ಟಿ20 ವಿಶ್ವಕಪ್: ನ್ಯೂಜಿಲೆಂಡ್-ಆಫ್ಘನ್ ಪಂದ್ಯದ ಪಿಚ್ ಕ್ಯೂರೇಟರ್ ಮೃತದೇಹ ಪತ್ತೆ
ಅಬುಧಾಬಿ ಶೇಖ್ ಜಾಯೆದ್ ಗ್ರೌಂಡ್ ನಿಂದ ಕೆಟ್ಟ ಸುದ್ದಿಯೊಂದು ಹೊರಬಂದಿದೆ. ಅಫ್ಘಾನಿಸ್ತಾನ ಹಾಗೂ ನ್ಯೂಜಿಲೆಂಡ್ ಪಂದ್ಯದ ಪಿಚ್ ಕ್ಯೂರೇಟರ್ ಆಗಿದ್ದ ಮೋಹನ್ ಸಿಂಗ್ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ.
Published: 08th November 2021 03:13 PM | Last Updated: 08th November 2021 05:16 PM | A+A A-

ಮೋಹನ್ ಸಿಂಗ್
ಅಬುಧಾಬಿ: ಅಬುಧಾಬಿ ಶೇಖ್ ಜಾಯೆದ್ ಗ್ರೌಂಡ್ ನಿಂದ ಕೆಟ್ಟ ಸುದ್ದಿಯೊಂದು ಹೊರಬಂದಿದೆ. ಅಫ್ಘಾನಿಸ್ತಾನ ಹಾಗೂ ನ್ಯೂಜಿಲೆಂಡ್ ಪಂದ್ಯದ ಪಿಚ್ ಕ್ಯೂರೇಟರ್ ಆಗಿದ್ದ ಮೋಹನ್ ಸಿಂಗ್ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ.
ಸಾವಿಗೆ ಏನು ಕಾರಣ ಅನ್ನೋದು ಇನ್ನೂ ತಿಳಿದುಬಂದಿಲ್ಲ. ಆದರೆ, ಸ್ಥಳೀಯ ಮಾಹಿತಿಗಳ ಪ್ರಕಾರ ಇದೊಂದು ಆತ್ಮಹತ್ಯೆ ಅಂತಾ ಹೇಳಲಾಗುತ್ತಿದೆ. ಪಿಚ್ ಕ್ಯುರೇಟರ್ ಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ಈ ಬಗ್ಗೆ ಸ್ಥಳೀಯ ಆಡಳಿತ ತನಿಖೆಗೆ ಆದೇಶಿಸಿದೆ.
ಮೋಹನ್ ಸಿಂಗ್ ಅವರು, ಉತ್ತರಾಖಂಡ್ ರಾಜ್ಯದ ಗರ್ವಾಲ್ ಮೂಲದವರು. ನಿನ್ನೆಯ ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ ಪಂದ್ಯಕ್ಕೂ ಮುನ್ನ ಅವರ ಕೋಣೆಯಲ್ಲಿ ಮೋಹನ್ ಸಿಂಗ್ ಶವವಾಗಿ ಪತ್ತೆಯಾಗಿದ್ದಾರೆ. ಮೋಹನ್ ಸಿಂಗ್ ಅವರು ಹಲವು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು ಅಂತಾ ಹೇಳಲಾಗುತ್ತಿದೆ. ಆದರೆ ಪಿಚ್ ಕ್ಯೂರೇಟರ್ ನಿಧನದ ಬಗ್ಗೆ ಸೂಕ್ತ ತನಿಖೆ ನಡೆದ ನಂತರವಷ್ಟೇ ಸತ್ಯಾಸತ್ಯತೆ ಹೊರಬರಲಿದೆ.
ಶೇಖ್ ಜಾಯೇದ್ ಕ್ರೀಡಾಂಗಣದಲ್ಲಿನ ಪಿಚ್ ತಯಾರಿಯ ಉಸ್ತುವಾರಿಯನ್ನು ಮೋಹನ್ ಸಿಂಗ್ ನೋಡಿಕೊಳ್ಳುತ್ತಿದ್ದರು. ಇಂಗ್ಲೆಂಡ್, ಆಸ್ಟ್ರೇಲಿಯಾ, ಪಾಕಿಸ್ತಾನ, ಭಾರತ, ಶ್ರೀಲಂಕಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ತಂಡಗಳು ಮೋಹನ್ ಸಿಂಗ್ ತಯಾರಿಸಿದ ಪಿಚ್ ನಲ್ಲಿ ಪಂದ್ಯಗಳನ್ನು ಆಡಿವೆ. ಮೋಹಾಲಿಯ ಪಂಜಾಬ್ ಕ್ರಿಕೆಟ್ ಸ್ಟೇಡಿಯಂನಲ್ಲಿ ತರಬೇತಿ ಪಡೆದು 2004ರಲ್ಲಿ ಮೋಹನ್ ಸಿಂಗ್ ಅಬುಧಾಬಿಗೆ ತೆರಳಿದ್ದರು. ಇಲ್ಲಿ 1994ರಿಂದ ಗ್ರೌಂಡ್ ಸೂಪರ್ ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.