![ಶೇನ್ ವಾಟ್ಸನ್ - ವಿರೇಂದ್ರ ಸೆಹ್ವಾಗ್](http://media.assettype.com/kannadaprabha%2Fimport%2F2020%2F10%2F5%2Foriginal%2F.jpg?w=480&auto=format%2Ccompress&fit=max)
ನವದೆಹಲಿ: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಅನುಭವಿಸಿದ್ದ ವೇಳೆ ಟೀಮ್ ಇಂಡಿಯಾ ಮಾಜಿ ಆರಂಭಿಕ ವಿರೇಂದ್ರ ಸೆಹ್ವಾಗ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಟೀಕಿಸಿದ್ದರು. ಇದೀಗ ಭಾನುವಾರ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸಿಎಸ್‌ಕೆ ಗೆಲುವು ಸಾಧಿಸುತ್ತಿದ್ದಂತೆ ತಮ್ಮ ಟೀಕೆಗೆ ವೀರು ಪ್ರತಿಕ್ರಿಯಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ವಿರೇಂದ್ರ ಸೆಹ್ವಾಗ್, ತಂಡಗಳ ಪ್ರದರ್ಶನದ ಕುರಿತಂತೆ ತಮ್ಮದೇ ವಿಶ್ಲೇಷಣೆಯನ್ನು ನೀಡುತ್ತಿದ್ದಾರೆ. ಅದರಂತೆ ಪ್ರಸಕ್ತ ಆವೃತ್ತಿಯ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೈಫಲ್ಯದ ಕುರಿತು ಸೆಹ್ವಾಗ್ ಟೀಕಿಸಿದ್ದರು. ಭಾನುವಾರ ಪಂಜಾಬ್ ವಿರುದ್ಧ ಚೆನ್ನೈ ಗೆಲ್ಲುತ್ತಿದ್ದಂತೆ ಮತ್ತೊಮ್ಮೆ ಸಿಎಸ್‌ಕೆಯನ್ನು ಕುಟುಕಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 165 ರನ್‌ಗಳ ಗುರಿ ಬೆನ್ನತ್ತುವಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ತೀವ್ರತೆ ಕಡಿಮೆ ಇತ್ತು. ಅಂತಿಮವಾಗಿ ಚೆನ್ನೈ 7 ರನ್‌ಗಳಿಂದ ಸೋಲು ಒಪ್ಪಿಕೊಂಡಿತ್ತು. ಈ ಇನಿಂಗ್ಸ್‌ನ ಸಿಎಸ್‌ಕೆ ಬ್ಯಾಟಿಂಗ್ ಅನ್ನು ವಿರೇಂದ್ರ ಟೀಕಿಸಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಇದೇ ರೀತಿ ಸೋತಿತ್ತು. ಆದರೆ, ಭಾನುವಾರ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 10 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿತ್ತು.
ಪ್ರಸ್ತಕ್ತ ಆವೃತ್ತಿಯ ಆರಂಭದಿಂದಲೂ ಕಳಪೆ ಲಯದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಬ್ಯಾಟ್ಸ್‌ಮನ್ ಶೇನ್ ವಾಟ್ಸನ್ ವಿರುದ್ಧ ಸೆಹ್ವಾಗ್ ಹಾಸ್ಯಭರಿತ ಕಾಮೆಂಟ್ ಮಾಡಿದ್ದಾರೆ. ಅವರ ಆರಂಭಿಕ ಜತೆಗಾರ ಫಾಫ್ ಡು ಪ್ಲೆಸಿಸ್ ಅವರನ್ನು 'ಸಾಂಭಾ' ಎಂದು ಕರೆದಿದ್ದಾರೆ. ಈ ಜೋಡಿ ಕಿಂಗ್ಸ್ ಇಲೆವೆನ್ ಪಂಜಾಬ್ ಬೌಲರ್‌ಗಳಿಗೆ ಅಂಗಳದ ಎಲ್ಲಾ ಕಡೆ ಭರ್ಜರಿ ಹೊಡೆತಗಳನ್ನು ಹೊಡೆದಿದ್ದರು. ವಾಟ್ಸನ್ ಹಾಗೂ ಡುಪ್ಲೆಸಿಸ್ ಕ್ರಮವಾಗಿ 83 ಮತ್ತು 87 ರನ್‌ಗಳನ್ನು ಗಳಿಸಿದರು.
