ನವದೆಹಲಿ: ಚುರುಕಿನ ಮನಸ್ಥಿತಿ ಮತ್ತು ಆಡಳಿತಗಾರನಾಗಿ ಸಾಕಷ್ಟು ಅನುಭವ ಹೊಂದಿರುವ ಸೌರವ್ ಗಂಗೂಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನ (ಐಸಿಸಿ) ಮುಖ್ಯಸ್ಥ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂದು ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ಅಭಿಪ್ರಾಯಪಟ್ಟಿದ್ದಾರೆ.
ನಾನು ಗಂಗೂಲಿ ಅವರ ದೊಡ್ಡ ಅಭಿಮಾನಿ. ಬಿಸಿಸಿಐ ಅಧ್ಯಕ್ಷ ರಾಗಿರುವ ಸೌರವ್ ವಿಶಾಲ ಮನೋಭಾವ ಹೊಂದಿದ್ದು, ಐಸಿಸಿ ಮುಖ್ಯಸ್ಥನ ಹುದ್ದೆಯನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಬಲ್ಲರು ಎಂದು ಮೆರಿಲ್ ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಅಧ್ಯಕ್ಷರಾಗಿರುವ ಸಂಗಕ್ಕಾರ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ಕ್ರಿಕೆಟ್ ಆಟಗಾರರ ಮಧ್ಯೆ ಸಂಬಂಧಗಳನ್ನು ಬೆಸೆಯುವ ಸಾಮರ್ಥ್ಯ ಗಂಗೂಲಿ ಅವರಲ್ಲಿದೆ. ಬಿಸಿಸಿಐ ಅಧ್ಯಕ್ಷರಾಗುವ ಮುಂಚಿತವಾಗಿಯೇ ಅವರಲ್ಲಿ ಈ ಗುಣವನ್ನು ನಾನು ನೋಡಿದ್ದೆ. ಐಸಿಸಿಯಂತಹ ಮಹತ್ವದ ಹುದ್ದೆಗೆ ಇಂತಹ ಗುಣ ಅತ್ಯಗತ್ಯ ಎಂದು ಸಂಗಕ್ಕಾರ ಹೇಳಿದ್ದಾರೆ.
ಐಸಿಸಿ ಮುಖ್ಯಸ್ಥರಾಗಿದ್ದ ಶಶಾಂಕ್ ಮನೋಹರ್ ಈ ತಿಂಗಳ ಆರಂಭದಲ್ಲಿ ಹುದ್ದೆ ತೊರೆದಿದ್ದು, ಮುಂದಿನ ಮುಖ್ಯಸ್ಥರ ಚುನಾವಣೆ ನಡೆಯುವವರೆಗೂ ಉಪ ಮುಖ್ಯಸ್ಥರಾಗಿದ್ದ ಇಮ್ರಾನ್ ಖ್ವಾಜಾ ಹಂಗಾಮಿ ಮುಖ್ಯಸ್ಥನ ಸ್ಥಾನದಲ್ಲಿದ್ದಾರೆ.
ಈ ಹಿಂದೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ನಿರ್ದೇಶಕ ಗ್ರೇಮ್ ಸ್ಮಿತ್ ಕೂಡಾ ಗಂಗೂಲಿಯನ್ನು ಐಸಿಸಿ ಮುಖ್ಯಸ್ಥನ ಸ್ಥಾನಕ್ಕೆ ಸೂಕ್ತ ಎಂದಿದ್ದರು.ಈ ಕುರಿತಂತೆ ಇತ್ತೀಚಿಗೆ ಪ್ರತಿಕ್ರಿಯಿಸಿದ್ದ ಗಂಗೂಲಿ, ಐಸಿಸಿ ಮುಖ್ಯಸ್ಥನ ಸ್ಥಾನಕ್ಕೆ ಸ್ಪರ್ಧಿಸಲು ಆತುರ ವಿಲ್ಲ ಎಂದಿದ್ದರು.
Advertisement