಾ ತಂಡದ ವಿರುದ್ಧ 2011 ರ ವಿಶ್ವಕಪ್ ಫೈನಲ್ಸ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದರು. ಆದರೆ ಇದಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನೇನು ನೀಡಿರಲಿಲ್ಲ. ಶ್ರೀಲಂಕಾದ ಕ್ರೀಡಾ ಸಚಿವಾಲಯ ಈ ಸಂಬಂಧ ತನಿಖೆ ಪ್ರಾರಂಭಿಸಿತ್ತು.
ಶ್ರೀಲಂಕಾದ ನ್ಯೂಸ್ ವೈರ್ ಎಂಬ ವೆಬ್ ಸೈಟ್ ಪ್ರಕಟಿಸಿರುವ ವರದಿಯ ಪ್ರಕಾರ ಸಂಗಕ್ಕರ ಅವರನ್ನು ಅಲ್ಲಿನ ಅಧಿಕಾರಿಗಳು 10 ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದ್ದು ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ಸಂಗಕ್ಕರ ಅವರನ್ನು ವಿಚಾರಣೆಗೊಳಪಡಿಸಿರುವುದನ್ನು ವಿರೋಧಿಸಿ ಲಂಕಾದ ಯುವ ಸಂಘಟನೆ ಸಮಗಿ ತರುಣ ಬಾಲವೇಗಯಾದ ಯುವಕರು ಎಸ್ಎಲ್ ಸಿ ಕಚೇರಿಯ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದ್ದು ಖ್ಯಾತ ಕ್ರಿಕೆಟ್ ಪಟು ಸಂಗಕ್ಕಾರ ಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸಂಗಕ್ಕಾರ ಅವರ ವಿಚಾರಣೆ ಮುಂದಿನ ವಾರ ನಡೆಯಬೇಕಿತ್ತು. ಆದರೆ ಅವರ ಮನವಿ ಮೇರೆಗೆ ತ್ವರಿತ ವಿಚಾರಣೆ ನಡೆಸಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2011 ರ ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ ಅರವಿಂದ ಡಿ ಸಿಲ್ವಾ ಹಾಗೂ ಕ್ರಿಕೆಟಿಗ ಉಪುಲ್ ತರಂಗ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ.
Advertisement