"ಹದಿಮೂರನೇ ಆವೃತ್ತಿಯ ಇಂಡಿಯನ್ಸ್ ಪ್ರೀಮಿಯರ್ ಲೀಗ್ ಸೆ.10 ರಂದೇ ಆರಂಭವಾಗಿತ್ತು, ಕೊನೆಯಗೂ ಡೀಸೆಲ್ ಇಂಜಿನ್ ಶೇನ್ ವ್ಯಾಟ್ಸನ್ ಸ್ಟಾರ್ಟ್ ಆಗಿದೆ. ಇವರು ಹಾಗೂ 'ಸಾಂಭಾ' ಸೇರಿಕೊಂಡು ಅಂಗಳದಲ್ಲಿ ಪಂಜಾಬ್ ಆಟಗಾರರನ್ನು ಟೂರ್ ಕರೆದುಕೊಂಡು ಹೋಗಿದ್ದರು. ಎಲ್ಲಾ ಕಡೆಯೂ ಚೆಂಡನ್ನು ಹೊಡೆದಿದ್ದಾರೆ," ಎಂದು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೋದಲ್ಲಿ ಸೆಹ್ವಾಗ್ ಹೇಳಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ಇನಿಂಗ್ಸ್‌ನ 18ನೇ ಓವರ್‌ನಲ್ಲಿ ಶಾರ್ದೂಲ್ ಠಾಕೂರ್ ಅವರು, ಕ್ರೀಸ್‌ನಲ್ಲಿ ನೆಲೆಯೂರಿದ್ದ ಕೆ.ಎಲ್ ರಾಹುಲ್ ಹಾಗೂ ನಿಕೋಲಸ್ ಪೂರನ್ ಅವರನ್ನು ಔಟ್ ಮಾಡಿದ್ದರು. ಇದು ಟರ್ನಿಂಗ್ ಪಾಯಿಂಟ್ ಎಂದು 41ರ ಪ್ರಾಯದ ಮಾಜಿ ಆಟಗಾರ ಹೇಳಿದರು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳಿಲ್ಲದೆ, ನಿಯಮಿತ ಬೌಂಡರಿಗಳಿಗೆ ಕಡಿವಾಣ ಬಿತ್ತು. ಆ ಮೂಲಕ 190 ಕ್ಕೂ ಹೆಚ್ಚು ರನ್‌ಗಳಿಸುವ ಪಂಜಾಬ್ ನಿರೀಕ್ಷೆ ಹುಸಿಯಾಯಿತು.
"18ನೇ ಓವರ್ ಪಂದ್ಯಕ್ಕೆ ಟರ್ನಿಂಗ್ ಪಾಯಿಂಟ್. ಎಂಎಸ್ ಧೋನಿ ನಾಯಕತ್ವ ಹಾಗೂ ರವೀಂದ್ರ ಜಡೇಜಾ ಫೀಲ್ಡಿಂಗ್ ಹಾಗೂ ಶಾರ್ದೂಲ್ ಠಾಕೂರ್ ಬೌಲಿಂಗ್‌ನಿಂದ ಸಿಎಸ್‌ಕೆ ಪರ ಪಂದ್ಯ ತಿರುವು ಕಂಡಿತು," ಎಂದು ವಿರೇಂದ್ರ ಸೆಹ್ವಾಗ್ ಹೇಳಿದರು.
ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಅಂಕ ಪಟ್ಟಿಯಲ್ಲಿ ಎರಡು ಸ್ಥಾನ ಏರಿಕೆ ಕಂಡು, ಆರನೇ ಕ್ರಮಾಂಕಕ್ಕೆ ಜಿಗಿಯಿತು. ಅ.7 ರಂದು ಸಿಎಸ್‌ಕೆ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೆಣಸಲಿದೆ. ಕಿಂಗ್ಸ್ ಇಲೆವೆನ್ ಪಂಜಾಬ್, ಅದರ ಮುಂದಿನ ದಿನ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ.
Advertisement