ಅಸಮರ್ಪಕ ರಾವಲ್ಪಿಂಡಿ ಪಿಚ್: ಇಂಗ್ಲೆಂಡ್ ವಿರುದ್ಧದ ಸೋಲಿನ ನಂತರ ಪಿಸಿಬಿ ವಿರುದ್ಧ ಪಾಕ್ ನಾಯಕ ವಾಗ್ದಾಳಿ
ಇಂಗ್ಲೆಂಡ್ ವಿರುದ್ಧದ ರಾವಲ್ಪಿಂಡಿ ಟೆಸ್ಟ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಹೀನಾಯ ಸೋಲನ್ನು ಅನುಭವಿಸಿದೆ. ಇನ್ನು ರಾವಲ್ಪಿಂಡಿ ಪಿಚ್ ಕುರಿತಂತೆ ಆಕ್ಷೇಪಗಳು ಎದುರಾಗಿದೆ.
Published: 06th December 2022 02:01 AM | Last Updated: 06th December 2022 02:01 AM | A+A A-

ಬಾಬರ್ ಅಜಂ
ಇಸ್ಲಾಮಾಬಾದ್: ಇಂಗ್ಲೆಂಡ್ ವಿರುದ್ಧದ ರಾವಲ್ಪಿಂಡಿ ಟೆಸ್ಟ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಹೀನಾಯ ಸೋಲನ್ನು ಅನುಭವಿಸಿದೆ. ಇನ್ನು ರಾವಲ್ಪಿಂಡಿ ಪಿಚ್ ಕುರಿತಂತೆ ಆಕ್ಷೇಪಗಳು ಎದುರಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 657 ರನ್ ಗಳಿಸಿತ್ತು. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 264 ರನ್ ಪೇರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಪಾಕಿಸ್ತಾನ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 579 ರನ್ ಗಳಿಸಿತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ 343 ರನ್‌ಗಳ ಗುರಿಯನ್ನು ಬೆನ್ನಟ್ಟಿ 268 ರನ್‌ಗಳಿಗೆ ಆಲೌಟ್ ಆಗಿದ್ದು ಈ ಪಂದ್ಯವನ್ನು ಇಂಗ್ಲೆಂಡ್ 74 ರನ್‌ಗಳಿಂದ ಗೆದ್ದು ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಪಂದ್ಯ ಮುಗಿದ ಬಳಿಕ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಪಾಕ್ ನಾಯಕ ಬಾಬರ್ ಅಜಂ ತಮ್ಮ ನೋವು ತೋಡಿಕೊಂಡರು. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತಮ್ಮ ಇಚ್ಛೆಯಂತೆ ವಸ್ತುಗಳನ್ನು ಒದಗಿಸುತ್ತಿಲ್ಲ ಎಂದು ಆರೋಪಿಸಿದರು. ನಾವು ಈ ಪಂದ್ಯದಲ್ಲಿ ನಮ್ಮ ಸಂಪೂರ್ಣ ಶ್ರಮವನ್ನು ಹಾಕಿದ್ದೇವೆ. ಈ ಪಂದ್ಯಕ್ಕೆ ನಾವು ಯೋಜಿಸಿದ ರೀತಿಯ ಪಿಚ್ ಮತ್ತು ನಾವು ಬೇಡಿಕೆಯಿರುವ ಪಿಚ್ ನಮಗೆ ಸಿಗಲಿಲ್ಲ. ನಮ್ಮ ಯೋಜನೆ ಯಥಾಸ್ಥಿತಿಯಲ್ಲಿ ಜಾರಿಯಾಗದಿರುವುದು ವಿಷಾದನೀಯ ಎಂದರು.
ತನ್ನ ಪರವಾಗಿ ಪಿಸಿಬಿಯಿಂದ ಯಾವ ರೀತಿಯ ಪಿಚ್‌ಗೆ ಬೇಡಿಕೆ ಇಡಲಾಗಿದೆ ಎಂದು ಪಾಕಿಸ್ತಾನದ ನಾಯಕ ಹೇಳಿದ್ದಾರೆ. 'ನಾವು ಇಲ್ಲಿ ಸ್ವಲ್ಪ ಟರ್ನಿಂಗ್ ಪಿಚ್ ಪಡೆಯಲು ಬಯಸಿದ್ದೇವು. ಅದರಂತೆ ನಮ್ಮ ಯೋಜನೆ ರೂಪಿಸಲಾಗಿತ್ತು. ದುರದೃಷ್ಟವಶಾತ್, ಪಂದ್ಯದ ವೇಳೆ ಇದ್ದ ಹವಾಮಾನ ಮತ್ತು ಸಿದ್ಧತೆಯ ರೀತಿಯಿಂದ ಪಿಚ್ ಕೇಳಿದ ರೀತಿಯಲ್ಲಿ ಹೊರಹೊಮ್ಮಲಿಲ್ಲ ಎಂದರು.
ಇನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತಯಾರಿಸಿರುವ ಪಿಚ್ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಸಲು ಸೂಕ್ತವಾಗಿಲ್ಲ ಎಂಬುದಾಗಿ ಮ್ಯಾಚ್ ರೆಫರಿ ಘೋಷಿಸಿದ್ದಾರೆ.