
ಕಾಬೂಲ್: ತಾಲಿಬಾನಿಗಳು ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನ ಕ್ರಿಕೆಟ್ ಭವಿಷ್ಯದ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ತಾಲಿಬಾನ್ ವಕ್ತಾರ ಅಹ್ಮದುಲ್ಲಾ ವಸೀಕ್ ಮಹತ್ವದ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಅಫ್ಘಾನ್ ಕ್ರಿಕೆಟ್ ವ್ಯವಹಾರಗಳಲ್ಲಿ ತಾಲಿಬಾನಿಗಳು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟ ಭರವಸೆ ನೀಡಿದ್ದಾರೆ. ಅಂತಾರಾಷ್ಟ್ರೀಯ ವೇಳಾಪಟ್ಟಿಯಂತೆ ಪಂದ್ಯಗಳನ್ನು ಎಂದಿನಂತೆ ಆಡಬಹುದು. ತಮ್ಮಿಂದ ಯಾವುದೇ ಅಭ್ಯಂತರವಿಲ್ಲ ಎಂದು ಖಾತರಿ ನೀಡಿದ್ದಾರೆ.
ನಮಗೆ ವಿಶ್ವದ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಮುಖ್ಯವಾಗಿದೆ. ತಮ್ಮ ರಾಷ್ಟ್ರೀಯ ಕ್ರಿಕೆಟ್ ತಂಡ ವಿದೇಶಿ ಪ್ರವಾಸಕ್ಕೆ ತೆರಳಿದರೂ, ವಿದೇಶಿ ತಂಡಗಳು ತಮ್ಮ ದೇಶಕ್ಕೆ ಬಂದರೂ ಯಾವುದೇ ಅಭ್ಯಂತರ ಅಡೆ ತಡೆಗಳು ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ವೇಳಾಪಟ್ಟಿಯಂತೆ ನವೆಂಬರ್‌ನಲ್ಲಿ ನಡೆಯಬೇಕಿರುವ ಆಸೀಸ್ ಪ್ರವಾಸ ಎಂದಿನಂತೆ ಮುಂದುವರಿಯಲಿದೆ ಎಂದು ಭರವಸೆ ನೀಡಿದ್ದಾರೆ. ಈ ಪ್ರವಾಸದಲ್ಲಿ ಅಫ್ಘಾನ್ ತಂಡ ನವೆಂಬರ್ 27ರಂದು ಆಸೀಸ್ ಎದುರು ಏಕೈಕ ಟೆಸ್ಟ್ ಪಂದ್ಯ ಆಡಲಿದೆ. ಹೋಬಾರ್ಟ್ ನಲ್ಲಿ ನಡೆಯಲಿರುವ ಈ ಐತಿಹಾಸಿಕ ಪಂದ್ಯವನ್ನು ಆಯೋಜಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ) ಪ್ರಕಟಿಸಿದೆ.
Advertisement