ಮುಂಬೈ: ಪಂಜಾಬ್ ಕಿಂಗ್ಸ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಕೈಗೆ ಗಾಯ ಮಾಡಿಕೊಂಡಿರುವ ಇಂಗ್ಲೆಂಡ್ ನ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಪ್ರಸಕ್ತ ಆವೃತ್ತಿಯ ಐಪಿಎಲ್ ನಿಂದ ಹೊರ ಬಿದಿದ್ದಾರೆ. ಪ್ರಾಂಚೈಸಿ ರಾಜಸ್ಥಾನ ರಾಯಲ್ಸ್ ಮಂಗಳವಾರ ಈ ವಿಷಯವನ್ನು ಖಚಿತಪಡಿಸಿದೆ. ಆದಾಗ್ಯೂ, ಸ್ಟೋಕ್ಸ್ ಇಂಗ್ಲೆಂಡ್ ಗೆ ತೆರಳುವ ಮುನ್ನ ಭಾರತದಲ್ಲಿಯೇ ಒಂದು ವಾರ ಉಳಿಯಲಿದ್ದಾರೆ.
ಮುಂಬೈನಲ್ಲಿ ಸೋಮವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಫೀಲ್ಡಿಂಗ್ ವೇಳೆಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಲ್ ರೌಂಡರ್ ಬೇನ್ ಸ್ಟೋಕ್ಸ್ ಅವರ ಎಡಗೈ ಗಾಯಗೊಂಡಿರುವುದಾಗಿ ಬ್ರಿಟಿಷ್ ಮಾಧ್ಯಮಗಳಲ್ಲಿ ವರದಿ ಬಂದ ನಂತರ ರಾಯಲ್ಸ್ ಪ್ರಾಂಚೈಸಿ ಹೇಳಿಕೆಯಲ್ಲಿ ತಿಳಿಸಿದೆ.
ನಂತರ ನಡೆಸಲಾದ ತನಿಖೆಯಲ್ಲಿ ಅವರ ಕೈ ಬೆರಳು ಮುರಿದಿರುವುದು ತಿಳಿದುಬಂದಿದೆ. ಇದರಿಂದಾಗಿ ದುರದೃಷ್ಟವಶಾತ್ ಅವರು ಪ್ರಸಕ್ತ ಆವೃತ್ತಿಯ ಐಪಿಎಲ್ ನಿಂದ ಹೊರಗೆ ಉಳಿಯಬೇಕಾಗಿದೆ. ಕೈ ಶಸ್ತ್ರಚಿಕಿತ್ಸೆಯಿಂದಾಗಿ ಜೋಫ್ರಾ ಆರ್ಚರ್ ಅವರನ್ನು ಕಳೆದುಕೊಂಡಿರುವ ರಾಜಸ್ಥಾನ ರಾಯಲ್ಸ್ ಗೆ ಇದೀಗ ಬೆನ್ ಸ್ಟೋಕ್ಸ್ ಅವರು ಐಪಿಎಲ್ ನಿಂದ ಹೊರಗೆ ಉಳಿದಿರುವುದು ಮತ್ತೊಂದು ಹೊಡೆತ ನೀಡಿದ್ದಂತಾಗಿದೆ.
ಬೆನ್ ರಾಯಲ್ಸ್ ಕುಟುಂಬದ ಮೌಲ್ಯವರ್ಧಿತ ಸದಸ್ಯ , ದೊಡ್ಡ ಆಸ್ತಿ ಎಂಬುದು ರಾಜಸ್ಥಾನ ರಾಯಲ್ಸ್ ತಂಡದ ಪ್ರತಿಯೊಬ್ಬರಿಗೂ ಗೊತ್ತಿದ್ದು, ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಉಳಿದಿರುವ ಪಂದ್ಯಗಳಿಗಾಗಿ ಪರ್ಯಾಯ ಆಟಗಾರನ್ನು ಆಯ್ಕೆ ಮಾಡಲು ಪರಿಶೀಲಿಸುವುದಾಗಿ ರಾಜಸ್ಥಾನ ರಾಯಲ್ಸ್ ಪ್ರಾಂಚೈಸಿ ಹೇಳಿಕೆಯಲ್ಲಿ ತಿಳಿಸಿದೆ.
Advertisement