ಬೆಂಗಳೂರು: ನೆನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ-ದಕ್ಷಿಣ ಆಫ್ರಿಕಾ ಪಂದ್ಯ ಮಳೆಯ ಕಾರಣದಿಂದಾಗಿ ರದ್ದುಗೊಂಡ ಹಿನ್ನೆಲೆಯಲ್ಲಿ ಪಂದ್ಯ ವೀಕ್ಷಿಸಲು ಟಿಕೆಟ್ ಪಡೆದವರಿಗೆ ಶೇ.50 ರಷ್ಟು ಹಣ ವಾಪಸ್ ಸಿಗಲಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ (ಕೆಎಸ್ ಸಿಎ) ಈ ನಿರ್ಧಾರವನ್ನು ಘೋಷಿಸಿದೆ. 3.3 ಓವರ್ ಗಳ ಪಂದ್ಯದ ವೇಳೆಗೆ ಮಳೆಯ ಪರಿಣಾಮ ಪಂದ್ಯ ರದ್ದುಗೊಂಡಿತ್ತು. 5 ಪಂದ್ಯಗಳ ಸರಣಿ ಇದಾಗಿದ್ದು, ನೆನ್ನೆಯ ಪಂದ್ಯ ಅತ್ಯಂತ ಕುತೂಹಲ ಮೂಡಿಸಿತ್ತು. ಮಳೆಯ ಕಾರಣ ಪಂದ್ಯ ರದ್ದಾದ ಹಿನ್ನೆಲೆಯಲ್ಲಿ ಉಭಯ ತಂಡಗಳಿಗೂ ಅಂಕ ದೊರೆತು 2-2 ಅಂಕಗಳೊಂದಿಗೆ ಎರಡೂ ತಂಡಗಳಿಗೆ ಸಮಾನ ಅಂಕ ದೊರೆತಿದೆ.
ಷರತ್ತು ಮತ್ತು ನಿಬಂಧನೆಗಳ ಪ್ರಕಾರ ಕೇವಲ ಒಂದು ಎಸೆತ ಪೂರ್ಣಗೊಂಡು ಪಂದ್ಯ ರದ್ದಾದರೂ ಹಣ ವಾಪಸ್ ನೀಡಲು ಸಾಧ್ಯವಿಲ್ಲ. ಆದರೆ ಕೆಎಸ್ ಸಿಎ ಕ್ರೀಡಾಪ್ರೇಮಿಗಳಿಗೆ ಖರೀದಿಸಿದ್ದ ಟಿಕೆಟ್ ಗಳಿಗೆ ಶೇ.50 ರಷ್ಟು ಹಣ ವಾಪಸ್ ನೀಡಲು ನಿರ್ಧರಿಸಿದೆ ಎಂದು ಹೇಳಿದೆ.
ಮರುಪಾವತಿಗೆ ಸಂಬಂಧಿಸಿದ ವಿಧಾನಗಳು ದಿನಾಂಕವನ್ನು ಶೀಘ್ರವೇ ಘೋಷಣೆ ಮಾಡಲಾಗುತ್ತದೆ, ಹಣ ವಾಪಸ್ ಪಡೆಯುವುದಕ್ಕಾಗಿ ಮೂಲ ಟಿಕೆಟ್ ಗಳನ್ನು ಹಾಗೆಯೇ ಇರಿಸಿಕೊಂಡಿರಬೇಕು ಎಂದು ಕೆಎಸ್ ಸಿಎ ತಿಳಿಸಿದೆ.
Advertisement