ICC World Cup 2023: ಫೈನಲ್ ಗೆ ಕೌಂಟ್ ಡೌನ್, ಸೂಪರ್ ಸಂಡೇಯಲ್ಲಿ ಹೊಸ ಇತಿಹಾಸ ಸೃಷ್ಟಿಗೆ ಭಾರತ ಸಜ್ಜು!

ಕಳೆದ ಒಂದೂವರೆ ತಿಂಗಳಿನಿಂದ ಭಾರತದ ಅತಿಥ್ಯದಲ್ಲಿ ನಡೆಯುತ್ತಿರುವ 'ಐಸಿಸಿ ವಿಶ್ವಕಪ್' ಕ್ರಿಕೆಟ್ ಟೂರ್ನಿ ಇದೀಗ ಅಂತಿಮ ಘಟ್ಟಕ್ಕೆ ತಲುಪಿದೆ. ಭಾನುವಾರ ಇಲ್ಲಿನ ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ  ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ.
ರೋಹಿತ್ ಶರ್ಮಾ, ಕಮ್ಮಿನ್ಸ್
ರೋಹಿತ್ ಶರ್ಮಾ, ಕಮ್ಮಿನ್ಸ್
Updated on

ಅಹಮದಾಬಾದ್: ಕಳೆದ ಒಂದೂವರೆ ತಿಂಗಳಿನಿಂದ ಭಾರತದ ಅತಿಥ್ಯದಲ್ಲಿ ನಡೆಯುತ್ತಿರುವ 'ಐಸಿಸಿ ವಿಶ್ವಕಪ್' ಕ್ರಿಕೆಟ್ ಟೂರ್ನಿ ಇದೀಗ ಅಂತಿಮ ಘಟ್ಟಕ್ಕೆ ತಲುಪಿದೆ. ಭಾನುವಾರ ಇಲ್ಲಿನ ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ  ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ.

ಟೂರ್ನಿಯುದ್ದಕ್ಕೂ ಗಮನಾರ್ಹ ಪ್ರದರ್ಶನ ಮೂಲಕ 10 ಪಂದ್ಯಗಳ ಗೆಲುವಿನೊಂದಿಗೆ ಸೆಮಿಫೈನಲ್ ತಲುಪಿರುವ ಭಾರತ, ಫೈನಲ್ ಪಂದ್ಯದಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಟ್ರೋಫಿ ಎತ್ತಿಹಿಡಿಯುವುದರೊಂದಿಗೆ 'ಸೂಪರ್ ಸಂಡೆ'ಯಲ್ಲಿ ಹೊಸ ಇತಿಹಾಸ ಸೃಷ್ಟಿಗೆ ಸಜ್ಜಾಗಿದೆ. 

ಭಾರತದ ವಿರಾಟ್ ಕೊಹ್ಲಿ ಮತ್ತು ಆರ್. ಅಶ್ವಿನ್ ಅವರಿಗೆ ಏಕದಿನ ವಿಶ್ವಕಪ್ ಗೆದ್ದಾಗ ಅನುಭವ ಹೇಗಿರುತ್ತೆ ಎಂಬುದು ಗೊತ್ತಿದೆ. 2007ರಲ್ಲಿ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ಚೊಚ್ಚಲ ಟಿ-20 ವಿಶ್ವಕಪ್ ಗೆದ್ದ ಅನುಭವ ರೋಹಿತ್ ಶರ್ಮಾ ಅವರಿಗಿದೆ. ಆದರೆ ಭಾನುವಾರ ನಡೆಯಲಿರುವ ಫೈನಲ್ ಪಂದ್ಯ ಸಂಪೂರ್ಣ ಭಿನ್ನವಾಗಿರುತ್ತದೆ.

ಇದು ಕೇವಲ ಗೆಲ್ಲಬೇಕಾದ ಕ್ರಿಕೆಟ್ ಪಂದ್ಯಾವಳಿಯಾಗಿರುವುದಿಲ್ಲ. ಬದಲಿಗೆ ಕೋಟ್ಯಂತರ ಭಾವನೆಗಳಿಗೆ ಸ್ಪಂದಿಸಬೇಕಾದ ಮಹತ್ವದ ಪಂದ್ಯವಾಗಿದೆ. ಹೊರಗಿನ ಪ್ರತಿಕ್ರಿಯೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ರೋಹಿತ್  ಹಾಗೂ ಟೀಂ ಇಂಡಿಯಾ ಆಟಗಾರರು ಪದೇ ಪದೇ ಹೇಳಿದ್ದಾರೆ. ಆದರೆ ಈ ಹೊರಗಿನ ಶಬ್ದವೇ ಆಟ ಮತ್ತು ತಂಡವನ್ನು ಪ್ರಸ್ತುತವಾಗಿಸಿದೆ.

