ಏಷ್ಯಾ ಕಪ್ 2022: ಟೀಮ್ ಇಂಡಿಯಾ ಮಧ್ಯಂತರ ಮುಖ್ಯ ಕೋಚ್ ಆಗಿ ವಿವಿಎಸ್‌ ಲಕ್ಷ್ಮಣ್ ನೇಮಕ

ಮುಂಬರುವ ಏಷ್ಯಾ ಕಪ್‌ 2022 ಟೂರ್ನಿಗೆ ಟೀಮ್ ಇಂಡಿಯಾದ ಮಧ್ಯಂತರ ಕೋಚ್‌ ಆಗಿ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ವಿವಿಎಸ್‌ ಲಕ್ಷ್ಮಣ್‌ ನೇಮಕಗೊಂಡಿದ್ದಾರೆ.
ವಿವಿಎಸ್ ಲಕ್ಷ್ಮಣ್
ವಿವಿಎಸ್ ಲಕ್ಷ್ಮಣ್

ನವದೆಹಲಿ: ಮುಂಬರುವ ಏಷ್ಯಾ ಕಪ್‌ 2022 ಟೂರ್ನಿಗೆ ಟೀಮ್ ಇಂಡಿಯಾದ ಮಧ್ಯಂತರ ಕೋಚ್‌ ಆಗಿ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ವಿವಿಎಸ್‌ ಲಕ್ಷ್ಮಣ್‌ ನೇಮಕಗೊಂಡಿದ್ದಾರೆ. ಟೀಮ್ ಇಂಡಿಯಾ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ ಅವರಲ್ಲಿ ಕೋವಿಡ್‌-19 ಸೋಂಕು ದೃಢಪಟ್ಟಿದೆ. ಹೀಗಾಗಿ ಏಷ್ಯಾ ಕಪ್‌ ಟೂರ್ನಿಯಿಂದ ಅನಿವಾರ್ಯವಾಗಿ ಹೊರಗುಳಿದಿದ್ದಾರೆ.

ಪ್ರಸ್ತುತ ಎನ್‌ಸಿಎ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಅವರು ಯುಎಇಯಲ್ಲಿ ನಡೆಯಲಿರುವ ಮುಂಬರುವ ಏಷ್ಯಾ ಕಪ್ 2022ಗಾಗಿ ಟೀಮ್ ಇಂಡಿಯಾ (ಹಿರಿಯ ಪುರುಷರ)ಗೆ ಹಂಗಾಮಿ ಮುಖ್ಯ ಕೋಚ್ ಆಗಲಿದ್ದಾರೆ. ಜಿಂಬಾಬ್ವೆಯಲ್ಲಿ ಏಕದಿನ ಸರಣಿಯನ್ನು ಆಡಿದ ಭಾರತೀಯ ತಂಡದೊಂದಿಗೆ ಪ್ರಯಾಣಿಸಿದ್ದ ವಿವಿಎಸ್ ಲಕ್ಷ್ಮಣ್ ಅವರು UAEಗೆ ತೆರಳುವ ಭಾರತೀಯ ತಂಡದೊಂದಿಗೆ ಪ್ರಯಾಣ ಬೆಳೆಸಲಿದ್ದಾರೆ.

ರಾಹುಲ್ ದ್ರಾವಿಡ್ ಕೋವಿಡ್-19  ಪರೀಕ್ಷೆ ನಡೆಸಿದ ನಂತರ ಅವರು ತಂಡವನ್ನು ಸೇರಿಕೊಳ್ಳುತ್ತಾರೆ. ವಿವಿಎಸ್ ಲಕ್ಷ್ಮಣ್ ಅವರು ಹರಾರೆಯಿಂದ ಪ್ರಯಾಣಿಸಿದ ಉಪನಾಯಕ ಕೆಎಲ್ ರಾಹುಲ್, ದೀಪಕ್ ಹೂಡಾ ಮತ್ತು ಅವೇಶ್ ಖಾನ್ ಅವರೊಂದಿಗೆ ದುಬೈನಲ್ಲಿರುವ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಈಗಾಗಲೇ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಕೆಲವು ಆಟಗಾರರು ಭಾರತದಿಂದ ಯುಎಇಗೆ ಪ್ರಯಾಣಿಸಿದ್ದಾರೆ. ಏಷ್ಯಾ ಕಪ್ 2022 ದುಬೈ ಮತ್ತು ಶಾರ್ಜಾದಲ್ಲಿ ಆಗಸ್ಟ್ 27ರಿಂದ ಸೆಪ್ಟೆಂಬರ್ 11ರವರೆಗೆ ನಡೆಯಲಿದೆ. ಆಗಸ್ಟ್‌ 28ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ತನ್ನ ಅಭಿಯಾನ ಆರಂಭಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com