ಢಾಕಾದಲ್ಲಿ ತನ್ನ ಧ್ವಜ ಹಾರಿಸಲು ಮುಂದಾದ ಪಾಕ್: ಭುಗಿಲೆದ್ದ ವಿವಾದ, ಬಾಂಗ್ಲಾ ಅಭಿಮಾನಿಗಳ ಆಕ್ಷೇಪ!

ಢಾಕಾದ ಮೀರ್ ಪುರ್ ಕ್ರೀಡಾಂಗಣದಲ್ಲಿ ತನ್ನ ದೇಶದ ಧ್ವಜಾರೋಹಣ ಮಾಡಲು ಮುಂದಾದ ಪಾಕಿಸ್ತಾನದ ಕ್ರಮ ಈಗ ವಿವಾದಕ್ಕೆ ಕಾರಣವಾಗಿದೆ.
ಪಾಕಿಸ್ತಾನದ ಧ್ವಜ
ಪಾಕಿಸ್ತಾನದ ಧ್ವಜ

ಢಾಕಾ: ಢಾಕಾದ ಮೀರ್ ಪುರ್ ಕ್ರೀಡಾಂಗಣದಲ್ಲಿ ತನ್ನ ದೇಶದ ಧ್ವಜಾರೋಹಣ ಮಾಡಲು ಮುಂದಾದ ಪಾಕಿಸ್ತಾನದ ಕ್ರಮ ಈಗ ವಿವಾದಕ್ಕೆ ಕಾರಣವಾಗಿದೆ.
 
ಪಾಕಿಸ್ತಾನ-ಬಾಂಗ್ಲಾ ನಡುವೆ ಟಿ20 ಸರಣಿಯ ಮೂರು ಪಂದ್ಯಗಳು ನಿಗದಿಯಾಗಿದ್ದು, ಇದಕ್ಕೂ ಮುನ್ನ ನಡೆದ ಅಭ್ಯಾಸ ಸೆಷನ್ ನಲ್ಲಿ ಪಾಕಿಸ್ತಾನದ ಕ್ರಿಕೆಟ್ ತಂಡ ಕ್ರೀಡಾಂಗಣದಲ್ಲಿ ತನ್ನ ರಾಷ್ಟ್ರೀಯ ಧ್ವಜವನ್ನು ಹಾರಿಸಲು ಯತ್ನಿಸಿರುವುದು ಬಾಂಗ್ಲಾ ಅಭಿಮಾನಿಗಳನ್ನು ಕೆರಳಿಸಿದೆ. 

ಬಾಂಗ್ಲಾ ಅಭಿಮಾನಿಗಳು ಪಾಕ್ ನ ಈ ನಡೆಯನ್ನು, ಬಾಂಗ್ಲಾ ದೇಶದ ಸ್ವಾತಾಂತ್ರ್ಯೋತ್ಸವದ  ಸುವರ್ಣ ಮಹೋತ್ಸವ ಆಚರಣೆಯ ಸನಿಹದಲ್ಲಿ ನೀಡಿರುವ ರಾಜಕೀಯ ಸಂದೇಶ ಎಂದು ಕಿಡಿ ಕಾರಿದ್ದಾರೆ. 

"ಬಾಂಗ್ಲಾದೇಶಕ್ಕೆ ವಿವಿಧ ರಾಷ್ಟ್ರಗಳ ತಂಡಗಳು ಹಲವು ಬಾರಿ ಬಂದಿವೆ. ಹಲವು ಪಂದ್ಯಗಳನ್ನಾಡಿವೆ. ಆದರೆ ಯಾರೂ ಸಹ ಅಭ್ಯಾಸ ಸೆಷನ್ ನಲ್ಲಿ ಕ್ರೀಡಾಂಗಣದಲ್ಲಿ  ತಮ್ಮ ರಾಷ್ಟ್ರಧ್ವಜಾರೋಹಣ ಮಾಡಿರಲಿಲ್ಲ. ಈಗ ಪಾಕಿಸ್ತಾನ ಈ ರೀತಿ ಮಾಡುತ್ತಿರುವುದೇಕೆ? ಇದು ಏನನ್ನು ಸೂಚಿಸುತ್ತದೆ? ಎಂದು ಅಭಿಮಾನಿಯೊಬ್ಬರು ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

"ವಿವಾದ ಭುಗಿಲೇಳುತ್ತಿದ್ದಂತೆಯೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದು, ಕಳೆದ 2 ತಿಂಗಳಿನಿಂದ ಅಭ್ಯಾಸ ಪಂದ್ಯಗಳಲ್ಲೂ ರಾಷ್ಟ್ರಧ್ವಜವನ್ನು ಇಟ್ಟುಕೊಳ್ಳುವ ಪರಿಪಾಠವನ್ನು ಆರಂಭಿಸಲಾಗಿದೆ" ಎಂದು ಸಮರ್ಥನೆ ನೀಡಿದೆ.

ಈ ಘಟನೆಯ ಬಗ್ಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಪಾಕಿಸ್ತಾನದ ಕೋಚ್ ಸಕ್ಲೇನ್ ಮುಷ್ತಾಕ್ ತಂಡದ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಅಭ್ಯಾಸವನ್ನು ಪ್ರಾರಂಭಿಸಿದ್ದಾರೆ ಎಂದು ಬಿಬಿಸಿ ಬಾಂಗ್ಲಾ ಸೇವೆಗೆ ತಂಡದ ವ್ಯವಸ್ಥಾಪಕ ಇಬ್ರಾಹಿಂ ಬಡಿಜಿ ತಿಳಿಸಿದ್ದಾರೆ. 

ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಅಥವಾ ದ್ವಿಪಕ್ಷೀಯ ಪಂದ್ಯಗಳಲ್ಲಿ ಭಾಗವಹಿಸುವ ತಂಡಗಳ ರಾಷ್ಟ್ರೀಯ ಧ್ವಜಗಳನ್ನು ಕ್ರೀಡಾಂಗಣದಲ್ಲಿ ಹಾಕುವುದು ರೂಢಿ.

ಆದರೆ 2014 ರಲ್ಲಿ ವೀಕ್ಷಕರು ವಿದೇಶಗಳ ಧ್ವಜವನ್ನು ಕ್ರೀಡಾಂಗಣಕ್ಕೆ ತರಕೂಡದೆಂಬ ನಿಯಮವನ್ನು ಬಿಸಿಬಿ ರೂಪಿಸಿತ್ತು. ತೀವ್ರ ಟೀಕೆ ವ್ಯಕ್ತವಾದ ನಂತರ ಈ ನಿಯಮವನ್ನು ವಾಪಸ್ ಪಡೆಯಲಾಗಿತ್ತು. ನ.19 ರಿಂದ ಬಾಂಗ್ಲಾ-ಪಾಕ್ ನಡುವೆ ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆಯಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com