ಆಟಗಾರರನ್ನು ಆರಾಧ್ಯ ದೈವ ಎಂದು ಪರಿಗಣಿಸುವ ಅಭಿಮಾನಿಗಳು, ಪ್ರಸಾರದ ಹಕ್ಕು ಖರೀದಿಗೆ ಕೋಟ್ಯಂತರ ರೂ. ವೆಚ್ಚ ಮಾಡಿರುವ ಪ್ರಸಾರಕರು, ಪ್ರಾಯೋಜಕರು ಸೇರಿದಂತೆ ಎಲ್ಲಾ ಪಾಲುದಾರರ ಅಭಿವೃದ್ಧಿ ಹಾಗೂ ಅಸ್ತಿತ್ವಕ್ಕಾಗಿ ಪಂದ್ಯ ಗೆಲ್ಲಬೇಕಾಗಿದೆ.  

1983 ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ಕಪಿಲ್ ದೇವ್ ನಾಯಕತ್ವದ ತಂಡ  ಟ್ರೋಫಿ ಮುಡಿಗೇರಿಸಿಕೊಂಡಾಗ ವಿಶ್ವಕಪ್ ನೊಂದಿಗೆ ಜನರ ಹೃದಯ ಬೆರೆಯಿತು. ಅಲ್ಲದೇ, ಮುಂದಿನ ಹಾದಿಯು ನಮ್ಮನ್ನು ಯಾವ ದಿಕ್ಕಿಗೆ ಕರೆದೊಯ್ಯುತ್ತದೆ ಎಂದು ಯಾರಿಗೂ ತಿಳಿದಿರಲಿಲ್ಲ. 2011 ರ ವಿಶ್ವಕಪ್ ಫೈನಲ್‌ನಲ್ಲಿ ಧೋನಿ ಸಿಡಿಸಿದ ಸಿಕ್ಸರ್ ನೊಂದಿಗೆ ಗೆಲುವು ಕೋಟ್ಯಂತರ ಅಭಿಮಾನಿಗಳ ಹೃದಯ ಭಾರತದತ್ತ ವಾಲಿತ್ತು. ಪ್ರತಿಯೊಬ್ಬರು ಭಾರತದ ಪ್ರಾಬಲ್ಯವನ್ನು ಒಪ್ಪಿಕೊಂಡಿದ್ದರು.

2023ರಲ್ಲಿ ಭಾರತ ಕ್ರಿಕೆಟ್ ತಂಡ ಮೂರನೇ ಏಕದಿನ ವಿಶ್ವಕಪ್ ಟ್ರೋಫಿ ಎತ್ತಿಹಿಡಿಯುವ ಕನಸು ಮಾತ್ರ ನೋಡುತ್ತಿಲ್ಲ. ಬದಲಿಗೆ 50 ಓವರ್ ಗಳ ಮಾದರಿಯನ್ನು ಪಂದ್ಯವನ್ನು ಉಳಿಸಲು ಎದುರು ನೋಡುತ್ತಿದೆ. ಇದು ಕಳೆದ ಐದು ವರ್ಷಗಳಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಹೋರಾಟ ನಡೆಸುತ್ತಿದೆ. ಭಾರತದ ಗೆಲುವು ಇದರ ಅಸ್ತಿತ್ವಕ್ಕೆ ಬೇಕಾದ ಇಂಜೆಕ್ಷನ್ ನೀಡಲಿದೆ. 2003 ಮತ್ತು 2007 ರ ನಡುವೆ ಸತತ 11 ಗೆಲುವಿನೊಂದಿಗೆ ಪ್ರಶಸ್ತಿ ಜಯಿಸಿದ ಏಕೈಕ ತಂಡ ಆಸ್ಟ್ರೇಲಿಯವಾಗಿದೆ. ಭಾನುವಾರ ಫೈನಲ್ ಪಂದ್ಯವನ್ನು ಗೆದ್ದರೆ ರೋಹಿತ್ ಬಳಗೆ ಹೊಸ ಇತಿಹಾಸ ಬರೆಯಲಿದ್ದು, ಎರಡನೇಯದು ಭಾರತವಾಗಲಿದೆ. 

