ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ಹಾರ್ದಿಕ್ ಪಾಂಡ್ಯ
ನವದೆಹಲಿ: ಸತತ ಐದು ತಿಂಗಳು ಕೆಳ ಬೆನ್ನು ನೋವಿನಿಂದ ಬಳಲುತ್ತಿದ್ದ ಭಾರತ ತಂಡದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಇದೀಗ ಫುಲ್ ಫಿಟ್ ಆಗಿದ್ದಾರೆ. ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡಕ್ಕೆ ಮರಳುವ ಉತ್ಸಾಹದಲ್ಲಿದ್ದಾರೆ
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಪುನರ್ವಸತಿ ಶಿಬಿರದಲ್ಲಿ ಸಂಪೂರ್ಣ ಫಿಟ್ನೆಸ್ ಕಾರ್ಯದಲ್ಲಿ ತೊಡಗಿದ್ದ ಹಾರ್ದಿಕ್, ಹಂತ-ಹಂತವಾಗಿ ತನ್ನ ಸಾಮರ್ಥ್ಯವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಡಿ.ವೈ ಪಾಟೀಲ್ ಟಿ20 ಕಪ್ ಟೂರ್ನಿಯಲ್ಲಿ ಕೇವಲ 25 ಎಸೆತಗಳಲ್ಲಿ 38 ರನ್ ಚಚ್ಚಿ ಮತ್ತೆ ಲಯಕ್ಕೆ ಮರಳಿದ್ದು, ತಾನು ಸಂಪೂರ್ಣ ಫಿಟ್ ಇರುವುದಾಗಿ ರಾಷ್ಟ್ರೀಯ ತಂಡದ ಆಯ್ಕೆದಾರರಿಗೆ ಸಂದೇಶ ರವಾನಿಸಿದ್ದಾರೆ.
ಕ್ರಿಕೆಟ್ ಆಡಿದ ಫೋಟೊಗಳನ್ನು ಸೋಮವಾರ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿರುವ ಹಾರ್ದಿಕ್, "ನಾನಿದ್ದ ಮೈದಾನಕ್ಕೆ ಮತ್ತೇ ಬಂದಿರುವುದು ತುಂಬಾ ಖುಷಿ ತಂದಿದೆ. ನಿಮ್ಮ ಸಹಕಾರ ಹಾಗೆಯೇ ಮುಂದುವರಿಯಲಿ,'' ಎಂಬ ಶಿರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಹಾಗೂ ಸೂರ್ಯಕುಮಾರ್ ಯಾದವ್ ಕಾಮೆಂಟ್ ಮಾಡಿ ಸ್ವಾಗತ ಕೋರಿದ್ದಾರೆ.
ಅಷ್ಟೇ ಅಲ್ಲದೆ, ಸ್ಟಾರ್ ಆಲ್ರೌಂಡರ್ ಕಮ್‌ಬ್ಯಾಕ್‌ಗೆ ಅಭಿಮಾನಿಗಳು ಕೂಡ ಸ್ವಾಗತ ಕೋರಿದ್ದಾರೆ. ಹಾರ್ದಿಕ್ ಪಾಂಡ್ಯ ಡಿ.ವೈ ಪಾಟೀಲ್ ಟಿ20 ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಫಾರ್ಮ್‌ಗೆ ಮರಳಿದ್ದು, ಮುಂಬರುವ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಟೀಮ್ ಇಂಡಿಯಾಗೆ ಬಹುತೇಕ ಕಮ್ ಬ್ಯಾಕ್ ಮಾಡಲಿದ್ದಾರೆ.
2019ರ ಜುಲೈ 9 ರಂದು ಹಾರ್ದಿಕ್, ಐಸಿಸಿ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ಏಕದಿನ ಪಂದ್ಯವಾಡಿದ್ದರು. ನಂತರ, ಅದೇ ವರ್ಷ ಸೆಪ್ಟೆಂಬರ್ 22 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಪಂದ್ಯದಲ್ಲಿ ಕೊನೆಯ ಬಾರಿ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು.
ಇದೇ 12 ರಿಂದ 18ರವರೆಗೆ ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಹಾರ್ದಿಕ್ ಈ ಸರಣಿಗೆ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