ಭಾರತದ ಪರ ಆರಂಭಿಕ ಆಟಗಾರರ ಕಣಕ್ಕಿಳಿಯುವ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್ ಮನ್ ಗಿಲ್ ಉತ್ತಮ ಅಡಿಪಾಯ ಹಾಕುವುದರೊಂದಿಗೆ ತಂಡ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ನಂತರ ಬರುವ ರನ್ ಮೆಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಸಾಧನೆ ಇಡೀ ಜಗತ್ತಿಗೆ ಗೊತ್ತಿದೆ. ಇನ್ನೂ ಶ್ರೇಯಸ್ ಅಯ್ಯರ್ ಕಿವೀಸ್ ವಿರುದ್ಧದ ಸೆಮಿಫೈನಲ್ ನಲ್ಲಿ ಸಿಡಿಸಿದ ಶತಕದೊಂದಿಗೆ ತಂಡದ ವಿಶ್ವಾಸವನ್ನು ಹೆಚ್ಚಿಸಿದ್ದಾರೆ.

ಇನ್ನೂ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಶಮಿ ಅತಿ ಹೆಚ್ಚು ವಿಕೆಟ್ ಕಬಳಿಸುವ ಮೂಲಕ ಭಾರತೀಯರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಮೊಹಮ್ಮದ್ ಸಿರಾಜ್, ಬೂಮ್ರಾ ಕೂಡಾ ಉತ್ತಮ ಫಾರ್ಮ್ ನಲ್ಲಿದ್ದಾರೆ. ವಿಕೆಟ್ ಕೀಪಿಂಗ್ ನಲ್ಲಿ ಕೆಎಲ್ ರಾಹುಲ್ ಅಬ್ಬರದ ಸಾಧನೆಯಿಲ್ಲದಿದ್ದರೂ ಉಪಯುಕ್ತ ಕಾಣಿಕೆ ನೀಡುತ್ತಿದ್ದಾರೆ. ಇನ್ನೂ ರವೀಂದ್ರ ಜಡೇಜಾ, ಸೂರ್ಯ ಕುಮಾರ್ ಯಾದವ್, ಕುಲದೀಪ್ ಯಾದವ್  ಎಲ್ಲರೂ ಸ್ಥಿರ ಪ್ರದರ್ಶನ ನೀಡುತ್ತಿದ್ದು, ಭಾರತ ಈ ಬಾರಿ ವಿಶ್ವಕಪ್ ಮುಡಿಗೇರಿಸಿಕೊಳ್ಳುವ ವಿಶ್ವಾಸದಲ್ಲಿದೆ. 

ಇನ್ನೂ ವರ್ಷದ ಆರಂಭದಲ್ಲಿಯೇ ಭಾರತದಲ್ಲಿಯೇ ಏಕದಿನ ಸರಣಿ ಗೆದ್ದಿರುವ ಆಸ್ಟ್ರೇಲಿಯಾ ಕೂಡಾ, ವಿಶ್ವಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 1,30,000 ಅಭಿಮಾನಿಗಳ ಸಮ್ಮುಖದಲ್ಲಿ ನಡೆಯುವ ಪಂದ್ಯ ಹೇಗಿರಲಿದೆ ಎಂಬುದು ಆಸ್ಟ್ರೇಲಿಯಾ ನಾಯಕ ಕಮ್ಮಿನ್ಸ್ ಗೆ ತಿಳಿದಿದ್ದು, ಭಾರತ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಮೊಹಮ್ಮದ್ ಶಮಿ ವೇಗಿಯ ಹೆದರಿಕೆ ಇದ್ದರೂ, ಈ ಟೂರ್ನಿಯಲ್ಲಿ ಯಶಸ್ಸು ಗಳಿಸುವುದಾಗಿ ಹೇಳಿದ್ದಾರೆ. ಹಾಗಾದರೆ ನಾಳೆ ಯಾರು ಫೈನಲ್  ಗೆಲ್ಲುತ್ತಾರೆ? ಇದು ಬಹು ಶತಕೋಟಿ ಡಾಲರ್ ಪ್ರಶ್ನೆಯಾಗಿಯೇ ಉಳಿದಿದೆ.

ತಂಡಗಳು ಇಂತಿದೆ: 

ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ , ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್ ಮತ್ತು ಪ್ರಸಿದ್ಧ್ ಕೃಷ್ಣ.

ಆಸ್ಟ್ರೇಲಿಯಾ: ಪ್ಯಾಟ್ ಕಮ್ಮಿನ್ಸ್, ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್, ಕ್ಯಾಮರೂನ್ ಗ್ರೀನ್, ಜೋಶ್ ಇಂಗ್ಲಿಸ್ (wk), ಅಲೆಕ್ಸ್ ಕ್ಯಾರಿ (wk), ಸೀನ್ ಅಬಾಟ್.

ಪಂದ್ಯದ ಕಾಲಮಾನ: ಮಧ್ಯಾಹ್ನ 2 ಗಂಟೆಗೆ ಆರಂಭ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com